ಪ್ರಪಂಚದ ಮೊಟ್ಟ ಮೊದಲ ಜೇಡ ಹುಟ್ಟಿದ ಕಥೆ : ಗ್ರೀಕ್ ಪುರಾಣ ಕಥೆಗಳು ~ 2

ಅಥೆನಾಳ ಶಾಪದಿಂದ ಭೂಮಿಯ ಮೇಲೆ ಮೊದಲ ಜೇಡದ ಸೃಷ್ಟಿಯಾಯಿತು. ಇಡ್ಮೊನ್ನ ಮಗಳು, ಶಪಿತ ಅರಕ್ನೆಯ ಹೆಸರಿನಿಂದಲೇ ಜೇಡ ಮತ್ತು ಎಂಟು ಕಾಲುಗಳ ಕೀಟಪ್ರಭೇದಕ್ಕೆ ‘ಅರಾಕ್ನಿಡಾ’ ಎಂಬ ಹೆಸರು ಬಂದಿರುವುದು!

arachne

ಸಂಗ್ರಹ ಮತ್ತು ಅನುವಾದ: ಚೇತನಾ ತೀರ್ಥಹಳ್ಳಿ

ಲೆ ಮತ್ತು ಕರಕುಶಲ ದೇವತೆ ಅಥೆನಾಗೆ ತನ್ನಷ್ಟು ಚೆಂದ ಕಸೂತಿ ಹಾಕುವವರು ಯಾರೂ ಇಲ್ಲವೆಂದು ಜಂಭವಿತ್ತು. ಹಾಗೆ ಯಾರೂ ಇರಲೂಕೂಡದು ಅನ್ನೋದು ಅವಳ ಹೆಬ್ಬಯಕೆ.

ಭೂಮಿಯಲ್ಲಿ ಅರಕ್ನೆ ಎಂಬ ಹುಡುಗಿಯುಬ್ಬಳಿದ್ದಳು. ಅವಳು ಇಡ್ಮೊನ್ ಎಂಬ ಕುರಿಗಾಹಿಯ ಮಗಳು. ಚಿಕ್ಕವಳಿರುವಾಗಿಂದಲೂ ಕಸೂತಿ ಹಾಕುವುದು ಅವಳ ಹವ್ಯಾಸ. ತಾರುಣ್ಯಕ್ಕೆ ಕಾಲಿಟ್ಟಂತೆಲ್ಲ ಅವಳ ಕಸೂತಿ ಕಲೆ ಮತ್ತಷ್ಟು ಮಾಗುತ್ತಾ ಸಾಗಿತು. ಅವಳದೆಷ್ಟು ಚೆಂದ ಕಸೂತಿ ಹಾಕುತ್ತಿದ್ದಳೆಂದರೆ, ಊರ ಜನರೆಲ್ಲ “ದೇವತೆ ಅಥೆನಾಗಿಂತ ಚೆಂದ ಕಸೂತಿ ಹಾಕುತ್ತೀಯ ನೀನು” ಅನ್ನುತ್ತಿದ್ದರು. ಎಲ್ಲರೂ ಹಾಗೆ ಹೇಳುತ್ತಿದ್ದರಿಂದ ಅರಕ್ನೆಯ ಮನಸ್ಸಿಗೂ ಅದು ಬಂದುಹೋಯಿತು. “ನಾನು ಕಸೂತಿ ಹಾಕುವುದರಲ್ಲಿ ಅಥೆನಾಳನ್ನೂ ಮೀರಿಸಬಲ್ಲೆ” ಎಂದು ಅವಳು ಅಂದುಕೊಂಡಳು.

ಅವಳು ಹಾಗೆ ಅಂದುಕೊಂಡಿದ್ದು ಅಥೆನಾಗೆ ಗೊತ್ತಾಯಿತು. ಒಂದು ಕೈ ನೋಡೇಬಿಡೋಣ ಎಂದು ಮುದುಕಿಯ ವೇಷ ಹಾಕಿಕೊಂಡು ಅರಕ್ನೆಯ ಮನೆಗೆ ಬಂದಳು. ಅದೂ ಇದೂ ಮಾತಾಡುತ್ತಾ ಇಬ್ಬರೂ ಕಸೂತಿಯ ವಿಷಯ ಮಾತಾಡತೊಡಗಿದರು. ಅರಕ್ನೆ ಉಲ್ಲಾಸದಿಂದ ತನ್ನ ಕಲೆಯ ಬಗ್ಗೆ ಹೇಳುತ್ತಾ ತಾನು ಅಥೆನಾ ದೇವತೆಗಿಂತಲೂ ಚೆನ್ನಾಗಿ ಕಸೂತಿ ಹಾಕುವುದಾಗಿ ಹೇಳಿಕೊಂಡಳು.

ಇದರಿಂದ ಅಥೆನಾಗೆ ಸಿಟ್ಟೇ ಬಂದಿತು. ತನ್ನ ನಿಜರೂಪದಲ್ಲಿ ಪ್ರಕಟವಾಗಿ ಅರಕ್ನೆಯನ್ನು ಸ್ಪರ್ಧೆಗೆ ಆಹ್ವಾನಿಸಿದಳು. ಅರಕ್ನೆ ಚೂರೂ ಭಯಪಡಲಿಲ್ಲ. ಕಸೂತಿ ಹಾಕಲು ಸಿದ್ಧವಾದಳು. ಇಬ್ಬರೂ ಹಲವು ಗಂಟೆಗಳ ಕಾಲ ಕುಳಿತು ಕಸೂತಿ ಹಾಕಿದರು. ಅಥೆನಾಳ ಕಸೂತಿಗಿಂತ ಅರಕ್ನೆಯ ಕಸೂತಿಯೇ ಸುಂದರವಾಗಿ ಮೂಡಿಬಂದಿತು. ಅಥೆನಾ ಸ್ವರ್ಗ ಲೋಕದ ಪ್ರಧಾನ ದೇವತೆಗಳ ಚಿತ್ರಗಳನ್ನು ಬಿಡಿಸಿದ್ದರೆ, ಅರಕ್ನೆ ಅವರ ಪ್ರಣಯದ ಚಿತ್ರಗಳನ್ನು ಬಿಡಿಸಿದ್ದಳು. ಅವಳ ಕಲೆಯೇ ಸುಂದರವಾಗಿದೆ ಎಂದು ಮನಗಂಡ ಅಥೆನಾಳಿಗೆ ಅಸೂಯೆ ಹುಟ್ಟಿತು. ತನಗಿಂತ ಚೆಂದವಾಗಿ ಕಸೂತಿ ಹಾಕುವವಳು, ಅದೂ ಭೂಲೋಕದಲ್ಲಿ ಇರುವುದು ಎಂದರೆ ಏನರ್ಥ!

ಕೋಪಗೊಂಡ ಅಥೆನಾ “ದೇವತೆಗಳ ಪ್ರಣಯ ಚಿತ್ರವನ್ನು ಕಸೂತಿ ಹಾಕುತ್ತೀಯಾ? ಮನುಷ್ಯಳಾಗಿ ನಿನ್ನ ಮಿತಿಯಲ್ಲಿ ನೀನು ಇರಬೇಕು” ಎಂದು ಅರಕ್ನೆಯ ಬೆನ್ನು ಬಗ್ಗಿಸಿ ತಲೆಯ ಮೇಲೆ ಮೂರು ಬಾರಿ ಮೊಟಕಿದಳು. ಇದರಿಂದ ಅವಮಾನಿತಳಾದ ಅರಕ್ನೆ, ದುಃಖದಿಂದ ಹಗ್ಗವನ್ನು ತೊಲೆಗೆ ಕಟ್ಟಿ ಣೇಣು ಹಾಕಿಕೊಳ್ಳಲು ಮುಂದಾದಳು.

ಅಥೆನಾ ಅದಕ್ಕೆ ಅವಕಾಶ ಕೊಡಲಿಲ್ಲ. ನೀನು ಸಾಯಲೂಕೂಡದು. ನಿನಗೆ ಸರಿಯಾದ ಶಿಕ್ಷೆಯಾಗಬೇಕು ಅನ್ನುತ್ತಾ ಹೆಕೇಟ್ ಮೂಲಿಕೆಯ ರಸವನ್ನು ಅವಳ ಮೇಲೆ ಎರಚಿದಳು. ಆ ವಿಷಪೂರಿತ ರಸ ಮೈಸೋಕುತ್ತಲೇ ಅರಕ್ನೆಯ ದೇಹ ಕುಗ್ಗಲಾರಂಭಿಸಿತು. ಮೂಗು ಕಳಚಿತು. ತಲೆಯ ಗಾತ್ರ ಕುಗ್ಗಿತು. ಎರಡು ಕೈಬೆರಳುಗಳು ಕಳಚಿ ಬಿದ್ದು ಹೋದವು. ಉಳಿದ ಎಂಟು ಬೆರಳುಗಳು ಪಕ್ಕಕ್ಕೆ ಸರಿದು ಕಾಲುಗಳಾದವು. ಹೊಟ್ಟೆ ಚಪ್ಪಟೆಯಾಯಿತು. “ನಿನ್ನ ನೇಯ್ಗೆಯ ಬಗ್ಗೆ ನಿನಗೆ ಗರ್ವ ಅಲ್ಲವೆ? ಭೂಮಿ ಇರುವವರೆಗೂ ನೀನು ನಿನ್ನ ಮೈಯಿಂದ ಒಸರುತ್ತಾ ಅದರಲ್ಲಿ ದಾರ ಎಳೆಯುತ್ತಾ ನೇಯ್ಗೆ ಮಾಡಿಕೊಂಡಿರು. ತೊಲೆಯ ಮೇಲೆ ತೂಗಿ ಸಾಯಲು ಹೊರಟಿದ್ದೆಯಲ್ಲವೆ? ಯಾವಾಗಲೂ ತಲೆಯಿಂದ ನೆಲಮುಖವಾಗಿ ತೂಗಾಡಿಕೊಂಡಿರು. ದೇವತೆಗೇ ಸವಾಲು ಹಾಕಿದ ನಿನಗೆ ಇದೇ ಶಿಕ್ಷೆ” ಎಂದು ಶಪಿಸಿದಳು.

ಹೀಗೆ, ಭೂಮಿಯ ಮೇಲೆ ಮೊದಲ ಜೇಡದ ಸೃಷ್ಟಿಯಾಯಿತು. ಇಡ್ಮೊನ್ನ ಮಗಳು, ಶಪಿತ ಅರಕ್ನೆಯ ಹೆಸರಿನಿಂದಲೇ ಜೇಡ ಮತ್ತು ಎಂಟು ಕಾಲುಗಳ ಕೀಟಪ್ರಭೇದಕ್ಕೆ ‘ಅರಾಕ್ನಿಡಾ’ ಎಂಬ ಹೆಸರು ಬಂದಿರುವುದು!

 

Leave a Reply