ಮುಲ್ಲಾ ನಸ್ರುದ್ದೀನ್ ಯಾವತ್ತಿನಂತೆ ತನ್ನ ಕತ್ತೆಯನ್ನೇರಿ ಎಲ್ಲಿಗೋ ಹೋಗುತ್ತಿದ್ದ. ದಾರಿಯಲ್ಲಿ ಹಾಲು ಮಾರುವಾತ ಎದುರಾದ. ಆತ ಯಾವುದೋ ಚಿಂತೆಯಲ್ಲಿದ್ದ. ಆತ ನಸ್ರುದ್ದೀನನನ್ನು ತಡೆದು, “ನನಗೊಂದು ಸಮಸ್ಯೆ ಇದೆ. ದಯವಿಟ್ಟು ಪರಿಹಾರ ಹೇಳು” ಎಂದು ಕೇಳಿದ. ಅವನು ಹೆಗಲ ಮೇಲೆ ಹೊತ್ತುಕೊಂಡಿದ್ದ ಅಡ್ಡ ಕೋಲಿನ ಎರಡೂ ತುದಿಗಳಿಗೆ ಕಟ್ಟಿದ ಮಡಿಕೆಯ್ಲಲಿ ಹಾಲಿತ್ತು.
ನಸ್ರುದ್ದೀನ್ ಉದಾರ ಬುದ್ಧಿ ತೋರಿ “ಅದೇನು ಸಮಸ್ಯೆ ಹೇಳು ನೋಡೋಣ” ಅಂದ.
“ಬೆಳಗ್ಗೆ ನಿದ್ದೆಯಿಂದ ಎದ್ದಾಗ ನಶೆಯಲ್ಲಿರುವ ಭಾವನೆ ಉಂಟಾಗುತ್ತದೆ. ತಲೆಸುತ್ತುವುದರ ಜೊತೆಗೆ ಕುಡಿತದ ನಶೆ ಏರಿದಂತೆ ಭಾಸವಾಗುತ್ತದೆ. ಇದ್ಯಾಕೆ ಅನ್ನುವುದೇ ಗೊತ್ತಾಗುತ್ತಿಲ್ಲ” ಅಂದ ಹಾಲಿನವ.
ನಸ್ರುದ್ದೀನ್ ಮುಖ ಗಂಭಿರವಾಯ್ತು. “ಓಹ್ಹೋ! ನಿಜವಾಗಿಯೂ ಇದೊಂದು ಗಂಭೀರ ಸಮಸ್ಯೆ. ಒಂದು ವಿಷಯ ಹೇಳು; ರಾತ್ರಿ ಮಲಗುವ ಮುನ್ನ ನೀನು ಏನನ್ನು ತಿನ್ನುವೆ ಅಥವ ಕುಡಿಯುವೆ?” ಎಂದು ಕೇಳಿದ.
“ನಾನು ಸಾಮಾನ್ಯವಾಗಿ ಒಂದು ದೊಡ್ಡ ಲೋಟದ ತುಂಬಾ ಹಾಲು ಕುಡಿಯುತ್ತೇನೆ” ಅಂದ ಹಾಲಿನವ.
“ನಿನ್ನ ಸಮಸ್ಯೆಯ ಮೂಲ ಗೊತ್ತಾಯ್ತು ಬಿಡು. ರಾತ್ರಿ ಮಲಗುವ ಮುಂಚೆ ನೀನು ಕುಡಿಯುವ ಹಾಲು ನಿನಗೆ ಮತ್ತು ಬರಿಸುತ್ತಿದೆ” ಅಂದ ನಸ್ರುದ್ದೀನ್.
“ಅದು ಹೇಗೆ ಹಾಲು ಮತ್ತು ಬರಿಸುತ್ತದೆ!?” ಹಾಲಿನವನಿಗೆ ಅಚ್ಚರಿಯಾಯ್ತು.
ನಸ್ರುದ್ದೀನ್ ಗಡ್ಡ ನೀವಿಕೊಳ್ತಾ ವಿವರಿಸಿದ “ನೀನು ನಿದ್ದೆ ಮಾಡುವ ಮುನ್ನ ಹಾಲು ಕುಡಿಯುತ್ತೀಯ. ನಿದ್ದೆ ಮಾಡುವಾಗ ನೀನು ಹಾಸಿಗೆಯಲ್ಲಿ ಹೊರಳಾಡುತ್ತೀಯ. ಆಗ ಹಾಲು ಹೊಟ್ಟೆಯಲ್ಲೇ ಕಡೆಯಲ್ಪಟ್ಟು ಬೆಣ್ಣೆಯಾಗುತ್ತದೆ. ಆ ಬೆಣ್ಣೆ ಪುನಃ ಕಡೆಯಲ್ಪಟ್ಟು ಕೊಬ್ಬು ಆಗುತ್ತದೆ. ಕೊಬ್ಬನ್ನು ಕಡೆದಾಗ ಸಕ್ಕರೆ ಆಗುತ್ತದೆ. ಆ ಸಕ್ಕರೆ ಕಡೆಯಲ್ಪಟ್ಟು ಮದ್ಯವಾಗುತ್ತದೆ. ಹೀಗೆ ನೀನು ಬೆಳಗ್ಗೆ ಏಳುವ ಹೊತ್ತಿಗೆ ನಿನ್ನ ಹೊಟ್ಟೆಯಲ್ಲಿ ಮದ್ಯ ಇರುತ್ತದೆ. ಆದ್ದರಿಂದಲೇ ನಿನಗೆ ಬೆಳಗ್ಗೆ ನಶೆ ಏರಿದಂತೆ ಅನ್ನಿಸುವುದು”
ಹಾಲಿನವನು ತಲೆ ಕೆರೆದುಕೊಳ್ಳುತ್ತಾ ನಿಂತ.
ಮುಲ್ಲಾ ನಸ್ರುದ್ದೀನ್, “ಹಾಲು ನಿನ್ನ ಬಳಿ ಇದ್ದರೆ ನಿನಗೆ ಕುಡಿಯುವ ಮನಸಾಗುತ್ತದೆ. ಹಾಗೆ ಆಗದಂತೆ ನಾನು ಸಹಾಯ ಮಾಡುತ್ತೇನೆ” ಅನ್ನುತ್ತಾ, ಹಾಲು ತುಂಬಿದ ಮಡಕೆಗಳೆರಡನ್ನೂ ತೆಗೆದುಕೊಂಡು ಹೊರಟ.