ಎಲ್ಲಕ್ಕಿಂತ ಮುಖ್ಯವಾಗಿ ನಮಗೆ ಇರಬೇಕಾದುದು ಹೃದಯವಂತಿಕೆ. ಬುದ್ಧಿಯಲ್ಲಿ ಮತ್ತು ವಿಚಾರ ಶಕ್ತಿಯಲ್ಲಿ ಏನಿದೆ? ಕೆಲವು ಹೆಜ್ಜೆಗಳು ಹೋಗಿ ಅಲ್ಲಿ ನಿಲ್ಲುವವು. ಸ್ಫೂರ್ತಿ ಬರುವುದು ಹೃದಯದಿಂದ. ಪ್ರೇಮವು ಅಸಾಧ್ಯವಾದ ಬಾಗಿಲನ್ನೂ ತೆರೆಸುವುದು. ಪ್ರಪಂಚದ ರಹಸ್ಯಕ್ಕೆಲ್ಲ ಪ್ರೇಮವೇ ಬಾಗಿಲು.
ವಿಶ್ವದಷ್ಟು ವಿಶಾಲವಾಗಿ ನಿಮ್ಮ ಹೃದಯ ಮತ್ತು ಆಕಾಂಕ್ಷೆಗಳು ವಿಕಸಿತವಾಗಲಿ. ವಿಶಾಲಮತಿ ಹಾಗೂ ಶ್ರದ್ಧೆಗಳು ನಿಮ್ಮೆಲ್ಲರಲ್ಲೂ ಇರುವುದೆಂದು ನಾನು ಊಹಿಸುತ್ತೇನೆ. ಸಾಗರದಷ್ಟು ಆಳವಾಗಿ, ಆಗಸದಷ್ಟು ವಿಶಾಲವಾಗಿ ಇರಬೇಕು ನಿಮ್ಮ ಹೃದಯ.
ಸತ್ಯ, ಪ್ರೇಮ ಮತ್ತು ನಿಷ್ಕಾಪಟ್ಯದ ಎದುರಿಗೆ ಯಾವುದೂ ನಿಲ್ಲಲಾರದು. ನೀವು ನಿಷ್ಕಪಟಿಯೇ? ಸಾಯುವವರೆಗೂ ಸ್ವಾರ್ಥರಹಿತನಾಗಿರುವಿರಾ? ಪ್ರೀತಿಸುವಿರಾ? ಹಾಗಿದ್ದರೆ ಭಯಪಡಬೇಡಿ. ಮೃತ್ಯುವಿಗೂ ಅಂಜಬೇಡಿ. ಉತ್ಸಾಹಪೂರಿತರಾಗಿ, ಉತ್ಸಾಹದ ಕಿಡಿಗಳನ್ನು ಎಲ್ಲೆಡೆ ಹರಡಿ. ದುಡಿಯಿರಿ. ಮುಂದಾಳುಗಳಾಗಿದ್ದರೂ ಸೇವಕರಂತೆ ವಿನೀತರಾಗಿರಿ. ಠಕ್ಕಾಬಿಕ್ಕಿ, ಗುಟ್ಟು, ನೀಚತನ, ದುರ್ನಡತೆಗಳಿಂದ ದೂರವಿರಿ. ಎಲ್ಲವನ್ನೂ ಎಲ್ಲರನ್ನೂ ಪ್ರೇಮದಿಂದ ಕಾಣಿರಿ. ಮುಖ್ಯವಾಗಿ ನಿಮ್ಮನ್ನು ನೀವು ಪ್ರೀತಿಸಿಕೊಳ್ಳಿ.
“ಉದ್ಧರೇದಾತ್ಮನಾತ್ಮಾನಂ” ಅನ್ನುವ ಮಾತಿದೆ. ಯಾರೇ ಆಗಲಿ, ತನ್ನಿಂದ ತಾನೆ ಉದ್ಧಾರವಾಗಬೇಕು. ಇದು ಎಲ್ಲ ಕ್ಷೇತ್ರಕ್ಕೂ ಸಲ್ಲುತ್ತದೆ. ಆದ್ದರಿಂದ ನಿಮ್ಮನ್ನು ನೀವು ಉದ್ಧರಿಸಿಕೊಳ್ಳಲು ನಿಮ್ಮೆಲ್ಲ ಶ್ರಮವನ್ನು ವಿನಿಯೋಗಿಸಿ.