ಶಿವೋsಹಮ್ ಸರಣಿ ~ 6 : ಸತ್ ಅನ್ನು ಚಿತ್‍ನಿಂದ, ಚಿತ್ ಅನ್ನು ಆನಂದದಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ…

photoನೀವು ಪ್ರವಚನ ಕೇಳಿ ಮನೆಗೆ ಮರಳಿದ ಮೇಲೆ ನಿಮ್ಮ ತಾಯ್ತಂದೆಯರಿಗೆ, `ನೀವು ನಮ್ಮ ಅಪ್ಪ, ಅಮ್ಮ ಅಲ್ಲ’ ಎಂದು ಹೇಳಬೇಡಿ ಮತ್ತೆ! ಅಥವಾ ನಿಮ್ಮ ಮಕ್ಕಳಿಗೆ ‘ನಾವು ನಿಮ್ಮ ಅಪ್ಪ – ಅಮ್ಮ ಅಲ್ಲ’ ಅಂತಲೂ ಹೇಳಲು ಹೋಗಬೇಡಿ!! ಶಂಕರರು ಹೀಗೆ ಹೇಳಿದ್ದಾರೆ, ಗುರುದೇವ ಕೂಡ ಅದನ್ನು ಸಮರ್ಥಿಸಿದ್ದಾರೆಂದು ನೀವು ಹಾಗೆಲ್ಲ ಮಾಡಿಬಿಡಬೇಡಿ!! ಈ ಮಾತುಗಳನ್ನು ಬಲ್ಲಿದನಾದ ಜ್ಞಾನಿ ಮಾತ್ರವೇ ಹೇಳಬಲ್ಲ. ಮತ್ತು, ಇದು ಇದು ಕೇವಲ ಕೇಳಿ ಹೇಳುವಂಥ ಘೋಷಣೆಯಲ್ಲ, ಸ್ವತಃ ಅನುಭವಿಸಿ ಕಂಡುಕೊಳ್ಳುವಂಥದ್ದು  ~ Whosoever JI

ಲ್ಲವರಂತೂ ಹೇಳುತ್ತಿದ್ದಾರೆ, ಸುಖದುಃಖಗಳೆರಡೂ ಸುಳ್ಳೆಂದು. ಏನು ಉಳಿಯುತ್ತದೆಯೋ ಅದು ಸತ್ಯ ಎಂದಾಗುತ್ತದೆ. ಆ ಸತ್ಯ ಯಾವುದು ಹಾಗಾದರೆ? ಶೋಧಕರ, ಸಾಧಕರ ಹುಡುಕಾಟವೇ ಇದನ್ನು ಕಂಡುಕೊಳ್ಳುವುದಾಗಿದೆ. ಬಹುಶಃ ಅದನ್ನು ಹುಡುಕಿಕೊಳ್ಳಲೆಂದೇ ನಾವೂ ಇಲ್ಲಿದ್ದೇವೆ.

ಅಹಂ ಭೋಜನಂ ನೈವ ಭೌಜ್ಯಂ ನ ಭೋಕ್ತಾ…. ಇದರರ್ಥ-  “ನಾನು ತಿನ್ನಲ್ಪಡುವುದೂ ಅಲ್ಲ, ತಿನ್ನುವಿಕೆಯೂ ಅಲ್ಲ, ತಿನ್ನುವವನು ಕೂಡ ಅಲ್ಲ” ಎಂದು.

ಶಂಕರರು ಮೊದಲು ಸುಖದುಃಖಗಳೆಂಬ ಸ್ಥೂಲ ಅನುಭವಗಳ ಬಗ್ಗೆ ಹೇಳಿದರು. ಈಗ ಸೂಕ್ಷ್ಮ ಅನುಭವಗಳ ಬಗ್ಗೆ ಹೇಳುತ್ತಿದ್ದಾರೆ. ಅವರು ಹೇಳುತ್ತಿದ್ದಾರೆ, ಯಾವುದು ತಿನ್ನಲ್ಪಡುತ್ತದೆಯೋ- ಭೋಜನವೋ ಅದು ನಾನಲ್ಲ; ಯಾರು ತಿನ್ನುತ್ತಿದ್ದಾನೋ- ಭೋಕ್ತನೋ ಅದು ಕೂಡ ನಾನಲ್ಲ ಎಂದು. ಅಷ್ಟು ಮಾತ್ರವಲ್ಲ, ತಿನ್ನುವಿಕೆ, ತಿನ್ನುವಾಗಿನ ಆನಂದ – ಭೌಜ್ಯವೂ ನಾನಲ್ಲವೆಂದು ಶಂಕರರು ಹೇಳುತ್ತಿದ್ದಾರೆ. ಯಾವುದನ್ನು ನೋಡಲು, ತಿಳಿಯಲು ಅಥವಾ ಅನುಭವಿಸಲು ಸಾಧ್ಯವಾಗುತ್ತದೆಯೋ ಅದು ನಾನಾಗಿರಲು ಸಾಧ್ಯವಿಲ್ಲವೆಂದು ಅವರು ಹೇಳುತ್ತಿದ್ದಾರೆ.

ನ ಮೇ ಮೃತ್ಯು ಶಂಕಾ ನ ಮೇ ಜಾತಿಭೇದಃ….. ಅರ್ಥಾತ್, “ನಾನು ಮೃತ್ಯು ಭಯವಾಗಿಲ್ಲ, ನಾನು ಜಾತಿಗಳ ಭಿನ್ನತೆಯಲ್ಲ’ ಶಂಕರರೀಗ ಮತ್ತೂ ಸೂಕ್ಷ್ಮ ವಿಚಾರಕ್ಕೆ ಇಳಿಯುತ್ತಿದ್ದಾರೆ.
ಶಂಕರರು ಹೇಳುತ್ತಿದ್ದಾರೆ, ಉಳಿದೆಲ್ಲ ವಿಷಯ ಬಿಡಿ, ನಾನು ಮರಣ ಸಮಯದಲ್ಲಿ ಉಂಟಾಗುವ ಭಯವೂ ಅಲ್ಲವೆಂದು; ಏಕೆಂದರೆ ಮೃತ್ಯು ಭಯ ಕೂಡ ಒಂದು ಪೂರ್ವಾಧಾರಿತ ಕಲ್ಪನೆಯಷ್ಟೆ. ಹಾಗೆಯೇ ನಾನು ಜಾತಿಭೇದವೂ ಅಲ್ಲ. ಜಾತಿ ಭೇದವೆಂದರೆ ಎಲ್ಲ ಬಗೆಯ ಭೇದ. ಅದು ಲಿಂಗ ಭೇದವಿರಬಹುದು, ಸ್ತ್ರೀ – ಪುರುಷ ಭೇದ ಇರಬಹುದು, ಧರ್ಮ ಅಥವಾ ಜಾತಿಗೀತಿಗಳ ಭೇದವಿರಬಹುದು, ಅಥವಾ ಇನ್ಯಾವುದೇ ಭೇದವಿರಬಹುದು..ನಾನು ಈ ಎಲ್ಲ ಬಗೆಯ ಭೇದಗಳನ್ನು, ಆದ್ಯತೆಗಳನ್ನು, ವಿಶ್ವಾಸಗಳನ್ನು, ಧಾರಣೆ ಹಾಗೂ ಕಲ್ಪನೆಗಳನ್ನು ಮೀರಿದವನಾಗಿದ್ದೇನೆ.

ಶಂಕರರು ಹೇಳುವ ಈ ಎಲ್ಲ ಮಾತುಗಳ ಸಾರಾಂಶವಿಷ್ಟೇ.. ಯಾವುದು ನೋಟಕ್ಕೆ ನಿಲುಕುತ್ತದೆಯೋ, ತಿಳಿವಿಗೆ ದಕ್ಕುತ್ತದೆಯೋ ಅನುಭವಕ್ಕೆ ಒಗ್ಗುತ್ತದೆಯೋ ಅದು ನಾನಾಗಿರಲು ಸಾಧ್ಯವಿಲ್ಲ.

ಪಿತಾ ನೈವ ಮೇ ಮಾತಾ ನ ಜನ್ಮ..ನನಗೆ ತಂದೆಯಿಲ್ಲ, ತಾಯಿಯೂ ಇಲ್ಲ, ನಾನು ಜನಿಸಿಯೇ ಇಲ್ಲ…”
ಇದಂತೂ ಮಿತಿ ಮೀರಿತು! ಇವು ತಳಮಳಗೊಳಿಸುವ ಮಾತುಗಳಲ್ಲವೆ? ನೀವು ಹುಟ್ಟಿಯೇ ಇಲ್ಲವೆಂದು, ನಿಮಗೆ ತಾಯ್ತಂದೆಯರಿಲ್ಲವೆಂದು ನೀವು ಒಪ್ಪಿಕೊಳ್ತೀರೇನು? ಶಂಕರರ ಮಾತಿನ ಓಘ ಸ್ಥೂಲದಿಂದ ಸೂಕ್ಷ್ಮಕ್ಕೆ, ಸೂಕ್ಷ್ಮದಿಂದ ಅತಿ ಸೂಕ್ಷ್ಮಕ್ಕೆ ಸಾಗುತ್ತಿದೆ….

ಚಿಂತನ ಮಂಥನವೆಂದರೆ ಹೀಗಿರುತ್ತದೆ. ನೇತಿ ಮಾರ್ಗದಲ್ಲಿ ಸಾಧನೆ ಮಾಡುವುದೆಂದರೆ ಇದು. ನೇತಿ ಧ್ಯಾನವೆಂದರೆ ಇದು. ಒಂದೊಂದಾಗಿಯೇ ಎಲ್ಲವನ್ನು ಕಳಚಿ ನೋಡುತ್ತ, ಅರಿಯುತ್ತ, ಅನುಭವಿಸುತ್ತ ಇದು ನಾನಲ್ಲವೆಂದು ಮುನ್ನಡೆಯುತ್ತ, ಎಲ್ಲವನ್ನೂ ಬಿಚ್ಚಿ ಬಿಚ್ಚಿ ನೋಡಿ ಅಲ್ಲಗಳೆಯುತ್ತಾ ಹೋದಮೇಲೆ ಆತ್ಯಂತಿಕವಾಗಿ ಏನು ಉಳಿಯುತ್ತದೆಯೋ ಅದು ನಾನು. ಶಂಕರರು ಅದನ್ನು ಹೀಗೆ ಹೇಳುತ್ತಾರೆ – ಚಿದಾನಂದರೂಪಶ್ಶಿವೋಹಮ್ ಶಿವೋಹಮ್….. “ನಾನು ಸತ್ ಚಿತ್ ಆನಂದರೂಪಿಯಾದ ಶಿವನಾಗಿದ್ದೇನೆ; ಸಚ್ಚಿದಾನಂದ ರೂಪ ವಿಶುದ್ಧ ಸತ್ಯ ನಾನಾಗಿದ್ದೇನೆ”.

ಧನ್ಯವಾಯಿತು! ಸತ್ ಅನ್ನು ಚಿತ್‍ನಿಂದ, ಚಿತ್ ಅನ್ನು ಆನಂದದಿಂದ ಪ್ರತ್ಯೇಕಿಸಲು ಸಾದ್ಯವಿಲ್ಲ. ಪ್ರಬುದ್ಧ ಜ್ಞಾನಿಗಳ ಮಾತುಗಳನ್ನು ಕೇಳಲಿಕ್ಕೇನೋ ಚೆಂದವೇ. ಆದರೆ ಅನುಭವಕ್ಕೆ ದಕ್ಕಿಸಿಕೊಳ್ಳದೆ ಅವನ್ನು ಸ್ವೀಕರಿಸುವುದು ಕಡುಕಷ್ಟ.

ಪಿತಾ ನೈವ ಮೇ ನೈವ ಮಾತಾ ನ ಜನ್ಮ…. “ನನಗೆ ತಂದೆ ಇಲ್ಲ, ತಾಯಿಯೂ ಇಲ್ಲ, ನಾನು ಜನಿಸಿಯೇ ಇಲ್ಲ” – ಇದರರ್ಥ, ನೀವು ಪ್ರವಚನ ಕೇಳಿ ಮನೆಗೆ ಮರಳಿದ ಮೇಲೆ ನಿಮ್ಮ ತಾಯ್ತಂದೆಯರಿಗೆ, `ನೀವು ನಮ್ಮ ಅಪ್ಪ, ಅಮ್ಮ ಅಲ್ಲ’ ಎಂದು ಹೇಳಬೇಕೆಂದಲ್ಲ ಮತ್ತೆ! ಅಥವಾ ನಿಮ್ಮ ಮಕ್ಕಳಿಗೆ ‘ನಾವು ನಿಮ್ಮ ಅಪ್ಪ – ಅಮ್ಮ ಅಲ್ಲ’ ಎಂದು ಹೇಳುವುದೂ ಅಲ್ಲ! ಶಂಕರರು ಹೀಗೆ ಹೇಳಿದ್ದಾರೆ, ಗುರುದೇವ ಕೂಡ ಅದನ್ನು ಸಮರ್ಥಿಸಿದ್ದಾರೆಂದು ನೀವು ಹಾಗೆಲ್ಲ ಮಾಡಲು ಹೋಗಬೇಡಿ!!
ಈ ಮಾತುಗಳನ್ನು ಬಲ್ಲಿದನಾದ ಜ್ಞಾನಿ ಮಾತ್ರವೇ ಹೇಳಬಲ್ಲ. ಮತ್ತಿದು – “ನನಗೆ ತಾಯ್ತಂದೆಯರಿಲ್ಲ, ನಾನು ಹುಟ್ಟೇ ಇಲ್ಲ” ಎನ್ನುವುದು ಘೋಷಣೆ ಮಾಡುವಂಥ ಸಂಗತಿಯೇನಲ್ಲ. ಇದು ಸತ್ಯವನ್ನು ಕಂಡುಕೊಳ್ಳುವ ಹಾದಿ. ಅದೂ ಅಲ್ಲದೆ ಇದು ಕೇವಲ ಕೇಳಿ ಹೇಳುವಂಥದ್ದಲ್ಲ, ಸ್ವತಃ ಅನುಭವಿಸಿ ಕಂಡುಕೊಳ್ಳುವಂಥದ್ದು.

(ಮುಂದುವರೆಯುವುದು…)

 

 

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a reply to Venugopal ಪ್ರತ್ಯುತ್ತರವನ್ನು ರದ್ದುಮಾಡಿ

This site uses Akismet to reduce spam. Learn how your comment data is processed.