ಜ್ಞಾನಿಯ ಪಾಲಿಗೆ ತಾನಿರುವಲ್ಲಿಯೇ ವೃಂದಾವನ : ರಮಣ ಧಾರೆ

RAMANAರಮಣ ಮಹರ್ಷಿಗಳನ್ನು ಕಾಣಲು ಬಂದವರು ವಿವಿಧ ಆಧ್ಯಾತ್ಮಿಕ ವಿಚಾರಗಳನ್ನು, ಪ್ರಶ್ನೆಗಳನ್ನು ಮುಂದಿಟ್ಟು ಸಂವಾದ ನಡೆಸುತ್ತಿದ್ದರು. ಈ ಸಂವಾದಗಳ ಸಂಗ್ರಹ ಪುಸ್ತಕಗಳಾಗಿಯೂ ಪ್ರಕಟವಾಗಿವೆ. 

ಪ್ರಶ್ನೆ: ನಾನು ಬೃಂದಾವನಕ್ಕೆ ಹೋಗಿ ಶ್ರೀಕೃಷ್ಣನ ನಿಜ ರೂಪವನ್ನು ದರ್ಶಿಸಿದರೆ ನನ್ನ ಸಂಕಷ್ಟಗಳೆಲ್ಲ ನಿವಾರಣೆಯಾಗುತ್ತವೆಯೇ? ಅವನ ದರ್ಶನ ಪಡೆದು ನನ್ನೆಲ್ಲ ಭಾರವನ್ನೂ ಅವನಿಗೇ ವಹಿಸಬೇಕೆಂಬ ಇಚ್ಛೆಯಾಗಿದೆ!

ರಮಣ ಮಹರ್ಷಿಗಳು : ಅದಕ್ಕೇನಂತೆ! ಹಾಗೆಯೇ ಮಾಡಬಹುದು. ಕೃಷ್ಣನ ದರ್ಶನ ಮಾಡಿದ ನಂತರ ನಮ್ಮ ಎಲ್ಲ ಭಾರವೂ ಅವನ ಮೇಲೆಯೇ ಇರುತ್ತದೆ. ಈಗ ಆ ಚಿಂತೆ ನಿಮಗೇಕೆ? ಈಗಲೂ ಸಹ ನಿಮ್ಮ ಎಲ್ಲ ಭಾರವನ್ನೂ ಅವನಿಗೇ ವಹಿಸಿಬಿಟ್ಟರೆ ಅವನೇ ಎಲ್ಲವನ್ನೂ ನೋಡಿಕೊಳ್ಳುವುದಿಲ್ಲವೇನು?

ಪ್ರಶ್ನೆ: ನಾನು ಈಗ ಕೃಷ್ಣನ ನಿಜಸ್ವರೂಪವನ್ನು ಕಾಣಬೇಕೆಂದರೆ ಬೃಂದಾವನಕ್ಕೆ ಹೋಗಿ ಅವರನ್ನು ಧ್ಯಾನಿಸಬೇಕೋ, ಅಥವಾ ಎಲ್ಲಿ ಬೇಕಾದರೂ ಧ್ಯಾನಿಸಬಹುದೋ?

ರಮಣ ಮಹರ್ಷಿಗಳು : ತಾನು ಯಾರು ಎಂಬುದನ್ನು ವಿಚಾರ ಮಾಡಿ ತನ್ನನ್ನು ತಾನು ಅರಿತುಕೊಂಡ ನಂತರ ತಾನು ಎಲ್ಲಿದ್ದರೆ ಅಲ್ಲೇ ಬೃಂದಾವನವೇ ಹೊರತು, ಬೃಂದಾವನವೆಂಬುದು ಬೇರೆಲ್ಲಿಯೋ ಇದೆ ಎಂದು ಅಲೆದಾಡುವುದಕ್ಕೆ ಕಾರಣವಿಲ್ಲ. ಅಲ್ಲಿಗೇ ಹೋಗಬೇಕೆಂಬ ತೀವ್ರವಾದ ಅಭಿಲಾಶೆ ಇರುವವರು ಬೇಕಾದರೆ ಹೋಗಬಹುದು. ಆದರೆ, ಹೋಗದಿದ್ದರೆ ಏನೂ ಉಪಯೋಗವಿಲ್ಲ ಎಂಬ ನಿಯಮವೇನಿಲ್ಲ.

ಅಹಮಾತ್ಮಾ ಗುಡಾಕೇಶ ಸರ್ವಭೂತಾಶಯಸ್ಥಿತಃ | ಅಹಮಾದಿಶ್ಚ ಮಧ್ಯಂ ಚ ಭೂತಾನಾಮನ್ತ ಏವ ಚ || (ಭಗವದ್ಗೀತೆ 10:20) – ಎಂಬ ಗೀತೆಯ ನುಡಿಯಂತೆ ‘ತಾನು’ ಇರುವ ಸ್ಥಳವೇ ಬೃಂದಾವನ. ತಾನು ಯಾರು ಮತ್ತು ತನ್ನ ಸ್ವರೂಪವೇನು ಎಂದು ವಿಚಾರಿಸಿ ತಿಳಿದುಕೊಂಡಾಗ ಆತನೇ ಶ್ರೀಕೃಷ್ಣನಾಗುತ್ತಾನೆ. ಸಮಸ್ತ ವಿಷಯವಾಸನೆಗಳೂ ತನ್ನಲ್ಲಿ ಲಯವಾಗುವುದನ್ನೇ ತನ್ನನ್ನು ಅರ್ಪಿಸಿಕೊಳ್ಳುವುದು ಎಂಬುದರ ನಿಜಾರ್ಥ. ನಂತರ ನಮ್ಮ ಎಲ್ಲ ಭಾರವೂ ಅವನ ಮೇಲೆಯೇ!

ಪ್ರಶ್ನೆ: ಗೀತೆಯಲ್ಲಿ ‘ವಿವಿಕ್ತ ದೇಶ ಸೇವಿತ್ವಂ ಅರತಿರ್ಜನ ಸಂಸದಿ’ ಎಂದಿದೆಯಲ್ಲ, ಈ ವಿವಿಕ್ತ ದೇಶ ಎಂದರೇನು?

ರಮಣ ಮಹರ್ಷಿಗಳು : ಪರಮಾತ್ಮನೊಬ್ಬನನ್ನು ಬಿಟ್ಟು ಬೇರೇನೂ ಇಲ್ಲದ ಪ್ರದೇಶವೇ ವಿವಿಕ್ತ ದೇಶ. ‘ಅರತಿರ್ಜನ ಸಂಸದಿ’ ಎಂದರೆ, ವಿಷಯಾದಿಗಳೊಡನೆ ಸಂಪರ್ಕ ಹೊಂದದಿರುವುದು – ಎಂದು. ವಿಷಯಾದಿಗಳೇ ಜನ ಸಮೂಹ. ಅವುಗಳಿಲ್ಲದ ಸ್ಥಳವೇ ವಿವಿಕ್ತ ದೇಶ.

(ಆಕರ : ರಮಣರ ಸನ್ನಿಧಿಯಲ್ಲಿ | ಮೂಲ: ಸೂರಿ ನಾಗಮ್ಮ, ಕನ್ನಡಕ್ಕೆ: ಡಾ.ಕೆ.ಎ.ನಾರಾಯಣನ್)

Leave a Reply