ಅಧ್ಯಾತ್ಮ ಡೈರಿ : ಇರುವಲ್ಲೇ ಖುಷಿ ಕಾಣದೆ ಹೋದರೆ…

“ನೀನು ಇರೋ ಕಡೇನೇ ನಿನಗೆ ಆನಂದ ಸಿಗ್ತಾ ಇಲ್ಲ ಅಂತಾದರೆ ನೀನು ಬೇರೆ ಕಡೆ ಅದನ್ನ ಹುಡುಕೋದು ವ್ಯರ್ಥ” ಅಂತಾನೆ ಡೋಜೆನ್. ಈ ಮಾತು ಎಷ್ಟು ನಿಜ ನೋಡಿ! ನಿಮಗೆ ಕೆಲಸದಲ್ಲಿ ಖುಷಿ ಸಿಗಲಿಲ್ಲ ಎಂದಾದರೆ ಸಂಸಾರದಲ್ಲೂ ಖುಷಿ ಸಿಗುವುದಿಲ್ಲ. ಲೌಕಿಕದಲ್ಲಿ ನೀನು ಆನಂದದಿಂದ ಇರಲು ಸಾಧ್ಯವಾಗದೆ ಹೋದರೆ, ಅಧ್ಯಾತ್ಮದಲ್ಲೂ ನೀವು ಆನಂದದಿಂದ ಇರಲಾರಿರಿ ~ ಅಲಾವಿಕಾ

ಲ್ಲ… ಎಲ್ಲವನ್ನೂ ಮೇಲಿಂದ ಮೇಲೆ ಅನುಸರಿಸಿ ನೋಡಿಯಾಗಿದೆ. ಯಾವ್ದೂ ಸಮಾಧಾನ ಕೊಡ್ತಾ ಇಲ್ಲ. ವಿಪಸ್ಸನ ಕ್ಲಾಸು, ವೀಕೆಂಡ್ ಮೆಡಿಟೇಶನ್ನು, ಸಂಕೀರ್ತನ ಪಾರ್ಟಿ… ಉಹು… ಯಾವ್ದಕ್ಕೂ ಅರ್ಥವೇ ಇಲ್ಲ. ಏನು ಮಾಡೋದು? ಲೌಕಿಕದ ನಡುವೆ ಅಧ್ಯಾತ್ಮಕ್ಕೆ ಬಿಡುವು ಮಾಡಿಕೊಂಡವರಿಗೂ ಕಾಡುವ ಗೊಂದಲವಿದು. ಅಧ್ಯಾತ್ಮದ ಹಾದಿಗೆ ಹೊರಳಿಕೊಂಡರೂ ನಮಗೆ ಸಮಾಧಾನ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ ಅಂದರೆ ಅದರಿಂದ ಪ್ರಯೋಜನವಾದರೂ ಏನು?

ವಿಷಯ ಅದಲ್ಲ. ಅಧ್ಯಾತ್ಮ ದೈನಂದಿನ ಬದುಕಿನ ಯಾತನೆಗಳಿಗೆ ಸಾಂತ್ವನ ನೀಡುವ ಮುಲಾಮು. ಅದು ಕೂಡಾ ನಮ್ಮನ್ನು ಸಂತೈಸುವಲ್ಲಿ ವಿಫಲವಾಗಿದೆ ಅಂದರೆ, ನಾವು ಅದನ್ನು ಸರಿಯಾಗಿ ಅನ್ವಯ ಮಾಡಿಕೊಳ್ಳುತ್ತಿಲ್ಲ ಎಂದೇ ಅರ್ಥ.

ನಾವು ಎಡವೋದು ಇಲ್ಲೇನೆ. ನಮ್ಮ ಪ್ರಯತ್ನವೇ ಟೊಳ್ಳಾಗಿರುತ್ತದೆ, ನಾವು ಫಲಿತಾಂಶ ಸಿಗದೆ ಹೋದಾಗ ಪರಿಕರವನ್ನೆ ದೂರುತ್ತೇವೆ. ನಮಗೆ ಎಲ್ಲದರಲ್ಲೂ ಧಾವಂತ. ದಿನವೆಲ್ಲ ದಾಪುಗಾಲು ಹಾಕ್ಕೊಂಡು ನಡೀತಾ ಇದ್ದರೆ ಬೇಗ ರಾತ್ರಿಯಾಗಿಬಿಡ್ತದೇನು? ನಮಗಿದು ಅರ್ಥವೇ ಆಗುವುದಿಲ್ಲ.

ಹಾಗಂತ ಸಾಪೇಕ್ಷ ಸಿದ್ಧಾಂತ ಮರೆಯುವ ಹಾಗಿಲ್ಲ. ನಮ್ಮ ನಡಿಗೆಯನ್ನು ಪ್ರೀತಿಸತೊಡಗಿದರೆ, ಪ್ರಜ್ಞಾಪೂರ್ವಕವಾಗಿ ಹೆಜ್ಜೆ ಹಾಕಿದರೆ, ನಾವು ಸವೆಸುವ ಸಮಯ ಸಾರ್ಥಕವಾದಂತೆಯೇ. ಪರಿಣಾಮವೂ ಸಕಾರಾತ್ಮಕವಾಗಿಯೇ ಇರುತ್ತದೆ. “ಕೆಲಸ ಮಾಡುವಾಗ, ಮಾಡ್ತಿರೋದರ ಬಗ್ಗೆ ಖುಷಿ ಇಟ್ಟುಕೋ, ಸಂಸಾರ ನಡೆಸುವಾಗ ಅದರಲ್ಲಿ ಸಂಪೂರ್ಣ ತೊಡಗು” ಅನ್ನುತ್ತದೆ ಝೆನ್. ಅಧ್ಯಾತ್ಮಕ್ಕೂ ಇದೇ ನಿಯಮ. ಲೌಕಿಕದಲ್ಲಿರುವಾಗ ಸಂಪೂರ್ಣವಾಗಿ ಲೌಕಿಕದಲ್ಲಿ ತೊಡಗಿರಿ. ಅಧ್ಯಾತ್ಮದ ಅಭ್ಯಾಸ ನಡೆಸುವಾಗ ಸಂಪೂರ್ಣವಾಗಿ ಅದರಲ್ಲಿ ತೊಡಗಿಕೊಳ್ಳಿ.

 “ನೀನು ಇರೋ ಕಡೇನೇ ನಿನಗೆ ಆನಂದ ಸಿಗ್ತಾ ಇಲ್ಲ ಅಂತಾದರೆ ನೀನು ಬೇರೆ ಕಡೆ ಅದನ್ನ ಹುಡುಕೋದು ವ್ಯರ್ಥ” ಅಂತಾನೆ ಡೋಜೆನ್. ಈ ಮಾತು ಎಷ್ಟು ನಿಜ ನೋಡಿ! ನಿಮಗೆ ಕೆಲಸದಲ್ಲಿ ಖುಷಿ ಸಿಗಲಿಲ್ಲ ಎಂದಾದರೆ ಸಂಸಾರದಲ್ಲೂ ಖುಷಿ ಸಿಗುವುದಿಲ್ಲ. ಲೌಕಿಕದಲ್ಲಿ ನೀನು ಆನಂದದಿಂದ ಇರಲು ಸಾಧ್ಯವಾಗದೆ ಹೋದರೆ, ಅಧ್ಯಾತ್ಮದಲ್ಲೂ ನೀವು ಆನಂದದಿಂದ ಇರಲಾರಿರಿ.

ನೀವೇ ಯೋಚಿಸಿ. ಬಗ್ಗಡದ ನೀರನ್ನ ತಿಳಿಯಾಗಿಸೋ ಸುಲಭ ಉಪಾಯ ಏನು? ಸ್ವಲ್ಪ ಹೊತ್ತು ಅದನ್ನ ಅಲ್ಲಾಡಿಸದೆ ಇಟ್ಟುಬಿಡೋದು. ಆಮೇಲೆ ತಿಳಿಯನ್ನ ಬಗ್ಗಿಸ್ಕೋಬಹುದು. ಅಲ್ಲವೆ? ಚಡಪಡಿಕೆಯ ತಲೆ ಕೂಡ ಹೀಗೇನೇ. ಯೋಚನೆಗಳ ಚರಟ ಎಲ್ಲ ಒಂದು ಕಡೆ ಕೂರೋತನಕ ಸುಮ್ಮನಿದ್ದುಬಿಟ್ಟರೆ ಆಯ್ತು. ಎಷ್ಟು ಸುಮ್ಮನೆ ಅಂದರೆ, ಏನು ಮಾಡಬೇಕಂತ ಯೋಚನೆಯನ್ನೂ ಮಾಡದಷ್ಟು ಸುಮ್ಮನೆ…. ಆಗ ಎಲ್ಲವೂ ತಿಳಿಯಾಗುವುದು. ಮನಸ್ಸು ಶಾಂತವಾಗುವುದು.

Leave a Reply