ಬಂಗಾರದ ಬಳೆಗಳನ್ನು ಧರಿಸಿದ ಗೃಹಿಣಿ

ಒಂದು ಊರಿನಲ್ಲಿ ಒಬ್ಬಳು ಸದ್ಗೃಹಿಣಿ ಇದ್ದಳು. ವೃದ್ಧ ಗಂಡನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು.

ವಯೋಸಹಜವಾಗಿ ಆಕೆಯ ಗಂಡ ಒಂದು ದಿನ ತೀರಿಹೋದ. ಗೃಹಿಣಿ ತಾನೇ ಮುಂದೆ ನಿಂತು ಅಪರಕರ್ಮಗಳನ್ನೆಲ್ಲ ಮಾಡಿಸಿದಳು. ಎರಡೂ ಕೈತುಂಬ ತೊಟ್ಟಿದ್ದ ಗಾಜಿನ ಬಳೆಗಳನ್ನು ಬಿಚ್ಚಿಟ್ಟಳು.

ಅದನ್ನು ನೋಡಿ ಊರ ಹೆಂಗಸರು “ಗಂಡನಿಲ್ಲದ ಮೇಲೆ ಅಲಂಕಾರವೇಕೆ? ಬಳೆ ತೆಗೆದಿದ್ದು ಒಳ್ಳೆಯದಾಯ್ತು” ಅಂತ ಮಾತಾಡಿಕೊಂಡರು.

ಅದಾಗಿ ನಾಲ್ಕನೇ ದಿನಕ್ಕೆ ಆಕೆ ಎರಡೂ ಕೈಗಳಿಗೆ ಕಡಗಗಳಂಥಾ ಒಂದೊಂದು ಬಂಗಾರದ ಬಳೆಯನ್ನು ತೊಟ್ಟುಕೊಂಡಳು. ಬಾವಿಯಿಂದ ನೀರು ತರಲು ಹೋದಾಗ ಅಕ್ಕಪಕ್ಕದ ಗೃಹಿಣಿಯರು ಅದನ್ನು ನೋಡಿ ಹೀಯಾಳಿಸಿದರು. “ಕೈಯಲ್ಲಿ ಗಾಜಿನ ಬಳೆಯೇ ಇರಬಹುದಿತ್ತಲ್ಲ! ನಿನಗೇಕೆ ಈ ಬಂಗಾರದ ಬಳೆಗಳು!?” ಅಂದರು.

ಅದಕ್ಕೆ ಉತ್ತರವಾಗಿ, “ನನ್ನ ಗಂಡ ಬದುಕಿದ್ದಷ್ಟೂ ದಿನ ನಾನು ಗಾಜಿನ ಬಳೆಗಳನ್ನು ತೊಟ್ಟಿದ್ದೆ. ಅವರ ದೇಹ ಗಾಜಿನ ಬಳೆಯಂತೆಯೇ ದುರ್ಬಲವಾಗಿತ್ತು. ಯಾವ ಸಮಯದಲ್ಲಿ ಒಡೆಯುತ್ತದೆಂದು ಹೇಳಲು ಆಗುತ್ತಿರಲಿಲ್ಲ. ಈಗ ಆ ನಶ್ವರ ದೇಹ ಹೊರಟುಹೋಗಿದೆ. ಅವರೀಗ ಯಾವ ಬದಲಾವಣೆಗೂ ಸಿಗದೆ ಎಲ್ಲಾ ವಿಧದಿಂದಲೂ ಪೂರ್ಣವಾಗಿರುವರು. ಅವರೀಗ ಒಡೆಯಲಾಗದಂಥವರು. ಅದಕ್ಕೇ ಆ ದುರ್ಬಲ ಗಾಜಿನ ಬಳೆಗಳನ್ನು ಬಿಚ್ಚಿ, ಗಟ್ಟಿಯಾದ ಬಂಗಾರದ ಬಳೆಗಳನ್ನು ಧರಿಸಿರುವೆನು” ಎಂದು ಹೇಳುತ್ತಾ ತನ್ನ ಕೊಡ ಹೊತ್ತು ನಡೆದಳು ಆ ಗೃಹಿಣಿ.

(ರಾಮಕೃಷ್ಣ ಪರಮಹಂಸರು ಹೇಳಿದ ದೃಷ್ಟಾಂತ ಕಥೆ | ಆಕರ: ಕಥೆಗಾರ ಶ್ರೀ ರಾಮಕೃಷ್ಣ)

Leave a Reply