ನಿದ್ರೆಯೇ ಒಂದು ಧ್ಯಾನ. ಆದರೆ ನಾವು ಅದನ್ನು ಧ್ಯಾನದಂತೆ ಬಳಸಿಕೊಳ್ಳುವುದಿಲ್ಲ. ನಿಯಮಿತ ವಿಧಾನವನ್ನು ಅನುಸರಿಸಿ ಮಾಡುವ ನಿದ್ರೆ ಧ್ಯಾನ ನೀಡುವ ಫಲಿತಾಂಶವನ್ನೇ ನೀಡುವುದರಲ್ಲಿ ಅನುಮಾನವಿಲ್ಲ ~ ಚಿತ್ಕಲಾ
ಯಾರೇ ಆಗಲಿ ದಿನದಲ್ಲಿ ಹೆಚ್ಚೆಂದರೆ 8 ರಿಂದ 10 ಗಂಟೆಗಳ ಕಾಲ ಸಮಚಿತ್ತದಿಂದ, ಉಲ್ಲಾಸದಿಂದ ಕೆಲಸ ಮಾಡಬಲ್ಲರು. ಅದಕ್ಕಿಂತ ಹೆಚ್ಚು ಸಮಯವನ್ನು ಕಚೇರಿಯಲ್ಲಿ ಕಳೆಯಬೇಕು ಎಂದಾಗ, ಜವಾಬ್ದಾರಿ ನಿರ್ವಹಿಸುವ ಹೊಣೆಗಾರಿಕೆ ಹೆಗಲೇರಿದಾಗ ಒತ್ತಡಕ್ಕೆ ಒಳಗಾಗುವುದು ಸಹಜ. ಈ ಒತ್ತಡವನ್ನು ಒತ್ತಟ್ಟಿಗೆ ಇಟ್ಟು ನಾವು ಕೆಲಸ ಮಾಡುತ್ತಲೇ ಇರುತ್ತೇವೆ. ಆದರೆ ವಾರಾಂತ್ಯದಲ್ಲಿ ಅಥವಾ ಇನ್ನು ಸಾಧ್ಯವಿಲ್ಲ ಅನ್ನಿಸುವ ಹಂತದಲ್ಲಿ ಮುರಿದು ಬೀಳುತ್ತೇವೆ.
ಈ ಒತ್ತಡವನ್ನು ಸಂಭಾಳಿಸಲು ಏನು ಮಾಡಬೇಕು? ಇದಕ್ಕೆ ಮೂರು ಬಗೆಯ ಧ್ಯಾನಗಳಿಂದ ಪರಿಹಾರ ಪಡೆಯಬಹುದಾಗಿದೆ. ಮೊದಲನೆಯದು ನಿದ್ರಾ ಧ್ಯಾನ. ಎರಡನೆಯದು ನರ್ತನ. ಮತ್ತು ಮೂರನೆಯದು ಸಂಗೀತ. ಇಂದು ನಿದ್ರಾ ಧ್ಯಾನದ ವಿಧಾನವನ್ನು ನೋಡೋಣ.
ನಿದ್ರಾ ಧ್ಯಾನ
ಹದಿನೈದು ದಿನಕ್ಕೊಮ್ಮೆ, ಸಾಧ್ಯವಾಗದೆ ಹೋದರೆ ತಿಂಗಳಿಗೊಮ್ಮೆಯಾದರೂ ಇದು ಅವಶ್ಯಕ. ನಿದ್ರಾ ಧ್ಯಾನವೆಂದರೆ, ಹತ್ತರಿಂದ ಹದಿನೈದು ಗಂಟೆಗಳ ಕಾಲ ಸುಖವಾದ ನಿದ್ರೆ ಮಾಡುವುದು.
ನಿದ್ರೆಯೇ ಒಂದು ಧ್ಯಾನ. ಆದರೆ ನಾವು ಅದನ್ನು ಧ್ಯಾನದಂತೆ ಬಳಸಿಕೊಳ್ಳುವುದಿಲ್ಲ. ನಿಯಮಿತ ವಿಧಾನವನ್ನು ಅನುಸರಿಸಿ ಮಾಡುವ ನಿದ್ರೆ ಧ್ಯಾನ ನೀಡುವ ಫಲಿತಾಂಶವನ್ನೇ ನೀಡುವುದರಲ್ಲಿ ಅನುಮಾನವಿಲ್ಲ.
ಹೀಗೆ ಮಾಡಿ. ಸಾಧ್ಯವಾದಷ್ಟೂ ನಿಶ್ಶಬ್ದವಾದ, ತಂಪಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ಮೊದಲು ನಿಮ್ಮ ಫೋನ್ ಅನ್ನು ಸ್ವಿಚ್ ಆಫ್ ಮಾಡಿ. ನಂತರ ನಿಮ್ಮ ಮನಸ್ಸನ್ನು ಆಫ್ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭವಾಗುವುದು.
ಹಾಸಿಗೆಯ ಮೇಲೆ ಮಲಗುವ ಮೊದಲು ಹತ್ತು ನಿಮಿಷ ವಜ್ರಾಸನದಲ್ಲಿ ಕುಳಿತುಕೊಳ್ಳಿ. ದೀರ್ಘವಾಗಿ ಉಸಿರಾಟ ನಡೆಸಿ. ಇದರ ಜೊತೆಗೇ ಪ್ರಯತ್ನಪೂರ್ವಕವಾಗಿ ನಿಮ್ಮ ಆತಂಕಗಳನ್ನು ನಿವಾರಿಸಿಕೊಳ್ಳಿ. ಪ್ರತಿ ಬಾರಿ ಉಸಿರನ್ನು ಎಳೆದುಕೊಂಡು ಹೊರಗೆ ಬಿಡುವಾಗಲೂ “ನಾನು ಹಗುರವಾಗುತ್ತಿದ್ದೇನೆ” ಎಂದು ಭಾವಿಸಿ. ನಿಮ್ಮನ್ನು ನೀವು ಹಾಗೆ ಕನ್ವಿನ್ಸ್ ಮಾಡಿಕೊಳ್ಳಿ. ಆದರೆ ನೀವು ಇದನ್ನು ಪ್ರಜ್ಞಾಪೂರ್ವಕವಾಗಿ, ದೃಢ ನಂಬಿಕೆಯಿಂದ ಮಾಡಬೇಕು. ನಾನು ಹೀಗೆ ಭಾವಿಸುವುದರಿಂದ ನಿಜಕ್ಕೂ ಹಗುರಾಗುತ್ತೇನೆ ಅನ್ನುವ ನಂಬಿಕೆ ನಿಮಗೆ ಇರಬೇಕು.
ಈ ಹಂತದ ನಂತರ ಹಾಸಿಗೆಯ ಮೇಲೆ ಮಲಗಿ. ದಿಂಬು ಇರಿಸಿಕೊಳ್ಳದೆ ಇದ್ದರೆ ಒಳ್ಳೆಯದು. ನಿಮ್ಮ ಹಿಂಭಾಗ ಪೂರ್ತಿಯಾಗಿ ಹಾಸಿಗೆಗೆ ತಾಗುವಂತೆ ಮಲಗಿಕೊಳ್ಳಿ. ದೇಹ ಸಡಿಲವಾಗಿರಲಿ. ಗಂಟು – ಜಾಯಿಂಟ್’ಗಳು ಬಿಗುವಾಗಿರದಂತೆ ಗಮನವಿಡಿ. ಸಂಪೂರ್ಣ ವಿಶ್ರಾಮದ ಸ್ಥಿತಿಯಲ್ಲಿ ಮಲಗಿ.
ಈಗ ಹೊಕ್ಕುಳ ಮೇಲೆ ಹಗುರವಾಗಿ ನಿಮ್ಮ ಅಂಗೈ ತಾಕುವಂತೆ ಇಟ್ಟುಕೊಳ್ಳಿ. ಉಸಿರು ನಿಮ್ಮ ಹೊಕ್ಕುಳನ್ನು ತಲುಪುವುದು ಅದರ ಉಬ್ಬರ ಇಳಿತದಿಂದ ಅನುಭವಕ್ಕೆ ಬರುತ್ತದೆ. ಕಾಲು ಬೆರಳ ತುದಿಯಿಂದ ನಿಮ್ಮ ಗಮನವನ್ನು ಮೇಲಕ್ಕೆ ಕೊಂಡೊಯ್ಯುತ್ತಾ ಬನ್ನಿ. ದೇಹದ ಪ್ರತಿ ಭಾಗವನ್ನೂ ನಿಮ್ಮ ಒಳಗಣ್ಣಿನ ನೋಟ ಹರಿಸಿ ಸಂತೈಸಿ. ಅದು ಯಾವ ಅನುಭವವನ್ನು ಹೊಂದುತ್ತಿದೆ ಎಂದು ಗಮನಿಸಿ. ನಿಮ್ಮ ಕೆಲಸದ ದಣಿವು ದೇಹದ ಸ್ನಾಯುಗಳಲ್ಲಿ ಸಿಕ್ಕಿಕೊಂಡಿರುತ್ತದೆ. ಒತ್ತಡ ಮೆದುಳಲ್ಲಿ ಪದರುಗಟ್ಟಿರುತ್ತದೆ. ದೇಹವನ್ನು, ಮೆದುಳನ್ನು ಅನುಕಂಪದಿಂದ, ಪ್ರೀತಿಯಿಂದ ಒಳಗಣ್ಣಿನ ನೋಟದಲ್ಲಿ ನೇವರಿಸಿ ಸಂತೈಸಿ.
ಹಾಗೆಯೇ ಗಮನವನ್ನು ಮೇಲಕ್ಕೆ ಹರಿಸುತ್ತಾ ಹುಬ್ಬುಗಳ ನಡುವೆ ಕೇಂದ್ರೀಕರಿಸಿ. ಅಲ್ಲಿ ಕಾರ್ಗತ್ತಲಿದೆ. ಕಡುಗಪ್ಪು ಕತ್ತಲನ್ನು ಭಾವಿಸಿ. ಅಲ್ಲಿ ಬೆಳಕಿನ ಹನಿಯೂ ಇಲ್ಲ. ಅಲ್ಲಿ ಯಾವ ಸದ್ದೂ ಇಲ್ಲ, ಯಾವ ಚಲನೆಯೂ ಇಲ್ಲ. ಅಲ್ಲಿ ನಿಮ್ಮ ಗಮನವನ್ನು ಕೇಂದ್ರೀಕರಿಸಿ.
ಉಸಿರಾಟ ಲಯಬದ್ಧವಾಗಿರಲಿ. ಗಮನ ಹುಬ್ಬುಗಳ ನಡುವಿನ ಕತ್ತಲಿನಲ್ಲಿರಲಿ. ಬೇರೆ ಯಾವ ಯೋಚನೆಗೂ ಅವಕಾಶ ನೀಡಬೇಡಿ. ಹೀಗೆ ಅರ್ಧ ಗಂಟೆ ನೀವು ನಿದ್ರೆಗೆ ಸಿದ್ಧತೆ ಮಾಡಿಕೊಂಡಲ್ಲಿ, ದಣಿವನ್ನು ಪರಿಹರಿಸುವ, ಉಲ್ಲಾಸ ನೀಡುವ, ಒತ್ತಡ ಕಳೆಯುವ ಸುಖ ನಿದ್ರೆ ನಿಮ್ಮದಾಗುತ್ತದೆ.