ವಾ-ಐನ್-ಸಾಇಲ್’ನ ಕುತೂಹಲ ಮತ್ತು ಗುರುವಿನಂಥ ವಿದ್ಯಾರ್ಥಿಯ ವಿನಯ

Yadira stories

ರಾ-ಉಮ್ ಆಶ್ರಮಕ್ಕೆ ಅನೇಕ ಹಳೆಯ ವಿದ್ಯಾರ್ಥಿಗಳು ಮತ್ತೆ ಮತ್ತೆ ಬರುತ್ತಿದ್ದರು. ಇವರಲ್ಲಿ ಕೆಲವರು ಆಗಲೇ ಗುರುಗಳಾಗಿ ಹೆಸರು ಮಾಡಿದ್ದರು. ಆದರೂ ಅವರು ಆಗೀಗ ಮತ್ತೆ ಆಶ್ರಮಕ್ಕೆ ಬಂದು ಶಿಷ್ಯರಾಗಿ ಕೆಲಕಾಲ ಕಳೆಯುತ್ತಿದ್ದರು.

ಹೀಗೆ ಬರುತ್ತಿದ್ದವರಲ್ಲಿ ಬಹುತೇಕ ರಾ-ಉಮ್‌ಳಷ್ಟೇ ಪ್ರಾಯವಿದ್ದ ಒಬ್ಬರಿದ್ದರು. ರಾ-ಉಮ್ ಕೂಡಾ ಇವರನ್ನು ಬಹಳ ಗೌರವದಿಂದ ಕಾಣುತ್ತಿದ್ದಳು. ಅನೇಕ ಹಳೆಯ ವಿದ್ಯಾರ್ಥಿಗಳೂ ಈ ವ್ಯಕ್ತಿಯನ್ನು ಗುರುವೆಂದೇ ಪರಿಗಣಿಸುತ್ತಿದ್ದರು. ಅವರಿಗೆ ಪೂರ್ವದ ಯಾವುದೋ ದ್ವೀಪದಲ್ಲಿ ಆಶ್ರಮವಿತ್ತು. ವಾ-ಐನ್-ಸಾಇಲ್‌ಗೆ ಈ ವ್ಯಕ್ತಿಯ ಬಗ್ಗೆ ಬಹಳ ಕುತೂಹಲ.

ಒಂದು ದಿನ ಸಂಜೆಯ ಪಾನೀಯ ಸೇವನೆಯ ಹೊತ್ತಿನಲ್ಲಿ ಈ ಗುರುವಿನಂಥ ವಿದ್ಯಾರ್ಥಿಯ ಬಳಿ ಹೋದ ವಾ-ಐನ್ ಕೇಳಿದ ‘ನೀವು ಅಲ್ಲೆಲ್ಲೋ ಆಶ್ರಮ ನಡೆಸುತ್ತಿರುವ ಮಹಾಗುರುಗಳಂತೆ. ಆದರೂ ಇಲ್ಲಿಗೆ ಮತ್ತೆ ಮತ್ತೆ ವಿದ್ಯಾರ್ಥಿಯಾಗಿ ಬರುತ್ತೀರಲ್ಲಾ….?’

ಆ ಗುರುವಿನಂಥ ವಿದ್ಯಾರ್ಥಿ ವಿನೀತನಾಗಿ ಹೇಳಿದರು, ‘ಬೆಳಕನ್ನು ಹಂಚಲು ಒಂದೋ ದೀಪವಾಗಬೇಕು ಇಲ್ಲವೇ ಹೊಳೆಯುವ ಕನ್ನಡಿಯಾಗಬೇಕು. ನಾನು ಕನ್ನಡಿಯಾದೆ. ಹೊಳಪು ಮಾಸಿದಾಗಲೆಲ್ಲಾ ಅದನ್ನು ಮತ್ತೆ ಉಜ್ಜಬೇಕಾಗುತ್ತದೆ’

ವಾ-ಐನ್ ಸಾಇಲ್ ಆ ಗುರುವಿನ ಬುರುಡೆಯಲ್ಲಿದ್ದ ಪಾನೀಯವನ್ನು ಒಂದೇ ಪೆಟ್ಟಿಗೆ ಖಾಲಿ ಮಾಡಿ ಕುಸಿದು ಕುಳಿತ!

Leave a Reply