ಅಧ್ಯಾತ್ಮ ಡೈರಿ : ಬದುಕು ಭಾಗ್ ಬಾನ್ ಸಿನಿಮಾ ಅಲ್ಲ!

ಮುಂದಿನ ಕ್ಷಣವೇ ಈ ಕ್ಷಣಕ್ಕಿಂತ ಬೇರೆಯಾಗಿರುತ್ತೆ. ಹೀಗಿರುವಾಗ ಮುಂದಿನ ಕ್ಷಣದ ನಾವಾಗಲೀ ಬೇರೆಯವರಾಗಲೀ ಈ ಹೊತ್ತಿನ ನಮ್ಮಂತೆ ಇರೋಕೆ ಹೇಗೆ ಸಾಧ್ಯ? ಇಷ್ಟು ಅರ್ಥವಾಗಿಬಿಟ್ಟರೆ ಸಂಸಾರ ಸಲೀಸು. ಆದರೆ ಅರ್ಥ ಮಾಡಿಕೊಳ್ಳಲು ಬಯಸುವವರ ಸಂಖ್ಯೆಯೇ ಬಹಳ ಕಡಿಮೆ ~ ಅಲಾವಿಕಾ

ಪ್ರತಿ ಸಂಜೆ ಅಂವ ಕರೆಕ್ಟಾಗಿ ಇಂತಿಷ್ಟೇ ಸಮಯಕ್ಕೆ ಮನೆಗೆ ಬರ್ತಾನೆ. ಅವನು ಗೇಟು ತೆಗೆದು, ಅಂಗಳದುದ್ದ ನಡೆಯುತ್ತಾ ಇನ್ನೇನು ಹೊಸ್ತಿಲು ತಲುಪಿ ಕದ ತಟ್ಟಬೇಕು, ಅವಳ ಮುಗುಳ್ನಗು ಕದ ತೆರೆಯುತ್ತದೆ. ಅವರ ಮದುವೆಯಾದ ಮೊದಲ ದಿನದಿಂದ ಅಂವ ರಿಟೈರ್ ಆದ ದಿನದವರೆಗೂ ಹಾಗೇನೇ. ಒಂದು ದಿನವೂ ಸೀನ್ ತಪ್ಪಿದ್ದಲಿಲ್ಲ! ಆಶ್ಚರ್ಯವಾಗುತ್ತೆ ಅಲ್ವಾ? ಸಾವಧಾನ… ಇದು ಬದುಕಲ್ಲ, ಭಾಗ್‌ಬಾನ್ ಸಿನಿಮಾ!!  

ನಿಜ ಜೀವನದಲ್ಲಿ ಹೀಗೆಲ್ಲ ನಡೆಯುವುದೇ ಇಲ್ಲ ಅಂತಲೇ ಹೇಳಬಹುದೇನೋ. ಆದರೆ, ಸಂಬಂಧಗಳು ಮೊದಲ ದಿನದ ಹಾಗೇ ಪ್ರತಿ ದಿನವೂ ಇರಬೇಕು ಅಂಥ ಬಯಸುವ ಜನ ಎಲ್ಲೆಡೆ ಇದ್ದಾರೆ. ಅದು ವಾಸ್ತವಕ್ಕೆ ತಕ್ಕ ಬಯಕೆ ಅಲ್ಲವೆಂದು ಗೊತ್ತಿದ್ದರೂನು.
ಸಂಬಂಧಗಳ ನಡುವೆ ತಾಕಲಾಟ ಶುರುವಾಗೋದು ಇಂಥ ಸಮಯದಲ್ಲೇ.
`ನೀನು ಮೊದಲಿನ ಹಾಗೆ ಇಲ್ಲ!’ ಗಂಡು ಹೆಣ್ಣಿನ ಸಾಂಗತ್ಯದಲ್ಲಿ ಮಾತ್ರ ಅಲ್ಲ, ಸಾಧ್ಯವಿರುವ ಎಲ್ಲ ಥರದ ಸಂಬಂಧಗಳೂ ಒಂದು ಆರೋಪವನ್ನು ಎದುರಿಸುತ್ತವೆ. ಮಜದ ವಿಷಯ ಅಂದ್ರೆ, ಯಾರು ಇಂಥ ಆರೋಪಕ್ಕೆ ಒಳಗಾಗಿ ಕ್ಲಾರಿಫಿಕೇಶನ್ ಕೊಡುತ್ತಾ ನಾನು ಹಾಗೇಹಿಂದಿನಂತೇ ಇದ್ದೀನಿ ಅಂತ ಸಾಬೀತು ಮಾಡೋಕೆ ಒದ್ದಾಡ್ತಾ ಇರ್ತಾರೋ ಅವರು ಕೂಡ ಮತ್ತೊಬ್ಬರ ಮೇಲೆ ಅದೇ ಆರೋಪ ಹೊರಿಸ್ತಾ ಇರ್ತಾರೆ! ಇದು ಮುಗಿಯದ ಗೊಣಗಾಟ.

ಮೊದಮೊದಲ ದಿನಗಳ ಹಾಗೆ ಎಲ್ಲ ದಿನವೂ ಇರಲು ಸಾಧ್ಯವೇ? ಇಷ್ಟಕ್ಕೂ ಹಾಗೆ ಯಾಕಿರಬೇಕು!? ಆರಂಬದ ದಿನಗಳಲ್ಲಿ ಪರಸ್ಪರ ಅರಿಯಲು ಬೇಕಾಗಿ ಹೆಚ್ಚು ಕಾಳಜಿ, ಗಮನಗಳು ಬೇಕಾಗ್ತವೆ. ಒಂದು ಸಾರ್ತಿ ಸಂಬಂಧ ಗಟ್ಟಿಯಾಯ್ತು ಅಂತ ಅನ್ನಿಸಿಬಿಟ್ಟರೆ, ಆಮೇಲೆ ನಿರಾಳವಾಗಿ ಮುಂದಿನ ಕೆಲಸಗಳಲ್ಲಿ ಮಗ್ನರಾಗುತ್ತೇವೆ. ಆಗ ಸಹಜವಾಗೇ ಮೊದಲಿನ ರೀತಿನೀತಿಗಳು ಬದಲಾಗುತ್ತವೆ. ಗಂಟೆಗೊಮ್ಮೆ ಇರುತ್ತಿದ್ದ ಫೋನ್ ಕಾಲ್ ಮೂರುಗಂಟೆಗೊಂದು ಸರ್ತಿಯಂತೆ, ದಿನಕ್ಕೊಮ್ಮೆಯಂತೆ ಬದಲಾಗುತ್ತದೆ. ಡಿಸ್ಕಸ್ ಮಾಡ್ತಿದ್ದ ಚಿಕ್ಕಪುಟ್ಟ ಸಂಗತಿಗಳೆಲ್ಲ ಮಹತ್ವ ಕಳೆದುಕೊಳ್ತವೆ. `ನಮ್ಮನ್ನೀಗ ಔಪಚಾರಿಕ ಮಾತುಕತೆಗಳೇ ಹಿಡಿದಿಡಬೇಕಿಲ್ಲಅನ್ನುವ ಅರಿವು ಆಂತರ್ಯದಲ್ಲಿ ಹರಳುಗಟ್ಟಿರುತ್ತದೆ. ಆದರೆ ಇದು ಮೇಲರಿವಿಗೆ ಬಂದಿರೋದಿಲ್ಲ. ಆದ್ದರಿಂದಲೇ ನಮ್ಮ ನಡವಳಿಕೆಯಲ್ಲಿ ಆಗಿರುವಂಥದ್ದೇ ಬದಲಾವಣೆಯನ್ನು ನಮಗೆ ಸಂಬಂಧಪಟ್ಟವರಲ್ಲಿಯೂ ಗುರುತಿಸಲು ನಾವು ಸೋಲುತ್ತೇವೆ.

ಮುಂದಿನ ಕ್ಷಣವೇ ಕ್ಷಣಕ್ಕಿಂತ ಬೇರೆಯಾಗಿರುತ್ತೆ. ಹೀಗಿರುವಾಗ ಮುಂದಿನ ಕ್ಷಣದ ನಾವಾಗಲೀ ಬೇರೆಯವರಾಗಲೀ ಹೊತ್ತಿನ ನಮ್ಮಂತೆ ಇರೋಕೆ ಹೇಗೆ ಸಾಧ್ಯ? ಇಷ್ಟು ಅರ್ಥವಾಗಿಬಿಟ್ಟರೆ ಸಂಸಾರ ಸಲೀಸು. ಆದರೆ ಅರ್ಥ ಮಾಡಿಕೊಳ್ಳಲು ಬಯಸುವವರ ಸಂಖ್ಯೆಯೇ ಬಹಳ ಕಡಿಮೆ. ನಿಮ್ಮ ಬದುಕು ಸುಂದರವಾಗಿರಬೇಕು ಅಂದರೆ ನೀವು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲೇಬೇಕು. ಅದಕ್ಕಾಗಿ ಕೃತಕವಾಗಿ ಕೆಲವು ವಿಧಾನಗಳನ್ನು ಅನುಸರಿಸಿದರೂ ತಪ್ಪಿಲ್ಲ. ಕ್ರಮೇಣ ಅವು ರೂಢಿಯಾಗುತ್ತಾ ನೀವು ವಾಸ್ತವಕ್ಕೆ ಒಗ್ಗಿಕೊಳ್ಳುತ್ತೀರಿ.

ಅದಕ್ಕಾಗಿ ಹೀಗೆ ಮಾಡಿ :

* ನಿಮ್ಮ ಪ್ರೀತಿ ಪಾತ್ರರು ಬದಲಾಗಿದ್ದಾರೆ ಅನ್ನಿಸಿದಾಗೆಲ್ಲ ಅವರ ಈಗಿನ ದಿನಗಳ ಪರಿಸ್ಥಿತಿಯನ್ನು, ಕೆಲಸದ ಒತ್ತಡವನ್ನು ಕುರಿತು ಆಲೋಚಿಸಿ. ಅವರು ನಿಮಗೆ ಸಮಯ ಕೊಡದೆ ಇರುವುದರಿಂದ ನಿಮಗೆ ನಷ್ಟವೇನಾಗಿದೆ ಎಂದು ಪ್ರಾಮಾಣಿಕವಾಗಿ ಚಿಂತಿಸಿ.

* ನಿಮ್ಮ ಪ್ರೀತಿಪಾತ್ರರೊಡನೆ ನಿಮ್ಮ ವರ್ತನೆ ಹೇಗಿದೆ ಅನ್ನುವುದರ ಮೌಲ್ಯಮಾಪನ ಮಾಡಿಕೊಳ್ಳಿ. ಮೊದಲೆಲ್ಲ “ನೀವು ಹೇಗಿದ್ದರೂ ನನಗಿಷ್ಟ” ಅನ್ನುತ್ತಿದ್ದವರು “ನೀವು ಹೀಗೇ ಇರಬೇಕು” ಎಂದು ತಾಕೀತು ಮಾಡುತ್ತೀದ್ದೀರಾ? ಸರಿಯಾಗಿ ಗಮನಿಸಿ, ಹಾಗಿದ್ದಲ್ಲಿ ತಿದ್ದಿಕೊಳ್ಳಿ.

* ಒಡನಾಟಕ್ಕೆ ಸಮಯ ಮೀಸಲಿಡುವುದು, ಉಡುಗೊರೆ ನೀಡುವುದು, ಮಾತಾಡುವುದು – ಇತ್ಯಾದಿ ವಿಷಯಗಳಲ್ಲಿ ಏರುಪೇರಾಗಿರಬಹುದು. ಆದರೆ ಅವರ ಪ್ರೀತಿ ಕಡಿಮೆಯಾಗಿದೆಯೇ. ಕಾಳಜಿ ಕಡಿಮೆಯಾಗಿದೆಯೇ ಎಂದು ಆಲೋಚಿಸಿ. ಅಭಿವ್ಯಕ್ತಿಯಲ್ಲಿ ಬದಲಾವಣೆ ಆದಮಾತ್ರಕ್ಕೆ ಭಾವನೆಯಲ್ಲಿಯೇ ಬದಲಾವಣೆಯಾಗಿದೆ ಅನ್ನುವ ತೀರ್ಮಾನಕ್ಕೆ ಬರಬೇಡಿ.

* ಎಲ್ಲಕ್ಕಿಂತ ಮುಖ್ಯವಾಗಿ `ಬದಲಾಗಿದ್ದೀರಿಎಂದು ನೀವು ಯಾರನ್ನೂ ದೂರಬೇಡಿ. ಒಂದು ಬೆಟ್ಟು ತೋರಿದರೆ ಮೂರು ಬೆಟ್ಟು ನಿಮ್ಮನ್ನೇ ಗುರಿ ಮಾಡುತ್ತವೆ ಅನ್ನುವ ಪಾಠ ನೆನಪಿರಲಿ.

ಪ್ರತಿ ದಿನವೂ ಚೂರೂ ಬದಲಾವಣೆಯಿಲ್ಲದಂತೆ ವರ್ತಿಸಲು ಯಾರಿಂದಲೂ ಸಾಧ್ಯವಿಲ್ಲ. ಹಾಗೆ ನಡೆಸಲು ಬದುಕೇನು ಭಾಗ್ ಬಾನ್ ಸಿನಿಮಾ ಅಲ್ಲ. ಅಕಸ್ಮಾತ್ ಯಾರಾದರೂ ಹಾಗೆ ವರ್ತಿಸುತ್ತಿದ್ದಾರೆ ಅಂದರೆ ಅದು ಕೃತಕ ಅಥವಾ ಯಾಂತ್ರಿಕವೇ ಹೊರತು ಸಹಜವಲ್ಲ. ಆದ್ದರಿಂದ, ನೀವೂ ಬದಲಾಗಿ, ಇತರರ ಬದಲಾವಣೆಯನ್ನೂ ಒಪ್ಪಿಕೊಳ್ಳಿ. ಸಂಬಂಧ ಮುಷ್ಟಿ ಬಿಗಿಯದೆಯೂ ನಿಮ್ಮ ಅಂಗೈಯಲ್ಲೇ ಸುರಕ್ಷಿತವಾಗಿರುವುದು! 

Leave a Reply