ಅಧ್ಯಾತ್ಮ ಡೈರಿ: Possessiveness ಒಂದು ಪಿಡುಗು

ನಾವು ಉಸಿರಾಡುತ್ತೇವೆ. ಬದುಕುವ ಅನಿವಾರ್ಯತೆಯಿಂದ ಉಸಿರನ್ನು ಒಳಗೆ ಎಳೆದುಕೊಳ್ಳುತ್ತೇವೆ. ಅಂದಮಾತ್ರಕ್ಕೆ ಆ ಉಸಿರು ನನ್ನ ಜೀವ ಉಳಿಸಿದೆ, ನಾನದನ್ನು ಹೊರಗೆ ಬಿಡಲಾರೆ ಎಂದು ಒಳಗೇ ಇಟ್ಟುಕೊಳ್ಳಲು ಆದೀತೇ? ಹಾಗೆ ಮಾಡಿದರೆ ನಮ್ಮ ಜೀವವಾದರೂ ಉಳಿದೀತೇ? ನೀವು ಉಸಿರಾಡುತ್ತೀರಿ ಎಂದ ಮಾತ್ರಕ್ಕೆ ಗಾಳಿ ನಿಮ್ಮೊಬ್ಬರದೇ ಆಗಿಬಿಡಲು ಸಾಧ್ಯವೇ?

ನಾವು ಉಸಿರಾಡುತ್ತೇವೆ. ಬದುಕುವ ಅನಿವಾರ್ಯತೆಯಿಂದ ಉಸಿರನ್ನು ಒಳಗೆ ಎಳೆದುಕೊಳ್ಳುತ್ತೇವೆ. ಅಂದಮಾತ್ರಕ್ಕೆ ಆ ಉಸಿರು ನನ್ನ ಜೀವ ಉಳಿಸಿದೆ, ನಾನದನ್ನು ಹೊರಗೆ ಬಿಡಲಾರೆ ಎಂದು ಒಳಗೇ ಇಟ್ಟುಕೊಳ್ಳಲು ಆದೀತೇ? ಹಾಗೆ ಮಾಡಿದರೆ ನಮ್ಮ ಜೀವವಾದರೂ ಉಳಿದೀತೇ? ನೀವು ಉಸಿರಾಡುತ್ತೀರಿ ಎಂದ ಮಾತ್ರಕ್ಕೆ ಗಾಳಿ ನಿಮ್ಮೊಬ್ಬರದೇ ಆಗಿಬಿಡಲು ಸಾಧ್ಯವೇ? 

ಸಂಬಂಧವೂ ಹಾಗೆಯೇ. ನಮ್ಮ ಬದುಕಿನ ಆಯಾ ಘಟ್ಟಗಳಲ್ಲಿ ಸಂಭವಿಸುವ ಘಟನೆಗಳಷ್ಟೆ ಅವು. ಹಕ್ಕಿಗಳನ್ನು ನೋಡಿ. ಅವು ಒಂದು ಹಂತದ ನಂತರ ಸ್ವತಃ ತಾವೇ ಮುಂದೆ ನಿಂತು ಮರಿಗಳನ್ನು ಹೊರಜಗತ್ತಿಗೆ ಕಳಿಸುತ್ತವೆ. ಹಾರಾಟ, ಊಟಗಳ ವ್ಯವಸ್ಥೆ ಕಲಿಸಿ ತಮ್ಮ ಕರ್ತವ್ಯ ಪೂರೈಸಿ ನಿರಾಳವಾಗುತ್ತವೆ. ಹಾಗೆಂದು ಹಕ್ಕಿಗಳಿಗೆ ತಮ್ಮ ಮರಿಗಳ ಮೇಲೆ ಪ್ರೀತಿ ಇರುವುದಿಲ್ಲವೆ? ಇಲ್ಲದಿದ್ದರೆ ಅವೇಕೆ ಹಗಲು ರಾತ್ರಿ ಕಷ್ಟಪಟ್ಟು ಅವುಗಳಿಗಾಗಿ ಗೂಡು ಕಟ್ಟುತ್ತಿದ್ದವು? ದೂರದೂರ ಹಾರಿಹೋಗಿ ಆಹಾರ ಸಂಗ್ರಹಿಸಿ ತಂದು ಗುಟುಕು ನೀಡುತ್ತಿದ್ದವು?

ನಮ್ಮಲ್ಲಿ ಹಾಗಿಲ್ಲ. ಮಕ್ಕಳು ದೊಡ್ಡವರಾದಷ್ಟು ಅವರೆಡೆಗಿನ ನಮ್ಮ ಪೊಸೆಸಿವ್‍ನೆಸ್ ಹೆಚ್ಚುತ್ತ ಹೋಗುತ್ತದೆ. ಯೌವನಕ್ಕೆ ಕಾಲಿಟ್ಟ ಮಕ್ಕಳು ಅವರ ಸಹಜತೆಯಲ್ಲಿ ಅವರಿದ್ದರೆ, ಮಕ್ಕಳು ನಮ್ಮಿಂದ ದೂರಾಗುತ್ತಿದ್ದಾರೆ ಎಂಬ ಆತಂಕ ಮೈಮೇಲೆ ಎಳೆದುಕೊಳ್ಳುತ್ತೇವೆ. ಮದುವೆಯ ಅನಂತರವೂ ಅಷ್ಟೇ. ಮಕ್ಕಳು ಮತ್ತೊಂದು ಸಂಬಂಧದ ಕರ್ತವ್ಯದಲ್ಲಿ ನಿರತರಾದ ಕೂಡಲೆ ಚಡಪಡಿಸತೊಡಗುತ್ತೇವೆ. ಇವೆಲ್ಲ ನಮ್ಮ ಸ್ವಾರ್ಥದಿಂದಲೇ ಉಂಟಾಗುವಂಥವು. ನಮ್ಮ ಅಭದ್ರತೆ ಹಾಗೂ ಸ್ವಾರ್ಥಗಳು ಪೊಸೆಸಿವ್‍ನೆಸ್ ಅನ್ನು ಬಲಗೊಳಿಸುತ್ತವೆ. ಪ್ರೇಮಿಗಳ ವಿಷಯದಲ್ಲೂ ಹುಳಿಹಿಂಡುವುದು ಇದೇ ಪೊಸೆಸಿವ್‍ನೆಸ್. ಅಲ್ಲಿ ನಿಜಕ್ಕೂ ಇರುವುದು ಪ್ರೇಮ ಸಂಬಂಧವೇ ಆಗಿದ್ದರೆ ನೋವಿಗೆ, ಆತಂಕಕ್ಕೆ ಆಸ್ಪದ ಇರುವುದಿಲ್ಲ. ಆದರೆ ಅಲ್ಲಿ ಸಂಬಂಧದ ಬದಲು ಸ್ವಾರ್ಥಬಂಧವಿದ್ದರೆ ಅದು ಹಾಳಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ.

ಸಂಬಂಧವನ್ನು ಹಾಳುಗೆಡವುವ ಮೊದಲ ಅಂಶ ಕಟ್ಟುವಿಕೆಯಾದರೆ, ಎರಡನೆಯದ್ದು ಅಹಂಕಾರ. ಬಲೂನು ಖಾಲಿಯಾಗಿದ್ದಾಗ ಒಂದುಕಡೆ ಸುಮ್ಮನೆ ಇರುತ್ತದೆ. ಅದರಲ್ಲಿ ಗಾಳಿ ತುಂಬಿದಾಗ ಎತ್ತರಕ್ಕೆ ಹಾರುತ್ತದೆಯೇನೋ ಹೌದು. ಆದರೆ ಆ ಹಾರಾಟ ಆತಂಕದಿಂದೇನೂ ಹೊರತಾಗಿರುವುದಿಲ್ಲ. ಒಂದು ಚಿಕ್ಕ ಸೂಜಿ ತಗುಲಿದರೂ ಅದು ಒಡೆದುಹೋಗುತ್ತದೆ. ಸಂಬಂಧವೂ ಹಾಗೇ. ನಿರೀಕ್ಷೆಯ ಗಾಳಿ ಇಲ್ಲದೆ ಇರುವಾಗ ಸೂಜಿ ಚುಚ್ಚಿದರೆ ಅಲ್ಲೊಂದು ರಂಧ್ರ ಮೂಡಬಹುದಷ್ಟೆ. ಆದರೆ ಬಲೂನು ನಿರೀಕ್ಷೆಗಳ ಹೊರೆಯಿಂದ ತುಂಬಿಕೊಂಡಾಗ ಆತಂಕದಲ್ಲಿರುತ್ತದೆ, ಮೊನೆ ತಗುಲಿ ಒಡೆದೂಹೋಗುತ್ತದೆ.

ಯಾವುದೇ ಒಂದು ಸಂಬಂಧವನ್ನು ನಿಭಾಯಿಸುವುದು ಮತ್ತು ಅದಕ್ಕೆ ಬದ್ಧವಾಗಿರುವುದು ಎಂದರೆ ಆ ಸಂಬಂಧವನ್ನು ಗೌರವಿಸುವುದು ಮತ್ತು ಸಂಬಂಧಿತ ವ್ಯಕ್ತಿಯ ಖಾಸಗಿತನವನ್ನು, ಅವರ ವೈಯಕ್ತಿಕತೆಯನ್ನು ಗೌರವಿಸುವುದು ಎಂದರ್ಥ. ಇದು ಎಲ್ಲ ಬಗೆಯ ಸಂಬಂಧಕ್ಕೂ ಅನ್ವಯಿಸುತ್ತದೆ.

ನಾವು ಭಾವುಕತೆಗೆ ಹೆಚ್ಚಿನ ಒತ್ತು ಕೊಡುತ್ತೇವೆ. ದೇಹವೇ ನಾನೆಂದು ತಿಳಿಯುವುದರಿಂದ ಸ್ವಾರ್ಥ ಹುಟ್ಟಿಕೊಳ್ಳುತ್ತದೆ. ನಾನು ಮನಸ್ಸೆಂಬ ತಿಳಿವು ನಮ್ಮನ್ನು ಭಾವುಕರನ್ನಾಗಿಸುತ್ತದೆ. ಭಾವುಕತೆಗೂ ಸಂವೇದನೆಗೂ ವ್ಯತ್ಯಾಸವಿದೆ. ಸಂವೇದನೆ ಎಂದರೆ ಸ್ಪಂದನೆಯಷ್ಟೆ. ಇದರಿಂದ ಹಾನಿಯಿಲ್ಲ. ಸೂಕ್ಷ್ಮ ಸಂವೇದನೆಯು ನಮ್ಮನ್ನು ಸಕಾರಾತ್ಮಕ ಹಾದಿಯಲ್ಲಿ ಕರೆದೊಯ್ಯುತ್ತದೆ. ಭಾವುಕತೆಯು ತನ್ನ ತೀವ್ರ ಗುಣದಿಂದಾಗಿ ನಮ್ಮನ್ನು ಉದ್ವೇಗಕ್ಕೆ ನೂಕುತ್ತದೆ. ಮನಸ್ಸನ್ನು ವಿಚಲಿತಗೊಳಿಸುತ್ತದೆ. 

ನಾವು ನಮ್ಮ ಸಂಬಂಧಕ್ಕೆ ಸ್ಪಂದಿಸುತ್ತಿದ್ದೀವೋ ಅಥವಾ ಅದರ ಕುರಿತು ಭಾವುಕತೆ ಬೆಳೆಸಿಕೊಂಡಿದ್ದೀವೋ ಎಂಬುದನ್ನು ಮೊದಲು ಗಮನಿಸಬೇಕು. ನಾವು ಸಂಬಂಧಿತ ವ್ಯಕ್ತಿಯ ಬಗ್ಗೆ `ಇವರು ನನಗೆ ಸೇರಿದವರು’ ಎಂಬ ಸ್ವಾರ್ಥಬಂಧ ಉಂಟುಮಾಡಿಕೊಂಡಿದ್ದರೆ, ಅದನ್ನು ನಿವಾರಿಸಿಕೊಳ್ಳಲು ಯತ್ನಿಸಬೇಕು. ಇಲ್ಲವಾದರೆ ಅದು ನಮ್ಮನ್ನು ವಿಚಲಿತಗೊಳಿಸುವುದು. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳುವುದೂ ಇದನ್ನೆ, ಸಂಬಂಧಗಳನ್ನು ಸಾಕ್ಷಿಯಾಗಿ ನೋಡಬೇಕು ಎಂದು. ಇಲ್ಲವಾದಲ್ಲಿ ನಾವು ಅದರ ಪ್ರತಿ ಆಗುಹೋಗುಗಳಿಗೂ ಬಾಧ್ಯಸ್ಥಿಕೆ ತೆಗೆದುಕೊಂಡು ಒದ್ದಾಡಬೇಕಾಗುತ್ತದೆ ಮತ್ತು ಇಂತಹ ಒದ್ದಾಟ ನಿರರ್ಥಕ ಎಂದು.

ಸಂಬಂಧಗಳು ಕನ್ನಡಿಯಿದ್ದಂತೆ. ಅಲ್ಲಿ ಕಾಣುವುದೆಲ್ಲವೂ ಪ್ರತಿಬಿಂಬ ಮಾತ್ರವೇ ಹೊರತು ಮತ್ತೇನಲ್ಲ. ಮತ್ತು, ಅಲ್ಲಿ ನಾವು ಕಾಣುವುದೆಲ್ಲ ನಾವೇನು ಇದ್ದೇವೋ ಅದನ್ನೇ. ಕನ್ನಡಿಯೊಳಗಿನ ಬಿಂಬವನ್ನು ನನ್ನದು ಎಂದು ಹಿಡಿಯಲು ಹೊರಟರೆ ಅದು ದಕ್ಕುತ್ತದೆಯೆ!? ಹಾಗೆಯೇ ಸಂಬಂಧವೂ, ಸಂಬಂಧಿತ ವ್ಯಕ್ತಿಗಳೂ. ಅವರು ನಮ್ಮ ಭಾವನೆಗಳನ್ನು ನಮಗೆ ತೋರ್ಪಡಿಸುವ ಕನ್ನಡಿ ಮಾತ್ರವಾಗಿರುತ್ತಾರೆ. ಇದನ್ನು ಅರ್ಥ ಮಾಡಿಕೊಳ್ಳದೆ ಹೋದರೆ, ನಾವು ಕಟ್ಟಿ ಇಟ್ಟುಕೊಳ್ಳುತ್ತೇವೆ ಅಂದುಕೊಳ್ಳುವ ಪೊಸೆಸ್ಸಿವ್’ನೆಸ್ ಕಾರಣದಿಂದಲೇ ಸಂಬಂಧವನ್ನು ಕಳೆದುಕೊಳ್ಳುತ್ತೇವೆ. 

ಆಯ್ಕೆ ನಿಮ್ಮದು. 

Leave a Reply