Rumor ಎಂಬ ಸುದ್ದಿ ದೇವತೆ: ಗ್ರೀಕ್ ಪುರಾಣ ಕಥೆಗಳು ~ 13

ಗಾಳಿಸುದ್ದಿಯನ್ನು ‘ರೂಮರ್’ ಅಂತಲೇ ಕರೆದು ಯಾಕೆ ಗೊತ್ತೆ? ಅದರ ಹಿಂದೊಂದು ಗ್ರೀಕ್ ಪುರಾಣ ಕಥೆಯಿದೆ!

fama

ರೂಮರ್, ಭೂದೇವಿ ಗೈಯಾ ಮತ್ತು ಸ್ವರ್ಗದ ದೇವತೆ ಒರನೋಸರ ಕಿರಿಯ ಮಗಳು. ಇವಳಿಗೆ ಫೆಮೆ, ಫಮಾ ಎಂಬ ಹೆಸರುಗಳೂ ಇದ್ದವು. ರೂಮರ್ ಮಹಾನ್ ಮಾತಿನ ಮಲ್ಲಿ. ಅವಳ ಮಾತಿನ ಚಟ ಎಷ್ಟೆಂದರೆ, ಯಾವಾಗಲೂ ಅಲ್ಲಿಯದನ್ನು ಇಲ್ಲಿಗೆ, ಇಲ್ಲಿಯದನ್ನು ಅಲ್ಲಿಗೆ ಹೇಳುತ್ತ ಇರುತ್ತಿದ್ದಳು. ಅವಳ ಈ ವ್ಯಸನವನ್ನು ಸರಿದಾರಿಯಲ್ಲಿ ನಡೆಸಲು ಅವಳಿಗೆ ಸ್ಯೂಸ್ ಮಹಾದೇವನು ಸುದ್ದಿ ದೇವತೆಯ ಸ್ಥಾನವನ್ನು ನೀಡಿದನು.

ರೂಮರ್ ಗೆ ಮೈತುಂಬ ರೆಕ್ಕೆಗಳು. ಒತ್ತೊತ್ತಾಗಿ, ದಟ್ಟವಾಗಿದ್ದ ಪ್ರತಿ ರೆಕ್ಕೆಯ ಕೆಳಗೂ ಒಂದೊಂದು ಕಣ್ಣು, ಬಾಯಿ ಮತ್ತು ಕಿವಿಗಳಿದ್ದವು. ರೂಮರ್ ರೆಕ್ಕೆಯಗಲಿಸಿ ಹಾರಾಡುತ್ತಾ ಇರುತ್ತಿದ್ದಳು. ಮೈತುಂಬ ಹೊತ್ತಿದ್ದ ಕಣ್ಣುಗಳಿಂದ ಘಟನೆಗಳನ್ನು ನೋಡುತ್ತಿದ್ದಳು. ಎಲ್ಲಾ ಕಿವಿಗಳಿಂದ ಪ್ರತಿಯೊಬ್ಬರ ಮಾತುಗಳನ್ನೂ ಕೇಳಿಸಿಕೊಳ್ಳುತ್ತಿದ್ದಳು. ಮತ್ತು ತನ್ನ ನೂರು ಸಾವಿರ ಬಾಯಿಗಳಿಂದ ಅವನ್ನು ಊರು ತುಂಬ ಹರಡುತ್ತಿದ್ದಳು.

ಕೆಲವು ಸಲ ರೂಮರಳಿಗೆ ಸುದ್ದಿ ಹರಡಲು ಅಂಥಾ ವಿಷಯವೇನೂ ಸಿಗುತ್ತಿರಲಿಲ್ಲ. ಆದರೆ ಅವಳಿಗೆ ಮಾತನಾಡುವುದು ಒಂದು ಚಟವಾಗಿಬಿಟ್ಟಿದ್ದರಿಂದ ಯಾರ ಮೇಲಾದರೂ ಏನಾದರೊಂದು ಕಥೆ ಹೆಣೆದು ಗಾಳಿಸುದ್ದಿ ಹರಡುತ್ತ ಹಾರಾಡುತ್ತಿದ್ದಳು.

ರೂಮರಳ ಈ ಸುದ್ದಿ ಬಿತ್ತುವ ಚಟದಿಂದಾಗಿ ಎಷ್ಟೋ ಪ್ರಣಯಪ್ರಕರಣಗಳು ಬಹಿರಂಗಗೊಂಡು ಫಜೀತಿ ಉಂಟಾಗುತ್ತಿತ್ತು. ಇವಳ ಗಾಳಿ ಸುದ್ದಿಯಿಂದಾಗಿ ಸಂಬಂಧಗಳು ಒಡೆದುಹೋಗುತ್ತಿದ್ದುದೂ ಉಂಟು. ರೂಮರ್ ಇಂಥಾ ಅದೆಷ್ಟೋ ಚೇಷ್ಟೆಗಳನ್ನು ಮಾಡಿದ್ದರೂ ದೇವತೆಗಳು ಅವಳನ್ನು ಕ್ಷಮಿಸಿಬಿಡುತ್ತಿದ್ದರು. ಇವಳು ಸ್ಯೂಸ್ ಮಹಾದೇವನ ಖಾಸಗಿ ಸುದ್ದಿ ಸಂವಾಹಕಿಯಾಗಿದ್ದುದೇ ಅದಕ್ಕೆ ಕಾರಣ. ಸ್ಯೂಸ್ ದೇವನೂ ರೂಮರಳ ಗಾಳಿಸುದ್ದಿಯನ್ನು ತಮಾಷೆಯಾಗಿ ಆನಂದಿಸುತ್ತಿದ್ದ. 

ಮುಂದೆ ರೂಮರಳ ಗಾಳಿಸುದ್ದಿ ಬಿತ್ತುವ ವ್ಯಸನವೇ ಅವಳ ಗುರುತಾಗಿಹೋಯ್ತು.

Leave a Reply