ಶಿವೋSಹಮ್ ಸರಣಿ ~ 5 : ಹಾಗಾದರೆ ನಿಜ ಯಾವುದು!?

photoಕನ್ನಡಿಯಲ್ಲಿ ಅದೆಷ್ಟೋ ಬಿಂಬಗಳು ಮೂಡುತ್ತವೆ, ಅಳಿಯುತ್ತವೆ. ಆದರೆ ಕನ್ನಡಿ ಆ ಯಾವುದರಿಂದಲೂ ಪ್ರಭಾವಿತವಾಗುವುದಿಲ್ಲ. ಯಾವ ಬಿಂಬದ ಮೇಲೂ ಒಡೆತನ ಸಾಧಿಸಿ “ಇದು ನಾನು” ಎನ್ನುವುದಿಲ್ಲ.  ನಾನು ಕೂಡ ಆ ಕನ್ನಡಿಯಂತೆ ಯಾರಿಂದಲೂ  ಆಕರ್ಷಣೆ – ವಿಕರ್ಷಣೆಗಳಿಗೆ ಒಳಗಾಗುವುದಿಲ್ಲವೆಂದು ಅರಿತಿದ್ದೇನೆ. ಅದರಂತೆಯೇ ನಾನು ಸಾಕ್ಷಿ ಮಾತ್ರವಾಗಿ, ಕೇವಲ ದ್ರಷ್ಟಾ (ನೋಡುಗ) ಆಗಿ ಅಲಿಪ್ತನಾಗಿರುತ್ತೇನೆ

: Whosoever JI 

ನಾನೀಗ ನಿಮಗೆ ಹೇಳ್ತಿರೋದು ಶುದ್ಧ ಪ್ರಾಯೋಗಿಕ ಸಂಗತಿ. ಸಾಧಕನಿಗೆ, ಸಾಧನೆಗೆ ಅತ್ಯಗತ್ಯವಾಗಿರುವುದನ್ನೇ ನಾನು ಹೇಳ್ತಿದ್ದೀನಿ. ನಡು ನಡುವೆ ಅಲ್ಪ ಸ್ವಲ್ಪ ತಮಾಷೆ ಮಾಡೋದು ನಿಮ್ಮ ಗಾಂಭೀರ್ಯವನ್ನು ಮುರಿಯಲಿಕ್ಕಾಗಿ. ನೀವು ಗಂಭೀರರಾಗಿ ಕುಳಿತು ಕೇಳತೊಡಗಿದರೆ ನಿಮಗೆ ಏನೂ ಕೇಳಿಸುವುದಿಲ್ಲ, ನೀವು ಮತ್ತೇನೋ ಕೇಳಿಸಿಕೊಳ್ತೀರಿ ಅಥವಾ ಬೇರೆಯದೇ ಅರ್ಥವನ್ನು ಹುಡುಕಿಕೊಳ್ತೀರಿ; ಅರ್ಥವನ್ನ ಅನರ್ಥ ಮಾಡಿಕೊಂಡುಬಿಡ್ತೀರಿ. ಈಗ ಮುಂದಿನದನ್ನು ನೋಡೋಣ. 

ನ ಮೇ ದ್ವೇಷರಾಗೌ ನ ಮೇ ಲೋಭಮೋಹೌ, ಮದೋ ನೈವ ಮೇ ನೈವ ಮಾತ್ಸರ್ಯಭಾವಃ … “ನಾನು ರಾಗದ್ವೇಷಗಳಲ್ಲ, ಲೋಭಮೋಹಗಳಲ್ಲ, ನಾನು ಮದಮತ್ಸರಗಳೂ ಆಗಿಲ್ಲ…” – ಸಾಗರದಂಚಲ್ಲಿ ಅಲೆಗಳು ಏಳುವಂತೆಯೇ ರಾಗದ್ವೇಷಗಳು, ಮೋಭಮೋಹಗಳು, ಮದಮತ್ಸರಗಳು ನನ್ನಿಂದ ಹೊಮ್ಮುತ್ತವೆ. ನಾನು ಅದಕ್ಕೆಲ್ಲ ಸಾಕ್ಷಿ ಮಾತ್ರನಾಗಿದ್ದೇನೆ; ನಾನು ಅದನ್ನೆಲ್ಲ ನೋಡುವವನು ಮಾತ್ರವಾಗಿದ್ದೇನೆ. ಕನ್ನಡಿಯಲ್ಲಿ ಅದೆಷ್ಟೋ ಬಿಂಬಗಳು ಮೂಡುತ್ತವೆ, ಅಳಿಯುತ್ತವೆ. ಆದರೆ ಕನ್ನಡಿ ಆ ಯಾವುದರಿಂದಲೂ ಪ್ರಭಾವಿತವಾಗುವುದಿಲ್ಲ. ಯಾವ ಬಿಂಬದ ಮೇಲೂ ಒಡೆತನ ಸಾಧಿಸಿ “ಇದು ನಾನು” ಎನ್ನುವುದಿಲ್ಲ.  ನಾನು ಕೂಡ ಆ ಕನ್ನಡಿಯಂತೆ ಯಾರಿಂದಲೂ  ಆಕರ್ಷಣೆ – ವಿಕರ್ಷಣೆಗಳಿಗೆ ಒಳಗಾಗುವುದಿಲ್ಲವೆಂದು ಅರಿತಿದ್ದೇನೆ. ಅದರಂತೆಯೇ ನಾನು ಸಾಕ್ಷಿ ಮಾತ್ರವಾಗಿ, ಕೇವಲ ದ್ರಷ್ಟಾ (ನೋಡುಗ) ಆಗಿ ಅಲಿಪ್ತನಾಗಿರುತ್ತೇನೆ.

ನ ಧರ್ಮೋ ನ ಚಾರ್ಥೋ ನ ಕಾಮೋ ನ ಮೋಕ್ಷಃ…. “ನಾನು ಧರ್ಮಾರ್ಥ ಕಾಮ ಮೋಕ್ಷಗಳೂ ಅಲ್ಲ…” ಅದು ಧರ್ಮವಿರಲಿ ಅಥವಾ ಸಂಪತ್ತು; ಯಾವುದೇ ಕಾಮನೆಯಿರಲಿ ಅಥವಾ ಬಯಕೆಗಳು.. ನಾನು ಈ ಯಾವುದರಲ್ಲೂ ಅಸಕ್ತನಲ್ಲ. ನಾನು ಇವುಗಳಲ್ಲಿ ಮುಳುಗಿದವನಲ್ಲ. ನಾನು ಕೇವಲ ನೋಡುಗನು. ನಾನು ಈ ಯಾವುದರಿಂದಲಾದರೂ ಬಂಧಿಸಲ್ಪಡುವೆನೇ, ಸಿಲುಕಿಕೊಳ್ಳುವೆನೇ ಎಂದು ಗಮನಿಸುವವನು. ನಾನು ಮೋಕ್ಷವನ್ನೂ ಹೀಗೇ ಸಾಕ್ಷಿಯಾಗಿ ನೋಡುವವನು. ಯಾಕೆಂದರೆ, ನನಗೆ ಯಾವುದರದ್ದಾದರೂ ಅನುಭವ ಆಗುತ್ತದೆ, ತಿಳಿವು ಉಂಟಾಗುತ್ತದೆ ಎಂದಾದರೆ ನಾನು ಅದಾಗಿರಲು ಸಾಧ್ಯವಿಲ್ಲ. ಯಾವುದನ್ನು ಅರಿಯಬೇಕಿದೆಯೋ ಅದು ಅರಿಯುವವರಿಗಿಂತ ಭಿನ್ನವೂ ಅತೀತವೂ ಆಗಿರಬೇಕಾಗುತ್ತದೆ. ನಾನು ಧರ್ಮವಾಗಲೀ ಅರ್ಥವಾಗಲೀ ಕಾಮವಾಗಲೀ ಮೋಕ್ಷವಾಗಲೀ ಆಗಿಲ್ಲ ಎಂದಾದರೆ ನಾನು ಯಾರು?

ಶಂಕರರು ಹೇಳುತ್ತಾರೆ, ನನ್ನ ಸ್ವರೂಪ ಚಿದಾನಂದರೂಪ… ಶ್ಶಿವೋಹಮ್ ಶಿವೋಹಮ್.. ಅಂದರೆ, ನಾನು ಚಿದಾನಂದ ರೂಪಿಯಾದ ಶಿವನಾಗಿದ್ದೇನೆ. ಸತ್, ಚಿತ್, ಆನಂದ ರೂಪಿಯಾದ ಸಾರ್ವಕಾಲಿಕ, ನಿರಾಕಾರ ಚೈತನ್ಯವಾಗಿದ್ದೇನೆ.

ನ ಪುಣ್ಯಂ ನ ಪಾಪಂ ನ ಸೌಖ್ಯಂ ನ ದುಃಖಂ.. “ನಾನು ಪುಣ್ಯವೂ ಅಲ್ಲ ಪಾಪವೂ ಅಲ್ಲ; ಸುಖವೂ ಅಲ್ಲ, ದುಃಖವೂ ಅಲ್ಲ…” ಆನಂದಮಯೀ ಚೈತನ್ಯಮಯೀ ಸತ್ಯಮಯೀ ಪರಮೇಶ್ವರೀ..  ಎಂಬ ಹಾಡೊಂದಿದೆಯಲ್ಲ? ಅದರಲ್ಲೊಂದು ಸಾಲು – ‘ಎಲ್ಲ ಸುಖವೂ ಸುಳ್ಳು, ದುಃಖಗಳೆಲ್ಲವೂ ಸುಳ್ಳು’. ನೀವು ಈ ಹಾಡನ್ನು ಎಷ್ಟು ಸಲ ಕೇಳಿದ್ದೀರೋ ಯಾರಿಗೆ ಗೊತ್ತು? ಆದರೆ ಬಹುಶಃ ಈ ಸಾಲಿನ ಮೇಲೆ ನೀವು ಗಮನ ಹರಿಸಿರಲಿಕ್ಕಿಲ್ಲ.
ಈ ಹಾಡಿನಲ್ಲಿ ಸುಖ ಮಾತ್ರ ಸುಳ್ಳು ಎಂದಿಲ್ಲ, ದುಃಖವೂ ಸುಳ್ಳು ಎಂದು ಹೇಳಲಾಗಿದೆ. ದುಃಖವೂ ಸುಳ್ಳು ಎಂದಾದಮೇಲೆ ನೀವೇಕೆ ಅದನ್ನು ಅಷ್ಟೊಂದು ಹಚ್ಚಿಕೊಳ್ತೀರಿ? ಯಾತನೆ ಅನುಭವಿಸ್ತೀರಿ? ಎಷ್ಟೊಂದು ತಡಬಡಾಯಿಸಿಬಿಡ್ತೀರಿ! ಚಿಕ್ಕಪುಟ್ಟ ದುಃಖ ಉಂಟಾಗಲಿಕ್ಕಿಲ್ಲ, ಎಷ್ಟೊಂದು ಆತಂಕಿತರಾಗ್ತೀರಿ!! ಸುಖದುಃಖಗಳೆರಡೂ ಸುಳ್ಳೆಂದು ಈ ಗೀತೆ ಹೇಳುತ್ತಿದೆ. ಒಂದಂತೂ ಪಕ್ಕಾ – ಈ ಹಾಡಿನಲ್ಲೇನಿದೆಯೋ ಅದು ನಿಜವೆಂದಾದರೆ ನೀವು ಸುಳ್ಳೆಂದಾಗುತ್ತದೆ. ಒಂದೋ ಈ ಹಾಡು ಸುಳ್ಳಾಗಬೇಕು, ಇಲ್ಲಾ ನೀವು ಸುಳ್ಳಾಗಬೇಕು. ಎರಡರಲ್ಲಿ ಯಾವುದಾದರೂ ಒಂದು ಮಾತ್ರ ನಿಜವಾಗಿರಲು ಸಾಧ್ಯವಷ್ಟೆ.

ಅದು ಕಬೀರರಿರಲಿ, ನಾನಕರಿರಲಿ ಅಥವಾ ಓಶೋ ಇರಲಿ – ಯಾರಾದರೂ ಆಗಿರಲಿ; ಅವರ ಮಾತನ್ನು ನಾವು ಕೇಳುತ್ತೇವೆ, ಹೆಚ್ಚೆಂದರೆ ಮನಸ್ಸಿನಲ್ಲಿ ತುಂಬಿಕೊಳ್ತೇವೆ. ಅವನ್ನು ಒಪ್ಪಿಕೊಂಡ ಕೂಡಲೇ ಎಲ್ಲವೂ ಮುಗಿದುಹೋಯ್ತೆಂದು ಅಂದುಕೊಳ್ತೇವೆ. ಕೇಳಿದ್ದಂತೂ ಆಯ್ತು. ಆದರೆ ಚಿಂತನ – ಮನನದ ಮಾತು ದೂರವೇ ಉಳಿಯಿತು. ಇನ್ನು ನಿಧಿಧ್ಯಾಸನದ ವಿಷಯವನ್ನಂತೂ ಕೇಳಲೇಬೇಡಿ! ಹಾಗಾಗಕೂಡದು. ಕೇಳಿದ ನಂತರ ಅದನ್ನು ಕುರಿತು ಚಿಂತನೆ ನಡೆಸಬೇಕು. ಆಮೇಲೆ ಅದನ್ನು ಅನುಷ್ಠಾನ ಮಾಡಬೇಕು, ಅಳವಡಿಸಿಕೊಂಡು ಅನುಸರಿಸಲು ಯತ್ನಿಸಬೇಕು. ಮತ್ತೆ ಯಾವಾಗಲಾದರೂ ಅದರ ಬಗ್ಗೆ ವಿಸ್ತಾರವಾಗಿ ಮಾತಾಡೋಣ.

ಆದ್ದರಿಂದ, ಸುಖದುಃಖಗಳು ನಿಜವಾಗಿಯೂ ಸುಳ್ಳೇ ಅನ್ನೋದನ್ನು ಮೊದಲು ಕಂಡುಕೊಳ್ಳಬೇಕು. ಇವೆರಡೂ ಸುಳ್ಳು ಎಂದಾದರೆ ನಿಜ ಯಾವುದು? ಈ ಎರಡರಲ್ಲೆ ಯಾವುದಾದರೊಂದು ನಿಜವಿರಬೇಕು. ಒಂದೋ ಸುಖ, ಇಲ್ಲಾ ದುಃಖ. ಸುಖ ದುಃಖಗಳೆರಡೂ ಸುಳ್ಳೆಂಬುದನ್ನು ನಾವು ಕೇಳಿಯಾಯ್ತು. ಇನ್ನೀಗ ನಾವು ಸುಖದಿಂದಿರುವಾಗ ಸುಖ ಸುಳ್ಳೇ ಎಂದು, ದುಃಖದಲ್ಲಿರುವಾಗ ಇದು ಕೂಡ ಸುಳ್ಳೇ ಎಂದು ಚಿಂತನೆ ನಡೆಸಬೇಕು.

ಶಿವೋsಹಮ್ ಸರಣಿಯ ಹಿಂದಿನ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://aralimara.com/category/ಅಂಕಣ/whosoever-ji/ 

1 Comment

Leave a Reply