ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ
ತಾವೋ ಬಗ್ಗೆ ಹೇಳಿದರೆ ;
ಜಾಣ ಕೂಡಲೇ ಅಪ್ಪಿಕೊಂಡುಬಿಡುತ್ತಾನೆ,
ಸಾಮಾನ್ಯ, ಅರ್ಧ ಒಪ್ಪಿಗೆ ಅರ್ಧ ಸಂಶಯದಿಂದ ನೋಡುತ್ತಾನೆ,
ದಡ್ಡನಂತೂ, ಜೋರಾಗಿ ನಕ್ಕು ಬಿಡುತ್ತಾನೆ.
ಅವ ಹಾಗೆ ನಗದೇ ಹೋದರೆ
ಅದು ತಾವೋ ಅಲ್ಲವೇ ಅಲ್ಲ.
ಆದ್ದರಿಂದಲೇ,
ಬೆಳಕಿನ ದಾರಿ, ಕತ್ತಲೆಯಂತೆ ಕಾಣುತ್ತದೆ,
ಮುಂದೆ ಸಾಗುವ ದಾರಿ, ಹಿಂದೆ ಕರೆದುಕೊಂಡು ಹೋದಂತೆ ಭಾಸವಾಗುತ್ತದೆ,
ನೇರ ದಾರಿ, ದೂರ ಅನಿಸುತ್ತದೆ,
ಪರಮ ಶಕ್ತಿಯನ್ನ ಜನ, ಅಶಕ್ತ ಅನ್ನತೊಡಗುತ್ತಾರೆ,
ಸ್ಪಷ್ಟತೆಯನ್ನ, ಅಸ್ಪಷ್ಟ ಎನ್ನಲಾಗುತ್ತದೆ,
ಕಲೆ, ಕ್ಲೀಷೆಯಾಗುತ್ತದೆ,
ಪ್ರೇಮಕ್ಕೆ, ಉದಾಸೀನದ ಹೆಸರು ಇಡಲಾಗುತ್ತದೆ,
ಜ್ಞಾನವನ್ನು ಬಾಲಿಶ ಎಂದು ಕರೆಯಲಾಗುತ್ತದೆ.
ಹುಡುಕಿದರೆ
ತಾವೋ ಎಲ್ಲೂ ಸಿಗುವುದಿಲ್ಲ
ಆದರೆ ಎಲ್ಲವನ್ನೂ ಸಲಹುತ್ತ ಪೂರ್ಣಗೊಳಿಸುತ್ತಲೇ ಇರುತ್ತದೆ.