ಪ್ರಶ್ನೆ : ಸುಷುಪ್ತಿಯಲ್ಲಿ ಇರುವ ಆನಂದವನ್ನೇ ಸಮಾಧಿಯಲ್ಲಿ ಹೊಂದಬೇಕು ಎಂದು ಹೇಳುತ್ತಾರೆ. ಸುಷುಪ್ತಿಯಲ್ಲಿ ಅವಿದ್ಯೆ ಇದ್ದೇ ಇದೆಯಲ್ಲವೆ? ಹಾಗಾದರೆ ಇದು ಹೇಗೆ ಸರಿಹೊಂದುತ್ತದೆ?
ರಮಣ ಮಹರ್ಷಿಗಳು : ಅದಕ್ಕಾಗಿಯೇ ಸುಷುಪ್ತಿಯನ್ನೂ ಸಹ ನಿರಾಕರಿಸಬೇಕೆಂದು ಹೇಳಲಾಗಿದೆ. ಸುಷುಪ್ತಿಯಲ್ಲಿ ಆನಂದಮಯನಾಗಿ ಒಬ್ಬನು ಇರುವವನಾದರೂ ಅವನಿಗೆ ಅದರ ತಿಳಿವಳಿಕೆಯೇ ಇಲ್ಲದಿರುವ ಕಾರಣ ಆ ಸ್ಥಿತಿಯನ್ನೂ ಬಿಡಬೇಕಾದದ್ದೇ. ಆದರೆ ಅಲ್ಲಿ (ಸುಷುಪ್ತಿಯಲ್ಲಿ) ಆನಂದವೆಂಬುದು ಇತ್ತೆಂದು ಹೇಳುವುದು – ನಾನು ಸುಖವಾಗಿ ನಿದ್ರೆ ಮಾಡಿದೆನೆಂದು ಎಚ್ಚರವಾದ ಮೇಲೆ ಹೇಳಿದಂತೆ! ಆನಂದವನ್ನು ನಾವು ಜಾಗ್ರತಾವಸ್ಥೆಯಲ್ಲೇ ಅನುಭವಿಸಬೇಕು. ಅದೇ ಸಮಾಧಿ.
ಪ್ರಶ್ನೆ : ಎಷ್ಟೇ ಧ್ಯಾನ ಮತ್ತು ತಪಸ್ಸು ಮಾಡಿದರೂ ಸಹ ಸಮಾಧಿಯನ್ನು ಪಡೆಯದಿದ್ದರೆ ಮೋಕ್ಷವಿಲ್ಲ ಎಂದು ಮಾಂಡೂಕ್ಯ ಉಪನಿಷತ್ತಿನ ಕಾರಿಕೆಯಲ್ಲಿ ತಿಳಿಸಿದ್ದಾರೆ. ಇದು ಸತ್ಯವೇನು? ಸಮಾಧಿಯು ಸಿದ್ಧಿಸದಿದ್ದರೆ ಮೇಕ್ಷವಿಲ್ಲವೇನು?
ರಮಣ ಮಹರ್ಷಿಗಳು : ಸರಿಯಾಗಿ ಅರ್ಥ ಮಾಡಿಕೊಂಡರೆ ಎಲ್ಲವೂ ಒಂದೇ. ಅದನ್ನು ಸಮಾಧಿ ಎನ್ನಿ, ತಪಸ್ಸೆನ್ನಿ; ಹೇಗಾದರೂ ಅದನ್ನು ಕರೆಯಿರಿ; ನಿರಂತರವಾಗಿ ಹರಿಯುವ ಆಜ್ಯಧಾರೆಯಂತೆ ಯಾವಾಗಲೂ ಸ್ಥಿರವಾಗಿರುವ ಸ್ಥಿತಿ ಯಾವುದೋ ಅದೇ ಧ್ಯಾನ. ಅದೇ ತಪಸ್ಸು. ಅದೇ ಸಮಾಧಿಯೂ ಸಹ. ತಾನು ತಾನಾಗಿ ನೆಲೆಸುವುದೇ ಸಮಾಧಿ.
ಪ್ರಶ್ನೆ : ಸಮಾಧಿಯನ್ನು ಅವಶ್ಯವಾಗಿ ಪಡೆಯಬೇಕು ಎಂದು ಮಾಂಡೂಕ್ಯದಲ್ಲಿ ಹೇಳಿದ್ದಾರಲ್ಲ?
ರಮಣ ಮಹರ್ಷಿಗಳು : ಅಲ್ಲ ಎಂದು ಯಾರು ಹೇಳುತ್ತಾರೆ? ಮಾಂಡೂಕ್ಯದಲ್ಲಿ ಮಾತ್ರವಲ್ಲ, ಎಲ್ಲೆಲ್ಲಿಯೂ ಹಾಗೆಯೇ ಹೇಳಿದ್ದಾರೆ. ತಾನು ಯಾರು ಎಂಬುದನ್ನು ಅರಿಯುವುದೇ ಅಲ್ಲವೇ ಸಮಾಧಿಯಿಂದ ಉಂಟಾಗುವ ಉಪಯೋಗ? ಸ್ವಲ್ಪ ಹೊತ್ತು ದೇಹದ ಮೇಲಿನ ಪರಿವೆ ಇಲ್ಲದೆ ಜಡನಂತೆ ಕುಳಿತ ಮಾತ್ರಕ್ಕೆ ಏನು ಪ್ರಯೋಜನ? ಕೈಯಲ್ಲೊಂದು ಕುರು ಎದ್ದಿದೆ ಎನ್ನಿ. ಅದನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆ ಮಾಡುವ ಸಲುವಾಗಿ ಕ್ಲೋರೋಫಾರಂ ಕೊಡುತ್ತಾರೆ. ಆಗ ನಿಮಗೆ ಏನೊಂದೂ ಗೊತ್ತಾಗುವುದಿಲ್ಲ. ಅಷ್ಟು ಮಾತ್ರಕ್ಕೇ ಅದನ್ನು ಸಮಾಧಿ ಎನ್ನಲಾಗುತ್ತದೆಯೇನು? ಇದೂ ಅಷ್ಟೇ. ಸಮಾಧಿ ಎಂಬುದರ ಅರ್ಥವೇನೆಂದು ಮೊದಲು ತಿಳಿಯಬೇಕು. ನಾನು ಯಾರು ಎಂಬುದನ್ನು ಅರಿಯದೆ ಸಮಾಧಿ ಸ್ಥಿತಿಯ ವಿಷಯವನ್ನು ಅರಿಯುವುದು ಹೇಗೆ? ಮೊದಲು ಅದನ್ನು ಅರಿತುಕೊಂಡರೆ ಸಮಾಧಿ ಸ್ಥಿತಿ ಎಂಬುದು ತಾನಾಗಿಯೇ ಉಂಟಾಗುತ್ತದೆ.
ಪ್ರಶ್ನೆ : ಸಮಾಧಿಯನ್ನು ಅಭ್ಯಾಸ ಮಾಡಿ ವಸ್ತು ಸ್ಥಿತಿಯನ್ನು ಅರಿತುಕೊಂಡ ನಂತರವೂ ಅನುಸಂಧಾನ ಮಾಡುತ್ತಿರಬೇಕೆ?
ರಮಣ ಮಹರ್ಷಿಗಳು : ಅನುಸಂಧಾನವನ್ನು ಮಾಡುವುದೆಂದರೆ, ಮಾಡುವವನೊಬ್ಬ; ಮಾಡುವುದೆಂಬುದು ಇನ್ನೊಂದು; ಪಡೆಯುವ ವಸ್ತು ಎಂಬುದು ಮತ್ತೊಂದು – ಹೀಗೆ ಒಟ್ಟು ಮೂರಾಯಿತಲ್ಲವೆ? ಆದರೆ ಇರುವ ವಸ್ತು ಒಂದೇ. ಅದನ್ನು ಅರಿತ ನಂತರ ಅವನೇ (ಅಹಂ ಎಂಬುದೇ) ಇರುವುದಿಲ್ಲವಲ್ಲ! ಇನ್ನು ಮಾಡುವವರು ಯಾರು? ಮಾಡುವುದು ಏನನ್ನು?
(ಆಕರ : ರಮಣರ ಸನ್ನಿಧಿಯಲ್ಲಿ | ಮೂಲ: ಸೂರಿ ನಾಗಮ್ಮ, ಕನ್ನಡಕ್ಕೆ: ಡಾ.ಕೆ.ಎ.ನಾರಾಯಣನ್)