ಪದ್ಮಸೂತ್ರ ಮುದ್ರಿಸಿದ ತೆತ್ಸುಜೆನ್

ತಮಾನಗಳ ಹಿಂದೆ ಬುದ್ಧನ ಪದ್ಮ ಸೂತ್ರ ಚೀನಾ ಲಿಪಿಯಲ್ಲಿ ಮಾತ್ರ (ಭಾರತದ ಹೊರತಾಗಿ) ಲಭ್ಯವಿತ್ತು. ಅದನ್ನು ಜಪಾನಿ ಲಿಪಿಯಲ್ಲೂ ಮುದ್ರಿಸಬೇಕೆಂದು ಝೆನ್ ಸನ್ಯಾಸಿ ತೆತ್ಸುಜೆನ್‍ಗೆ ಬಯಕೆಯಾಯಿತು. ಇದರಿಂದ ತನ್ನ ಜನರು ತಮ್ಮ ಲಿಪಿಯಲ್ಲೇ ಅದನ್ನು ಸುಲಭವಾಗಿ ಓದಬಹುದಲ್ಲ ಎಂಬುದು ಅವನ ಆಲೋಚನೆ.

ದೇಶದುದ್ದಗಲ ಸಂಚರಿಸಿದ ತೆತ್ಸುಜೆನ್ ಹತ್ತು ವರ್ಷಗಳ ಕಾಲ ಸತತವಾಗಿ ವಂತಿಗೆ ಸಂಗ್ರಹಿಸಿದ. ಕೊನೆಗೂ ಮರದ ಅಚ್ಚುಮೊಳೆಗಳನ್ನು ತಯಾರಿಸಲು ಅಗತ್ಯವಿದ್ದಷ್ಟು ಹಣ ಸಂಗ್ರಹವಾಯ್ತು. ಅದನ್ನು ಹಿಡಿದು ಮರಳುತ್ತಿರುವ ಸಮಯದಲ್ಲಿ ರಾಜ್ಯದಲ್ಲಿ ಭೀಕರ ಬರಗಾಲ. ಹೊಟ್ಟೆಗಿಲ್ಲದ ಜನ ಹೆಣಗಳಾಗಿ ಬೀಳುತ್ತಿದ್ದರು. ಸನ್ಯಾಸಿಯ ಮನಕರಗಿತು. ತನ್ನ ಬಳಿ ಇದ್ದ ಹಣದಲ್ಲಿ ಸ್ವಲ್ಪ ಸ್ವಲ್ಪವನ್ನೆ ಎದುರಾದ ಜನರಿಗೆಲ್ಲ ಹಂಚುತ್ತ ಹಂಚುತ್ತ ಬರಿಗೈಯಾದ. ಹತ್ತು ವರ್ಷಗಳ ಶ್ರಮ ಒಂದೇ ದಿನದಲ್ಲಿ ಕರಗಿದರೂ ಬೇಸರವಾಗಲೀ ತಾನು ಕೊಟ್ಟೆ ಎನ್ನುವ ಅಹಂಕಾರವಾಗಲೀ ಅವನಲ್ಲಿ ಮೂಡಲಿಲ್ಲ.

ತೆತ್ಸುಜೆನ್ ಮತ್ತೆ ಹತ್ತು ವರ್ಷಗಳ ಕಾಲ ಹೀಗೇ ಧನ ಸಂಗ್ರಹಕ್ಕೆ ತೊಡಗಿದ. ಮೊದಲಿನಂತೆ ಸಾಕಷ್ಟು ಮೊತ್ತ ಕೈಗೂಡಿತು. ಈ ಬಾರಿ ಊರಿ ನದಿಯ ನೆರೆ ಹಾವಳಿ ಆತನ ಸತ್ವ ಪರೀಕ್ಷಿಸಿತು. ಜನರ ಸಂಕಷ್ಟ ಕಂಡು ತೆತ್ಸುಜೆನ್ ಪುನಃ ತನ್ನಲ್ಲಿದ್ದುದೆಲ್ಲ ಹಂಚಿಬಿಟ್ಟ.
ಮತ್ತೆ ಓಡಾಟ, ಹಣ ಸಂಗ್ರಹ. ಈ ಬಾರಿ ಯಾವ ಸನ್ನಿವೇಶವೂ ಎದುರಾಗಲಿಲ್ಲ. ತೆತ್ಸುಜೆನ್ ತನ್ನ ಕಾರ್ಯದಲ್ಲಿ ತೊಡಗಿಕೊಂಡ. ಜಪಾನೀ ಲಿಪಿಯಲ್ಲಿ ಪದ್ಮಸೂತ್ರವನ್ನು ಅಚ್ಚು ಹಾಕುವ ವ್ಯವಸ್ಥೆ ರೂಪಿಸಿದ.

ತೆತ್ಸುಜೆನ್ ತಯಾರಿಸಿದ ಅಚ್ಚು ಮೊಳೆಗಳು ಇಂದಿಗೂ ಜಪಾನಿನ ಜನರು ಕಾಪಾಡಿಕೊಂಡಿದ್ದಾರೆ. ಝೆನ್ ಸಂತನ ಕೊಡುಗೈ ಖ್ಯಾತಿಯನ್ನು ಆದರ್ಶವಾಗಿ ನೆನೆಯುತ್ತಾರೆ.

Leave a Reply