ಜುವಾಂಗ್ ತ್ಸೆ ~ ನಾಲ್ಕು ಕಥನ ಕವಿತೆಗಳು

ಅನುವಾದ : ಚಿದಂಬರ ನರೇಂದ್ರ

zen 1

1. ಜುವಾಂಗ್ ತ್ಸೆ ಹೇಳಿದ ಕಥೆ

ಸಂತನೊಬ್ಬ ತನ್ನ ದೋಣಿಯಲ್ಲಿ
ಶಿಷ್ಯನೊಂದಿಗೆ ನದಿ ದಾಟುತ್ತಿದ್ದ.
ದೋಣಿ, ನದಿಯ ನಡುವೆ ಬರುತ್ತಿದ್ದಂತೆಯೇ
ಒಂದು ಖಾಲಿ ದೋಣಿ
ಇವರ ದೋಣಿಗೆ ಡಿಕ್ಕಿ ಹೊಡೆಯಿತು.
ಶಿಷ್ಯನಿಗೆ ಭಾರಿ ಸಿಟ್ಟು ಬಂತು
ಆದರೆ ಯಾರಿಗೆ ಬಯ್ಯುತ್ತಾನೆ? ಸುಮ್ಮನಾದ.
“ಅಕಸ್ಮಾತ್ ದೋಣಿಯಲ್ಲಿ
ಯಾರಾದರೂ ಇದ್ದರೆ, ಏನು ಮಾಡುತ್ತಿದ್ದೆ? “
ಸಂತ, ಶಿಷ್ಯನನ್ನು ಕೇಳಿದ.
“ಬಾಯಿಗೆ ಬಂದಹಾಗೆ ಬಯ್ಯುತ್ತಿದ್ದೆ
ಒಂದು ಸಾರಿಯಲ್ಲ, ಹತ್ತು ಸಾರಿ ಬಯ್ಯುತ್ತಿದ್ದೆ
ನಾಶ ಆಗು ಎಂದು ಶಾಪ ಹಾಕುತ್ತಿದ್ದೆ “
ಶಿಷ್ಯ ಉತ್ತರಿಸಿದ.
“ನೋಡು ಹಾಗಾದರೆ
‘ನಾವು’ ಇಳಿದು, ಖಾಲಿ ದೋಣಿಯಲ್ಲಿ
ಪ್ರಯಾಣ ಮಾಡೋದು ಎಷ್ಟು ಒಳ್ಳೆಯದು.
ಯಾರೂ ಬಯ್ಯೋರೂ ಇಲ್ಲ
ಯಾರೂ ಹೊಡೆಯೋರೂ ಇಲ್ಲ”
ಸಂತ ನಗುತ್ತ ಅಂದಿನ ಪಾಠ ಮುಗಿಸಿದ.

~

2. ಜುವಾಂಗ್-ತ್ಸೆ ಮತ್ತು ಚಿಟ್ಟೆ

ಜುವಾಂಗ್-ತ್ಸೆ ಗೆ ಒಂದು ಕನಸು ಬಿತ್ತು
ಕನಸಲ್ಲಿ ಬಣ್ಣ ಬಣ್ಣದ ಚಿಟ್ಟೆಯಾಗಿದ್ದ.
ಥಟ್ಟನೆ ಎದ್ದು, ನೋಡಿಕೊಂಡಾಗ
ಹಾಸಿಗೆಯಲ್ಲಿ ಅದೇ ಮನುಷ್ಯ ಪ್ರಾಣಿ.
ನಾನು ಚಿಟ್ಟೆಯ ಕನಸು ಕಾಣುತ್ತಿರುವ
ಮನುಷ್ಯ ಪ್ರಾಣಿಯೋ?, ಅಥವಾ
ಮನುಷ್ಯನ ಕನಸು ಕಾಣುತ್ತಿರುವ ಚಿಟ್ಟೆಯೋ?
ಜುವಾಂಗ್-ತ್ಸೆ ಗೆ ಗೊಂದಲ ಶುರುವಾಯ್ತು.

~

3. ಕ್ಷಮೆ

ಮಾರುಕಟ್ಚೆಯಲ್ಲಿ
ಅಪರಿಚಿತನ ಕಾಲು ತುಳಿದರೆ
ಕ್ಷಮೆ ಕೇಳುತ್ತೇವೆ
“ತುಂಬ ಗದ್ದಲದ ಜಾಗ”
ಎಂದು ಸಮಜಾಯಿಷಿ ಹೇಳುತ್ತೇವೆ.
ಮನೆಯಲ್ಲಿ ಅಣ್ಣನ ಕಾಲು ತುಳಿದರೆ
ಕಾಲು ಮುಟ್ಟಿ ಕಣ್ಣಿಗೊತ್ತಿಕೊಳ್ಳುತ್ತೇವೆ
ಅಕಸ್ಮಾತ್ ಅಮ್ಮ
ಮಗುವಿನ ಕಾಲು ತುಳಿದರೆ
ಏನೂ ಹೇಳುವುದಿಲ್ಲ.
ಶುದ್ಧ ಸೌಜನ್ಯದಲ್ಲಿ ಶಿಷ್ಟಾಚಾರವಿಲ್ಲ
ಅತ್ಯುತ್ತಮ ನಡತೆಯಲ್ಲಿ ಕಳವಳವಿಲ್ಲ
ಶ್ರೇಷ್ಠ ಜ್ಞಾನ ಮಿಂಚಿನಂತೆ
ಹದಗೊಂಡ ಪ್ರೇಮಕ್ಕೆ ಪ್ರದರ್ಶನದ ಅವಶ್ಯಕತೆಯಿಲ್ಲ
ಪರಿಪೂರ್ಣ ವಿಶ್ವಾಸದ ಬಾಯಿಯಲ್ಲಿ
ಭರವಸೆಯ ಮಾತಿಲ್ಲ.
~

4. ಶಬ್ದಗಳಿಗೇನು ಕೆಲಸ?

ಮೀನಿನ ಬಲೆಯ ಕೆಲಸ
ಮೀನು ಹಿಡಿಯುವುದು ಮಾತ್ರ
ಮೀನು ಸಿಕ್ಕ ಮೇಲೆ
ಬಲೆಗೆ ಏನು ಕೆಲಸ?
ಶಬ್ದ ದ ಉದ್ದೇಶವೇ
ವಿಷಯ ತಿಳಿಸುವುದು
ವಿಷಯ ತಿಳಿದ ಮೇಲೆ
ಶಬ್ದಗಳಿಗೇನು ಕೆಲಸ?
ಶಬ್ದಗಳನ್ನು ಮರೆತ ಮನುಷ್ಯ
ಎಲ್ಲಿ ಸಿಗುತ್ತಾನೆ?
ಕೊಂಚ ಅವನೊಂದಿಗೆ ಮಾತಾಡಬೇಕಲ್ಲ…

Leave a Reply