ವಿರಹ ಮತ್ತು ವೈರಾಗ್ಯ : ಸಾಧನೆಯ ಜೋಡಿ ಹಾದಿಗಳು

ವೈರಾಗ್ಯ ಮತ್ತು ವಿರಹ – ಇವೆರಡೂ  ಪರಸ್ಪರ ವಿರೋಧಿ ಅಂಶಗಳು. ರಾಗ ವಿಮುಖತೆಯಿಂದ ವೈರಾಗ್ಯ ಉಂಟಾದರೆ, ರಾಗ ತೀವ್ರತೆಯಿಂದ ವಿರಹ ಉಂಟಾಗುತ್ತದೆ.  ಆದರೂ ಇವೆರಡೂ ತಮ್ಮ ತಮ್ಮ ನೆಲೆಗಟ್ಟಿನಲ್ಲಿ ವ್ಯಕ್ತಿಯನ್ನು ಅಧ್ಯಾತ್ಮಪಥದಲ್ಲಿ ನಡೆಸುವುದು ಹೇಗೆ? ಒಂದು ಮತ್ತೊಂದರ ವಿರೋಧ ಅಂಶ ಎಂದಾದಲ್ಲಿ, ಪರಿಣಾಮವೂ ವಿರೋಧವೇ ಆಗಿರಬೇಕಲ್ಲವೆ? ಹೌದು. ಆದರೆ ಹಾಗೆ ಆಗಲೇಬೇಕೆಂದೇನೂ ಇಲ್ಲ ~ ಗಾಯತ್ರಿ

ನುಷ್ಯನ ಭಾವ ಪ್ರಪಂಚದಲ್ಲಿ ಅತ್ಯಂತ ಮಧುರವಾದ, ಅಷ್ಟೇ ಯಾತನಾದಾಯಿಯಾದ ಸಂಗತಿ ಏನಾದರೂ ಇದ್ದರೆ, ಅದು ವಿರಹ. ಸಂಬಂಧಗಳನ್ನು ಬೆಸೆದುಕೊಳ್ಳುವ ವ್ಯಕ್ತಿಯ ಮುಂದಿನ ಹೆಜ್ಜೆ, ಅದರ ಸೂತ್ರವನ್ನು ತನ್ನ ಕೈಯಲ್ಲೇ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುವುದು. ತಾನು ಬೆಳೆಸಿದ ಸಂಬಂಧವು ತನ್ನದಾಗಿಯೇ ಉಳಿಯಬೇಕೆನ್ನುವ ಭಾವ ವ್ಯಕ್ತಿಯಲ್ಲಿ ಹೆಚ್ಚು ಅಭದ್ರತೆಯನ್ನೂ ಆತಂಕವನ್ನೂ ಹುಟ್ಟು ಹಾಕುತ್ತದೆ. ಪ್ರೀತಿಯ ವ್ಯಕ್ತಿ ದೂರವಾದಾಗ ತಮ್ಮ ನಡುವಿನ ಬಾಂಧವ್ಯದ ಗಾಢತೆಯ ಅರಿವಾಗಿ ಅದು ಸಂತಸವನ್ನೆ ನೀಡಿದರೂ ಅಗಲಿಕೆಯ ದುಃಖ ಹೆಚ್ಚು ತೀವ್ರವಾಗಿ ಕಾಡತೊಡಗುತ್ತದೆ. ಈ ಅಗಲಿಕೆಯು ಆ ವ್ಯಕ್ತಿಯ ನೆನವರಿಕೆಯಲ್ಲೆ ವ್ಯಸ್ತರಾಗಿರುವಂತೆ ಮಾಡುತ್ತದೆ.

ಇಲ್ಲೊಂದು ಸೌಂದರ್ಯವಿದೆ. ವಿರಹಕ್ಕೆ ಕಾರಣವಾಗುವಷ್ಟು ಆಪ್ತತೆ ಇರುವ ಸಂಬಂಧಗಳು ಇಬ್ಬರು ವ್ಯಕ್ತಿಗಳನ್ನು ಭಾವುಕವಾಗಿ ಬೇರೆಬೇರೆಯಾಗಿ ಇರಿಸುವುದಿಲ್ಲ. ಅವರಲ್ಲಿ ತಾನೇ ಅವರೆಂಬ ತಾದಾತ್ಮ್ಯ ಇರುತ್ತದೆ. ವಿರಹದಲ್ಲಿ ವ್ಯಕ್ತಿಯು ತನ್ನ ಸಂಗಾತಿಯನ್ನು ಎಷ್ಟು ಭಾವಿಸಿಕೊಳ್ಳುತ್ತಾನೋ ಅಷ್ಟೇ ತನ್ನನ್ನೂ ಭಾವಿಸಿಕೊಳ್ಳುತ್ತಾನೆ. ತನ್ನನ್ನೇ ಕಳೆದುಕೊಂಡಂತೆ, ತನ್ನನ್ನೇ ತಾನು ಮರಳಿ ಪಡೆಯಬೇಕೆಂಬಂತೆ ಅವನ ವರ್ತನೆ, ಸಾಧನೆ, ಪ್ರಯತ್ನಗಳೆಲ್ಲವೂ ಇರುತ್ತವೆ. ಈ ಪ್ರಕ್ರಿಯೆ ಮಾನಸಿಕ ಸ್ಥಿತಿಯಲ್ಲಿ ನಿಲ್ಲದೆ ಆತ್ಮಸ್ಥ ಭಾವಕ್ಕೆ ಏರಿದ್ದೇ ಆದರೆ, ವ್ಯಕ್ತಿಯು ಆಧ್ಯಾತ್ಮಿಕ ಶೃಂಗವನ್ನು ತಲುಪುವುದು ನಿಶ್ಚಿತ. ಏಕೆಂದರೆ, ಯಾವಾಗ ಈ ಭಾವನೆಯು ಮನಸ್ಸಿನ ವ್ಯೂಹದಿಂದ ಬಿಡಿಸಿಕೊಂಡು ಆತ್ಮಸ್ಥಗೊಳ್ಳುವುದೋ, ಆಗ ಭೌತಿಕ ವ್ಯಕ್ತಿಯ ವಾಂಛೆ ಅಳಿದು, ಆತ್ಮ ಸಂಗಾತದ ವಾಂಛೆ ಆರಂಭವಾಗುತ್ತದೆ. ಈ ವಾಂಛೆಯು ನಮ್ಮನ್ನು ನಮ್ಮೊಡನೆಯೇ ಬೆಸೆಯುತ್ತ, ನಮ್ಮೊಳಗೆ ನಾವು ಕಳೆದುಹೋಗುತ್ತಲೇ ನಮಗೆ ನಮ್ಮನ್ನು ಕೊಡಿಸುತ್ತ ದಿವ್ಯಾನುಭೂತಿಯನ್ನು ಉಂಟು ಮಾಡುತ್ತದೆ.

ಈ ವಿರಹ ವೈಯಕ್ತಿಕ ನೆಲೆಯಲ್ಲಿದ್ದುಕೊಂಡು ಆತ್ಮಸ್ಥಗೊಂಡರೇನೇ ಇಷ್ಟು ಫಲವುಂಟು, ಇನ್ನು ದೈವಿಕ ನೆಲೆಗೆ ಏರಿದರೆ? ಹಾಗೆ ಏರಿದ್ದೇ ಆದರೆ, ದಾಸರು, ಸೂಫೀಗಳು, ಮೀರಾ, ಅಕ್ಕ ಮಹಾದೇವಿ, ಚೈತನ್ಯ ಮಹಾಪ್ರಭು, ರಾಮಕೃಷ್ಣ ಪರಮಹಂಸರಂಥ ಅನುಭಾವಿಗಳ ಫಲ ದೊರಕುವುದು ನಿಶ್ಚಿತ.

ವೈರುಧ್ಯವೂ ಪೂರಕವೂ….

ವೈರಾಗ್ಯ ಮತ್ತು ವಿರಹ – ಇವೆರಡೂ  ಪರಸ್ಪರ ವಿರೋಧಿ ಅಂಶಗಳು. ರಾಗ ವಿಮುಖತೆಯಿಂದ ವೈರಾಗ್ಯ ಉಂಟಾದರೆ, ರಾಗ ತೀವ್ರತೆಯಿಂದ ವಿರಹ ಉಂಟಾಗುತ್ತದೆ.  ಆದರೂ ಇವೆರಡೂ ತಮ್ಮ ತಮ್ಮ ನೆಲೆಗಟ್ಟಿನಲ್ಲಿ ವ್ಯಕ್ತಿಯನ್ನು ಅಧ್ಯಾತ್ಮಪಥದಲ್ಲಿ ನಡೆಸುವುದು ಹೇಗೆ? ಒಂದು ಮತ್ತೊಂದರ ವಿರೋಧ ಅಂಶ ಎಂದಾದಲ್ಲಿ, ಪರಿಣಾಮವೂ ವಿರೋಧವೇ ಆಗಿರಬೇಕಲ್ಲವೆ? ಹೌದು. ಆದರೆ ಹಾಗೆ ಆಗಲೇಬೇಕೆಂದೇನೂ ಇಲ್ಲ. 

ನಿಜ; ವಿರುದ್ಧಾಂಶಗಳ ಫಲಿತಾಂಶವೂ ವಿರುದ್ಧವೇ ಆಗಿರುವುದು ಸಹಜ. ಆದರೆ ಆ ವಿರುದ್ಧಾಂಶಗಳು ತಮ್ಮ ನೆಲೆಯಲ್ಲಿ ತೀವ್ರತೆಯ ತುತ್ತ ತುದಿಯಲ್ಲಿ ಇದ್ದುದೇ ಆದರೆ, ಅವುಗಳ ಫಲಿತಾಂಶವು ಒಂದೆ ಆಗಿಬಿಡುತ್ತದೆ. ಇದು ಹೇಗೆಂದರೆ, ನಮ್ಮ ದೃಷ್ಟಿ ನಿಲುಕಿನಾಚೆಯ ಅಗಾಧ ಗಾತ್ರದ ವಸ್ತು ನಮಗೆ ಗೋಚರಿಸುವುದಿಲ್ಲ. ಹಾಗೆಯೇ ಅತ್ಯಂತ ಚಿಕ್ಕ ವಸ್ತುವೂ ಕೂಡ.

ಮತ್ತೊಂದು ಉದಾಹರಣೆ ಕೊಡಬಹುದಾದರೆ, ಪುರಾಣಗಳ ಪ್ರಕಾರ ಭಗವಂತ ಶಿಷ್ಟರನ್ನು ರಕ್ಷಿಸಿ, ಅವರನ್ನು ಸ್ವತಃ ತಾನೇ ಪರಂಧಾಮಕ್ಕೊಯ್ದು ಮುಕ್ತಿ ಕರುಣಿಸುತ್ತಾನೆ. ಹಾಗೆಯೇ ದುಷ್ಟರನ್ನು ಸ್ವತಃ ತಾನೇ ಅವರತರಿಸಿ ಬಂದು ತನ್ನ ಕೈಯಿಂದಲೇ ಸಂಹಾರ ಮಾಡಿ, ಆ ಮೂಲಕ ಮುಕ್ತಿ ದೊರಕಿಸಿಕೊಡುತ್ತಾನೆ. ಇಲ್ಲಿ ದುಷ್ಟತನದ ತೀವ್ರತೆಯೂ ಭಗವಂತನ ಕರುಣೆಯನ್ನೇ ಲಾಭವಾಗಿ ಪಡೆದಂತಾಯ್ತು.

ರಾಗ ತೀವ್ರತೆಯ ವಿರಹವೂ ಹಾಗೆಯೇ. ವೈರಾಗ್ಯವು ನಮ್ಮನ್ನು ಪ್ರಿಯತಮರಿಂದ ವಿಮುಖರನ್ನಾಗಿಸುವ ಮೂಲಕ ನಮ್ಮ ಜೊತೆ ನಾವು ಇರುವಂತೆ ಮಾಡಿದರೆ, ವಿರಹವು ನಮ್ಮನ್ನು ಪ್ರಿಯತಮರೊಡನೆ ತಾದಾತ್ಮ್ಯಗೊಳಿಸುವ ಮೂಲಕ ನಮ್ಮ ಜೊತೆ ನಾವು ಇರುವಂತೆ ಮಾಡುತ್ತದೆ. ಹೀಗೆ ವೈರಾಗ್ಯ – ವಿರಹಗಳೆರಡೂ ನಮ್ಮನ್ನು ಅಧ್ಯಾತ್ಮ ಶೃಂಗದೆಡೆಗೆ ಕರೆದೊಯ್ಯುವ ಮಾರ್ಗಗಳಾಗಿ ಒದಗುತ್ತವೆ.

Leave a Reply