ಕಥಾ ಸರಿತ್ಸಾಗರ : ಪಾಟಲೀಪುತ್ರ ನಗರದ ಕಥೆ  ~ ಪಾಟಲೀ – ಪುತ್ರಕರ ಮದುವೆ, ಪಾಟಲೀಪುತ್ರದ ನಿರ್ಮಾಣ

ವರ್ಷೋಪಾಧ್ಯಾಯನು ವರರುಚಿಗೆ ಪಾಟಲೀಪುತ್ರ ನಗರದ ವೈಭವಗಾಥೆಯನ್ನು ಹೇಳುತ್ತಿದ್ದಾನೆ.
ಇಲ್ಲಿಯವರೆಗೆ…
ತಂದೆಯ ವಂಚನೆಯಿಂದ ನೊಂದು ರಾಜ್ಯವನ್ನು ತೊರೆದು ಹೊರಟ ಪುತ್ರಕನಿಗೆ ಕಾಡಿನಲ್ಲಿ ಮಯಾಸುರನ ಮೂರ್ಖಮಕ್ಕಳ ಭೇಟಿಯಾಗುತ್ತದೆ. ಅವರ ಮಾಯಾ ಪರಿಕರಗಳನ್ನು ತೆಗೆದುಕೊಂಡು, ಮಾಯಾ ಚಪ್ಪಲಿ ತೊಟ್ಟು ಹಾರುತ್ತಾ ಅವನು ಆಕರ್ಷಿಕಾ ಎಂಬ ನಗರದಲ್ಲಿ ಇಳಿದು, ಮುರುಕು ಮನೆಯ ಮುದುಕಿಯೊಬ್ಬಳ ಆಶ್ರಯ ಪಡೆಯುತ್ತಾನೆ.
ಮುಂದೆ…

katha

ಪುತ್ರಕನು ತನಗೆ ತೋಚಿದ ಕೆಲಸಗಳನ್ನು ಮಾಡಿಕೊಂಡು ಮುದುಕಿಯ ಮನೆಯಲ್ಲಿ ಆಕೆಯ ಮಗನಂತೆಯೇ ಇರತೊಡಗಿದನು. ಹೀಗಿರುತ್ತ ಒಮ್ಮೆ ಮುದುಕಿಯು ಪುತ್ರಕನಿಗೆ ಮದುವೆಯಾಗಿ ಮನೆಗೊಬ್ಬಳು ಸೊಸೆಯನ್ನು ತಾ ಅಂದಳು. ಆಗ ಪುತ್ರಕನು ನನಗೆ ಅನುರೂಪಳಾದ ಹುಡುಗಿಯು ಈ ರಾಜ್ಯದಲ್ಲಿ ಯಾರಾದರೂ ಇದ್ದಾರೆಯೇ ಎಂದು ಪ್ರಶ್ನಿಸಲು, ಮುದುಕಿಯು ಹಾಸ್ಯಕ್ಕಾಗಿ ಪಾಟಲಿಯ ಹೆಸರನ್ನು ಹೇಳಿದಳು.
ಪುತ್ರಕನು ಅದು ಯಾರೆಂದು ಕೇಳಲು, ಮುದುಕಿಯು ಅವಳ ರೂಪವನ್ನು ಬಣ್ಣಿಸತೊಡಗಿದಳು.

ಪಾಟಲೀ, ಮಹೇಂದ್ರ ವರ್ಮನ ಮಗಳು. ಸುರಸುಂದರಿಯಾದ ತನ್ನ ಮಗಳ ಮೇಲೆ ಯಾರ ದೃಷ್ಟಿಯೂ ಬೀಳದಿರಲೆಂದು ಏಳು ಉಪ್ಪರಿಗೆಗಳುಳ್ಳ ಅಂತಃಪುರದಲ್ಲಿ ಆಕೆಯನ್ನು ಇರಿಸಿದ್ದನು. ಮುದುಕಿಯ ಬಣ್ಣನೆ ಕೇಳಿ ಪುತ್ರಕನಿಗೆ ಆಕೆಯನ್ನು ನೋಡಲೇಬೇಕು ಅನ್ನುವ ಹಂಬಲ ಉಂಟಾಯ್ತು. ರಾತ್ರಿಯ ವೇಳೆ ಮಾಯಾ ಚಪ್ಪಲಿಯನ್ನು ತೊಟ್ಟು ಆಕಾಶಮಾರ್ಗದಲ್ಲಿ ಹಾರಿ, ಅಂತಃಪುರವನ್ನು ತಲುಪಿದನು. ನಿದ್ರೆಯಲ್ಲಿದ್ದ ಪಾಟಲಿಯ ಮನೋಹರ ರೂಪವನ್ನು ಕಂಡು ಮೋಹಗೊಂಡನು. ನಿದ್ರೆಗೆ ಭಂಗವಾದಂತಾಗಿ ಎದ್ದು ಕಣ್ ಬಿಟ್ಟ ಪಾಟಲಿಯು ತನ್ನೆದುರು ನಿಂತಿದ್ದ ಪುತ್ರಕನನ್ನು ಕಂಡಳು. ಅವಳೂ ಅವನ ರೂಪಕ್ಕೆ ಮನಸೋತಳು. ಇಬ್ಬರೂ ಪರಸ್ಪರ ಪರಿಚಯ ಮಾಡಿಕೊಂಡರು. ಮೊದಲ ನೋಟ – ಮೊದಲ ಭೇಟಿಯಲ್ಲೇ ಇಬ್ಬರಲ್ಲೂ ಪ್ರೇಮವೇರ್ಪಟ್ಟಿತು.
ಪಾಟಲೀ ಮತ್ತು ಪುತ್ರಕರು ಮೇಲಿಂದ ಮೇಲೆ ಭೇಟಿಯಾಗತೊಡಗಿದರು. ಪ್ರೇಮ ಬಲಗೊಂಡು ಗಾಂಧರ್ವ ವಿವಾಹವನ್ನೂ ಮಾಡಿಕೊಂಡರು.

ಪಾಟಲಿಯಲ್ಲಿ ಆಗುತ್ತಿದ್ದ ಬದಲಾವಣೆಯನ್ನು ಗುರುತಿಸಿದ ರಾಣೀವಾಸದವರು ಮಹಾರಾಜನಿಗೆ ಅದನ್ನು ತಿಳಿಸಿದರು. ಕಾವಲಿನವರು ಚಾಣಾಕ್ಷತೆಯಿಂದ ಪುತ್ರಕನ ಕಳ್ಳಭೇಟಿಯನ್ನು ಪಟ್ಟೆ ಮಾಡಿದರು. ಅವನು ನಿತ್ಯವೂ ಅಂತಃಪುರಕ್ಕೆ ಬಂದುಹೋಗುತ್ತಿದ್ದುದನ್ನು ಪುರಾವೆ ಸಹಿತ ಮಹಾರಾಜನೆದುರು ಇಟ್ಟರು. ಮಹೇಂದ್ರ ವರ್ಮನ ಆದೇಶದಂತೆ ಭಟರು ಪುತ್ರಕನನ್ನು ಬಂಧಿಸಲು ಮುದುಕಿಯ ಮನೆಗೆ ಧಾವಿಸಿದರು. ವಿಷಯ ತಿಳಿಯುತ್ತಲೇ ತನ್ನ ಮಾಯಾ ಪರಿಕರಗಳನ್ನು ತೆಗೆದುಕೊಂಡು, ಮಾಯಾ ಚಪ್ಪಲಿ ತೊಟ್ಟು ಹಾರಿದ ಪುತ್ರಕನು, ಅಂತಃಪುರದಲ್ಲಿದ್ದ ಪಾಟಲಿಯನ್ನು ಎತ್ತಿಕೊಂಡು ದೂರದ ವಿಸ್ತಾರವಾದ ಕಾಡಿಗೆ ಬಂದಿಳಿದನು.

ಅವರಿಬ್ಬರೂ ಕಾಡಿನಲ್ಲಿ ಹರಿಯುತ್ತಿದ್ದ ನದೀತೀರದಲ್ಲಿ ಕುಳಿತು ದಣಿವಾರಿಸಿಕೊಂಡರು. ತನ್ನಲ್ಲಿದ್ದ ಮಾಯಾ ಪಾತ್ರೆಯಿಂದ ಪುತ್ರಕನು ಪಾಟಲಿಗೆ ತಿನಿಸುಗಳನ್ನು ಸೃಷ್ಟಿಸಿಕೊಟ್ಟನು. ಅವಳ ಬಯಕೆಯಂತೆ, ಚತುರಂಗ ಬಲ ಸಹಿತ ಸುವಿಶಾಲ ರಾಜ್ಯವೊಂದರ ನಕಾಶೆಯನ್ನು ಮಾಯಾಕೋಲಿನಿಂದ ಬಿಡಿಸಿದನು. ಅದು ಆ ಸ್ಥಳದಲ್ಲೇ ಮೂಡಿ ಬರಲು, ತಾನು ಅದರ ರಾಜನಾದನು. ಆ ರಾಜ್ಯವು ಪಾಟಲಿ ಮತ್ತು ಪುತ್ರಕರ ಕಾರಣದಿಂದಾಗಿ ‘ಪಾಟಲೀಪುತ್ರ’ವೆಂಬ ಹೆಸರನ್ನು ಪಡೆಯಿತು.
ಪಾಟಲೀ ಮತ್ತು ಪುತ್ರಕರು ದೀರ್ಘ ಕಾಲದವರೆಗೆ ರಾಜ್ಯವೈಭೋಗಗಳನ್ನು ಅನುಭವಿಸುತ್ತಾ ಸುಖವಾಗಿ ಬಾಳಿದರು.

(ಮುಂದುವರೆಯುವುದು…)

(ಕಥಾ ಸರಿತ್ಸಾಗರ, ಹಲವು ಕಥಾಧಾರೆಗಳು ಬಂದು ಸೇರುವ ಸಮುದ್ರ. ಆ ಕಥೆಗಳೆಲ್ಲವೂ ಒಂದಕ್ಕೊಂದು ಹೆಣೆದುಕೊಂಡಿರುವಂಥದ್ದು. ಯಾವುದಾದರೂ ಒಂದು ಕಥೆಯ ಒಂದು ಎಳೆ ಬಿಟ್ಟುಹೋದರೂ ಇಡೀ ಕಥೆಯ ಸೂತ್ರವೇ ತಪ್ಪಿದಂತಾಗುವುದು. ಪ್ರತ್ಯೇಕವಾಗಿ ಅವು ನಮ್ಮನ್ನು ಓದಿಸಿಕೊಂಡುಹೋದರೂ ಒಟ್ಟು ಓದಿನ ಸಮಗ್ರ ಅನುಭವದಿಂದ ನಾವು ವಂಚಿತರಾಗುವೆವು. ಆದ್ದರಿಂದ, ಈ ಕಥೆಗಳ ಪ್ರತಿ ಕಂತನ್ನೂ ಓದಲು ಯತ್ನಿಸಿ. ಹಿಂದಿನ ಕಂತುಗಳ ಕೊಂಡಿ ಇಲ್ಲಿದೆ:

https://aralimara.com/category/ಕಥಾಲೋಕ/ಕಥಾ-ಸರಿತ್ಸಾಗರ/  )

Leave a Reply