ವಿಶ್ವಪ್ರಜ್ಞಾವಂತಿಕೆ : ವಿಕಸನದ ಪರಮೋನ್ನತ ಹಂತ ~ ಭಾಗ 1

 

ಅಹಂಪ್ರಜ್ಞೆ (ದೇಹದ ಗುರುತಿನದ್ದು) ವಿಕಸನಗೊಂಡು ಸ್ವಯಂಪ್ರಜ್ಞೆಯಾಗಿಯೂ (ಆತ್ಮದ ತಿಳಿವಿನದ್ದು), ಸ್ವಯಂಪ್ರಜ್ಞೆಯು ವಿಕಸಗೊಂಡು ವಿಶ್ವಪ್ರಜ್ಞೆಯಾಗಿಯೂ ಬೆಳೆದಾಗ ವ್ಯಕ್ತಿಯು ಜಗತ್ತಿನ ವಿಸ್ಮಯಗಳನ್ನು ಅರ್ಥ ಮಾಡಿಕೊಳ್ಳಬಲ್ಲವನಾಗುತ್ತಾನೆ. ~ ಆನಂದಪೂರ್ಣ

la chitra

ಜೇನುಹುಳುಗಳ ಸಂತತಿ ಅವಸಾನಗೊಂಡರೆ ಮಾನವ ಜಗತ್ತು ನಾಲ್ಕು ವರ್ಷಗಳಲ್ಲಿ ಇಲ್ಲವಾಗಿಹೋಗುತ್ತದೆ ಎಂದಿದ್ದರು ಐನ್‍ಸ್ಟೀನ್. ಈ ಹೇಳಿಕೆಯ ವೈಜ್ಞಾನಿಕ ಸತ್ಯಾಸತ್ಯತೆಗಳ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದವು. ವಾದ-ವಿವಾದಗಳೂ ಉಂಟಾದವು. ಐನ್‍ಸ್ಟೀನ್ ಹೇಳಿಕೆಯನ್ನು ಪುಷ್ಟೀಕರಿಸುವ ನಿಟ್ಟಿನಲ್ಲಿ ಯಾವ ಕೀಟ ಅಥವಾ ಜೀವಿಯ ಅವಸಾನ ಜಗತ್ತಿನಲ್ಲಿ ಯಾವ ಬದಲಾವಣೆ ಉಂಟುಮಾಡುವುದು ಎಂಬ ವ್ಯಾಪಕ ಅಧ್ಯಯನ ಆರಂಭಗೊಂಡಿತು. ಈ ಅಧ್ಯಯನವು ವಿಶ್ವದ ವಿವಿಧ ಜೀವಸಂಕುಲಗಳ ಅಂತಸ್ಸಂಬಂಧವನ್ನು ಮತ್ತಷ್ಟು ಸ್ಪಷ್ಟವಾಗಿ ಸ್ಥಾಪಿಸಿತು.

ವಿಶ್ವದ ಎಲ್ಲ ಜೀವಿಗಳು ಅಥವಾ ಅಸ್ತಿತ್ವಗಳು ತಮಗೆ ಅರಿವಿಲ್ಲದೆಯೇ ಪರಸ್ಪರ ಪೂರಕವಾಗಿ ವರ್ತಿಸುತ್ತಿರುತ್ತವೆ. ನಿರ್ದಿಷ್ಟವಾಗಿ ಭೂಮಿಯ ಮೇಲಿನ ಜೀವಸಂಕುಲಗಳು ಒಂದು ಸರಪಳಿಯಂತೆ ಹೆಣೆದುಕೊಂಡಿವೆ. ನಮಗೆ ಈಗಾಗಲೇ ತಿಳಿದಿರುವಂತೆ ಆಹಾರ ಸರಪಳಿಯು ಆಹಾರ ಚಕ್ರವೂ ಆಗಿದ್ದು, ಒಂದರ ಉಳಿವು ಮತ್ತೊಂದನ್ನು ಅವಲಂಬಿಸಿದೆ. ಆದರೆ ಕೇವಲ ಭೌತಿಕ ಸ್ತರದಲ್ಲಿ ಮಾತ್ರವಲ್ಲ, ಈ ಅವಲಂಬನೆ ಪ್ರಜ್ಞಾಸ್ತರದಲ್ಲಿಯೂ ಒಂದಕ್ಕೊಂದು ಪೂರಕವಾಗಿರುತ್ತ ವಿಶ್ವವನ್ನು ಸಮತೋಲನದಲ್ಲಿರಿಸಿದೆ. ಬ್ರಹ್ಮಾಂಡ ಜಾಲದಲ್ಲಿ ಯಾವುದೋ ಒಂದು ನಕ್ಷತ್ರಕ್ಕೆ ಕಸಿವಿಸಿಯಾದರೂ ಇಡಿಯ ವ್ಯವಸ್ಥೆ ಒಮ್ಮೆಗೆ ಮೈಕೊಡವಿದಂತಾಡುವುದಕ್ಕೆ ಈ ಅಂತಸ್ಸಂಬಧವೇ ಕಾರಣ. ಆದರೆ ಯಾವುದೋ ಒಂದರ ಇಚ್ಛಾಶಕ್ತಿ ಇಲ್ಲದೆ ಇರುವ ಕಡೆ ಇಂತಹ ಸಂಬಂಧ ಸಾಧ್ಯವಾಗುವುದಿಲ್ಲ. ಹಾಗಾದರೆ ಇಲ್ಲಿ ಕೆಲಸ ಮಾಡುತ್ತಿರುವ ಇಚ್ಛಾಶಕ್ತಿ ಯಾವುದರದ್ದು? ಎಲ್ಲವನ್ನೂ ಸುಸೂತ್ರವಾಗಿ ಅಣಿಗೊಳಿಸಿ ನಡೆಸುತ್ತಿರುವ ಆ ಚಾಲಕ ಶಕ್ತಿ ಯಾವುದು? ಪೂರ್ವದ ಋಷಿಗಳು, ದಾರ್ಶನಿಕರು ಅದನ್ನು ಅಭ್ಯಸಿಸಿ ಒಂದು ವ್ಯಾಖ್ಯಾನ ನೀಡಿದ್ದಾರೆ. ಇಡಿಯ ವಿಶ್ವವನ್ನು ಎಚ್ಚರದಲ್ಲಿಟ್ಟು ನಡೆಸುತ್ತಿರುವ ಆ ಶಕ್ತಿಯನ್ನು `ವಿಶ್ವಪ್ರಜ್ಞೆ’ ಎಂದು ಕರೆದಿದ್ದಾರೆ.

ವ್ಯಕ್ತಿಯು ವಿಶ್ವವಾಗಿ ವಿಕಸನಗೊಳ್ಳುವ ಪ್ರಜ್ಞೆ
ವಿಶ್ವಪ್ರಜ್ಞೆ ಈ ಇಡಿಯ ವಿಶ್ವವನ್ನು ಸುಸ್ಥಿತಿಯಲ್ಲಿಟ್ಟಿದೆ ಎಂಬ ಚಿಂತನೆಯನ್ನು ಬಹುತೇಕ ನಾಸ್ತಿಕರು, ವಿಜ್ಞಾನಿಗಳು, ತತ್ತ್ವಜ್ಞಾನಿಗಳು ಪ್ರತಿಪಾದಿಸಿದ್ದಾರೆ. ಆಸ್ತಿಕರು ಈ ಪ್ರಜ್ಞೆಯನ್ನೇ `ಭಗವಂತ’ ಎಂದು ಕರೆದು, ಅದಕ್ಕೆ ರೂಪ ಕೊಟ್ಟು ಪೂಜಿಸುತ್ತಾರೆ. ಆತ್ಮದ ವಿಕಸಿತ ಹಾಗೂ ಅಧಿಕೃತ ಪರಿಪೂರ್ಣ ರೂಪವೇ ಪರಮಾತ್ಮ ಎನ್ನುವ ನಿರ್ವಚನೆಯಂತೆ, ಪ್ರಜ್ಞೆಯ ವಿಕಸಿತ ಹಾಗೂ ಪರಿಪೂರ್ಣ ರೂಪವನ್ನು ವಿಶ್ವಪ್ರಜ್ಞೆ ಎಂದು ವ್ಯಾಖ್ಯಾನಿಸಬಹುದು.

ವ್ಯಕ್ತಿ ಅಹಂ ಅನ್ನು ಕಳಚಿಕೊಂಡಾಗ ದೇಹದ ಗುರುತಿಸುವಿಕೆಯಿಂದ ಮುಕ್ತನಾಗುತ್ತಾನೆ. ಅವನು ವಿಶ್ವದಲ್ಲೊಂದಗುತ್ತಾನೆ. ಈ ಹಂತದಲ್ಲಿ ಆತನ ಕಾಮನೆಗಳೆಲ್ಲವೂ ನೆರವೇರುತ್ತವೆ. ಜ್ಞಾನಿಗಳಾದ ಋಷಿಗಳು ಅಕಾಲದಲ್ಲಿಯೂ ಮಳೆ ಸುರಿಯುವಂತೆ ಮಾಡುತ್ತಿದ್ದರು ಎನ್ನುವುದು ಊಹೆ ಅಥವಾ ಉತ್ಪ್ರೇಕ್ಷೆಯಲ್ಲದೆ ಇರಬಹುದು. ಅವರು `ಸ್ವ’ದ ಅರಿವಿನಿಂದಾಚೆ ಬೆಳೆದು ವಿಶ್ವದೊಂದಿಗೆ ತಾದಾತ್ಮ್ಯಗೊಳ್ಳುವ ಸಾಮರ್ಥ್ಯ ಹೊಂದಿದ್ದರು. ಹೀಗೆ ಅವರೇ ವಿಶ್ವವಾಗಿ ವಿಕಸನಗೊಂಡಾಗ ಅವರೇ ಮಳೆಗರೆಯುವ ಮೋಡವೂ ಸ್ವೀಕರಿಸುವ ಭೂಮಿಯೂ ಆಗಬಲ್ಲವರಾಗಿದ್ದರು. ಬಹುಶಃ ಈ ಕಾರಣದಿಂದಲೇ ಮಳೆ ಸುರಿಯುವಂತೆ ಮಾಡಲು ಅವರಿಂದ ಸಾಧ್ಯವಾಗುತ್ತಿದ್ದಿರಬಹುದು.

ಅಹಂಪ್ರಜ್ಞೆ (ದೇಹದ ಗುರುತಿನದ್ದು) ವಿಕಸನಗೊಂಡು ಸ್ವಯಂಪ್ರಜ್ಞೆಯಾಗಿಯೂ (ಆತ್ಮದ ತಿಳಿವಿನದ್ದು), ಸ್ವಯಂಪ್ರಜ್ಞೆಯು ವಿಕಸಗೊಂಡು ವಿಶ್ವಪ್ರಜ್ಞೆಯಾಗಿಯೂ ಬೆಳೆದಾಗ ವ್ಯಕ್ತಿಯು ಜಗತ್ತಿನ ವಿಸ್ಮಯಗಳನ್ನು ಅರ್ಥ ಮಾಡಿಕೊಳ್ಳಬಲ್ಲವನಾಗುತ್ತಾನೆ.
`ಈ ನೀರು ಎಲ್ಲಿಂದ ಬಂತು?’ `ಈ ಗಾಳಿ ಎಲ್ಲಿಂದ ಬಂತು?’ ಇತ್ಯಾದಿ ಪ್ರಶ್ನೆಗಳಿಗೆ `ಭಗವಂತನಿಂದ’ ಎನ್ನುವ ಉತ್ತರ ಸಾಮಾನ್ಯ. ಈ ಮಾತನ್ನು ಹೇಗೆ ಹೇಳುತ್ತೀರಿ? ಎಂದು ಕೇಳಿದಾಗ `ಇದು ನನ್ನ ನಂಬಿಕೆ. ತಲತಲಾಂತರದಿಂದಲೂ ರೂಢಿಗತ ನಂಬಿಕೆಯಿದು’ ಎನ್ನುವರು. ಈ ನಂಬಿಕೆ `ತಿಳಿವಳಿಕೆ’ಯಾಗುವ ಹಂತವೇ ವಿಶ್ವಪ್ರಜ್ಞಾವಂತಿಕೆ.

(ಮುಂದುವರೆಯುವುದು….)

1 Comment

Leave a Reply