ಅಧ್ಯಾತ್ಮ ಡೈರಿ : ಕಾಯಕವನ್ನು ಸಿಹಿ ತಿನಿಸಿನಷ್ಟೇ ಆನಂದಿಸಿ…

ಕಾಯಕ ಒಂದು ಅದ್ಭುತ ಪ್ರಕ್ರಿಯೆ. ನಮ್ಮ ನಮ್ಮ ಕೆಲಸವನ್ನು ನಾವು ಕಾಯಾ ಮನಸಾ ಮಾಡಬೇಕು. ನಮ್ಮ ದೇಹದ ಪ್ರತಿ ಕಣವನ್ನೂ ನಾವು ಮಾಡುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಒಂದೊಳ್ಳೆ ಸಿಹಿ ತಿನಿಸನ್ನು ತಿನ್ನುವಾಗ ನಮ್ಮ ಇಡಿಯ ಅಸ್ತಿತ್ವವೇ ಅದರ ಆಸ್ವಾದನೆಯಲ್ಲಿ ತೊಡಗಿಕೊಳ್ಳುವಂತೆ ಕೆಲಸದಲ್ಲೂ ತೊಡಗಿಕೊಳ್ಳಬೇಕು. ಆಗ ಸಹಜವಾಗಿ ನಮ್ಮ ಕೆಲಸದ ಮೇಲೆ ನಮಗೆ ಪ್ರೀತಿ ಮೂಡುವುದು ~ ಅಲಾವಿಕಾ

‘ನಾನು ಹಗಲಿಂದ ಸಂಜೆವರೆಗೆ ದುಡೀತೀನಿ ಗೊತ್ತಾ? ಯಾರೂ ಇಲ್ಲಿ ನನ್ನ ಕೇಳೋರಿಲ್ಲ!’ ನಿಜ ಹೇಳಿ. ಒಂದಲ್ಲ ಒಂದು ಸಲವಾದರೂ ನೀವು ಹೀಗೆ ಗೊಣಗಾಡಿದ್ದಿಲ್ಲವೆ?
ಹೀಗೆ ಗೊಣಗಾಡುವ ಮೊದಲು ನಾವು ಯೋಚಿಸಬೇಕಾದ ವಿಷಯವೊಂದಿದೆ. ನಾವು ದುಡಿಮೆ ಮಾಡುವುದು ನಮ್ಮ ಸಮಾಧಾನಕ್ಕಾಗಿ, ನಮ್ಮ ಹೊಟ್ಟೆಪಾಡಿಗಾಗಿ ಅತವಾ ನಮ್ಮ ಸಾಧನೆಗಾಗಿ. ಮತ್ತೊಬ್ಬರು ಅದನ್ನು ಗಮನಿಸಬೇಕೆಂದು ನಾವು ಯಾಕೆ ಬಯಸಬೇಕು?

`ನೀವು ಮಾಡುವ ಕೆಲಸವನ್ನು ಪ್ರೀತಿಸಿ. ಆಗ ನಿಮಗೆ ಕೆಲಸ ಮಾಡುತ್ತಿರುವಂತೆಯೆ ಅನ್ನಿಸುವುದಿಲ್ಲ. ಅದರಲ್ಲಿ ಒಂದು ಬಗೆಯ ಉನ್ಮಾದವನ್ನು, ತೃಪ್ತಿಯನ್ನು ಕಾಣತೊಡಗುತ್ತೀರಿ’ ಅನ್ನುತ್ತಾರೆ ಸಾಧನೆಯ ಹಾದಿಯಲ್ಲಿ ನಡೆದವರು. ನಾವು ಮಾಡುವ ಕೆಲಸ ನಮಗೆ ಅಪ್ಯಾಯಮಾನವಾಗಬೇಕು. ಅದನ್ನು ಮಾಡುವ ಅವಕಾಶ ಸಿಕ್ಕಿದೆಯೆಂದು ಸಂತಸಪಡಬೇಕು. ಆಗ ಮಾತ್ರ ನಮಗೆ ತೃಪ್ತಿ ದೊರಕಲು ಸಾಧ್ಯ. ಇದಕ್ಕೆ ‘ಕಾಯಕ’ವೆಂಬ ಅಷ್ಟೇ ಸಿಹಿಯಾದ ಪದವೂ ಇದೆ. ಕಾಯಕ ನಡೆಸುವುದು ಕೇವಲ ಹಣ ಗಳಿಕೆಯಷ್ಟೇ ಅಲ್ಲ, ಅದು ನಮ್ಮ ಬದುಕಿನ ಬಹುಮುಖ್ಯ ಭಾಗವೂ ಆಗಿರುವುದು.  

ಕಾಯಕ ಒಂದು ಅದ್ಭುತ ಪ್ರಕ್ರಿಯೆ. ನಮ್ಮ ನಮ್ಮ ಕೆಲಸವನ್ನು ನಾವು ಕಾಯಾ ಮನಸಾ ಮಾಡಬೇಕು. ನಮ್ಮ ದೇಹದ ಪ್ರತಿ ಕಣವನ್ನೂ ನಾವು ಮಾಡುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಒಂದೊಳ್ಳೆ ಸಿಹಿ ತಿನಿಸನ್ನು ತಿನ್ನುವಾಗ ನಮ್ಮ ಇಡಿಯ ಅಸ್ತಿತ್ವವೇ ಅದರ ಆಸ್ವಾದನೆಯಲ್ಲಿ ತೊಡಗಿಕೊಳ್ಳುವಂತೆ ಕೆಲಸದಲ್ಲೂ ತೊಡಗಿಕೊಳ್ಳಬೇಕು. ಆಗ ಸಹಜವಾಗಿ ನಮ್ಮ ಕೆಲಸದ ಮೇಲೆ ನಮಗೆ ಪ್ರೀತಿ ಮೂಡುವುದು. 
ನಮ್ಮಲ್ಲಿ ಬಹಳಷ್ಟು ಜನ ನಾವು ಮಾಡುವ ಕೆಲಸವನ್ನು `ಅನಿವಾರ್ಯ ಕರ್ಮ’ ಎಂದು ಭಾವಿಸುತ್ತೇವೆ. `ಜೀವನ ಸಾಗಿಸಬೇಕಲ್ಲ, ಬೇರೆ ದಾರಿಗಾಣದೆ ಇದನ್ನು ಮಾಡ್ತಿದ್ದೀನಿ’ ಎಂದು ಹೇಳುವವರೇ ಬಹಳಷ್ಟು. ಈ ಹಳಹಳಿಕೆಯಲ್ಲಿಯೇ ಅದರ ಉತ್ತರವೂ ಇದೆ ಎನ್ನುವುದನ್ನು ನಾವು ಗಮನಿಸಬೇಕು. ಜೀವನಯಾಪನೆಗಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಈ ಕೆಲಸ ನಮ್ಮ ಬದುಕನ್ನು ಕಟ್ಟಿಕೊಡುತ್ತಿದೆ. ನಮ್ಮ ಬದುಕನ್ನು ಸಹ್ಯಗೊಳಿಸಿದೆ. ಸ್ವಾವಲಂಬಿಗಳನ್ನಾಗಿ ಮಾಡಿದೆ. ಇಂತಹಾ ದುಡಿಮೆಯ ಅವಕಾಶವನ್ನು ಪ್ರೀತಿಸಲು ನಮಗೆ ಮತ್ತೆ ಬೇರೆ ಕಾರಣಗಳಾದರೂ ಏಕೆ ಬೇಕು!?

ನಾವು ಊಟ ಮಾಡುವಾಗ ಮೊದಲ ತುತ್ತು ತಿನ್ನುವ ಮುನ್ನ ಅದನ್ನು ದಯಪಾಲಿಸಿದ ಭಗವಂತನನ್ನು ನೆನೆದು ವಂದಿಸುತ್ತೇವೆ. ಈ ಅನ್ನವನ್ನು ಭಗವಂತ ನಮ್ಮ ಖಾತೆಗೆ ಜಮಾ ಮಾಡಿರುತ್ತಾನೆ. ಆದರೆ ಅದನ್ನು ನಮ್ಮದಾಗಿಸಿಕೊಳ್ಳಲು ನಾವು ಸೂಕ್ತ ಪ್ರಮಾಣ ಪತ್ರವನ್ನು ಹಾಜರು ಪಡಿಸಬೇಕು. ಆ ಪ್ರಾಮಾಣ್ಯವೇ ನಮ್ಮ ಉದ್ಯೋಗ ಪತ್ರ. ನಾವು ದುಡಿದರೆ, ನಾವು ತಿನ್ನಬಲ್ಲೆವು. ನಾವು ರುಚಿರುಚಿಯಾಗಿ ಮಾಡಿಕೊಂಡು ತಿನ್ನುವ ಆಹಾರದ ಪ್ರತಿ ಕಣವೂ ನಮ್ಮ ದುಡಿಮೆಯ ಪ್ರತಿಫಲವೇ ಎಂಬುದನ್ನು ನೆನಪಿಟ್ಟುಕೊಂಡಾಗ ನಾವು ಮಾಡುವ ಕೆಲಸದ ಬಗ್ಗೆ ಜಿಗುಪ್ಸೆಯಾಗಲೀ ಉದಾಸೀನವಾಗಲೀ ಉಂಟಾಗದು. ಇಂತಹಾ ಕೃತಜ್ಞತೆ ಸಾಧ್ಯವಾದಾಗ ಮಾತ್ರ ನಾವು ಉನ್ನತ ಹಂತಕ್ಕೆ ಏರಬಲ್ಲೆವು.

ಇಷ್ಟಕ್ಕೂ ನಾವು ಕೆಲಸ ಮಾಡುವುದು ನಮ್ಮದೇ ಸವಲತ್ತುಗಳಿಗಾಗಿ. ಹೀಗಿರುವಾಗ ಇನ್ಯಾರೋ ನಮ್ಮ ಕೆಲಸವನ್ನು ಗುರುತಿಸಬೇಕು, ಹೊಗಳಬೇಕು ಎಂದು ಬಯಸುವುದೆಷ್ಟು ಸರಿ? ನಮ್ಮ ಸಂತೋಷಕ್ಕೆ, ತೃಪ್ತಿಗೆ, ಜೀವನ ನಡೆಸಲಿಕ್ಕೆ ನಾವು ದುಡಿಯುತ್ತೇವೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳುವ `ಕರ್ಮ ಮಾಡುವುದಷ್ಟೆ ನಿನ್ನ ಕೆಲಸ, ಅದರ ಫಲಾಫಲಗಳ ಚಿಂತೆ ಬಿಡು’ ಎನ್ನುವ ಮಾತು ಅನ್ವಯಿಸಿಕೊಳ್ಳಬೇಕಾದುದು ಇಲ್ಲಿ. ಸಂಬಳ ಅಥವಾ ಗಳಿಕೆ ಹಣವೂ ಕೆಲಸದ ಒಂದು ಭಾಗವೇ. ಅದು ಫಲದ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಜನ ಮೆಚ್ಚುಗೆ, ತಿರಸ್ಕಾರಗಳು ಫಲಾಫಲದ ವ್ಯಾಪ್ತಿಗೆ ಸೇರುವಂಥವು. ನಾವು ಕೆಲಸ ಮಾಡುವುದರತ್ತ ಮಾತ್ರ ಗಮನವಿಟ್ಟು, ಉಳಿದೆಲ್ಲ ಸಂಗತಿಗಳ ಬಗ್ಗೆ ನಿರ್ಲಿಪ್ತತೆಯನ್ನು ತಾಳಬೇಕು. ಕೆಲಸ ಮಾಡುವುದರ ಮೂಲಕ ನಮ್ಮ ಜೀವನ ನಿರ್ವಹಣೆಯ ಉದ್ದೇಶವಂತೂ ನೆರವೇರುತ್ತಿದೆ. ಉಳಿದೆಲ್ಲವೂ ನಮ್ಮ ಯೋಗಾಯೋಗಗಳಿಗೆ ತಕ್ಕ ಹಾಗೆ ತನ್ನಿಂತಾನೆ ಒದಗಿಬರುತ್ತವೆ. ಇದನ್ನು ಮನದಟ್ಟು ಮಾಡಿಕೊಂಡರೆ ಅಸಮಾಧಾನದಿಂದ ದುಃಖಕ್ಕೀಡಾಗುವುದು ತಪ್ಪುತ್ತದೆ.

ಇತ್ತೀಚಿನ ದಿನಗಳಲ್ಲಿ ಬಹಳವಾಗಿ ಕೇಳಿಬರುತ್ತಿರುವ ದೂರು ಜಾಬ್ ಸ್ಯಾಟಿಸ್ಫ್ಯಾಕ್ಷನ್ನದ್ದು. ಇಂದಿನ ತಲೆಮಾರು ಈ ಸಮಸ್ಯೆಯನ್ನು ತೀವ್ರವಾಗಿ ಎದುರಿಸುತ್ತಿದೆ. ದುಡಿಮೆಯ ಅನಿವಾರ್ಯವು ತಮ್ಮ ಅಭಿರುಚಿಯದ್ದಾಗಲೀ ಶೈಕ್ಷಣಿಕ ಅರ್ಹತೆಗಾಗಲೀ ತಕ್ಕದ್ದಲ್ಲದ ಕೆಲಸಗಳಿಗೆ ಈ ಪೀಳಿಗೆಯನ್ನು ಹಚ್ಚುತ್ತಿದೆ. ಆದ್ದರಿಂದ ಸಹಜವಾಗಿಯೇ ಈ ಪೀಳಿಗೆ ಸ್ವತಃ ಗುರುತಿಸಿಕೊಳ್ಳಲಾಗದೆ ಫ್ರಸ್ಟ್ರೇಷನ್ನಿಂದ ಬಳಲುತ್ತಿದೆ. ಆದರೆ ಈ ಸ್ಥಿತಿಗೆ ಅನುಕಂಪ ತೋರಿಸುವುದು ಸರಿಯಲ್ಲ. `ನಾವು ಬಯಸಿದ್ದು ಸಿಗದೆ ಹೋದಾಗ ನಮಗೆ ಸಿಗುವುದನ್ನೇ ಇಷ್ಟಪಡಲು ತೊಡಗಬೇಕು.’ ಎನ್ನುವ ಮಾತಿದೆಯಲ್ಲ? ಅದನ್ನು ಅನುಸರಿಸಬೇಕು. ಅದೇ ಬುದ್ಧಿವಂತಿಕೆ. ಕಾಯಕ ಶ್ರದ್ಧೆ ಬೆಳೆಸಿಕೊಂಡಾಗ ಈ ಎಲ್ಲ ಅಸಮಾಧಾನಗಳೂ ಇಲ್ಲವಾಗುತ್ತವೆ.

Leave a Reply