ಮನಸ್ಸಿನ ಕೊಳೆ ತೊಳೆಯುವ ಪ್ರಕ್ರಿಯೆ

ಊಟಕ್ಕೆ ಕೂರುವ ಮುನ್ನ ನಾವೇಕೆ ಕೈತೊಳೆದುಕೊಳ್ತೇವೆ? ಆವರೆಗಿನ ಕೆಲಸ ಕಾರ್ಯಗಳಲ್ಲಿ ಕೈ ಕೊಳೆಯಾಗಿರುತ್ತದೆ ಎಂದು. ಆಹಾರದೊಟ್ಟಿಗೆ ಅದು ಹೊಟ್ಟೆ ಸೇರಿ ಆರೋಗ್ಯ ಕೆಡದಿರಲಿ ಎಂದು. ಅಲ್ಲವೆ? ಹಾಗೆಯೇ ಮಲಗುವ ಮುನ್ನ ನಾವೆಷ್ಟು ಜನ ಮನಸ್ಸನ್ನು ತೊಳೆದುಕೊಳ್ತೇವೆ? ಬಹುತೇಕ ಇಲ್ಲವೆಂದೇ ಹೇಳಬಹುದು

ದೇಹಕ್ಕೆ ನೋವಾದಾಗ ನಮಗೆ ತತ್‍ಕ್ಷಣ ಗೊತ್ತಾಗಿಬಿಡುತ್ತದೆ. ಕೂಡಲೆ ಅದಕ್ಕೆ ಸ್ಪಂದಿಸಿ ನಿವಾರಣೆಯ ಉಪಾಯ ಹುಡುಕುತ್ತೇವೆ. ಅಂಗಾಲಿಗೆ ಮುಳ್ಳು ಚುಚ್ಚಿದರೆ ತಲೆ ಬಾಗಿ ಅದನ್ನು ಕಿತ್ತು ಹಾಕುತ್ತೇವೆ, ನೋವಾದ ಪಾದವನ್ನು ಸಂತೈಸುತ್ತೇವೆ. ದೇಹ ದಣಿದಾಗ ಅದಕ್ಕೆ ವಿಶ್ರಾಂತಿ ನೀಡುತ್ತೇವೆ. ನಮ್ಮ ದುಡಿಮೆ, ಖರ್ಚು ವೆಚ್ಚಗಳೆಲ್ಲವೂ ದೇಹದ ಆರಾಮ- ಸವಲತ್ತುಗಳಿಗಾಗಿಯೇ ಇರುತ್ತವೆ.
ದೇಹದ ರಕ್ಷಣೆಗಾಗಿ ನಾವು ಏನೆಲ್ಲ ಪಡಿಪಾಟಲು ಪಡುತ್ತೇವೆ. ಎಷ್ಟೊಂದು ಸಮರ್ಪಣಾ ಭಾವದಿಂದ ಅದರ ದೇಖರೇಖಿ ಮಾಡುತ್ತೇವೆ. ಆದರೆ ಕಣ್ಣಿಗೆ ಕಾಣದ ಕಾಯಿಲೆಯಾದಾಗ ಕೂಡಲೆ ವೈದ್ಯರ ಬಳಿ ಓಡುವವರು ಕಡಿಮೆ. ಜ್ವರ ಬಂದು ಒಂದು ದಿನವಾದರೂ ಕಳೆದ ನಂತರವಷ್ಟೆ ವೈದ್ಯರ ಕದ ಬಡಿಯುವವರ ಸಂಖ್ಯೆ ಜಾಸ್ತಿ ಇದೆ.

ದೇಹದ ಹೊರಮೈ- ಒಳಮೈಗಳ ಸಂಗತಿ ಹೀಗಾಯ್ತು. ನಮ್ಮೆಲ್ಲರಲ್ಲಿ `ಮನಸ್ಸು ‘ ಎಂಬುದೊಂದಿದೆ. ಅದನ್ನು ನಾವೆಷ್ಟು ಜತನದಿಂದ ನೋಡಿಕೊಳ್ತಿದ್ದೇವೆ? ಪ್ರತಿ ದಿನವೂ ಪರಿಮಳಭರಿತ ಸಾಬೂನಿನಿಂದ ಸ್ನಾನ ಮಾಡಿ ದೇಹವನ್ನು ಶುಭ್ರವಾಗಿಟ್ಟುಕೊಳ್ಳುವ, ಅದಕ್ಕೆ ಯಾವ ಸೋಂಕು ತಗುಲದಂತೆ ಕಾಳಜಿ ಮಾಡುವ ನಾವು ಮನಸ್ಸಿನ ಸ್ವಚ್ಛತೆಯ ಬಗ್ಗೆ ಎಷ್ಟು ಯೋಚಿಸುತ್ತೇವೆ? ಆಗಾಗ ಸ್ಪಾಗೆ ಹೋಗಿ ಮಸಾಜ್ ಮಾಡಿಸಿಕೊಳ್ಳುವವರು, ದೇಹ ಕಾಂತಿಗೆ, ಚರ್ಮದ ರಕ್ಷಣೆಗೆಂದು ಹಣ ಸುರಿಯುವವರು ಮನಸ್ಸಿನ ಕಾಂತಿಗೆ, ಅದರ ಉಲ್ಲಾಸಕ್ಕೆ ಏನು ಮಾಡುತ್ತೇವೆ? ಇತ್ತೀಚಿನ ದಿನಗಳಲ್ಲಿ ಮನರಂಜನೆಯೂ ದೇಹಸುಖದ ಒಂದು ವಿಸ್ತರಿತ ಭಾಗದಂತೆ ಆಗಿಬಿಟ್ಟಿದೆ. ಹೀಗಿರುವಾಗ ಮನಸ್ಸಿನ ಸಂತೋಷಕ್ಕಾಗಿ ಯಾವ ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡಿದ್ದೇವೆ? ಈ ಅಂಶಗಳನ್ನು ಕುರಿತು ಯೋಚಿಸುವ ಅವಶ್ಯಕತೆ ಹಿಂದೆಂದಿಗಿಂತ ಈಗ ಹೆಚ್ಚಿದೆ.

ಉಭಯ ಶುದ್ಧಿ
ಊಟಕ್ಕೆ ಕೂರುವ ಮುನ್ನ ನಾವೇಕೆ ಕೈತೊಳೆದುಕೊಳ್ತೇವೆ? ಆವರೆಗಿನ ಕೆಲಸ ಕಾರ್ಯಗಳಲ್ಲಿ ಕೈ ಕೊಳೆಯಾಗಿರುತ್ತದೆ ಎಂದು. ಆಹಾರದೊಟ್ಟಿಗೆ ಅದು ಹೊಟ್ಟೆ ಸೇರಿ ಆರೋಗ್ಯ ಕೆಡದಿರಲಿ ಎಂದು. ಅಲ್ಲವೆ? ಹಾಗೆಯೇ ಮಲಗುವ ಮುನ್ನ ನಾವೆಷ್ಟು ಜನ ಮನಸ್ಸನ್ನು ತೊಳೆದುಕೊಳ್ತೇವೆ? ಬಹುತೇಕ ಇಲ್ಲವೆಂದೇ ಹೇಳಬಹುದು.

ಮನಸ್ಸನ್ನು ತೊಳೆಯುವುದು ಎಂದರೆ ಅದೊಂದು ಧ್ಯಾನಸ್ಥ ಪ್ರಕ್ರಿಯೆ. ಹೇಗೆ ಊಟಕ್ಕೆ ಮುನ್ನ ಕೊಳೆ ಕೈಗಳಿಂದ ತೊಂದರೆಯಾಗಬಾರದೆಂದು ಎಚ್ಚರ ವಹಿಸುತ್ತೇವೋ ಹಾಗೆಯೇ ಮನಸಿನ ಕೊಳೆ ಆತ್ಮಕ್ಕಿಳಿಯದಂತೆ ಎಚ್ಚರವಹಿಸಬೇಕು. ಇದನ್ನು ಸಾಧಿಸುವುದು ಹೇಗೆ? ಮನಸ್ಸನ್ನು ತೊಳೆಯುವುದು ಎಂದರೇನು? ದೈನಂದಿನ ಕೆಲಸಗಳ ಅನಿವಾರ್ಯತೆಯಲ್ಲಿ ಎಷ್ಟೋ ಬಾರಿ ನಾವು ಎಡವಿರುತ್ತೇವೆ. ತಪ್ಪು ನಡೆಸಿರುತ್ತೇವೆ. ಅಥವಾ ಒಳಿತನ್ನೇ ಮಾಡಿರುತ್ತೇವೆ ಎಂದುಕೊಳ್ಳಿ. ರಾತ್ರಿ ಮಲಗುವ ಮುನ್ನ ಅಂದಿನ ಎಲ್ಲ ಕಲಾಪಗಳನ್ನೂ ಪುನರ್ಮನನ ಮಾಡಿಕೊಳ್ಳಬೇಕು. ದಿನವಿಡೀ ನಾವೆಷ್ಟು ಪ್ರಜ್ಞಾಪೂರ್ವಕವಾಗಿ ನಡೆದುಕೊಂಡೆವು ಎಂದು ನೋಡಿಕೊಳ್ಳಬೇಕು. ಅಂದಿನ ತಪ್ಪುಗಳಿಗೆ ನಮ್ಮಿಂದ ಕನಿಷ್ಟ ಸಮಜಾಯಿಷಿಯನ್ನಾದರೂ ಕೊಡಲು ಸಾಧ್ಯವಾಗುತ್ತದೆಯೇ? ಎಂತಹಾ ಅನಿವಾರ್ಯತೆಯಲ್ಲಿ ನಾವದನ್ನು ಮಾಡಿದ್ದೆವು? ಮತ್ತೆ ಅಂತಹ ಸಂದರ್ಭ ಬಂದಾಗ ಮತ್ತೊಮ್ಮೆ ಅದೇ ತಪ್ಪನ್ನು ಮಾಡಲಿದ್ದೇವೆಯೆ? ಇತ್ಯಾದಿ ಚಿಂತನೆ ನಡೆಸಬೇಕು. ನಾಳಿನ ದಿನವನ್ನು ದೋಷರಹಿತವಾಗಿ ಇರಿಸಿಕೊಳ್ಳುವ ದೃಢ ನಿಶ್ಚಯ ಮಾಡಿಕೊಳ್ಳಬೇಕು. ನಮ್ಮಿಂದ ಇಂತಹಾ ತಪ್ಪೊಪ್ಪಿಗೆ ಹಾಗೂ ಪ್ರಾಯಶ್ಚಿತ್ತ ಸಾಧ್ಯಾವಾದಾಗ ಮಾತ್ರ ಮನಸ್ಸನ್ನು ಮಾಲಿನ್ಯ ಮುಕ್ತವಾಗಿ ಇರಿಸಿಕೊಳ್ಳಲು ಸಾಧ್ಯ.

ಆರಂಭದಲ್ಲಿ ಮನಸ್ಸಿನ ಸ್ತರದಲ್ಲಿ ನಿಂತು ನಡೆಸುವ ಈ ಚಿಂತನೆಯು ಕ್ರಮೆಣ ಉನ್ನತ ಹಂತಕ್ಕೇರುತ್ತಾ ದೇಹ- ಮನಸ್ಸುಗಳನ್ನೂ ಮೀರಿ ಆತ್ಮದ ಸ್ತರಕ್ಕೆ ತಲುಪುತ್ತದೆ. ಇದನ್ನೇ ಧ್ಯಾನ ಎನ್ನುವುದು. ಧ್ಯಾನ ಮನಸ್ಸನ್ನು ಪಳಗಿಸಲು ಅತ್ಯುತ್ತಮ ಸಾಧನ. ಧ್ಯಾನ ಎಂದರೆ ಏನ್ನೋ ಮಾಡುವುದು ಎಂದಲ್ಲ, ಏನನ್ನೂ ಮಾಡದಿರುವುದು, ಅಷ್ಟೇ. ಈ ಸುಮ್ಮನಿರುವ ಅವಧಿಯಲ್ಲಿ ನಮಗೆ ನಮ್ಮನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ನಮ್ಮ ಮನಸ್ಸಿನ ನಿಜರೂಪವನ್ನು ಅರಿತು ಮುಂದಡಿಯಿಡಲು ಧ್ಯಾನವು ಸಹಕರಿಸುತ್ತದೆ.

ಸಾಧಕ ಸಂತರೆಲ್ಲ ಮನಸ್ಸಿನ ಶುದ್ಧಿಗೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಕೊಳೆ ಕಸ ತುಂಬಿದ ಹೃದಯಕೆ ಹೇ ಪ್ರಭು/ ನಿನ್ನ ಕರೆಯಲೆಂತು… // ನೀ ಬಾರದೆ ಈ ಹೃದಯ ಮಂದಿರವು ಶುಚಿಯಾಗುವುದೆಂತು!? – ಎಂದು ಭಕ್ತನೊಬ್ಬ ಹಾಡುತ್ತಾನೆ. ಮಲಿನಗೊಂಡ ಮನಸ್ಸಿನೊಳಗೆ ಭಗವಂತ ಬರುವುದಿಲ್ಲ. ಹಾಗಂತ ಭಗವಂತ ನೆಲೆಗೊಳ್ಳದೆ ಮನಸ್ಸಿನ ಮಲಿನತೆ ಕಳೆಯುವುದೂ ಇಲ್ಲ. ಆದ್ದರಿಂದ ನಾವು ಪ್ರಾಮಾಣಿಕ ಪ್ರಯತ್ನ ಹಾಕಬೇಕಾಗುತ್ತದೆ. ಕೆಡುಕು, ವಿಕೃತಿಗಳನ್ನು ಯೋಚಿಸುತ್ತ ಮನಸ್ಸನ್ನು ಗಟಾರ ಮಾಡಿಕೊಳ್ಳದಂತೆ ಎಚ್ಚರವಹಿಸಬೇಕಾಗುತ್ತದೆ. ಭಗವಂತ ನಮ್ಮ ಮನಸ್ಸಿನೊಳಕ್ಕೆ ಸದಾ ಇರುವನೆಂದು ಒಮ್ಮೆ ಮನದಟ್ಟಾದರೆ ಸಾಕು, ಮುಂದೆ ಮಾಲಿನ್ಯದ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಮನಸ್ಸಿನ ಈ ಶುದ್ಧಿಯನ್ನು ಕಾಪಾಡಿಕೊಳ್ಳೋದು ಹೇಗೆ? ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ// ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ// ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ /ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ – ಎಂದಿದ್ದಾರೆ ಬಸವಣ್ಣನವರು. ಇಷ್ಟು ಮಾಡಿದರೆ ಸಾಕು. ಇದರಿಂದ ಮಾನಸಿಕ ಶುದ್ಧಿ ಸಾಧ್ಯವಾಗಿ ಕ್ಲೇಷಗಳೂ ಉಂಟಾಗದಂತೆ ತಡೆಯುತ್ತದೆ, ಶುದ್ಧ ಮನಸ್ಸಿನೊಳಗೆ ಭಗವಂತನ ಇರುವಿಕೆಯೂ ಸಾಧ್ಯವಾಗುತ್ತದೆ.

 

Advertisements

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.