ನಾವು ಮತ್ಸರವನ್ನಿಟ್ಟುಕೊಂಡು ಗೆಳೆಯರೊಡನೆ ಪಾಸಿಟಿವ್ ಆಗಿ ವರ್ತಿಸಲಾಗುವುದಿಲ್ಲ. ಲೋಭವಿಟ್ಟುಕೊಂಡು ವ್ಯವಹಾರ ನಡೆಸಲಾಗುವುದಿಲ್ಲ. ಮೋಹವಿಟ್ಟುಕೊಂಡು ಸಮಾಜದಲ್ಲಿ ಬೆರೆಯಲಾಗುವುದಿಲ್ಲ. ಆದ್ದರಿಂದ ನಮ್ಮ ಸಾಧ್ಯತೆಯ ಮಟ್ಟದಲ್ಲಿ ಈ ಎಲ್ಲವುಗಳಿಂದ ಹೊರತಾಗಿ ಬದುಕುವ ಪರಿಯೇ ಇಂದಿನ ಸ್ಪಿರಿಚುವಲ್ ಲೈಫ್‍ಸ್ಟೈಲ್ ~ ಚಿತ್ಕಲಾ
ಆಧ್ಯಾತ್ಮಿಕತೆ ಏನೆಲ್ಲವನ್ನು ನೀಡುತ್ತದೆ? ಅದು ಮಕ್ತಿಪಥದಲ್ಲಿ ನಮ್ಮನ್ನು ನಡೆಸುತ್ತದೆ ಅನ್ನೋದು ಸಾಧಕರ ಮಾತು. ಸದ್ಯದ ಜೀವನದಲ್ಲಷ್ಟೆ ನಂಬಿಕೆ ಇದ್ದು, ಸಾವಿನ ಅನಂತರದ ವಿದ್ಯಮಾನಗಳ ಬಗ್ಗೆ ತಲೆ ಕೆಡಿಸಿಕೊಳ್ಳದವರಿಗೆ `ಮುಕ್ತಿ’ ಅಷ್ಟೇನೂ ಸ್ವಾರಸ್ಯಕರ ಸಂಗತಿಯಲ್ಲ. ಹಾಗಾದರೆ ಅಂಥವರಿಗೆ ಆಧ್ಯಾತ್ಮಿಕ ಬದುಕಿನ ಅವಶ್ಯಕತೆ ಇಲ್ಲವೆ? ಖಂಡಿತಾ ಇದೆ. ಇಂದಿನ ಜನಾಂಗ ಮುಕ್ತಿಯ ಬಯಕೆಯಿಂದ ಹೊರತಾದ ಹಾಗೂ ಲೌಕಿಕದ ಬದುಕನ್ನು ಹಗುರ ಮತ್ತು ಆನಂದಪೂರ್ಣವಾಗಿಟ್ಟುಕೊಳ್ಳಲು ಆಧ್ಯಾತ್ಮಿಕ ಜೀವನಶೈಲಿಯನ್ನು ಅನುಸರಿಸತೊಡಗಿದೆ. ಈ ಲೈಫ್‍ಸ್ಟೈಲ್ ಮಾನಸಿಕ ಶಾಂತಿಯನ್ನು ಖಚಿತವಾಗಿ ನೀಡುತ್ತದೆ. ಜೊತೆಗೆ ದೇಹಾರೋಗ್ಯ ಹೆಚ್ಚುವರಿ ಲಾಭ. ವಿಶೇಷವಾಗಿ ನಡು ವಯಸ್ಸಿನವರು ಆಧ್ಯಾತ್ಮಿಕತೆಯನ್ನೊಂದು ಚಿಕಿತ್ಸಾ ವಿಧಾನವಾಗಿ ಪರಿಗಣಿಸತೊಡಗಿದ್ದಾರೆ; ಮತ್ತಿದರ ಪರಿಣಾಮವಾಗಿ ದೇಶದ ತುಂಬೆಲ್ಲ ಅಧ್ಯಾತ್ಮ ತರಬೇತಿ ಕೇಂದ್ರಗಳು ತಲೆಯೆತ್ತತೊಡಗಿವೆ.
ಆಧುನಿಕ ವ್ಯಾಖ್ಯಾನ
ಆಧುನಿಕ ವ್ಯಾಖ್ಯಾನದಂತೆ, ಆಧ್ಯಾತ್ಮಿಕ ಮನೋಭಾವ ಹೊಂದಿರುವುದು ಎಂದರೆ ಸಕಾರಾತ್ಮಕ ಭಾವನೆ ಹೊಂದಿರುವುದು. ಇದು ಎಲ್ಲ ಬಗೆಯನ್ನೂ ಒಳಗೊಳ್ಳುತ್ತದೆ. ಮಾಡುವ ಕೆಲಸ, ಭವಿಷ್ಯದ ಯೋಜನೆ, ಸ್ನೇಹಿತರು, ಕುಟುಂಬ, ಜಗತ್ತು- ಈ ಎಲ್ಲದರ ಬಗ್ಗೆ ಸಕಾರಾತ್ಮಕ ಚಿಂತನೆ ನಡೆಸುವುದು ಎಂದರೆ ಸಹಜವಾಗಿಯೇ ಅರಿಷಡ್ವರ್ಗಗಳಿಂದ ಮುಕ್ತರಾಗುವುದು. ಉದಾಹರಣೆಗೆ ನಾವು ಮತ್ಸರವನ್ನಿಟ್ಟುಕೊಂಡು ಗೆಳೆಯರೊಡನೆ ಪಾಸಿಟಿವ್ ಆಗಿ ವರ್ತಿಸಲಾಗುವುದಿಲ್ಲ. ಲೋಭವಿಟ್ಟುಕೊಂಡು ವ್ಯವಹಾರ ನಡೆಸಲಾಗುವುದಿಲ್ಲ. ಮೋಹವಿಟ್ಟುಕೊಂಡು ಸಮಾಜದಲ್ಲಿ ಬೆರೆಯಲಾಗುವುದಿಲ್ಲ. ಆದ್ದರಿಂದ ನಮ್ಮ ಸಾಧ್ಯತೆಯ ಮಟ್ಟದಲ್ಲಿ ಈ ಎಲ್ಲವುಗಳಿಂದ ಹೊರತಾಗಿ ಬದುಕುವ ಪರಿಯೇ ಇಂದಿನ ಸ್ಪಿರಿಚುವಲ್ ಲೈಫ್‍ಸ್ಟೈಲ್.
ಜೊತೆಗೆ ಆರೋಗ್ಯದ ಮೇಲಿನ ಕಾಳಜಿಯೂ ಸ್ಪಿರಿಚುವಲ್ ಲೈಫ್ ಸ್ಟೈಲ್ ಅಳವಡಿಕೆಗೆ ಒಂದು ಮುಖ್ಯ ಕಾರಣವಾಗಿದೆ. ಅಧ್ಯಾತ್ಮವು ಮಾನಸಿಕ ಶಾಂತಿಯನ್ನು ನೀಡುತ್ತದೆ. ಶಾಂತ ಮನಸ್ಸು ಸದೃಢ ದೇಹಕ್ಕೆ ಪೂರಕವಾಗಿ ವರ್ತಿಸುತ್ತದೆ. ಬೆಂಗಳೂರಿನ ಟೆಕಿ ಪ್ರಶಾಂತ್ ಕೆದಿಲಾಯ, `ಸ್ಪಿರಿಚುವಲ್ ಲೈಫ್ ಸ್ಟೈಲ್ ಅಂದರೆ ದಿನಕ್ಕೆರಡು ಬಾರಿ ಯೋಗ, ಗ್ರೀನ್ ಫುಡ್, ನೋ ಆಲ್ಕೋಹಾಲ್ – ಸ್ಮೋಕ್, ವಾರ ಅಥವಾ ತಿಂಗಳಿಗೊಮ್ಮೆ ಸತ್ಸಂಗ. ಬಾಕಿ ಅಂತ ನಮ್ಮ ಲೈಫ್ ನಮಗೆ ಇಷ್ಟವಾಗುವ ರೀತಿಯಲ್ಲೆ ಇರುತ್ತದೆ. ಈ ಅಭ್ಯಾಸಗಳಿಂದ ಮೆಂಟಲ್ ಅಂಡ್ ಫಿಸಿಕಲ್ ಹೆಲ್ತ್ ಮಾತ್ರವಲ್ಲ, ನಮ್ಮ ವೆಲ್ತ್ ಕೂಡ ಸುಧಾರಿಸುತ್ತದೆ. ಇನ್ನೇನು ಬೇಕು!?’ ಎಂದು ಕೇಳುತ್ತಾರೆ. ಇವರು ಯಾವುದೇ ನಿರ್ದಿಷ್ಟ ಗುರು ಅಥವಾ ಪಂಥವನ್ನು ಅನುಸರಿಸುವುದಿಲ್ಲವಂತೆ.
ಪರಂಪರೆ ಇಲ್ಲದ ಪಂಥ
ಸ್ಪಿರಿಚುವಲ್ ಲೈಫ್‍ಸ್ಟೈಲ್ ಕಮ್ಯುನಿಟಿ ಇರುವುದೇ ಹಾಗೆ. ಇದು ಯಾವ ಪಂಥ ಅಥವಾ ಪರಂಪರೆಗೆ ಆತುಕೊಂಡಿರುವುದಿಲ್ಲ. ಒಳಿತೆಂದು ಕಂಡ ಎಲ್ಲದರ ರುಚಿ ನೋಡುತ್ತದೆ. ಇದಕ್ಕೆ ಧರ್ಮಗಳ ಕಟ್ಟುಪಾಡೂ ಇಲ್ಲ, ದೇಶಗಳ ಗಡಿ ಮಿತಿಯೂ ಇಲ್ಲ. `ಒಳಿತು ಎಲ್ಲ ಕಡೆಯಿಂದಲೂ ಹರಿದು ಬರಲಿ’ ಎಂಬ ವೇದೋಕ್ತಿಯಂತೆ ಜಗತ್ತಿನ ತತ್ತ್ವಜ್ಞಾನಿಗಳು, ದಾರ್ಶನಿಕರು, ಧರ್ಮಗುರುಗಳು, ಧರ್ಮಗ್ರಂಥಗಳು, ಕೊನೆಗೆ ಕಥೆ- ಕಾದಂಬರಿಗಳು, ಸಿನೆಮಾಗಳಲ್ಲೂ ಇವರು ಒಳಿತನ್ನು ಹೆಕ್ಕುತ್ತಾರೆ. ತಮ್ಮೊಳಗೆ ಅಳವಡಿಸಿಕೊಳ್ಳುತ್ತಾರೆ. ಈ ಜನರು ಇತರರಿಗೆ ಸಹಾಯ ಹಸ್ತ ಚಾಚುವಷ್ಟು ಉದಾರಿಗಳಾಗಿರುತ್ತಾರೆ ಎಂದೇನಿಲ್ಲ. ಕನಿಷ್ಠ ಪಕ್ಷ ತಮ್ಮಿಂದ ಯಾರಿಗೂ ತೊಂದರೆ ಉಂಟಾಗಬಾರದು ಎನ್ನುವಷ್ಟು ಕಾಳಜಿಯನ್ನಂತೂ ಹೊಂದಿರುತ್ತಾರೆ.
ಸ್ಪಿರಿಚುವಲ್ ಲೈಫ್‍ಸ್ಟೈಲ್ ಅಳವಡಿಸಿಕೊಂಡವರ ಮುಖ್ಯ ಗುಣ `ತಮ್ಮನ್ನು ತಾವು ಕಂಡುಕೊಳ್ಳಬೇಕು’ ಎನ್ನುವ ತುಡಿತ. ತಮ್ಮ ಜೀವಿತದ ಉದ್ದೇಶವನ್ನು ಕಂಡುಕೊಳ್ಳಲು ಇವರು ಕಾತರರಾಗಿರುತ್ತಾರೆ. ಈ ಪ್ರಕ್ರಿಯೆಯು ವ್ಯಕ್ತಿಯನ್ನು ಹೆಚ್ಚು ಸಂವೇದನಾಶೀಲನನ್ನಾಗಿಸುತ್ತದೆ. ತನ್ನೊಳಗನ್ನು ನೋಡಿಕೊಳ್ಳುವ ಮೂಲಕ ಸಾಧ್ಯವಾದಷ್ಟು ಕೆಡುಕುಗಳಿಂದ ದೂರವಿರಲು, ನಕಾರಾತ್ಮಕ ಭಾವನೆಗಳನ್ನು ಹೊಡೆದಟ್ಟಲು ಸಹಾಯವಾಗುತ್ತದೆ. ಇದಕ್ಕಾಗಿಯೇ ಇಂದು `ವಿಪಸ್ಸನ ಧ್ಯಾನ ಶಿಬಿರ’ಗಳಿಗೆ, ವೀಕೆಂಡ್ ಮೆಡಿಟೇಶನ್ ಕ್ಯಾಂಪ್’ಗಳಿಗೆ ಮುಗಿಬೀಳುವವರ ಸಂಖ್ಯೆ ಬೆಳೆಯುತ್ತಿದೆ.
ತ್ಯಜಿಸುವುದಲ್ಲ, ಒಂದಾಗುವುದು
ಅಧ್ಯಾತ್ಮ ಎಂದರೆ ತ್ಯಜಿಸುವ ಪ್ರಕ್ರಿಯೆಯಲ್ಲ. ಸನ್ಯಾಸವನ್ನು ಅಧ್ಯಾತ್ಮದೊಂದಿಗೆ ತಳಕು ಹಾಕಬಾರದು. ಆಧ್ಯಾತ್ಮಿಕ ಜೀವನ ಶೈಲಿಯು ನಮಗೆ ಪ್ರತಿಯೊಂದನ್ನೂ ಅನುಭವಿಸುವ ಆನಂದ ಒದಗಿಸಿಕೊಡುತ್ತದೆ. ಪ್ರತಿಯೊಂದನ್ನೂ ಪರಿಪೂರ್ಣವಾಗಿ ದಕ್ಕಿಸಿಕೊಳ್ಳುವ ಸಾಮಥ್ರ್ಯ ನೀಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಯಾವುದು ವಸ್ತು ಅಥವಾ ಸಂಗತಿಯನ್ನು ಹೊರನಿಂತು ನೋಡುವ, ಅಂದರೆ ಸಾಕ್ಷೀಭಾವದಿಂದ ಅನುಭವಿಸುವ ಪಾಠ ಕಲಿಸುತ್ತದೆ. ಇದು ಅಂತರ್ಗತವಾದರೆ ನಾವು ಸಂಬಂಧವನ್ನಾಗಲೀ ಸಂಪತ್ತನ್ನಾಗಲೀ ಯಾವುದೇ ಅಭದ್ರತೆ ಇಲ್ಲದಂತೆ ಆತ್ಮಪೂರ್ವಕವಾಗಿ ಅನುಭವಿಸಲು ಸಾಧ್ಯವಾಗುತ್ತದೆ. ಅಧ್ಯಾತ್ಮದಲ್ಲಿ ಸಂಗಾತಿಯು ಆತ್ಮಸಂಗಾತಿಯಾಗುತ್ತಾರೆ. ಸಂಪತ್ತು ದೈವಿಕ ಸಂಪತ್ತಾಗುತ್ತದೆ. ಸಮಾಜದ ಪ್ರತಿಯೊಂದು ಜೀವಿಯೂ ಜಗತ್ತಿನ ಪರಿಪೂರ್ಣತೆಗೆ ತಮ್ಮ ಕೊಡುಗೆ ನೀಡುವ ಅಮೂಲ್ಯ ಅಸ್ತಿತ್ವವಾಗಿ ತೋರುತ್ತದೆ. ಈ ಬಗೆಯ ಜ್ಞಾನವು ನಮ್ಮನ್ನು ಆತಂಕಗಳಿಂದ ದೂರ ಮಾಡಿ ಆತ್ಮಕ್ಕೆ ಸಹಜವಾದ ಆನಂದ ಸ್ಥಿತಿಯಲ್ಲಿ ಇಡುತ್ತದೆ.
ಆಧ್ಯಾತ್ಮಿಕ ಜೀವನ ಶೈಲಿಯೆಂದರೆ ಅಂತರಂಗದ ಪ್ರಯಾಣ (ಇನ್ನರ್ ಜರ್ನಿ) ಅಷ್ಟೆ . ನಮ್ಮೊಳಗಿನ ಹಾಡನ್ನು ಕೇಳಿಸಿಕೊಳ್ಳೋದು. ಆನಂದದಿಂದ, ಯಾವ ಹಿಂಜರಿಕೆಯೂ ಇಲ್ಲದಂತೆ ನರ್ತಿಸೋದು. ಅಕ್ಷರಶಃ ಮಗುವಿನಂತಾಗೋದು. ಚೇತನಾತ್ಮದ ಕಾಳಜಿ ವಹಿಸೋದು. ಆದಿ ಅಂತ್ಯಗಳು ನಿಶ್ಚಿತವಾಗಿರುವ ನಮ್ಮ ಅವಧಿಯ ಮಾಲೆಯಲ್ಲಿ ಮುತ್ತುಗಳಂತೆ ಕಂಗೊಳಿಸೋದಷ್ಟೆ.
ಆಧ್ಯಾತ್ಮಿಕ ಜೀವನ ಶೈಲಿಯೆಂದರೆ, ಮನುಷ್ಯ ಜನ್ಮದ ಮಹತ್ತನ್ನು ಅರಿತು, ಸಾರ್ಥಕ ಬದುಕು ನಡೆಸೋದು.
ವೈಜ್ಞಾನಿಕ ಅಂಶಗಳು
ಅಮೆರಿಕನ್ ಸೆಂಟರ್ ಫಾರ್ ಸೈಂಟಿಫಿಕ್ ಸ್ಟಡೀಸ್ ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ ದೃಢಪಟ್ಟ ಅಂಶಗಳಿವು:
* ನಿಯಮಿತವಾಗಿ ಧ್ಯಾನ ಮಾಡುವವರ ಮಿದುಳಿನಲ್ಲಿ `ಹಿತಾನುಭವ’ದ ಭಾಗವು ಹೆಚ್ಚು ಸಕ್ರಿಯವಾಗಿರುತ್ತದೆ. ಅಂಥವರು ಬಹುತೇಕ ಉತ್ತಮ ಮೂಡ್‍ನಲ್ಲಿರುತ್ತಾರೆ.
* ಹೆಚ್ಚಿನಂಶ ಧರ್ಮಭೀರುಗಳು ನಾಸ್ತಿಕರು ಅಥವಾ ಕಡಿಮೆ ದೈವಭಕ್ತರಿಗಿಂತ ಬಹಳ ಬೇಗ ಚಿಕಿತ್ಸೆಗೆ ಸ್ಪಂದಿಸುತ್ತಾರೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಗುಣಮುಖರಾಗುತ್ತಾರೆ.
* ಆಧ್ಯಾತ್ಮಿಕ ಮನಸ್ಥಿತಿ ಉಳ್ಳವರಲ್ಲಿ ಖಿನ್ನತೆ ಇರುವುದಿಲ್ಲ. ಈ ವರ್ಗದ ಜನರು ಸಾಮಾನ್ಯವಾಗಿ ಭವಿಷ್ಯದ ಬಗ್ಗೆ ಚಿಂತೆ ಮಾಡುವುದಿಲ್ಲ. ಆದ್ದರಿಂದ ಯಾವಾಗಲೂ ಸಕಾರಾತ್ಮಕ ಭಾವನೆಯನ್ನೆ ಹೊಂದಿರುತ್ತಾರೆ. ಇದು ಮಿದುಳು ಹಾಗೂ ಹೃದಯದ ಚಟುವಟಿಕೆಗಳ ಮೇಲೆ ಉತ್ತಮ ಪ್ರಭಾವ ಬೀರುತ್ತದೆ.