ಧ್ಯಾನ ಮಾಡಲು ಕಲಿಯಿರಿ: ಕೆಲಸದ ಒತ್ತಡ ನಿವಾರಣೆಗೆ #3  ~ ಮ್ಯೂಸಿಕ್ ಮೆಡಿಟೇಶನ್

ವಿಶ್ರಾಂತಿ ಇಲ್ಲದೆ, ಮಿತಿಮೀರಿದ ಒತ್ತಡದಲ್ಲಿ ಕೆಲಸ ಮಾಡುವುದರಿಂದ ಉಂಟಾಗುವ ಸಮಸ್ಯೆಗಳನ್ನು ನಾವು ಬಲ್ಲೆವು. ಅದನ್ನು ಪರಿಹರಿಸುವ ನಿಟ್ಟಿನಲ್ಲಿ ನಿದ್ರಾ ಧ್ಯಾನ ಮತ್ತು ನರ್ತನ ಧ್ಯಾನ ವಿಧಾನಗಳನ್ನು ಹಿಂದಿನ ಸಂಚಿಕೆಗಳಲ್ಲಿ ನೋಡಿದ್ದೀರಿ. ಈ ಸಂಚಿಕೆಯಲ್ಲಿ ಸಂಗೀತ ಧ್ಯಾನ ವಿಧಾನ ಅಥವಾ ಮ್ಯೂಸಿಕ್ ಮೆಡಿಟೇಶನ್ ಬಗ್ಗೆ ತಿಳಿಯೋಣ.

music

ಸಂಗೀತ ಯಾವುದೇ ಮಾನಸಿಕ ಸಮಸ್ಯೆಗೆ ಅತ್ಯದ್ಭುತ ಚಿಕಿತ್ಸೆ ನೀಡುತ್ತದೆ. ಎಷ್ಟೋ ಬಗೆಯ ಮ್ಯೂಸಿಕ್ ಥೆರಪಿಗಳೂ ನಮ್ಮ ನಡುವೆ ಚಾಲ್ತಿಯಲ್ಲಿದೆ. ಆದರೆ ಚಿಕಿತ್ಸೆ ಹೊರಗಿನ ಹಸ್ತಕ್ಷೇಪವಾಯಿತು. ಅದು ಅವಲಂಬನೆಯನ್ನು ಬೇಡುತ್ತದೆ. ಆದರೆ ಧ್ಯಾನ ಹಾಗಲ್ಲ. ಅದು ನಿಮ್ಮ ಮೇಲೆ ನೀವು ಅವಲಂಬಿತರಾಗಿ, ನಿಮಗೆ ನೀವು ಸಹಾಯ ಮಾಡಿಕೊಳ್ಳುವ ಪ್ರಕ್ರಿಯೆ. ಪ್ರಕ್ರಿಯೆಯು ನಿಮ್ಮ ಮತ್ತು ನಿಮ್ಮ ಅಂತಂಗದ ನಡುವೆ ನಡೆಯುವಂಥದ್ದು.

ಮ್ಯೂಸಿಕ್ ಮೆಡಿಟೇಶನ್ ಅತ್ಯಂತ ಸುಲಭ ಮತ್ತು ಸರಳ. ಇದಕ್ಕೆ ಇಂಥದ್ದೇ ಸಂಗೀತ ಬೇಕೆಂದಿಲ್ಲ. ವಿಷಾದ ಹೊಮ್ಮಿಸುವ ಸಾಹಿತ್ಯ ಇಲ್ಲದಂತೆ ನೋಡಿಕೊಂಡರಾಯ್ತು. ಕೆಲವು ತಂತ್ರಗಳ ಪ್ರಕಾರ ವಿಷಾದವನ್ನು ಸೂಚಿಸುವ ರಾಗಗಳನ್ನು ಈ ಮೆಡಿಟೇಶನ್ ಗೆ ಬಳಸಬಾರದು. ನೀವು ಒಮ್ಮೆ ಆಲಿಸಿ, ಅದಕ್ಕೆ ನಿಮ್ಮ ಮನಸ್ಸು ಹೇಗೆ ಸ್ಪಂದಿಸುತ್ತದೆ ಎಂದು ಪರೀಕ್ಷಿಸಿ, ನಂತರ ಧ್ಯಾನಕ್ಕೆ ಬಳಸುವುದು ಉತ್ತಮ.

ನಿಮಗೆ ಇಷ್ಟವಾದ ಸಂಗೀತವನ್ನು ಪ್ಲೇ ಮಾಡಿ. ಆರಾಮವಾಗಿ ಕುಳಿತುಕೊಳ್ಳಿ. ವಜ್ರಾಸನ, ಪದ್ಮಾಸನ, ಶವಾಸನ – ಯಾವುದಾದರೂ ಸರಿಯೇ. ಅಥವಾ ಕುರ್ಚಿಯ ಮೇಲೆ ಕುಳಿತರೂ ಸರಿಯೇ. ಗಾಳಿ ಬೆಳಕು ಆಡುವ ಜಾಗವನ್ನು ಆಯ್ದುಕೊಂಡರೆ ಆಯಿತು.

ಸಂಗೀತ ಆರಂಭವಾಗುವ ಮೊದಲು ನಿಮ್ಮ ಮನಸ್ಸು ಯಾವ ಲಹರಿಯಲ್ಲಿದೆ ನೋಡಿ. ಅದನ್ನು ಹಾಗೇ ಬಿಟ್ಟುಬಿಡಿ, ಅದರ ತಂಟೆಗೆ ಹೋಗಬೇಡಿ. ಸಂಗೀತ ಶುರುವಾದ ಮೇಲೆ ನಿಮ್ಮ ಹೊರಗಿವಿಯನ್ನು ಮಾತ್ರವಲ್ಲ, ಒಳಗಿವಿಯನ್ನೂ ಹೃದಯವನ್ನೂ ಅದಕ್ಕೆ ಹಚ್ಚಿ. ಗಮನವೆಲ್ಲ ಅಲ್ಲೇ ಇರಲಿ. ನಿಮ್ಮ ಇಡೀ ದೇಹವೇ ಕಿವಿಯಾಗಿ ಸಂಗೀತವನ್ನು ಒಳಗೆ ಉಸಿರಿನಂತೆ ಎಳೆದುಕೊಳ್ಳುತ್ತಿದೆ ಎಂದು ಭಾವಿಸಿ. ಹೀಗೆ ಇಪ್ಪತ್ತರಿಂದ ನಲವತ್ತು ನಿಮಿಷಗಳ ಕಾಲ ಕೂರಲು ನಿಮಗೆ ಸಾಧ್ಯವಾದರೆ ಸಾಕಷ್ಟಾಯಿತು. ಅದು ನಿಮಗೆ ನೀಡುವ ನೆಮ್ಮದಿ, ಸಂತಸವನ್ನು ಅನುಭವಿಸಿದ ಮೇಲೆ, ಕ್ರಮೇಣ ನೀವೇ ಸಂಗೀತ ಧ್ಯಾನದ ಅವಧಿಯನ್ನು ವಿಸ್ತರಿಸಿಕೊಳ್ಳುತ್ತೀರಿ.

ನಿಮೆಗ ಯೂಟ್ಯೂಬ್’ನಲ್ಲಿ ಝೆನ್ ಮೆಡಿಟೇಶನ್ ಮ್ಯೂಸಿಕ್ ಬೇಕಾದಷ್ಟು ಸಿಗುತ್ತದೆ. ಬಾಂಬೂ, ಫ್ಲೂಟ್, ಮಳೆ ಹನಿಯ ಸದ್ದು, ಸಿಕಾಡ (ಜೀರುಂಡೆ) ಜೀರ್ಗುಡುವ ಸದ್ದು – ಇವೆಲ್ಲವೂ ಸಂಗೀತ ಧ್ಯಾನಕ್ಕೆ ಒಗ್ಗುವಂಥವು.  ಯಾವಮ್ಯೂಸಿಕ್ ನಿಮಗೆ ಕಂಫರ್ಟಬಲ್ ಅನ್ನಿಸುತ್ತದೆಯೋ ಅದನ್ನು ಆಯ್ಕೆ ಮಾಡಿಕೊಂಡು, ಕ್ಯೂ ಮಾಡಿಕೊಂಡು ಧ್ಯಾನಕ್ಕೆ ಕೂತುಕೊಳ್ಳಿ. ನಡುನಡುವೆ ಹಾಡುಗಳನ್ನು ಹಾಕಲು ಏಳುವುದು ಬೇಡ. ಇದರಿಂದ ಧ್ಯಾನದ ಲಹರಿ ತುಂಡಾಗುತ್ತದೆ.

ನೆನಪಿಡಬೇಕಾದ ಅಂಶ: ಸಾಧ್ಯವಾದಷ್ಟೂ ಸಾಹಿತ್ಯವಿಲ್ಲದ ಸಂಗೀತವನ್ನು ಧ್ಯಾನಕ್ಕೆ ಆಯ್ಕೆ ಮಾಡಿ. ಪ್ರತಿಯೊಂದರಲ್ಲೂ ಅರ್ಥ ಹುಡುಕುವ ನಮ್ಮ ಮನಸ್ಸು ಸಂಗೀತ ಧ್ಯಾನದಲ್ಲಿ ನೆಲೆ ನಿಲ್ಲಬೇಕು ಅಂದರೆ, ಅದು ಸಂಗೀತದಲ್ಲಿ ಏಕಾಗ್ರವಾಗಬೇಕೇ ಹೊರತು ಸಾಹಿತ್ಯದತ್ತ ಹೊರಳಬಾರದು. ಮೆಡಿಟೇಶನ್ ಮ್ಯೂಸಿಕ್’ಗಾಗಿ ಹೆಡ್ ಫೋನ್ ಬಳಸುವುದು ಉತ್ತಮ. 

Leave a Reply