ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ
ಒಬ್ಬ ರೈತ ತಾನು ಹುಟ್ಟಿದ ಹಳ್ಳಿ ಬಿಟ್ಟು ಹತ್ತಿರದ ಇನ್ನೊಂದು ಊರಿಗೆ ಗಂಟು ಮೂಟೆ ಕಟ್ಟಿಕೊಂಡು ವಲಸೆ ಹೋದ. ಹೊಸ ಊರು ಹೇಗೋ ಏನೋ ಎಂದು ಚಿಂತೆಗೊಳಗಾದ ಆ ಮನುಷ್ಯ, ಈ ಬಗ್ಗೆ ವಿಚಾರಿಸಲು ಅಲ್ಲೇ ವಾಸವಾಗಿದ್ದ ಝೆನ್ ಮಾಸ್ಟರ್ ಬಳಿ ಹೋದ.
ರೈತ : ಮಾಸ್ಟರ್ ಈ ಊರಿನ ಜನ ಹೇಗೆ? ಈ ಊರು ನನಗೆ ಇಷ್ಟ ಆಗಬಹುದಾ?
ಮಾಸ್ಟರ್ : ನೀನು ಮೊದಲು ಇದ್ದ ಊರಿನಲ್ಲಿ ಜನ ಹೇಗಿದ್ದರು?
ರೈತ : ತುಂಬ ಕೆಟ್ಚ ಜನ ಮಾಸ್ಟರ್, ಹೊಟ್ಟೆ ಕಿಚ್ಚಿನವರು, ಮೋಸಗಾರರು, ಕಳ್ಳರು.
ಮಾಸ್ಟರ್ : ಓಹ್ ಹಾಗಾ? ಇಲ್ಲಿಯೂ ಎಲ್ಲ ಅಂಥವರೆ.
ಕೆಲ ದಿನಗಳ ನಂತರ ಇನ್ನೊಬ್ಬ ರೈತ, ಇನ್ನೊಂದು ಊರಿನಿಂದ ಅದೇ ಊರಿಗೆ ಬಂದು, ಝೆನ್ ಮಾಸ್ಟರ್ ಗೆ ಅದೇ ಪ್ರಶ್ನೆ ಕೇಳಿದ.
ರೈತ : ಮಾಸ್ಟರ್ ಈ ಊರಿನ ಜನ ಹೇಗೆ? ಈ ಊರು ನನಗೆ ಇಷ್ಟ ಆಗಬಹುದಾ?
ಮಾಸ್ಟರ್ : ನೀನು ಮೊದಲು ಇದ್ದ ಊರಿನಲ್ಲಿ ಜನ ಹೇಗಿದ್ದರು?
ರೈತ : ತುಂಬ ಒಳ್ಳೆ ಜನ ಮಾಸ್ಟರ್, ಒಬ್ಬರಿಗೊಬ್ಬರು ಬಹಳ ಸಹಾಯ ಮಾಡುತ್ತಾರೆ, ಸದಾ ತಮ್ಮ ತಮ್ಮ ಕೆಲಸ ಮಾಡುತ್ತ, ಹಾಡುತ್ತ, ಕುಣಿಯುತ್ತ ಖುಷಿಯಾಗಿರ್ತಾರೆ.
ಮಾಸ್ಟರ್ : ಓಹ್ ಹಾಗಾ? ಇಲ್ಲಿಯೂ ಎಲ್ಲ ಅಂಥವರೆ.