ಧ್ಯಾನ ಮಾಡಲು ಕಲಿಯಿರಿ : ಲವ್ ಹೀಲಿಂಗ್ ಮೆಡಿಟೇಶನ್ #1 ~ ಅನಾಹತ ಧ್ಯಾನ

ಈ ಸಂಚಿಕೆಯಲ್ಲಿ ಭಗ್ನ ಪ್ರೇಮಿಗಳಿಗಾಗಿ ಧ್ಯಾನ ವಿಧಾನವನ್ನು ನೋಡೋಣ. ಈ ದಿನಗಳಲ್ಲಿ, ವಿಶೇಷವಾಗಿ ಯುವಜನರು ಹಾಗೂ ಮಧ್ಯ ವಯಸ್ಕರು ಅನುಭವಿಸುತ್ತಿರುವ ತುಮುಲವಿದು. ಪ್ರೇಮ ವೈಫಲ್ಯದಿಂದ ಹೊರಗೆ ಬರಲಾಗದೆ ಖಿನ್ನತೆ, ಉದ್ವೇಗ ಮೊದಲಾದ ಮಾನಸಿಕ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡು ಒದ್ದಾಡುವ ಜನರನ್ನು ನಾವು ನೋಡುತ್ತಲೇ ಇದ್ದೇವೆ. ಆದ್ದರಿಂದ ಮೊದಲನೆಯದಾಗಿ ಇದನ್ನು ಆಯ್ಕೆ ಮಾಡಿಕೊಂಡಿದ್ದೇವೆ. ನಾವಿದನ್ನು ಲವ್ ಹೀಲಿಂಗ್ ಮೆಡಿಟೇಶನ್ ಎಂದು ಕರೆದಿದ್ದೇವೆ. ಈ ಲವ್ ಹೀಲಿಂಗ್ ಮೆಡಿಟೇಶನ್’ನಲ್ಲೂ ಹಲವು ಬಗೆಗಳಿದ್ದು, ಈ ಬಾರಿ ‘ಅನಾಹತ ಧ್ಯಾನ’ದ ಬಗೆಯನ್ನು ನೋಡೋಣ  ~ ಚಿತ್ಕಲಾ 

anahata

ಳೆದ ಕಂತುಗಳಲ್ಲಿ ಧ್ಯಾನದ ಮೂಲ ಪಾಠಗಳನ್ನು ನೋಡಿದೆವು. ಧ್ಯಾನದಲ್ಲಿ ಹಲವು ಬಗೆಗಳಿವೆ. ನೀವು ಯಾವ ಬಗೆಯ ಧ್ಯಾನವನ್ನು ಆಯ್ಕೆ ಮಾಡಿಕೊಳ್ಳುವಿರಿ? ನಿಮಗೆ ಯಾವ ಧ್ಯಾನ ವಿಧಾನ ಸೂಕ್ತವಾಗಿದೆ ಎಂಬುದನ್ನೀಗ ನೋಡೋಣ.

ಮೊದಲೇ ಹೇಳಿದಂತೆ ನಾವು ಲೌಕಿಕ ಲಾಭಗಳಿಗಾಗಿ ಧ್ಯಾನ ಮಾಡುವ ಬಗ್ಗೆ ಇಲ್ಲಿ ಬರೆಯುತ್ತಿದ್ದೇವೆ. ಆದ್ದರಿಂದ ನಾವು ಬಯಸುವ ಫಲಿತಾಂಶವನ್ನು ಯಾವ ಬಗೆಯ ಧ್ಯಾನ ನೀಡಬಲ್ಲದು ಎಂದು ನೋಡೋಣ.

ಮೊದಲನೆಯದಾಗಿ, ಧ್ಯಾನ ಅಂದರೆ ಕಣ್ಣು ಮುಚ್ಚಿಕೊಂಡು ಪದ್ಮಾಸನ ಹಾಕಿಕೊಂಡು ಕೂರುವುದಷ್ಟೇ ಅಲ್ಲ ಎಂಬುದನ್ನು ನಾವು ತಿಳಿಯಬೇಕು. ಧ್ಯಾನ ಅಂದರೆ ತಲ್ಲೀನರಾಗಿ ನಮ್ಮನ್ನು ನಾವು ನೋಡಿಕೊಳ್ಳುವ ಪ್ರಕ್ರಿಯೆ ಎಂಬುದನ್ನೂ ಈ ಹಿಂದೆ ಚರ್ಚಿಸಿದ್ದೇವೆ. ಹೀಗೆ ತಲ್ಲೀನರಾಗುವ ಧ್ಯಾನ ವೀಧಾನಗಳು ಬಹಳಷ್ಟಿವೆ. ನರ್ತನ, ಗಾಯನ, ಶ್ರವಣ, ಮನನ, ಪಠಣ, ಲೇಖನ, ಚಿಂತನ, ಮೌನ – ಹೀಗೆ ಹಲವು ಮಾರ್ಗಗಳಿವೆ. ಎಲ್ಲರಿಗೂ ಎಲ್ಲ ಬಗೆಯ ಧ್ಯಾನವೂ ಒಗ್ಗುವುದಿಲ್ಲ. ಆದ್ದರಿಂದ ಆಯಾ ಮನಸ್ಥಿತಿಗೆ, ಸ್ವಭಾವಕ್ಕೆ ಸರಿ ಹೊಂದುವ ಧ್ಯಾನವನ್ನು ಆಯ್ದುಕೊಳ್ಳುವುದು ಬಹಳ ಮುಖ್ಯ.

ಈ ಸಂಚಿಕೆಯಲ್ಲಿ ಭಗ್ನ ಪ್ರೇಮಿಗಳಿಗಾಗಿ ಧ್ಯಾನ ವಿಧಾನವನ್ನು ನೋಡೋಣ. ಈ ದಿನಗಳಲ್ಲಿ, ವಿಶೇಷವಾಗಿ ಯುವಜನರು ಹಾಗೂ ಮಧ್ಯ ವಯಸ್ಕರು ಅನುಭವಿಸುತ್ತಿರುವ ತುಮುಲವಿದು. ಪ್ರೇಮ ವೈಫಲ್ಯದಿಂದ ಹೊರಗೆ ಬರಲಾಗದೆ ಖಿನ್ನತೆ, ಉದ್ವೇಗ ಮೊದಲಾದ ಮಾನಸಿಕ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡು ಒದ್ದಾಡುವ ಜನರನ್ನು ನಾವು ನೋಡುತ್ತಲೇ ಇದ್ದೇವೆ. ಆದ್ದರಿಂದ ಮೊದಲನೆಯದಾಗಿ ಇದನ್ನು ಆಯ್ಕೆ ಮಾಡಿಕೊಂಡಿದ್ದೇವೆ. ನಾವಿದನ್ನು ಲವ್ ಹೀಲಿಂಗ್ ಮೆಡಿಟೇಶನ್ ಎಂದು ಕರೆದಿದ್ದೇವೆ. ಈ ಲವ್ ಹೀಲಿಂಗ್ ಮೆಡಿಟೇಶನ್’ನಲ್ಲೂ ಹಲವು ಬಗೆಗಳಿದ್ದು, ಈ ಬಾರಿ ‘ಅನಾಹತ ಧ್ಯಾನ’ದ ಬಗೆಯನ್ನು ನೋಡೋಣ.

ಅನಾಹತ ಧ್ಯಾನ

ನೀವು ಇಷ್ಟಪಡುತ್ತಿರುವ ವ್ಯಕ್ತಿಯ ದೇಹವನ್ನು ನೀವು ಪ್ರೀತಿಸುತ್ತಿದ್ದರೆ, ಕಾಮಿಸುತ್ತಿದ್ದರೆ, ಮತ್ತು ಅದನ್ನು ನೀವು ಪಡೆಯಲಾಗದೆ ವಿಫಲರಾದ ಹತಾಶೆ ಹೊಂದಿದ್ದರೆ ಈ ಧ್ಯಾನ ಸೂಕ್ತವಾದುದಾಗಿದೆ.

ಅನಾಹತ ಧ್ಯಾನವು ಮುಚ್ಚಿದ ಬಾಗಿಲುಗಳ ಹಿಂದೆ, ನಾಲ್ಕು ಗೋಡೆಗಳ ನಡುವೆ ಮಾಡುವ ಧ್ಯಾನವಲ್ಲ. ತೆರೆದ ಬಯಲು, ಉದ್ಯಾನವನ, ನೀರು ಹರಿಯುವ ಯಾವುದೇ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು.

ಮೊದಲಿಗೆ ಆರಾಮದಾಯಕ ಭಂಗಿಯಲ್ಲಿ ಕುಳಿತುಕೊಳ್ಳಿ. ಉಸಿರಾಟವನ್ನು ಗಮನಿಸಿ. ನಿಮ್ಮ ಉಛ್ವಾಸ, ನಿಶ್ವಾಸಗಳು ಒಂದೇ ರಿದಮ್’ನಲ್ಲಿರಬೇಕು. ನೀವು ಉದ್ವಿಗ್ನರಾಗಿದ್ದೀರೇ ಎಂದು ಪರೀಕ್ಷಿಸಿಕೊಳ್ಳಿ. ಉದ್ವಿಗ್ನತೆ ಇದ್ದಾಗ ನಿಮ್ಮ ಎದೆ ಬಡಿತ ವೇಗವಾಗಿರುತ್ತದೆ. ಉಸಿರಾಟವೂ ಅನಿಯಂತ್ರಿತವಾಗಿರುತ್ತದೆ. ಪ್ರಜ್ಞಾಪೂರ್ವಕವಾಗಿ ಅದನ್ನು ನಿಮ್ಮ ನಿಯಂತ್ರಣಕ್ಕೆ ತಂದುಕೊಳ್ಳಿ. ಉಸಿರಾಟ ಒಂದು ಹದಕ್ಕೆ ಬಂದ ನಂತರ ನಿಮ್ಮ ಉಸಿರು ಮೂಗಿನಿಂದ ಹೊಕ್ಕುಳು ತಲುಪವವರೆಗಿನ ದಾರಿಯನ್ನು ಗಮನಿಸಿ. ಅದು ನಿಮ್ಮ ಹೃದಯವನ್ನೂ ಹಾದುಹೋಗುವುದು. ಹಿಂದಿನ ಸಂಚಿಕೆಯಲ್ಲಿ ನೀವು ನೋಡಿರುವಂತೆ, ಇದು ‘ಅನಾಹತ’ ಚಕ್ರ ಇರುವ ಸ್ಥಳ.

ಉಸಿರು ಅನಾಹತವನ್ನು ದಾಟಿ ಹೋಗುವ ಪ್ರಕ್ರಿಯೆಯನ್ನು ಗಮನಿಸಿ. ಇದರ ಜೊತೆಗೇ ನಿಮ್ಮ ಪ್ರೇಮಿಯ ಚಿತ್ರವನ್ನು ಕಣ್ಣ ಮುಂದೆ ತಂದುಕೊಳ್ಳಿ. ಶುರುವಿನಲ್ಲಿ ನಿಮಗೆ ದುಃಖ ಉಮ್ಮಳಿಸಿದಂತೆ ಭಾಸವಾಗುವುದು. ನಿಮ್ಮಲ್ಲಿ ದುಃಖ ಉಂಟಾದೊಡನೆ ಎದೆ ಬಡಿತವೂ ಉಸಿರಾಟವೂ ಏರುಪೇರಾಗುವುದು.

ಆದರೆ ನೀವು ವಿಚಲಿತರಾಗಬೇಡಿ. ನಿಮ್ಮ ಪ್ರೇಮಿಯ ಚಿತ್ರವನ್ನು ನಿಮ್ಮ ಚಿತ್ತಭಿತ್ತಿಯಿಂದ ಕದಲಲು ಬಿಡಬೇಡಿ. ಉಸಿರಾಟವನ್ನು ಪ್ರಯತ್ನಪೂರ್ವಕವಾಗಿ ಮೊದಲಿನಂತೆ ನಿಧಾನಗತಿಗೆ ತಂದುಕೊಳ್ಳಿ. ನಿಮ್ಮ ಪ್ರೇಮಿಯ ಚಿತ್ರ ಹಾಗೇ ಇರಲಿ. ಮತ್ತೆ ಉಸಿರಾಟದ ದಾರಿಯನ್ನು ಗಮನಿಸುತ್ತಾ ಪ್ರೇಮಿಯನ್ನು ನೆನೆಯಿರಿ.

ಐದರಿಂದ ಹತ್ತು ನಿಮಿಷಗಳು ಕಳೆಯುವ ವೇಳೆಗೆ ನಿಮ್ಮ ಮನಸ್ಸು ಸ್ಥಿಮಿತಕ್ಕೆ ಬಂದಿರುತ್ತದೆ. ಈಗ ಚಿತ್ರ ನಿಮ್ಮ ಚಿತ್ತಭಿತ್ತಿಯಲ್ಲಿ ಇದ್ದಾಗಿಯೂ ಉಸಿರಾಟ ಸಾವಧಾನವಾಗಿರುತ್ತದೆ.

ಇದನ್ನು ಸಾಧಿಸಿದ ನಂತರ ಆ ಚಿತ್ರ ನಿಮಗೆ ಯಾಕೆ ಪ್ರಿಯವಾಗಿದೆ ಎಂಬುದನ್ನು ಅರಿಯಲು ಯತ್ನಿಸಿ. ನೀವು ಆ ವ್ಯಕ್ತಿಯ ದೇಹವನ್ನು ಪ್ರೀತಿಸುತ್ತಿದ್ದೀರಾ? ಸೌಂದರ್ಯವನ್ನು ಪ್ರೀತಿಸುತ್ತಿದ್ದೀರಾ? ಕಂಡುಕೊಳ್ಳಿ. ನೀವು ದೇಹವನ್ನು ಪ್ರೀತಿಸಿದರೂ ಅದು ತಪ್ಪಲ್ಲ. ನಿಮ್ಮಲ್ಲಿ ಆ ದೇಹದ ಕುರಿತು ಕಾಮನೆ ಉಂಟಾಗಿದ್ದರೂ ತಪ್ಪಲ್ಲ. ಆದರೆ ಅದನ್ನು ಪ್ರಾಮಾಣಿಕವಾಗಿ ಕಂಡುಕೊಳ್ಳಲು ಮತ್ತು ಒಪ್ಪಿಕೊಳ್ಳಲು ಯತ್ನಿಸಿ. ನೀವು ದೇಹ ಅಥವಾ ಸೌಂದರ್ಯದ ಕಾರಣದಿಂದ ಆ ವ್ಯಕ್ತಿಯನ್ನು ಪ್ರೀತಿಸುತ್ತಿದ್ದರೆ ನಿಮ್ಮ ಧ್ಯಾನದ ಹಂತ ಇಲ್ಲಿಗೇ ಮುಗಿಯುತ್ತದೆ. ಈ ಅರಿವಿನ ಜೊತೆಗೆ ಚಿತ್ತಭಿತ್ತಿಯಲ್ಲಿ ನಿಮ್ಮ ಪ್ರೇಮಿಯ ಚಿತ್ರವನ್ನು ನಿಲ್ಲಿಸಿಕೊಂಡು ಉಸಿರಾಟವು ಅನಾಹತವನ್ನು ಹಾದುಹೋಗುವ ಪ್ರಕ್ರಿಯೆಯನ್ನೇ ಗಮನಿಸಿ. ಅರ್ಧ ಗಂಟೆಯಾದರೂ ನೀವಿದನ್ನು ಮಾಡಬೇಕು. ಹೀಗೆ ಒಂದು ದಿನವೂ ಬಿಡದೆ ಹತ್ತು ದಿನಗಳ ಕಾಲ ನೀವಿದನ್ನು ಮಾಡಿ.  

ನಿಮ್ಮ ಪ್ರೇಮ ದೇಹ ಭಾವನೆಗೆ ಸೀಮಿತವಾಗಿದ್ದರೆ, ಈ ಧ್ಯಾನವಿಧಾನ ನಿಮ್ಮನ್ನು ದೇಹಭಾವನೆಯಿಂದ ಮುಕ್ತಗೊಳಿಸುತ್ತದೆ. ಯಾವುದನ್ನು ನೀವು ಪ್ರೇಮ ಅಂದುಕೊಂಡಿದ್ದೀರೋ ವಾಸ್ತವದಲ್ಲಿ ಅದರ ರೂಪವೇನು ಎಂದು ತೋರಿಸಿಕೊಡುತ್ತದೆ. ಹಾಗೂ ಅದನ್ನು ಪಡೆಯಲು ವಿಫಲರಾಗಿದ್ದರಿಂದ ನಿಮಗೆ ಯಾವ ನಷ್ಟವೂ ಆಗಿಲ್ಲ ಎಂಬುದನ್ನೂ ನೀವು ಕಂಡುಕೊಳ್ಳುವಿರಿ.

ನೆನಪಿಡಬೇಕಾದ ಅಂಶ : ಈ ಧ್ಯಾನ ಮಾಡುವಾಗ ಯಾವುದೇ ಕಾರಣಕ್ಕೂ ನಿಮ್ಮಲ್ಲಿ ಪಾಪ ಪ್ರಜ್ಞೆ ಇರಕೂಡದು. ನಿಮ್ಮನ್ನು ನೀವು ಪರೀಕ್ಷಿಸಿಕೊಳ್ಳುವ, ವಿಮರ್ಶಿಸಿಕೊಳ್ಳುವ ಮತ್ತು ಹೊಸ ದಾರಿ ಹುಡುಕಿಕೊಳ್ಳುವ ಪ್ರಯತ್ನದಲ್ಲಿದ್ದೀರಿ ಎಂದು ಭಾವಿಸಿ, ಧ್ಯಾನವನ್ನು ಆರಂಭಿಸಿ.

ಸಂಬಂಧಿತ ಲೇಖನಗಳನ್ನು ಈ ಕೊಂಡಿಯಲ್ಲಿ ಓದಬಹುದು: https://aralimara.com/tag/ಧ್ಯಾನ/

 

 

1 Comment

Leave a Reply