ಸ್ಯೂಸ್ ಸಂಕಲ್ಪಿಸಿದಂತೆ ಕಾರ್ಮೋಡ ಕವಿದು ಭಾರೀ ಪ್ರಮಾಣದ ಸಿಡಿಲು ಗುಡುಗು ಶುರುವಾಯಿತು. ಧೋ ಎಂದು ಧಾರಾಕಾರ ಮಳೆ ಸುರಿಯತೊಡಗಿತು. ಮಳೆ ಬೀಳುವ ಹೊಡೆತಕ್ಕೆ ಮನೆಗಳು ಉರುಳಿಬಿದ್ದವು. ಕೆಲವೇ ಗಂಟೆಗಳ ಒಳಗೆ ಇಡಿಯ ಭೂಮಿ ನೀರಿನಿಂದ ತುಂಬಿಹೋಯ್ತು. ಜಲಪ್ರಳಯ ಉಂಟಾಗಿ ಭೂಮಿಯ ಮೇಲಿನ ಜೀವಸಂಕುಲಗಳು ಕೊಚ್ಚಿಹೋದವು. ಒಂಭತ್ತು ಹಗಲು, ಒಂಬತ್ತು ರಾತ್ರಿ ಎಡೆಬಿಡದೆ ಸುರಿದ ಮಳೆಗೆ ಭೂಮಿ ಸಂಪೂರ್ಣ ನಾಶವೇ ಆಗಿಹೋಯಿತು….
ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ
ಒಮ್ಮೆ ಸ್ಯೂಸ್ ಮಹಾದೇವನಿಗೆ ಭೂಲೋಕದಲ್ಲಿ ಮನುಷ್ಯರು ಸತ್ಯವಂತರಾಗಿ ಬಾಳುತ್ತಿದ್ದಾರೆಯೇ ಎಂದು ಪರೀಕ್ಷಿಸುವ ಮನಸಾಯಿತು. ತಡಮಾಡದೆ ಸ್ಯೂಸ್, ಒಂದಿಬ್ಬರು ದೇವತೆಗಳ ಜೊತೆ ವೇಷ ಮರೆಸಿಕೊಂಡು ಭೂಮಿಗೆ ಬಂದೂಬಿಟ್ಟ. ಭೂಮಿಯಲ್ಲಿ ಜನರು ಹದಗೆಟ್ಟು ಹೋಗಿದ್ದರು. ಬಹುತೇಕರಲ್ಲಿ ದೈವಶ್ರದ್ಧೆಯೇ ಇರಲಿಲ್ಲ. ಎಲ್ಲಿ ನೋಡಿದರಲ್ಲಿ ಸ್ವಚ್ಛಾಚಾರ, ಭೋಗ ಜೀವನ, ಮೋಸ, ವಂಚನೆಗಳೇ ತುಂಬಿದ್ದವು.
ತಾನು ಸೃಷ್ಟಿಸಿದ ಭೂಲೋಕದ ಕಥೆ ಹೀಗಾಗಿಹೋಯ್ತಲ್ಲ ಎಂದು ಸ್ಯೂಸ್ ಬೇಸರಗೊಂಡ. ಅದಕ್ಕಿಂತ ಹೆಚ್ಚಾಗಿ ಸಿಟ್ಟಾದ. ಈ ಜನರನ್ನು ಇನ್ನು ಸರಿ ಮಾಡಲು ಸಾಧ್ಯವೇ ಇಲ್ಲ, ಇವರನ್ನೆಲ್ಲ ಸಂಪೂರ್ಣವಾಗಿ ನಾಶಗೊಳಿಸಿ ಹೊಸ ಮಾನವ ಕುಲವನ್ನು ಸೃಷ್ಟಿಸುತ್ತೇನೆ ಎಂದು ನಿಶ್ಚಯಿಸಿದ.
ಅದರಂತೆ ಭೂಮಿಯ ಮನುಷ್ಯಕುಲದ ವಿನಾಶಕ್ಕಾಗಿ ಅಗ್ನಿಪ್ರಳಯವನ್ನು ಉಂಟುಮಾಡಲು ಸಜ್ಜಾದ ಸ್ಯೂಸ್. ಜೊತೆಯಲ್ಲಿದ್ದ ದೇವತೆಗಳು, “ಮಹಾದೇವ, ಭೂಮಿಯಲ್ಲಿ ಪ್ರಳಯಾಂತಕ ಬೆಂಕಿ ಹೊತ್ತಿಕೊಂಡರೆ ಅದರ ಕಾವು ಸ್ವರ್ಗಕ್ಕೂ ತಗಲುವುದು. ದೇವತೆಗಳಿಗೂ ಅದರಿಂದ ತೊಂದರೆಯಾಗುವುದು” ಎಂದು ಅನುನಯಿಸಿದರು. ಸ್ಯೂಸ್ “ಹಾಗಾದರೆ ಜಲಪ್ರಳಯ ಉಂಟುಮಾಡುತ್ತೇನೆ” ಅಂದ.
ಮುಂದಾಗುವುದನ್ನೆಲ್ಲ ಮುಂಚಿತವಾಗಿಯೇ ತಿಳಿಯಬಲ್ಲವನಾಗಿದ್ದ ಪ್ರೊಮಿಥ್ಯೂಸನಿಗೆ ಸ್ಯೂಸ್ ದೇವನ ನಿಶ್ಚಯದ ಸುಳಿವು ಸಿಕ್ಕಿತು. ಶ್ರದ್ಧಾವಂತನೂ ದೈವಭಕ್ತನೂ ಆದ ತನ್ನ ಮಗ ಡ್ಯೂಕಾಲಿಯನ್’ನನ್ನು ಕರೆಸಿಕೊಂಡ. “ನೋಡು ಮಗನೇ! ಸ್ಯೂಸ್ ದೇವನು ಜಲಪ್ರಳಯಕ್ಕೆ ಮುಂದಾಗಿದ್ದಾನೆ. ನೀನು ಆದಷ್ಟು ಬೇಗ ಎಲ್ಲ ಪ್ರಭೇದದ ಗಂಡು – ಹೆಣ್ಣು ಜೋಡಿ ಪ್ರಾಣಿಗಳನ್ನೂ, ಸಾಕಷ್ಟು ಧವಸ ಧಾನ್ಯಗಳನ್ನೂ ಒಂದು ಹಡಗಿನಲ್ಲಿ ತುಂಬಿಕೊಂಡು ಸಜ್ಜಾಗಿರು” ಎಂದು ಸೂಚಿಸಿದ. ಅದರಂತೆ ಡ್ಯೂಕಾಲಿಯನ್ ಹಡಗನ್ನು ನಿರ್ಮಿಸಿ, ತಂದೆ ಹೇಳಿದ ಎಲ್ಲ ವ್ಯವಸ್ಥೆಯನ್ನೂ ಮಾಡಿ, ತನ್ನ ಹೆಂಡತಿ ಪೀರಾಳ ಜೊತೆ ಹಡಗಿನಲ್ಲಿ ಕುಳಿತುಕೊಂಡ.
ಇತ್ತ ಸ್ಯೂಸ್ ಸಂಕಲ್ಪಿಸಿದಂತೆ ಕಾರ್ಮೋಡ ಕವಿದು ಭಾರೀ ಪ್ರಮಾಣದ ಸಿಡಿಲು ಗುಡುಗು ಶುರುವಾಯಿತು. ಧೋ ಎಂದು ಧಾರಾಕಾರ ಮಳೆ ಸುರಿಯತೊಡಗಿತು. ಮಳೆ ಬೀಳುವ ಹೊಡೆತಕ್ಕೆ ಮನೆಗಳು ಉರುಳಿಬಿದ್ದವು. ಕೆಲವೇ ಗಂಟೆಗಳ ಒಳಗೆ ಇಡಿಯ ಭೂಮಿ ನೀರಿನಿಂದ ತುಂಬಿಹೋಯ್ತು. ಜಲಪ್ರಳಯ ಉಂಟಾಗಿ ಭೂಮಿಯ ಮೇಲಿನ ಜೀವಸಂಕುಲಗಳು ಕೊಚ್ಚಿಹೋದವು. ಒಂಭತ್ತು ಹಗಲು, ಒಂಬತ್ತು ರಾತ್ರಿ ಎಡೆಬಿಡದೆ ಸುರಿದ ಮಳೆಗೆ ಭೂಮಿ ಸಂಪೂರ್ಣ ನಾಶವೇ ಆಗಿಹೋಯಿತು. ಕ್ಷೇಮವಾಗಿ ಉಳಿದವರೆಂದರೆ, ಡ್ಯೂಕಾಲಿಯನ್ ಮತ್ತವನ ಹಡಗಿನ ಪರಿವಾರ ಮಾತ್ರ, ಡ್ಯೂಕಾಲಿಯನ್ ದೈವಭಕ್ತನೂ ಸಜ್ಜನನೂ ಆಗಿದ್ದರಿಂದ, ಆತ ಹಡಗಿನಲ್ಲಿರುವುದು ತಿಳಿದಿದ್ದರೂ ಸ್ಯೂಸ್ ದೇವ ಅವನಿಗೆ ಹಾನಿಯುಂಟುಮಾಡಲಿಲ್ಲ.
ಹತ್ತನೇ ದಿನಕ್ಕೆ ಮಳೆ ನಿಂತಿತು. ಮೋಡ ಕರಗಿ ಆಕಾಶ ಶುಭ್ರವಾಯಿತು. ಸೂರ್ಯನೂ ಮುಖ ತೋರಿಸಿದ. ಈ ವೇಳೆಗೆ ಡ್ಯೂಕಾಲಿಯನ್’ನ ಹಡಗು ತೇಲುತ್ತಾ ಬಂದು ಪರ್ನಾಸಸ್ ಬೆಟ್ಟಕ್ಕೆ ಒತ್ತಿಕೊಂಡು ನಿಂತುಬಿಟ್ಟಿತ್ತು. ಆ ಬೆಟ್ಟವೂ ಸಂಪೂರ್ಣ ಮುಳುಗಿ, ಅದರ ನೆತ್ತಿ ಮಾತ್ರ ಮೇಲೆ ಕಾಣುತ್ತಿತ್ತು. ಡ್ಯೂಕಾಲಿಯನ್ ಮತ್ತು ಪೀರಾ ಹಡಗಿನಿಂದ ಇಳಿದು ಆ ಬೆಟ್ಟದ ಮೇಲೆ ನಿಂತರು.
ಕ್ರಮೇಣ ನೀರು ಇಳಿಯುತ್ತಾ ಬಂತು. ವಾರ ಕಳೆಯುವ ವೇಳೆಗೆ ಸಮುದ್ರ ಸರಿದು ತನ್ನ ಸ್ವಸ್ಥಾನದಲ್ಲಿ ನೆಲೆಯಾಯಿತು. ಹಳ್ಳಗಳು ಸಹಜ ಸ್ಥಿತಿಗೆ ಮರಳಿದವು. ನದಿಗಳ ಪ್ರವಾಹ ಇಳಿಯಿತು. ಈಗ ಇಡಿಯ ಭೂಮಿಯಲ್ಲಿರುವುದು ಡ್ಯೂಕಾಲಿಯನ್ ಪರಿವಾರ ಮಾತ್ರ. ಮನುಷ್ಯರೇ ಇಲ್ಲದ ಭೂಮಿಯಲ್ಲಿ ಬದುಕುವುದು ಹೇಗೆಂದು ಗಂಡಹೆಂಡತಿಯರಿಬ್ಬರೂ ಚಿಂತೆಗೆ ಒಳಗಾದರು. ತಮ್ಮ ಮೇಲೆ ಕೃಪೆ ತೋರಿ ಬದುಕಿಸಿದ ಸ್ಯೂಸ್ ದೇವನನ್ನೇ ಕೇಳೋಣವೆಂದು ಮಂದಿರಕ್ಕೆ ತೆರಳಿ, ಟಗರನ್ನು ಬಲಿ ಕೊಟ್ಟು ಪ್ರಾರ್ಥಿಸಿದರು. ಸ್ಯೂಸ್ ದೇವನ ಪರವಾಗಿ ಉತ್ತರಿಸಿದ ಥೆಮಿಸ್ ದೇವತೆಯು, “ತಲೆಯ ಮೇಲೆ ಮುಸುಕು ಹಾಕಿಕೊಂಡು ನಿಮ್ಮ ತಾಯಿಯ ಮೂಳೆಗಳನ್ನು ಬೆನ್ನ ಹಿಂದೆ ಎಸೆಯುತ್ತ ನಡೆಯಿರಿ. ಉಳಿದವನ್ನು ಸ್ಯೂಸ್ ದೇವ ನೋಡಿಕೊಳ್ಳುವನು” ಎಂದಳು.
ತಾಯಿ ಎಂದರೆ ಭೂಮಿ ಎಂದೂ ಮೂಳೆಗಳೆಂದರೆ ಕಲ್ಲುಗಳೆಂದೂ ಡ್ಯೂಕಾಲಿಯನ್ ಗೆ ಗೊತ್ತಾಯಿತು. ಅದರಂತೆ ಅವನೂ ಅವನ ಹೆಂಡತಿಯೂ ತಲೆಗೆ ಮುಸುಕು ಹಾಕಿಕೊಂಡು, ದಾರಿಯುದ್ದಕ್ಕೆ ಸಿಕ್ಕ ಕಲ್ಲುಗಳನ್ನು ಹಿಂದಕ್ಕೆ ಎಸೆಯುತ್ತಾ ಸಾಗಿದರು. ಆ ಕಲ್ಲುಗಳು ನೆಲಕ್ಕೆ ಬಿದ್ದೊಡನೆ ಮೃದುವಾಗಿ, ಮಾನವ ರೂಪ ತಳೆದವು. ಡ್ಯೂಕಾಲಿಯನ್ ಎಸೆದ ಕಲ್ಲುಗಳು ಗಂಡಾಗಿಯೂ ಪೀರಾ ಎಸೆದ ಕಲ್ಲುಗಳು ಹೆಣ್ಣಾಗಿಯೂ ಒಡಮೂಡಿದವು. ಸ್ಯೂಸ್ ದೇವನು ಅವುಗಳಿಗೆ ಜೀವ ತುಂಬಿದನು. ಹೀಗೆ ಭೂಮಿಯಲ್ಲಿ ಮನುಷ್ಯ ಕುಲವು ಪುನಃ ಸೃಷ್ಟಿಯಾಯಿತು.