ಕಥಾ ಸರಿತ್ಸಾಗರ : ಪಾಟಲೀಪುತ್ರ ನಗರದ ಕಥೆ ~ ತಂದೆಯಿಂದಲೇ ಪುತ್ರಕನ ಕೊಲೆಗೆ ಯತ್ನ

ವರ್ಷೋಪಾಧ್ಯಾಯನು ವರರುಚಿಗೆ ಪಾಟಲೀಪುತ್ರ ನಗರದ ವೈಭವಗಾಥೆಯನ್ನು ಹೇಳುತ್ತಿದ್ದಾನೆ.
ಇಲ್ಲಿಯವರೆಗೆ…
ಚಿಂಚಿನಿಯ ಸಹೋದರಿಯರು ವಾರಣಾಸಿಯ ಸಹೋದರರನ್ನುವರಿಸಿ, ಅವರಲ್ಲಿ ಮಧ್ಯಮಳಿಗೆ ಒಬ್ಬ ಮಗನು ಜನಿಸಿದನು. ಅವನು ಹುಟ್ಟುವ ಮೊದಲೇ ವಾರಣಾಸಿಯ ಸಹೋದರರು ಹೆಂಡತಿಯರನ್ನು ಬಿಟ್ಟು ದೇಶಾಂತರ ಹೋದರು. ಕುಮಾರಸ್ವಾಮಿಯ ವರಪ್ರಸಾದದಿಂದ ಪುತ್ರಕನು ಧನವಂತನಾಗಿ, ರಾಜನೂ ಆದನು. ಅವನ ತಂದೆ ಹಾಗೂ ಅವರ ಸಹೋದರರನ್ನು ರಾಜ್ಯಕ್ಕೆ ಕರೆಸುವ ಸಲುವಾಗಿ ದಾನಧರ್ಮಾದಿಗಳನ್ನು ಮಾಡುವಂತೆ ಪುತ್ರಕನಿಗೆ ಯಜ್ಞದತ್ತನು ಸೂಚಿಸಿದನು. ಅದಕ್ಕೆ ಪೂರಕವಾಗಿ ಬ್ರಹ್ಮದತ್ತನ ಕಥೆಯನ್ನು ಹೇಳಿದನು.
ಮುಂದೆ…

katha
ಜ್ಞದತ್ತನು ಪುತ್ರಕನಿಗೆ ಬ್ರಹ್ಮದತ್ತ ರಾಜನ ಕಥೆಯನ್ನು ಹೇಳಿದನು. ಅದರಿಂದ ಪ್ರಭಾವಿತನಾದ ಪುತ್ರಕನು ತನ್ನ ರಾಜಧಾನಿಯಲ್ಲಿ ದೊಡ್ಡದೊಂದು ಛತ್ರವನ್ನು ಸ್ಥಾಪಿಸಿದನು. ಅರವಟ್ಟಿಗೆಗಳನ್ನು ನಿರ್ಮಿಸಿದನು. ವೀಶೇಷವಾಗಿ ಪ್ರವಾಸಿಗರಿಗೆ ಮತ್ತು ಬ್ರಾಹ್ಮಣರಿಗೆ ತಂಗುದಾಣಗಳನ್ನೂ ನಿರ್ಮಿಸಿದನು. ದಾನ ಧರ್ಮಾದಿಗಳನ್ನು ಹೆಚ್ಚಿಸಿದನು. ಯಜ್ಞದತ್ತನ ಉಪಾಯ ಫಲಿಸಿತು. ಪರ್ಯಟನೆ ಮಾಡುತ್ತಿದ್ದ ವಾರಣಾಸಿಯ ಸಹೋದರರು ಈ ವಿಚಾರವನ್ನು ತಿಳಿದು ಪುತ್ರಕನ ರಾಜಧಾನಿಗೆ ಬಂದರು. ಚಿಂಚಿನಿಯ ಸಹೋದರಿಯರು ದಾನ ಸ್ವೀಕರಿಸಲು ಬಂದ ತಮ್ಮ ಪತಿಯಂದಿರನ್ನು ಗುರುತಿಸಿದರು. ಎರಡು ದಶಕಗಳ ನಂತರ ಅವರನ್ನು ಕಂಡ ಸಂತಸದಲ್ಲಿ ಓಡುತ್ತಾ ಬಂದು ಪುತ್ರಕನಿಗೆ ವಿಷಯ ತಿಳಿಸಿದರು.

ಪುತ್ರಕನ ಸಂತಸಕ್ಕಂತೂ ಪಾರವೇ ಇಲ್ಲ. ಅವನು ತಾನೇ ಛತ್ರಕ್ಕೆ ಬಂದು ತಂದೆಯನ್ನೂ ಚಿಕ್ಕಪ್ಪ, ದೊಡ್ಡಪ್ಪಂದಿರನ್ನೂ ಕಂಡು ನಮಸ್ಕರಿಸಿದನು. ಮತ್ತು, “ಇಷ್ಟು ವರ್ಷಗಳ ಕಾಲ ನೀವು ಎಲ್ಲಿದ್ದಿರಿ? ನನ್ನ ತಾಯಂದಿರು ನಿಮ್ಮ ಸಹವಾಸವಿಲ್ಲದೆ ಕಂಗೆಟ್ಟುಹೋಗಿದ್ದರು. ನಾನಿಂದು ಎಷ್ಟೇ ಶ್ರೀಮಂತನಾಗಿದ್ದರೂ, ರಾಜನೇ ಆಗಿದ್ದರೂ ತಲೆಯ ಮೇಲೆ ಅಭಯ ನೀಡುವ ಹಿರಿಯರಿಲ್ಲದೆ ಅನಾಥನಂತೆಯೇ ಇರುವೆ. ಆದ್ದರಿಂದ, ದಯಮಾಡಿ ಇನ್ನು ಮುಂದೆ ನೀವು ಇಲ್ಲೇ ಇರಬೇಕು. ನಿಮಗೆ ಬೇಕಾದ ಎಲ್ಲ ಅನುಕೂಲಗಳನ್ನೂ ನಾನು ಮಾಡಿಕೊಡುತ್ತೇನೆ” ಅಂದನು.
ಪುತ್ರಕನ ಮಾತುಗಳನ್ನು ಕೇಳಿ ಆ ಸಹೋದರರಿಗೆ ಆನಂದವೇ ಆಯಿತು. ಇಷ್ಟು ವರ್ಷಗಳ ಕಾಲ ಊರೂರು ಅಲೆಯುತ್ತಾ, ದಾನ – ಭಿಕ್ಷೆಗಳಲ್ಲೇ ಜೀವನ ನಡೆಸುತ್ತಿದ್ದ ಅವರು ಮೈಬಗ್ಗಿಸಿ ದುಡಿಯುವುದನ್ನೇ ಮರೆತುಬಿಟ್ಟಿದ್ದರು. ಇನ್ನೀಗ ಅರಮನೆ ವಾಸ, ಹೆಂಡತಿಯರು, ಸಕಲ ವೈಭವಗಳು ದೊರೆಯುತ್ತವೆ ಎಂದರೆ ಅವರು ಒಪ್ಪದೆ ಇರುತ್ತಾರೆಯೆ? ಅವರು ಹಾಗೆಯೇ ಆಗಲೆಂದರು.

ಹೀಗೇ ದಿನ ಕಳೆಯುತ್ತಿರಲು, ಚಿಂಚಿನಿಯ ಸಹೋದರಿಯರು ಪುತ್ರಕನಿಗೆ ಮದುವೆ ಮಾಡಿಸಬೇಕೆಂಬ ಪ್ರಸ್ತಾಪವನ್ನು ಪತಿಯಂದಿರ ಮುಂದಿಟ್ಟರು. ಆ ಕಡುಲೋಭಿ ಸಹೋದರರು, ಪುತ್ರಕನಿಗೆ ಮದುವೆ ಮಾಡಿದರೆ ತಮಗೆ ಭೋಗಭಾಗ್ಯಗಳ ಮೇಲೆ ಹಿಡಿತ ತಪ್ಪುತ್ತದೆ. ಆದ್ದರಿಂದ ಅವನನ್ನು ಕೊಂದುಬಿಡೋಣ ಎಂದು ಯೋಚಿಸಿದರು. ಅದಕ್ಕೊಂದು ಯೋಜನೆಯನ್ನೂ ರೂಪಿಸಿದರು.
ಅದರಂತೆ ಒಂದು ಸಂಜೆ ಪುತ್ರಕನ ತಂದೆಯು “ಮಗೂ, ಬೆಟ್ಟದ ಮೇಲಿನ ದೇವಿ ಮಂದಿರಕ್ಕೆ ಹೋಗಿ ದರ್ಶನ ಪಡೆಯುವ ಆಸೆಯಾಗಿದೆ. ನಿನ್ನೊಂದಿಗೆ ನಾನು ಎಲ್ಲಿಯೂ ಅಡ್ಡಾಡಿದ್ದೇ ಇಲ್ಲ. ನನ್ನನ್ನೂ ನಿನ್ನ ದೊಡ್ಡಪ್ಪ, ಚಿಪ್ಪಕ್ಕನನ್ನೂ ಕರೆದೊಯ್ಯುತ್ತೀಯಾ?” ಎಂದು ಕೇಳಿದನು.
ತಂದೆಯ ಕೋರಿಕೆಯೇ ತನ್ನ ಭಾಗ್ಯವೆಂದು ಭಾವಿಸಿದ ಪುತ್ರಕನು ಸ್ವತಃ ತಾನೇ ಸಾರಥಿಯಾಗಿ ರಥವನ್ನು ನಡೆಸಿಕೊಂಡು ಅವರನ್ನು ಮಂದಿರಕ್ಕೆ ಕರೆದೊಯ್ದನು. ಅಲ್ಲಿ ಪುತ್ರನ ತಂದೆಯು, “ನಮಗೆ ದಣಿವಾಗಿದೆ. ಸ್ನಾನ ಮಾಡಿ ಉಲ್ಲಸಿತರಾಗಿ ಬರುತ್ತೇವೆ. ನೀನು ಒಳಗೆ ಹೋಗಿ ಪೂಜೆಗೆ ಅಣಿ ಮಾಡಿರು” ಎಂದನು.

ಅದರಂತೆ ಪುತ್ರಕನು ಒಳಗೆ ಹೋದಾಗ ಅಲ್ಲಿ ನಿಂತಿದ್ದ ಇಬ್ಬರು ಕೊಲೆಗಡುಕರು ಅವನನ್ನು ಹಿಡಿದುಕೊಂಡು ತಮ್ಮ ಕತ್ತಿಯನ್ನು ಎತ್ತಿದರು. ಗಾಬರಿಯಾದ ಪುತ್ರಕನು ಅವರು ಯಾರೆಂದು ವಿಚಾರಿಸಲು, ಅವರು ಪುತ್ರಕನ ತಂದೆಯೇ ತಮ್ಮನ್ನು ಕೊಲೆ ಮಾಡಲು ನಿಯೋಜಿಸಿದ್ದಾನೆಂದು ಹೇಳಿದರು.
ಪುತ್ರಕನು ಅವರನ್ನು ಒಲಿಸಿಕೊಂಡು, ತನ್ನ ಮೈಮೇಲಿದ್ದ ಅಷ್ಟೂ ಆಭರಣಗಳನ್ನು ಅವರಿಗೆ ನೀಡಿ, ತನ್ನನ್ನು ಬಿಟ್ಟುಬಿಡುವಂತೆ ಕೇಳಿಕೊಂಡನು. ಅದಕ್ಕೊಪ್ಪಿದ ಕೊಲೆಗಾರರು ಪುತ್ರಕನ ತಲೆಗೂದಲ ತುದಿಯನ್ನು ಸಾಕ್ಷಿಗಾಗಿ ಕತ್ತರಿಸಿಕೊಂಡು ಹೊರಟುಹೋದರು.

ತಂದೆ ಮತ್ತು ಅವನ ಸಹೋದರರ ವರ್ತನೆಯಿಂದ ದುಃಖಿತನಾದ ಪುತ್ರಕನಿಗೆ ಮತ್ತೆ ಮನೆಗೆ ಮರಳಲು ಮನಸ್ಸಾಗಲಿಲ್ಲ. ಅವನು ಅಲ್ಲಿ ನಿಲ್ಲದೆ ದೇಶಾಂತರ ಹೊರಡಲು ನಿಶ್ಚಯಿಸಿದನು.

ಮುಂದುವರೆಯುವುದು…

(ಕಥಾ ಸರಿತ್ಸಾಗರ, ಹಲವು ಕಥಾಧಾರೆಗಳು ಬಂದು ಸೇರುವ ಸಮುದ್ರ. ಆ ಕಥೆಗಳೆಲ್ಲವೂ ಒಂದಕ್ಕೊಂದು ಹೆಣೆದುಕೊಂಡಿರುವಂಥದ್ದು. ಯಾವುದಾದರೂ ಒಂದು ಕಥೆಯ ಒಂದು ಎಳೆ ಬಿಟ್ಟುಹೋದರೂ ಇಡೀ ಕಥೆಯ ಸೂತ್ರವೇ ತಪ್ಪಿದಂತಾಗುವುದು. ಪ್ರತ್ಯೇಕವಾಗಿ ಅವು ನಮ್ಮನ್ನು ಓದಿಸಿಕೊಂಡುಹೋದರೂ ಒಟ್ಟು ಓದಿನ ಸಮಗ್ರ ಅನುಭವದಿಂದ ನಾವು ವಂಚಿತರಾಗುವೆವು. ಆದ್ದರಿಂದ, ಈ ಕಥೆಗಳ ಪ್ರತಿ ಕಂತನ್ನೂ ಓದಲು ಯತ್ನಿಸಿ. ಹಿಂದಿನ ಕಂತುಗಳ ಕೊಂಡಿ ಇಲ್ಲಿದೆ:

https://aralimara.com/category/ಕಥಾಲೋಕ/ಕಥಾ-ಸರಿತ್ಸಾಗರ/  )

1 Comment

  1. ಮಾನ್ಯರೆ,
    ನಾನು ಈ ಕಥಾ ಸರಿತ್ಸಾಗರ ಪುಸ್ತಕ ವನ್ನು ಕೊಳ್ಳ ಬೇಕೆಂದಿದ್ದೇನೆ
    ದಯವಿಟ್ಟು ನೀವು ಮಾರುವರಿದ್ದರೆ ಈ ಈ-ಮೈಲ್ ವಿಳಾಸಕ್ಕೆ ತಿಳಿಸಿ.mohankumars6@rediffmail.com

    Mohan Kumar

Leave a Reply