ಪಾನೀಯದ ಬುರುಡೆ, ದಾರಿಹೋಕ ಪಂಡಿತ ಮತ್ತು ರಾ-ಉಮ್

Ra um final

~ ಯಾದಿರಾ

ಮರುಭೂಮಿಯ ನಡುವೆ ಇದ್ದ ಆಶ್ರಮಕ್ಕೆ ಬೇಲಿಯೇ ಇರಲಿಲ್ಲ. ಹಾಗಾಗಿ ದ್ವಾರದ ಪ್ರಶ್ನೆಯೇ ಇಲ್ಲ. ಯಾರು ಯಾವಾಗ ಬೇಕಾದರೂ ಒಳ ಬರಬಹುದಿತ್ತು. ಆಲ್ಲಿರುವ ಸೌಲಭ್ಯಗಳನ್ನು ಬಳಸಬಹುದಿತ್ತು. ಕ್ಯಾರವಾನುಗಳಲ್ಲಿ ಸಾಗುತ್ತಿದ್ದವರ ಮಟ್ಟಿಗೆ ಇದು ಅರವಟ್ಟಿಗೆಯಾಗುತ್ತಿತ್ತು. ಒಂಟೆಗಳಿಗೆ ಮೇವು ಸಿಗುವ ತಾಣವಾಗುತ್ತಿತ್ತು. ರಾತ್ರಿಯಾದರೆ ಉಳಿಯಲು ಧರ್ಮಛತ್ರವಾಗುತ್ತಿತ್ತು.

ಒಂದು ದಿನ ದೊಡ್ಡದೊಂದು ಗ್ರಂಥ ಭಂಡಾರದೊಂದಿಗೆ ಸಾಗುತ್ತಿದ್ದ ಮಹಾ ಪಂಡಿತರೊಬ್ಬರು ಆಶ್ರಮ ಪ್ರವೇಶಿಸಿದರು. ಧರ್ಮಛತ್ರವೆಂದುಕೊಂಡು ಒಳಬಂದ ಅವರಿಗೆ ಅದೊಂದು ಆಶ್ರಮವೆಂದು ತಿಳಿಯಿತು. ಪಂಡಿತರು ಆ ರಾತ್ರಿ ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸಿಯೇ ಬಿಡಬೇಕೆಂದು ತೀರ್ಮಾನಿಸಿದರು.

ಸಂಜೆ ಪಾನೀಯದ ಬುರುಡೆಯೊಂದಿಗೆ ಬಂದು ಕುಳಿತ ರಾ-ಉಮ್ ಬಳಿಗೆ ಹೋಗಿ ತಾನೆಂಥ ಮಹಾಮಹೋಪಾಧ್ಯಾಯನೆಂದು ಪರಿಚಯಿಸಿಕೊಂಡರು.

ರಾ-ಉಮ್ ಎಂದಿನಂತೆ “ಊಟ ಹೇಗಿತ್ತು? ಒಂಟೆಗಳಿಗೆ ಸಾಕಷ್ಟು ಆಹಾರ ಸಿಕ್ಕಿತೇ?” ಎಂದೆಲ್ಲಾ ವಿಚಾರಿಸಿಕೊಂಡು “ಪ್ರಯಾಣದ ಆಯಾಸ ಕಳೆಯಲು ಆಶ್ರಮದ ಪಾನೀಯ ಒಳ್ಳೆಯದು. ಕೇಳಿ ಪಡೆದು ಸೇವಿಸಿ” ಎಂದು ಸಲಹೆ ಮಾಡಿದಳು.

ಪಂಡಿತರು ತಮ್ಮ ಜೋಳಿಗೆಯಿಂದ ಒಂದು ಪಾನೀಯದ ಬುರುಡೆಯನ್ನು ಹೊರಗೆತೆದು ರಾ-ಉಮ್ ಎದುರು ಇಟ್ಟರು. ಅದೊಂದು ಗಾಜಿನ ಬುರುಡೆ. ಅದರ ಅರ್ಧದಷ್ಟು ಪಾನೀಯವಿತ್ತು. ರಾ-ಉಮ್ ಪಂಡಿತರನ್ನು ಕುತೂಹಲದಿಂದ ನೋಡುತ್ತಿದ್ದಳು.

ಪಂಡಿತರು ಗಂಟಲು ಸರಿಪಡಿಸಿಕೊಂಡು ಒಂದು ವಿದ್ವತ್‌ ಪ್ರಶ್ನೆ ಇಟ್ಟರು ‘ಈ ಬುರುಡೆ ಅರ್ಧ ತುಂಬಿದೆಯೋ ಅಥವಾ ಅರ್ಧ ಖಾಲಿ ಇದೆಯೋ?’

ರಾ-ಉಮ್‌ಗೆ ಮುಗುಳ್ನಕ್ಕು ಆ ಗಾಜಿನ ಬುರುಡೆಯಲ್ಲಿದ್ದ ಪಾನೀಯವನ್ನು ಒಂದೇ ಗುಟುಕಿಗೆ ಗಂಟಲಿಗಿಳಿಸಿದಳು. ಪಂಡಿತರು ಕಿಂಕರ್ತವ್ಯಮೂಢರಾಗಿ ಅದನ್ನು ನೋಡುತ್ತಿದ್ದರು. 

ರಾ-ಉಮ್ ಹೇಳಿದಳು, ‘ಪಾನೀಯವಿರುವುದು ಕುಡಿಯುವುದಕ್ಕೆ. ಗಾಜಿನ ಬುರುಡೆ ಬಳಸಿ ಆಶಾವಾದ ಅಥವಾ ನಿರಾಶಾವಾದವನ್ನು ಅಳೆಯಲು ಸಾಧ್ಯವಿಲ್ಲ’

 

 

Leave a Reply