ಸದಾ ಸೂರ್ಯಧ್ಯಾನದಲ್ಲೇ ಇರುತ್ತಾ ಮೈಮರೆತ ಕ್ಲೈಟಿ ಊಟ – ನಿದ್ರೆಗಳನ್ನು ಮರೆತಳು. ಸಿಂಗಾರವನ್ನು ಬಿಟ್ಟಳು. ಕಣ್ಣೀರೇ ಕುಡಿಯುವ ನೀರಾಯಿತು. ಅವನು ತನ್ನತ್ತ ತಿರುಗಿ ನೋಡದೆ ಇದ್ದರೂ ಅವನಿಂದ ಕಣ್ಣುಕೀಳದೆ ಕುಳಿತುಕೊಂಡಳು….
ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ
ಕ್ಲೈಟೀ ಒಬ್ಬ ಜಲಕನ್ಯೆ. ಸೂರ್ಯದೇವ ಹೀಲಿಯಸ್’ನ ಮೇಲೆ ಅವಳಿಗೆ ಅತಿಶಯ ಪ್ರೇಮ. ಅವನು ಆಗಸದಲ್ಲಿ ಚಲಿಸೋದನ್ನು ಪ್ರತಿನಿತ್ಯವೂ ಕುತೂಹಲದಿಂದ ನೋಡುತ್ತಿದ್ದಳು. ಅವನು ಪೂರ್ವ ದಿಕ್ಕಿನಲ್ಲಿ ಹುಟ್ಟಿ, ನಡು ನೆತ್ತಿಗೇರಿ, ಪಶ್ಚಿಮದಲ್ಲಿ ಮುಳುಗುವವರೆಗೂ ತನ್ನ ಮುಖವನ್ನು ಅವನತ್ತಲೇ ತಿರುಗಿಸಿಕೊಂಡು. ಅತ್ಯಂತ ಪ್ರೀತಿಯಿಂದ, ಅಭಿಮಾನದಿಂದ ಅವನನ್ನೇ ದಿಟ್ಟಿಸುತ್ತ ಇರುತ್ತಿದ್ದಳು. ಅವಳಿಗೆ ಹೀಲಿಯಸ್ ಮೇಲೆ ಅದೆಷ್ಟು ಮೋಹವೆಂದರೆ, ಅವನು ಲ್ಯೂಕೋಥೋಯಿಯನ್ನು ಪ್ರೀತಿಸುವುದು ಗೊತ್ತಿದ್ದರೂ ಅವನ ಆಸೆಯನ್ನವಳು ಬಿಡಲಿಲ್ಲ.
ಸೂರ್ಯದೇವ ಹೀಲಿಯಸ್’ನನ್ನು ಹೇಗಾದರೂ ತನ್ನವನನ್ನಾಗಿ ಮಾಡಿಕೊಳ್ಳಬೇಕೆಂದು ಬಯಸಿದ ಕ್ಲೈಟೀ, ಅವನನ್ನು ಲ್ಯೂಕೋಥೋಯಿಯಿಂದ ಬೇರ್ಪಡಿಸಲು ಉಪಾಯ ಹೂಡಿದಳು. ಅವರಿಬ್ಬರ ಗುಪ್ತ ಪ್ರಣಯ ವ್ಯವಹಾರವನ್ನು ಅವಳ ತಂದೆ ಅರ್ಕಮಸ್’ಗೆ ತಿಳಿಯಪಡಿಸಿದಳು. ಇದರಿಂದ ಕೋಪಗೊಂಡ ಅರ್ಕಮಸ್ ಲ್ಯೂಕೋಥೋಯಿಯನ್ನು ಕೊಂದುಹಾಕಿದ.
ಈ ಕಾರಣಕ್ಕೆ ಹೀಲಿಯಸನಿಗೆ ಕ್ಲೈಟಿಯ ಮೇಲೆ ಕೋಪವಿತ್ತು. ಅವಳು ತನ್ನನ್ನು ಉತ್ಕಟವಾಗಿ ಪ್ರೀತಿಸುತ್ತಿದ್ದಾಳೆಂದು ಗೊತ್ತಿದ್ದರೂ ಅವಳ ಮೇಲಿನ ತಾತ್ಸಾರದಿಂದ ಅತ್ತ ತಿರುಗಿಯೂ ನೋಡುತ್ತಿರಲಿಲ್ಲ. ಕ್ಲೈಟೀ ಕುತ್ತಿಗೆ ನೋಯಿಸಿಕೊಂಡು ಅವನನ್ನು ನಿತ್ಯವೂ ನೋಡುತ್ತಿದ್ದುದೇ ಬಂತು. ಯಾವ ಪ್ರಯೋಜನವೂ ಆಗಲಿಲ್ಲ. ಇದರಿಂದ ಕ್ಲೈಟಿಯ ದುಃಖ ಹೆಚ್ಚಿತು. ಸೂರ್ಯದೇವನ ಮೇಲೆ ಪ್ರೀತಿ ಕಡಿಮೆಯಾಗುವ ಬದಲು ಮತ್ತಷ್ಟು ಹೆಚ್ಚಿತು. ಅವನನ್ನು ಪಡೆದೇ ತೀರಬೇಕೆನ್ನುವ ಹಂಬಲ ಹೆಚ್ಚಾಯಿತು.
ಸದಾ ಸೂರ್ಯಧ್ಯಾನದಲ್ಲೇ ಇರುತ್ತಾ ಮೈಮರೆತ ಕ್ಲೈಟಿ ಊಟ – ನಿದ್ರೆಗಳನ್ನು ಮರೆತಳು. ಸಿಂಗಾರವನ್ನು ಬಿಟ್ಟಳು. ಕಣ್ಣೀರೇ ಕುಡಿಯುವ ನೀರಾಯಿತು. ಅವನು ತನ್ನತ್ತ ತಿರುಗಿ ನೋಡದೆ ಇದ್ದರೂ ಅವನಿಂದ ಕಣ್ಣುಕೀಳದೆ ಕುಳಿತುಕೊಂಡಳು. ಇರುಳಿನಲ್ಲಿ ಮುಖ ತಗ್ಗಿಸಿ ಲೋಕದ ಕಣ್ತಪ್ಪಿಸಿ ಕೂರುತ್ತಿದ್ದಳು.
ಕ್ಲೈಟಿಯ ಈ ಪ್ರೇಮವನ್ನು ಕಂಡು ಸಂಪ್ರೀತರಾದ ದೇವತೆಗಳು ಅವಳನ್ನೊಂದು ಹೂವನ್ನಾಗಿ ಮಾರ್ಪಡಿಸಿದರು. ಸೂರ್ಯ ಸಾಗುವ ದಿಕ್ಕಿನತ್ತಲೇ ಮುಖ ಎತ್ತಿಕೊಂಡು ನೋಡುವ ಹೂವು. ಅದಕ್ಕೆ ಹೆಸರೂ ಸೂರ್ಯನದೇ ಇಟ್ಟರು.
ಹೌದು. ಅದೇ, ‘ಸೂರ್ಯಕಾಂತಿ’ ಹೂವು.