ಅಧ್ಯಾತ್ಮ ಡೈರಿ : ಉದ್ದನೆಯ ಹಾಸಿಗೆಯನ್ನು ಹೊಂದಿಸುವುದು

ಬಹುತೇಕರ ಪಾಲಿಗೆ ಜೀವನ ಅಂದರೇನೇ ಉದ್ದನೆ ಹಾಸಿಗೆಯನ್ನು ಹೊಂದಿಸುವುದು. ಅವರಿಗೆ ಇದ್ದುರಲ್ಲೇ ಹೊಂದಾಣಿಕೆ ಮಾಡಿಕೊಂಡು ಬದುಕುವುದರಲ್ಲಿ ಆಸಕ್ತಿಯಿಲ್ಲ. ಇಲ್ಲದುದಕ್ಕೆ ಹಂಬಲಪಡದೆ ಸಂತೃಪ್ತರಾಗಿ ಬದುಕುವ ಆಲೋಚನೆ ಮಾಡಲಿಕ್ಕಂತೂ ಅವರಿಂದ ಸಾಧ್ಯವೇ ಇಲ್ಲ! ~ ಅಲಾವಿಕಾ

ಕಾಲು ಚಾಚಿ ಮಲಗೋದಂದರೆ ಎಲ್ಲರಿಗೂ ಇಷ್ಟ. ಯಾರು ತಾನೇ ಕಾಲು ಮಡಚಿಕೊಂಡು ಮಲಗುತ್ತಾರೆ?

ಕೆಲವರು ಇರುತ್ತಾರೆ. ಹಾಸಿಗೆ ಚಿಕ್ಕದಾಗಿ ಚಾಚಿದ ಕಾಲು ನೆಲದ ಮೇಲೆ ಹೋದರೆ ಅವರಿಗೇನೂ ಚಿಂತೆ ಇಲ್ಲ. ಅವರಿಗೆ ಚಿಕ್ಕ ಹಾಸಿಗೆಯಲ್ಲೂ ಕಾಲುಚಾಚಿ ಮಲಗಿ ನಿದ್ರಿಸುವ ಕಲೆ ಸಿದ್ಧಿಸಿದೆ. ಅವರು ಅಷ್ಟರಲ್ಲೇ ತೃಪ್ತಿ ಪಡಬಲ್ಲರು. ಅಂಥವರ ಸಂಖ್ಯೆ ಬಹಳ ಕಡಿಮೆ. ಇನ್ನು ಕೆಲವರು ಇರುತ್ತಾರೆ, ಹಾಸಿಗೆ ಇರುವಷ್ಟುದ್ದ ಮಾತ್ರವೇ ಕಾಲು ಚಾಚಿ ಮಲಗುತ್ತಾರೆ. ಕಾಲು ಮಡಚುವ ಕಷ್ಟವನ್ನಾದರೂ ಅವರು ಅನುಭವಿಸಬಲ್ಲರೇ ಹೊರತು, ನೆಲದ ಮೇಲೆ ಚಾಚಿಕೊಂಡು ಅದರಲ್ಲೇ ಸುಖ ಕಾಣುವ ಕಲೆಯನ್ನು ಅವರು ಅರಿಯರು. ಉಳಿದಂತೆ ನಾವು ಬಹುತೇಕರು ಕಾಲಿರುವಷ್ಟೂ ಉದ್ದದ ಹಾಸಿಗೆ ಬೇಕೆಂದು ಒದ್ದಾಡುತ್ತ ಇರುತ್ತೇವೆ. ಮತ್ತು, ಹಾಗೆ ಹಾಸಿಗೆಯನ್ನು ಹೊಂದಿಸಿದಂತೆಲ್ಲಾ ನಮ್ಮ ಕಾಲು ಉದ್ದವಾಗುತ್ತಲೇ ಹೋಗುತ್ತದೆ!

ಹೌದು. ಬಹುತೇಕರ ಪಾಲಿಗೆ ಜೀವನ ಅಂದರೇನೇ ಉದ್ದನೆ ಹಾಸಿಗೆಯನ್ನು ಹೊಂದಿಸುವುದು. ಅವರಿಗೆ ಇದ್ದುರಲ್ಲೇ ಹೊಂದಾಣಿಕೆ ಮಾಡಿಕೊಂಡು ಬದುಕುವುದರಲ್ಲಿ ಆಸಕ್ತಿಯಿಲ್ಲ. ಇಲ್ಲದುದಕ್ಕೆ ಹಂಬಲಪಡದೆ ಸಂತೃಪ್ತರಾಗಿ ಬದುಕುವ ಆಲೋಚನೆ ಮಾಡಲಿಕ್ಕಂತೂ ಅವರಿಂದ ಸಾಧ್ಯವೇ ಇಲ್ಲ!

ಒಂದು ಕಥೆ ನೆನಪಾಗುತ್ತೆ. ಒಬ್ಬನಿಗೆ ಒಂದು ಕಾಡಿನಲ್ಲಿ ಬಿಗಿಯಾಗಿ ಮುಚ್ಚಿದ ಏಳು ಕೊಡಗಳು ಸಿಗ್ತವೆ. ಅವನು ಅವನು ಮನೆಗೆ ತಂದು ಎಲ್ಲವನ್ನೂ ತೆರೆದು ನೋಡ್ತಾನೆ. ಆರು ಕೊಡಗಳ ಭರ್ತಿ ಚಿನ್ನದ ವರಹಗಳು! ಏಳನೇ ಕೊಡ ಮಾತ್ರ ಅರ್ಧ ತುಂಬಿದೆ. ಆ ಮನುಷ್ಯನಿಗೆ ತುಂಬಿದ ಆರು ಕೊಡಗಳು ಸಿಕ್ಕಿರುವ ಖುಷಿಗಿಂತ ಅರ್ಧ ಬಾಕಿ ಇರುವ ಏಳನೇ ಕೊಡದ ಬಗೆಗಿನ ಚಿಂತೆಯೇ ದೊಡ್ಡದಾಯ್ತು. ಏನಾದರೂ ಮಾಡಿ ಇದನ್ನು ತುಂಬಿಸಬೇಕಲ್ಲ ಅಂತ ಯೋಚಿಸಲು ಶುರುವಿಟ್ಟ. ಎಷ್ಟು ದುಡಿದು ತಂದು ತುಂಬಿಸಿದರೂ ಏಳನೇ ಕೊಡ ತುಂಬುವ ಲಕ್ಷಣವೇ ಇಲ್ಲ! ತುಂಬಿರುವ ಆರು ಕೊಡಗಳ ಹೊನ್ನನ್ನು ಅನುಭವಿಸುವುದು ಬಿಟ್ಟು ಅಂವ ಜೀವಮಾನವಿಡೀ ಏಳನೇ ಕೊಡ ತುಂಬಿಸುವುದರಲ್ಲೇ ಕಳೆದ.

ನಾವೂ ಹೀಗೇ ಮಾಡುವುದು. ನಮ್ಮ ಬಳಿ ಏನಿದೆಯೋ ಅದನ್ನು ಅನುಭವಿಸುವುದು ಬಿಟ್ಟು ಇನ್ನೊಂದು, ಮತ್ತೊಂದು ಎಂದು ಗಗನ ಕುಸುಮದತ್ತ ಕೈಚಾಚಿಕೊಂಡಿರುತ್ತೇವೆ. ಅದನ್ನು ಪಡೆಯುವುದೇ ಜೀವನದ ಸಾರ್ಥಕತೆ ಅಂದುಕೊಳ್ತೇವೆ. ಬದುಕಿಡೀ ಅದಕ್ಕಾಗಿ ಸವೆಸುತ್ತೇವೆ. ಈ ಭರದಲ್ಲಿ ಬದುಕಿನ ಅಮೂಲ್ಯ ಸಂಗತಿಗಳನ್ನು ಕಳೆದುಕೊಂಡುಬಿಡುತ್ತೇವೆ.

ಈ ಮನಸ್ಥಿತಿಯನ್ನು ಬದಲಿಸಿಕೊಳ್ಳುವುದು ಸಾಧ್ಯವೇ ಇಲ್ಲವೆ? ಖಂಡಿತಾ ಸಾಧ್ಯವಿದೆ. ಈ ಕೆಲವು ಟಿಪ್ಸ್ ಅನ್ನು ಫಾಲೋ ಮಾಡಿ.

  • ದಿನದ ಕೊನೆಯಲ್ಲಿ ಆ ದಿನ ನೀವು ಏನೇನು ಮಾಡಿದಿರಿ ಎಂದು ಯೋಚಿಸಿ. ನಿಮಗೆ ಯಾರೆಲ್ಲರಿಂದ ಸಹಾಯವಾಯಿತು, ಯಾರಿಗೆ ನೀವೇನು ಸಹಾಯ ಮಾಡಿದಿರಿ ಎಂಬುದನ್ನು ಪಟ್ಟಿ ಮಾಡಿ.
  • ಎರಡು ಹೊತ್ತಿನ ಊಟದಾಚೆಗೂ ಬದುಕಿದೆ. ಅಥವಾ ಬದುಕು ಇರುವುದು ಎರಡು ಹೊತ್ತಿನ ಊಟದ ಆಚೆಗೇ. ಆದರೂ ಖಾಲಿ ಹೊಟ್ಟೆ ನಿಮ್ಮ ಬದುಕನ್ನು ಉಳಿಸಲಾರದು. ಆದ್ದರಿಂದ ನಿಮ್ಮ ಹೊಟ್ಟೆ ತುಂಬಿಸಿದ ದುಡಿಮೆ, ವ್ಯಕ್ತಿಗಳನ್ನು ಕೃತಜ್ಞತೆಯಿಂದ ನೆನೆಯಿರಿ.
  • ನೀವು ಯಾತಕ್ಕಾಗಿ ಹಂಬಲಿಸುತ್ತಿದ್ದೀರಿ? ನಿಮಗೆ ನಿಜವಾಗಿಯೂ ಅದರ ಅವಶ್ಯಕತೆ ಇದೆಯೇ? ಆ ವಸ್ತುವನ್ನು ಪಡೆಯದೆ ಹೋದರೆ ನಿಮಗಾಗುವ ನಷ್ಟವೇನು? ಅದನ್ನು ಪಡೆಯುವುದರಿಂದ ಲಾಭವೇನು? ಸಮಾಧಾನವಾಗಿ ಆಲೋಚಿಸಿ.
  • ಯಾವುದಕ್ಕಾದರೂ ಆಸೆ ಪಡುವುದು ತಪ್ಪೇನಲ್ಲ. ಕಾಲು ನೆಲ ಸೋಕದಂತೆ ಉದ್ದನೆ ಹಾಸಿಗೆಗಾಗಿ ಹಂಬಲಿಸುವುದೂ ಕೂಡಾ. ಆದರೆ, ಹಾಸಿಗೆ ಹೊಂದಿಸಿಕೊಂಡ ಮೇಲೆ ನಿಮ್ಮ ಬಯಕೆಯ ಕಾಲು ಮತ್ತಷ್ಟು ಉದ್ದವಾಗದಂತೆ ನೋಡಿಕೊಳ್ಳಿ.

ಈ ಎಲ್ಲದರ ಜೊತೆ ನೆನಪಿಟ್ಟುಕೊಳ್ಳಬೇಕಾದ ವಿಷಯವೊಂದಿದೆ. ನಾವು ಬದುಕುವುದು ನಮಗಾಗಿ ಮಾತ್ರ. ಆದ್ದರಿಂದ ನಿಮ್ಮ ಬಯಕೆಗಳ ಪಟ್ಟಿಯನ್ನು ಇತರರ ಜೊತೆಗಿನ ಹೋಲಿಕೆಯಿಂದ ರೂಪಿಸಿಕೊಳ್ಳಬೇಡಿ. ಹೋಲಿಕೆಯಿಂದ ಹೊರಬಂದ ಮರುಕ್ಷಣ ಸಂತೃಪ್ತಿಯು ನಿಮ್ಮ ಬದುಕನ್ನು ಆವರಿಸುತ್ತದೆ. ಕಾಲು ನೆಲ ಸೋಕುವುದೂ ಆಗ ಹಿತವೇ ಆಗುತ್ತದೆ!

Leave a Reply