ಅಧ್ಯಾತ್ಮ ಡೈರಿ : ಹೊಂದುವ ಹಂಬಲ ಮತ್ತು ಕಳೆದುಕೊಳ್ಳುವ ಸುಖ

ನೀವು ಗಮನಿಸಿ ಬೇಕಿದ್ದರೆ. ಯಾವ ಬಟ್ಟೆಗಾಗಿ ನೀವು ಶಾಪಿಂಗ್’ಗೆ ಹೋದಿರೋ ಅದು ಸಿಗದಿದ್ದರೆ ನೀವೆಷ್ಟು ಕಳವಳಪಡುತ್ತೀರಿ! ಅದು ಸಿಕ್ಕಾಗ ನೀವದನ್ನು ತೊಡದೆ ಇಡುವುದು ಬೇರೆ ವಿಷಯ.  ಅದು ಸಿಗದೆ ಹೋದರೆ ನೀವು ಪಡುವ ಬೇಸರವು ನಿಮಗೆ ಯಾವ ಅನುಭವ ನೀಡುತ್ತದೆಂದು ಗಮನಿಸಿ. ಅಧ್ಯಾತ್ಮ ಸಾಧಕರಲ್ಲಿ ಕೂಡ ಈ ‘ಕಳವಳಿಸುವ ಸಂಭ್ರಮ’ವಿದೆ.

ಹಳ ದಿನಗಳಿಂದ ಬ್ರ್ಯಾಂಡ್ ಫ್ಯಾಕ್ಟರಿಯಲ್ಲಿ ಶಾಪಿಂಗ್ ಮಾಡುವ ಪ್ಲ್ಯಾನ್ ಮಾಡಿಕೊಂಡಿರುತ್ತೀರಿ. ಹೇಗೂ ಸಮಯ, ಹಣ ಎಲ್ಲ ಹೊಂದಾಣಿಕೆ ಮಾಡಿಕೊಂಡು ಹೋಗಿಯೂ ಹೋಗುತ್ತೀರಿ. ಅಲ್ಲಿ ನೀವು ಮೇಲಿಂದ ಮೇಲೆ ಆನ್ ಲೈನ್ ನೋಡಿ ಗುರುತು ಮಾಡಿಟ್ಟುಕೊಂಡಿದ್ದ ಬಟ್ಟೆಗಾಗಿ ಹುಡುಕುತ್ತೀರಿ. ಅದು ಸಿಕ್ಕೂ ಸಿಗುತ್ತದೆ. ಒಮ್ಮೆ ಹಿಡಿದು ತಿರುಗಾಮುರುಗಾ ನೋಡುತ್ತೀರಿ. ಅದನ್ನೆ ಅಲ್ಲೇ ಸಿಕ್ಕಿಸಿ, ಮತ್ಯಾವುದೋ ಒಂದನ್ನು ಎಳೆದುಕೊಳ್ಳುತ್ತೀರಿ. ಕೊನೆಗಾದರೂ ಆ ಗೊತ್ತು ಮಾಡಿಟ್ಟುಕೊಂಡಿದ್ದ ಬಟ್ಟೆಯನ್ನು ಕೊಳ್ಳುವಿರೋ ಇಲ್ಲವೋ. ಕೊಂಡರೂ ಮೊದಲನೆಯದಾಗಿ ಅದನ್ನು ತೊಟ್ಟುಕೊಳ್ಳುವಿರೋ ಇಲ್ಲವೋ. ಪ್ರತಿ ಸಲ ಬಟ್ಟೆಗಳನ್ನು ಕೊಂಡಾಗಲೂ ಅವುಗಳಲ್ಲಿ ಒಂದನ್ನು ನಾವು ಹಾಕುವುದೇ ಇಲ್ಲ; ಅಥವಾ ಬಹಳ ಕಡಿಮೆ.  ಬಹುತೇಕ ಹೀಗಾಗುತ್ತದೆ. ಹಾಗೆ ಉಳಿದೇಹೋಗುವ ಬಟ್ಟೆಗಳ ಗುಡ್ಡೆಯಲ್ಲಿ ಅದು ಕೂಡಾ ಸೇರಿದರೆ ಅಚ್ಚರಿಯಿಲ್ಲ.

ಬಟ್ಟೆ ಮಾತ್ರವಲ್ಲ, ಎಲ್ಲವೂ ಹಾಗೇನೇ. ಪ್ರೇಮ ಕೂಡಾ. ಪ್ರೇಮಿ ಸಿಗಲೆಂದು ಹಾತೊರೆಯುತ್ತೇವೆ. ಹಗಲಿರುಳೂ ಹಂಬಲಿಸ್ತೇವೆ. ಸಿಗದೆ ಇರುವ ಖಾತ್ರಿ ಇದ್ದಷ್ಟೂ ಅಥವಾ ಸಿಗುವ ಸಾಧ್ಯತೆ – ಸಂಭವಗಳು ಕಡಿಮೆ ಇದ್ದಷ್ಟೂ ನಮ್ಮ ಪ್ರೇಮದ ತೀವ್ರತೆ ಹೆಚ್ಚಿರುವುದು! ಹಾಗಂತ ಪ್ರೇಮಿಸಿದ ವ್ಯಕ್ತಿ ನಮಗೆ ಸಿಕ್ಕುಬಿಟ್ಟರೆ, ಒಟ್ಟಿಗೆ ಬದುಕು ನಡೆಸುವಂತಾದರೆ, ನಮ್ಮಲ್ಲಿ ಪರಸ್ಪರ ಪ್ರೇಮವೆಷ್ಟು ಉಳಿದಿರುತ್ತದೆ? ಎಷ್ಟರ ಮಟ್ಟಿಗೆ ಅದನ್ನು ಪರಸ್ಪರ ತೋರಿಸಿಕೊಳ್ತೇವೆ?

ನೀವು ಗಮನಿಸಿ ಬೇಕಿದ್ದರೆ. ನಿಜಜೀವನದಲ್ಲಿ ಉತ್ಕಟ ಪ್ರೇಮಿಗಳು ಒಬ್ಬರಿಗೊಬ್ಬರು ಸಿಗುವುದೇ ಇಲ್ಲ. ಜನಪ್ರಿಯ ಕಲ್ಪಿತ ಪ್ರೇಮ ಕಥೆಗಳಲ್ಲೂ ಪ್ರೇಮಿಗಳು ಒಗ್ಗೂಡಿ ಬಾಳುವುದು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ. ಇದ್ದರೂ ಹಾಗೊಮ್ಮೆ, ಮದುವೆಯೊಂದಿಗೆ ಅವರ ಜೀಬ=ವನ ಕಥನವೇ ಮುಗಿದುಹೋಗುತ್ತದೆ. ಇನ್ನು ಪ್ರೇಮದ ಮಾತೆಲ್ಲಿ!? ಆದ್ದರಿಂದಲೇ ಪ್ರೇಮಕಥೆಗಳೆಲ್ಲದರಲ್ಲೂ ಪ್ರೇಮಿಗಳು ಸಾಯುವುದು. ಹಾಗೆಂದೇ ಅವು ಜನಪ್ರಿಯವೂ ಆಗಿರುವವು. ಜನಕ್ಕೆ ಕೂಡಾ ಪ್ರೇಮಿಗಳು ಒಗ್ಗೂಡಿದರೆ ಪ್ರೇಮ ಉಳಿಯುತ್ತದೆ ಅನ್ನುವ ನಂಬಿಕೆ ಇಲ್ಲ!

ಬಯಸುವುದು ತಪ್ಪಲ್ಲ. ಆಸೆ ತಪ್ಪಲ್ಲ. “ನಮಗೆ ಯಾವುದರ ಮೇಲೆ ಪ್ರೇಮ ಉಂಟಾಗುತ್ತದೆಯೋ ಅದಕ್ಕಾಗಿ ನಾವು ಆಸೆ ಪಡುತ್ತೇವೆ. ಆದ್ದರಿಂದ ಆಸೆಯೂ ಪ್ರೇಮವೇ. ಮತ್ತು ಪ್ರೇಮವು ದೇವರಾದ್ದರಿಂದ, ಆಸೆಯೂ ದೇವರೇ” ಅನ್ನುತ್ತಾರೆ ಸ್ವಾಮಿ ರಾಮತೀರ್ಥ. ಯಾವುದೇ ಸಂತ – ಸಾಧಕರ ಬದುಕಿನಲ್ಲಿ ದೇವರಿಗಿಂತ, ದೇವರನ್ನು ಹೊಂದುವ ನಿಟ್ಟಿನಲ್ಲಿ ನಡೆಸುವ ಪ್ರಕ್ರಿಯೆಗಳೇ ಮುಖ್ಯವಾಗುವುದನ್ನು ನಾವು ನೋಡಿದ್ದೇವೆ. ಅವರು ಸಾಧನೆಯನ್ನು ಎಂಜಾಯ್ ಮಾಡಿದಷ್ಟು ಸಾಕ್ಷಾತ್ಕಾರವನ್ನು ಮಾಡಿದಂತೆ ಕಾಣದು. ಸಂತ ಸಾಹಿತ್ಯದ ಮಹಾಸಾಗರದಲ್ಲಿ ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ. 

ನೀವು ಗಮನಿಸಿ ಬೇಕಿದ್ದರೆ. ಯಾವ ಬಟ್ಟೆಗಾಗಿ ನೀವು ಶಾಪಿಂಗ್’ಗೆ ಹೋದಿರೋ ಅದು ಸಿಗದೆ ಹೋದರೆ ನೀವೆಷ್ಟು ಕಳವಳಪಡುತ್ತೀರಿ! ಅದು ಸಿಕ್ಕಾಗ ನೀವದನ್ನು ತೊಡದೆ ಇಡುವುದು ಬೇರೆ ವಿಷಯ.  ಅದು ಸಿಗದಿದ್ದರೆ ನೀವು ಪಡುವ ಬೇಸರವು ನಿಮಗೆ ಯಾವ ಅನುಭವ ನೀಡುತ್ತದೆಂದು ಗಮನಿಸಿ. ಅಧ್ಯಾತ್ಮ ಸಾಧಕರಲ್ಲಿ ಕೂಡ ಈ ‘ಕಳವಳಿಸುವ ಸಂಭ್ರಮ’ವಿದೆ. ಅವರು ಭಗವಂತ ಸಿಕ್ಕರೆ, ಸಿಕ್ಕ ಸಂತೋಷಕ್ಕಿಂತ; ಸಿಗದೆ ಹೋದರೆ ಉಂಟಾಗುವ ಕಳವಳವನ್ನ ಸಂಭ್ರಮಿಸಿರುವುದೇ ಹೆಚ್ಚು!

ಹೌದು. ಕಳವಳವೂ ಒಂದು ಸಂಭ್ರಮವೇ, ಕಳೆದುಕೊಳ್ಳೋದೂ ಒಂದು ಸಂಭ್ರಮವೇ. ಆದ್ದರಿಂದಲೇ ಪಡೆದುಕೊಂಡವುಗಳಿಗಿಂತ ಕಳೆದುಕೊಂಡವುಗಳ ನೆನಪನ್ನೇ ನಾವು ಮತ್ತೆ ಮತ್ತೆ ಮಾಡಿಕೊಳ್ಳೋದು.  ಸಿಗದೆ ಹೋದುದನ್ನು ಸಂಭ್ರಮಿಸುವುದೇ, ಕಳೆದುಕೊಂಡರೂ ಖುಷಿಯಾಗಿರಲು ನಮಗಿರುವ ಚೆಂದದ ದಾರಿ.

ಜೀವನದಲ್ಲಿ ಯಾರನ್ನಾದರೂ ಬಯಸಿ, ಸಿಗದೆ ಕಳೆದುಕೊಂಡಿದ್ದೀರಾ? ವಾರ್ಡ್’ರೋಬ್ ತೆರೆದು ತೊಡದೆ ಇಟ್ಟ ಬಟ್ಟೆಯನ್ನೊಮ್ಮೆ ನೋಡಿ. ಅದಕ್ಕೆ ಅವನ / ಅವಳ ಹೆಸರಿಡಿ. 

ಮುಗಿಯಿತಲ್ಲ…!?

 

Leave a Reply