ಬುದ್ಧ ಸ್ವೀಕರಿಸದೆ ಬಿಟ್ಟ ಬೈಗುಳಗಳು ಏನಾದವು?

buddha

ಗವಾನ್ ಬುದ್ಧ ಎಂದಿನಂತೆ ಮರದ ಕೆಳಗೆ ಕುಳಿತುಕೊಂಡು ಶಿಷ್ಯರೊಡನೆ ಮೌನ ಸಂವಾದ ನಡೆಸಿದ್ದ. ಅಲ್ಲಿ ನಿಶ್ಶಬ್ದದ ವಿನಾ ಬೇರೇನೂ ಇರಲಿಲ್ಲ.

ಇದ್ದಕ್ಕಿದ್ದ ಹಾಗೆ ಅಲ್ಲಿಗೆ ಯಾರೋ ದಾಪುಗಾಲಿಟ್ಟುಕೊಂಡು ಬರುತ್ತಿರುವ ಸಪ್ಪಳವಾಯ್ತು. ಬುದ್ಧನ ನಿಮೀಲಿತ ಕಣ್ಣುಗಳು ತೆರೆದುಕೊಂಡವು. ಭಂತೇಗಣ ಕತ್ತು ತಿರುಗಿಸಿ ನೋಡಿತು. ಒಬ್ಬ ಉರಿಮುಖದ ಮನುಷ್ಯ ಮುಷ್ಟಿ ಬಿಗಿದುಕೊಂಡು ಬಂದ. ಬಿಕ್ಖುಗಳ ನಡುವೆ ನುಗ್ಗಿ ಬುದ್ಧನೆದುರು ನಿಂತ.

ಬುದ್ಧನ ಮುಖದಲ್ಲಿ ಚೂರೂ ಬದಲಾವಣೆ ಉಂಟಾಗಲಿಲ್ಲ. ಬದ್ಧನ ನೋಟ ಅವನತ್ತ ಹರಿಯಲೂ ಇಲ್ಲ.

ಬಂದ ಉರಿಮುಖದ ವ್ಯಕ್ತಿ ಬುದ್ಧನನ್ನು ಬಾಯಿಗೆ ಬಂದ ಹಾಗೆ ಬೈಯತೊಡಗಿದ. ಅಶ್ಲೀಲವಾಗಿ ನಿಂದಿಸಿದ. ನೀನು ಸತ್ತೇಹೋಗು ಎಂದು ಶಾಪ ಹಾಕಿದ. ಅಲ್ಲಿ ಕುಳಿತಿದ್ದ ಮಹಾಸಂಯಮಿ ಬಿಕ್ಖುಗಣಕ್ಕೂ ಒಂದು ಕ್ಷಣ ಕೋಪ ಬರುವಂತಿತ್ತು ಆತನ ವರ್ತನೆ.

ಬುದ್ಧ ಕುಳಿತೇ ಇದ್ದ. ಶಾಂತನಾಗಿಯೇ ಇದ್ದ. ಅವನ ಕಣ್ಣು ಕೂಡ ಹೊರಳಲಿಲ್ಲ.

ಹಾಗೇ ಸ್ವಲ್ಪ ಹೊತ್ತು ಬೈದು ಸುಸ್ತಾದ ಆ ಉರಿಮುಖದ ಮನುಷ್ಯ ಅಲ್ಲಿಂದ ಅದೇ ಸಪ್ಪಳಗಾಲಿನೊಂದಿಗೆ ವಾಪಸಾದ.

ಹೊಸ ಶಿಷ್ಯನೊಬ್ಬನಿಗೆ ಅಚ್ಚರಿ “ಭಗವನ್! ನೀವೇಕೆ ಅವನು ಅಷ್ಟು ಕೆಟ್ಟದಾಗಿ ಬೈದರೂ ಅವನಿಗೆ ಪ್ರತಿಕ್ರಿಯಿಸಲಿಲ್ಲ?”

ಬುದ್ಧ ಕೇಳಿದ, “ನೀನು ನನಗೆ ಒಂದು ಹೂವನ್ನು ಕೊಡುತ್ತೀಯ ಎಂದಿಟ್ಟುಕೋ. ಅದನ್ನು ನಾನು ಸ್ವೀಕರಿಸಿದೆ ಇದ್ದರೆ ಏನಾಗುತ್ತದೆ?”

“ಅದು ನನ್ನಲ್ಲೇ ಉಳಿಯುತ್ತದೆ” ಅಂದ ಶಿಷ್ಯ.

“ನಾನು ಆ ಮನುಷ್ಯನ ಬೈಗುಳವನ್ನು ಸ್ವೀಕರಿಸಲಿಲ್ಲ”

ಬುದ್ಧನ ಉತ್ತರ ಶಿಷ್ಯನ ಮುಖದಲ್ಲಿ ಹೊಳಪು ಮೂಡಿಸಿತು.

Leave a Reply