ಮುಲ್ಲಾ ನಸ್ರುದ್ದೀನ್ ತನ್ನ ಬಡ ಗುಡಿಸಲಿನಲ್ಲಿ ಹೆಂಡತಿಯೊಡನೆ ಖುಷಿಯಿಂದಲೇ ಜೀವನ ನಡೆಸುತ್ತಿದ್ದ. ಅವನ ಕುಟುಂಬದ ಮತ್ತೊಂದು ಸದಸ್ಯನೆಂದರೆ, ಅವನ ಕತ್ತೆ. ಅದು ನಸ್ರುದ್ದೀನನ ಆಪ್ತ ಸ್ನೇಹಿತನೂ ಏಕೈಕ ಚರಾಸ್ತಿಯೂ ಆಗಿತ್ತು.
ಒಂದು ಮಳೆಗಾಲ ನಸ್ರುದ್ದೀನನ ಊರಿನಲ್ಲಿ ಜೋರು ಮಳೆ ಬರಲು ಶುರುವಿಟ್ಟಿತು. ಗುಡುಗು, ಸಿಡಿಲು, ಗಾಳಿ ವಿಪರೀತವಾಗಿತ್ತು. ನಸ್ರುದ್ದೀನ್ ಮಳೆಯ ಆರ್ಭಟ ಕಂಡು ಮನೆಯಲ್ಲಿಯೆ ಕೌದಿ ಹೊದ್ದು ಕುಳಿತುಬಿಟ್ಟ. ಆಗ ಮುಸ್ಸಂಜೆಯಾಗತೊಡಗಿತ್ತು.
ಗುಡಿಸಲಿನ ಒಳಗೆ ಚಿಮಣಿ ಬುಡ್ಡಿ ಹಚ್ಚಿಕೊಂಡು ಗಂಡ ಹೆಂಡತಿ ಹಾಗೇ ನೆಲದ ಮೇಲೆ ಉರುಳಿಕೊಂಡು ಮಾತಾಡುತ್ತಾ ಇದ್ದಾಗ ಬಾಗಿಲು ಬಡಿಯುವ ಸದ್ದು ಕೇಳಿಸಿತು.
“ಹೊರಗೆ ವಿಪರೀತ ಮಳೆ. ಯಾರೋ ದಾರಿಹೋಕ ಆಶ್ರಯಕ್ಕಾಗಿ ಬಾಗಿಲು ಬಡಿಯುತ್ತಿರಬೇಕು. ತೆಗಿ” ಅಂದ ನಸ್ರುದ್ದೀನ್.
“ನಮಗೇ ನೆಟ್ಟಗೆ ಕಾಲು ಚಾಚಿ ಮಲಗಲು ಈ ಮನೆಯಲ್ಲಿ ಜಾಗವಿಲ್ಲ. ಮತ್ತೊಬ್ಬರನ್ನು ಒಳಗೆ ಕರೆದರೆ ಕುಳಿತೇ ಕಾಲ ಕಳೆಯಬೇಕಾಗುತ್ತದೆ ಅಷ್ಟೆ” ಎಂದು ಸಿಡಿಮಿಡಿ ಮಾಡಿದಳು ನಸ್ರುದ್ದೀನನ ಹೆಂಡತಿ.
ಆದರೆ ನಸ್ರುದ್ದೀನ್ ಜಗ್ಗಲಿಲ್ಲ. ಹೆಂಡತಿ ಬಾಗಿಲು ತೆಗೆಯುವಂತೆ ಮನವೊಲಿಸಿದ. ತೆಗೆದ ಕೂಡಲೇ ಒಬ್ಬ ನಡುವಯಸ್ಕ ನಡುಗುತ್ತಾ ಒಳಗೆ ಬಂದು “ಈ ರಾತ್ರಿ ನನಗೆ ಇಲ್ಲಿ ತಂಗಲು ಜಾಗ ಕೊಡ್ತೀರಾ?” ಎಂದು ಕೇಳಿದ. ನಸ್ರುದ್ದೀನ್ ಆಗಲಿ ಎಂದು ತಲೆಯಾಡಿಸಿದ.
ಈಗ ಮೂವರೂ ಮಾತಾಡುತ್ತ ಕುಳಿತರು. ಕಾಲು ಚಾಚಿ ಮಲಗಲಿಕ್ಕೆ ಜಾಗ ಸಾಕಾಗದೆ ಇರುವುದರಿಂದ ಅವರು ಬೇರೇನೂ ಮಾಡುವಂತೆಯೂ ಇರಲಿಲ್ಲ. ನಿಮಿಷಗಳು ಉರುಳುತ್ತಾ ಮೂವರಿಗೂ ಅದು ಹೊಂದಾಣಿಕೆಯಾಗುತ್ತಾ ಸಾಗಿತು.
ರಾತ್ರಿಯಾಯಿತು. ಮಳೆ ನಿಂತಿಲ್ಲ. ಮತ್ತೆ ಬಾಗಿಲು ಬಡಿಯುವ ಸದ್ದು! ಬಾಗಿಲ ಬಳಿಯೇ ಕುಳಿತಿದ್ದ ಆಗಂತುಕನನ್ನು ಕುರಿತು ನಸ್ರುದ್ದೀನದ ಬಾಗಿಲು ತೆರೆಯುವಂತೆ ಹೇಳಿದ. ಅದಕ್ಕೆ ಆತ, “ನಮಗೇ ಇಲ್ಲಿ ಸರಿಯಾಗಿ ಕೂರಲು ಜಾಗವಿಲ್ಲ. ಮತ್ತೊಬ್ಬರನ್ನು ಕರೆದುಕೊಂಡರೆ ಹೇಗೆ ಸಂಭಾಳಿಸುವುದು?” ಎಂದು ಅಸಹನೆ ತೋರಿದ. ಅದಕ್ಕೆ ನಸರುದ್ದೀನ್, “ನೀನು ಬಾಗಿಲು ಬಡಿದಾಗ ನನ್ನ ಹೆಂಡತಿ ಇವೇ ಮಾತುಗಳನ್ನು ಹೇಳಿದ್ದಳು. ನಾನು ಬಾಗಿಲು ತೆರೆಸದೆ ಹೋಗಿದ್ದರೆ ನೀನು ಮಳೆಯಲ್ಲಿ ನೆಗೆದುಬೀಳುತ್ತಿದ್ದೆ; ಅಥವಾ ಯಾವುದಾದರೂ ಕಾಡುಪ್ರಾಣಿಯ ಆಹಾರವಾಗಿರುತ್ತಿದ್ದೆ” ಎಂದ. ಆಗಂತುಕ ಅನಿವಾರ್ಯವಾಗಿ ಬಾಗಿಲು ತೆರೆದ.
ಈಗ ಮನೆಯಲ್ಲಿ ನಸ್ರುದ್ದೀನ್, ಅವನ ಹೆಂಡತಿ, ಇಬ್ಬರು ಆಗಂತುಕರು – ಒಟ್ಟು ನಾಲ್ಕುಜನರಾದರೂ. ಎಲ್ಲರೂ ಪರಸ್ಪರ ಮೈಯೊತ್ತಿಕೊಂಡು ಕುಳಿತು ಮಾತಿನಲ್ಲಿ ಸಮಯ ದೂಡಲಾರಂಭಿಸಿದರು.
ಇನ್ನೇನು ನಡುರಾತ್ರಿ… ಮತ್ತೆ ಬಾಗಿಲು ಸದ್ದಾಯಿತು. ಆದರೆ ಇದು ಮನುಷ್ಯರು ಬಡಿಯುವ ಸದ್ದಲ್ಲ, ಯಾರೋ ತಲೆಯನ್ನು ಬಾಗಿಲಿಗೆ ತಿಕ್ಕುವ ಸದ್ದು. ನಸ್ರುದ್ದೀನನಿಗೆ ತನ್ನ ಕತ್ತೆ ಬಂದಿದೆಯೆಂದು ಅರಿವಾಯಿತು. ಹೊಸ ಆಗಂತುಕನನ್ನು ಕುರಿತು ಬಾಗಿಲು ತೆರೆಯುವಂತೆ ಹೇಳಿದ. ಅದಕ್ಕವನು, “ನಿನ್ನ ಕತ್ತೆಯನ್ನೂ ಒಳಗೆ ಬಿಟ್ಟುಕೊಂಡರೆ ನಾವೆಲ್ಲರೂ ನಿಂತುಕೊಂಡೇ ರಾತ್ರಿ ಕಳೆಯಬೇಕಾಗುತ್ತದೆ ಅಷ್ಟೆ” ಎಂದು ರೇಗಿದ.
ನಸ್ರುದ್ದೀನ್ ಶಾಂತವಾಗಿ, “ನೀನು ನಿಂತಿರುವ ಈ ಮನೆ ನಾನು ಮತ್ತು ನನ್ನ ಕತ್ತೆ ದುಡಿದು ಕಟ್ಟಿಸಿದ್ದು. ಆದ್ದರಿಂದ ನನಗೆ ನನ್ನ ಕತ್ತೆಯ ಯೋಗಕ್ಷೇಮ ಮುಖ್ಯ. ಇದ್ದುದರಲ್ಲೇ ಜಾಗ ಹೊಂದಿಸಿಕೊಳ್ಳೋಣ. ಬಡವರ ಮನೆಯಲ್ಲಿ ಎಲ್ಲರಿಗೂ ಜಾಗವಿರುತ್ತದೆ.” ಅಂದ.
ಬಾಗಿಲು ತೆಗೆದಾಗ ಕತ್ತೆ ಒಳಗೆ ಬಂತು. ಅದನ್ನು ಮಧ್ಯ ನಿಲ್ಲಿಸಿ, ಅದರ ಸುತ್ತ ಎಲ್ಲರೂ ನಿಲ್ಲೋಣ ಎಂದು ನಸ್ರುದ್ದೀನ್ ಸೂಚಿಸಿದ. ಹಾಗೆಯೇ ಎಲ್ಲರೂ ನಿಂತುಕೊಂಡರು. ಕತ್ತೆಗೂ ಇದರಿಂದ ಖುಷಿಯಾಯಿತು.
ಮಾತಿನಲ್ಲೇ ಆ ರಾತ್ರಿ ಮುಗಿದು ಬೆಳಕಾಯಿತು. ಮಳೆ ಸಂಪೂರ್ಣ ನಿಂತು ಹೊಸ ಬೆಳಕು ಹರಿದಿತ್ತು. ನಸ್ರುದ್ದೀನನ ಮನೆಯಲ್ಲಿ ರಾತ್ರಿ ಕಳೆದಿದ್ದ ಎಲ್ಲರ ಮುಖದಲ್ಲೂ ಸಂತಸವಿತ್ತು. ನಿಂತುಕೊಂಡೇ ರಾತ್ರಿ ಕಳೆದಿದ್ದರೂ ಯಾರ ಮುಖದಲ್ಲೂ ಆಯಾಸವಿರಲಿಲ್ಲ.
“ನಾನು ಹೇಳಿರಲಿಲ್ಲವೆ? ಜಾಗ ತಾನೇ ತಾನಾಗಿ ಸಾಕಾಗುತ್ತದೆ ಅಂತ? ಬಡವರ ಮನೆಯಲ್ಲಿ ಎಲ್ಲರಿಗೂ ಜಾಗವಿರುತ್ತದೆ” ಎಂದು ನಸ್ರುದ್ದೀನ್ ಮತ್ತೊಮ್ಮೆ ಹೇಳಿ ಆಗಂತುಕರನ್ನು ಅಪ್ಪಿಕೊಂಡು ಬೀಳ್ಕೊಟ್ಟ.