ನಿಂತು ನಾರುವಿಕೆಯ ಅಪಾಯಗಳು : ಸ್ವಾಮಿ ರಂಗನಾಥಾನಂದ

swಯಾರು ಸಂಪೂರ್ಣವಾಗಿ ಇಂದ್ರಿಯ ಜಗತ್ತಿನಲ್ಲಿ ಮುಳುಗಿಹೋಗಿದ್ದಾರೋ ಅವರು ಸ್ವಲ್ಪವೂ ಶ್ರಮಿಸುವುದಿಲ್ಲ. ವೇದಾಂತವು ಅದನ್ನು ಆಧ್ಯಾತ್ಮಿಕ ಅಂಧತೆಯ ಸ್ಥಿತಿ ಎಂದು ಕರೆಯುತ್ತದೆ. ಅಂಥವರು ಕತ್ತಲೆಯಲ್ಲಿ ಬಾಳುತ್ತಾರೆ. ಅದರಲ್ಲೇ ಸುಖ ಕಾಣುತ್ತಾರೆ. ಬಂಧನದಲ್ಲಿದ್ದರೂ ಅದನ್ನೇ ಅನುಕೂಲವೆಂದು ಭಾವಿಸುತ್ತಾರೆ. ಕಠೋಪನಿಷತ್ತು ಇಂಥವರಿಗಾಗಿಯೇ “ಉತ್ಥಿಷ್ಠತ ಜಾಗ್ರತ!! ಪ್ರಾಪ್ಯವರಾನ್ನಿಬೋಧತ” ಎಂದು ಕರೆ ನೀಡುತ್ತದೆ.

ಮಾನವೇತರ ಜೀವಿಗಳಿಗೆ ನಿಂತು ನಾರುವಿಕೆಯ ಅಪಾಯಗಳ ಅರಿವು ಇರುವುದಿಲ್ಲ. ತಾವಾಗಿಯೇ ಈ ಸಮಸ್ಯೆಯನ್ನು ರೂಪಿಸಿಕೊಳ್ಳುವ ಮೂಲಭೂತವಾದ ಶಕ್ತಿಯಾಗಲೀ ಅದಕ್ಕೆ ಪರಿಹಾರವನ್ನು ಕಂಡುಹಿಡಿಯುವ ಶಕ್ತಿಯಾಗಲೀ ಅವಕ್ಕೆ ಇಲ್ಲ. ಅವು ಈ ವಿಷಯದಲ್ಲಿ ಪ್ರಕೃತಿಯನ್ನೇ ಸಂಪೂರ್ಣವಾಗಿ ಆಶ್ರಯಿಸಬೇಕು. ಬಂಧನದ ಅನುಭವವನ್ನು ಸುಸಂಗತವಾಗಿ ಪಡೆಯುವ ಶಕ್ತಿಯೂ ಅದನ್ನು ಗೆಲ್ಲಲು ಹೋರಾಡುವ ಶಕ್ತಿಯೂ ಇರುವುದು ಮಾನವನಿಗೆ ಮಾತ್ರ.

ಮಾನವನು ಸುಖ, ದುಃಖ, ಉತ್ಸಾಹ, ನಿರುತ್ಸಾಹ, ಪ್ರೇಮ – ದ್ವೇಷಗಳೆಲ್ಲವನ್ನೂ ಅನುಭವದಿಂದ ತಿಳಿದಿರುತ್ತಾನೆ. ಮತ್ತು, ತಾನು ಬೆಳೆಸಿಕೊಂಡಿರುವ ವಿಚಾರ ಶಕ್ತಿಯ ಮೂಲಕ ಅವನು ಈ ಎಲ್ಲದರ ಬಗೆಗೂ ಪ್ರಶ್ನೆಗಳನ್ನು ಕೇಳುತ್ತಾನೆ. ತನ್ನ ಇಚ್ಛಾಶಕ್ತಿಯ ಮೂಲಕ ಅವುಗಳನ್ನು ಅಂಕೆಗೆ ಒಳಪಡಿಸುತ್ತಾನೆ. ಅವುಗಳಿಂದ ಶ್ರೀಮಂತವೂ ಭದ್ರವೂ ಆದ ಚಾರಿತ್ರ್ಯವನ್ನೂ ವ್ಯಕ್ತಿತ್ವವನ್ನೂ ರೂಪಿಸುತ್ತಾನೆ. ಮಾನವನ ಹೆಚ್ಚುಗಾರಿಕೆ ಇರುವುದು ಇದರಲ್ಲೇ ಎನ್ನುತ್ತದೆ ವೇದಾಂತ.

ಮನುಷ್ಯ ತನ್ನನ್ನು ಮೀರಿ ತಾನು ಬೆಳೆಯಬಲ್ಲ. ಅದು ಕೂಡಾ, ಇಲ್ಲೇ, ಈ ಬದುಕಿನಲ್ಲೇ. ಈ ಕುರಿತು ಭಾಗವತವು ಹೀಗೆ ಹೇಳುತ್ತದೆ:
ಯಶ್ಚ ಮೂಢತಮೋ ಲೋಕೇ ಯಶ್ಚ ಬುದ್ಧೇ ಪರಂ ಗತಃ
ತಾವುಭೌ ಸುಖಮೇಧತೇ ಕ್ಲಿಶ್ಯತ್ಯಂತರಿತೋ ಜನಃ
~ ಈ ಜಗತ್ತಿನಲ್ಲಿ ಎರಡು ರೀತಿಯ ಜನರಿಗೆ ಮಾತ್ರ ಯಾವಾಗಲೂ ಸುಖವುಂಟು. ಒಬ್ಬ ಪರಮ ಮೂಢ, ಇನ್ನೊಬ್ಬ ತನ್ನನ್ನು ತಾನೇ ಮೀರಿದವನು, ಮತಿಯನ್ನು ಮೀರಿದವನು. ಈ ಮಧ್ಯದಲ್ಲಿರುವ ಎಲ್ಲ ಜನರೂ ಬಗೆಬಗೆಯ ಹೊಯ್ದಾಟವನ್ನೂ ದುಃವನ್ನೂ ಅನುಭವಿಸುತ್ತಲೇ ಇದ್ದಾರೆ.

ಈ ಎರಡೂ ರೀತಿಯ ವಿರುದ್ಧ ಬಗೆಯವರಿಗೆ ಯಾವುದೇ ಬಗೆಯ ಹೊಯ್ದಾಟ ಇರುವುದಿಲ್ಲ. ಉಳಿದ ಅಸಂಖ್ಯಾತ ಜನಸಮುದಾಯದ ಬದುಕು ಈ ಹೊಯ್ದಾಟದಿಂದಲೇ ಕೂಡಿರುತ್ತದೆ ಎಂದು ವೇದಾಂತ ಹೆಳುತ್ತದೆ. ಈ ಹೊಯ್ದಾಟ ಜೀವಿಯು ಮೋಕ್ಷಕ್ಕಾಗಿ ನಡೆಸುತ್ತಿರುವ ಹೋರಾಟ. ಮನುಷ್ಯ ವಿಷಯದಲ್ಲಿ ಈ ಹೊಯ್ದಾಟವೇ ಅವನನ್ನು ಪ್ರಗತಿಪಥದಲ್ಲಿ ನಡೆಸುತ್ತದೆ.
ಆಧ್ಯಾತ್ಮಿಕ ಜೀವನದಲ್ಲಿ ಅನೇಕರಿಗೆ ತಾವು ಬದ್ಧರು ಎಂಬುದೇ ತಿಳಿದಿರುವುದಿಲ್ಲ. ಇಂದ್ರಿಯ ಜಗತ್ತು ಒದಗಿಸುವ ಅಲ್ಪಸುಖಗಳಲ್ಲಿಯೇ ಅವರು ತೃಪ್ತರಾಗಿ ಸಂತೋಷದಿಂದ ಇರುತ್ತಾರೆ. ವೇದಾಂತವು ಅಂಥವರನ್ನು ಸಂಸಾರಿಗಳು – ‘ನಿಂತಲ್ಲೇ ನಿಲ್ಲುವ ಜೀವಿಗಳು’ ಎಂದು ಕರೆಯುತ್ತದೆ. ಸಂಸಾರ ಎಂದರೆ ಪ್ರಪಂಚ ಮತ್ತು ಪ್ರಾಪಂಚಿಕತೆ. ನಾವು ಪ್ರತಿಯೊಬ್ಬರೂ ಸಂಸಾರದಲ್ಲಿಯೇ ಇದ್ದೇವೆ. ನಾಮರೂಪಗಳಲ್ಲಿ ಇದ್ದೇವೆ.ಆದರೆ, ರಾಮಕೃಷ್ಣ ಪರಮಹಂಸರು ಹೇಳುವಂತೆ, “ನಾವು ಸಂಸಾರದಲ್ಲಿ ಇರಬೇಕೇ ಹೊರತು ಸಂಸಾರ ನಮ್ಮಲ್ಲಿ ಇರಬಾರದು”. ರಾಮಕೃಷ್ಣರು “ದೋಣಿಯು ನೀರಿನಲ್ಲಿ ಇರಬೇಕೇ ಹೊರತು ನೀರು ದೋಣಿಯಲ್ಲಿ ಇರಬಾರದು” ಎಂಬ ಸಾಮತಿಯ ಮೂಲಕ ಈ ಅಂಶವನ್ನು ಪರಿಣಾಮಕಾರಿಯಾಗಿ ಹೇಳಿದ್ದಾರೆ.

ಯಾರು ಸಂಪೂರ್ಣವಾಗಿ ಇಂದ್ರಿಯ ಜಗತ್ತಿನಲ್ಲಿ ಮುಳುಗಿಹೋಗಿದ್ದಾರೋ ಅವರು ಸ್ವಲ್ಪವೂ ಶ್ರಮಿಸುವುದಿಲ್ಲ. ವೇದಾಂತವು ಅದನ್ನು ಆಧ್ಯಾತ್ಮಿಕ ಅಂಧತೆಯ ಸ್ಥಿತಿ ಎಂದು ಕರೆಯುತ್ತದೆ. ಅಂಥವರು ಕತ್ತಲೆಯಲ್ಲಿ ಬಾಳುತ್ತಾರೆ. ಅದರಲ್ಲೇ ಸುಖ ಕಾಣುತ್ತಾರೆ. ಬಂಧನದಲ್ಲಿದ್ದರೂ ಅದನ್ನೇ ಅನುಕೂಲವೆಂದು ಭಾವಿಸುತ್ತಾರೆ. ಕಠೋಪನಿಷತ್ತು ಇಂಥವರಿಗಾಗಿಯೇ “ಉತ್ಥಿಷ್ಠತ ಜಾಗ್ರತ!! ಪ್ರಾಪ್ಯವರಾನ್ನಿಬೋಧತ” ಎಂದು ಕರೆ ನೀಡುತ್ತದೆ. ಪ್ರಯತ್ನಕ್ಕೆ, ಹೋರಾಟಕ್ಕೆ, ಬದುಕನ್ನು ಉನ್ನತ ಮೌಲ್ಯಗಳಿಗಾಗಿ ಒಳಹೊಕ್ಕು ನೋಡುವುದಕ್ಕೆ, ಉನ್ನತ ಸ್ತರಗಳಲ್ಲಿ ಬದುಕು ಅಭಿವ್ಯಕ್ತವಾಗುವುದಕ್ಕೆ ವೇದಾಂತವು ಆಹ್ವಾನ ನೀಡುತ್ತದೆ.
ತೃಪ್ತನಾಗಿ ಸುಮ್ಮನೆ ಇದ್ದುಬಿಡಬೇಡ; ಅತ್ಯುತ್ತಮವಾದದ್ದು ಇನ್ನೂ ಬರಲಿದೆ. ವಿಕಾಸಪಥದಲ್ಲಿ ನಡೆದು ಮನುಷ್ಯ ಜನ್ಮವನ್ನು ಪಡೆದಿರುವಷ್ಟಕ್ಕೇ ತೃಪ್ತರಾಗಬಾರದು. ಏಕೆಂದರೆ ಮನುಷ್ಯನಲ್ಲಿ ಇನ್ನೂ ಬಹುಭಾಗ ಪ್ರಾಣಿತನವೇ ತುಂಬಿಕೊಂಡಿದೆ. ಇದರಿಂದಾಗಿಯೇ “ಮನುಷ್ಯರೂಪೇಣ ಮೃಗಾಃ ಚರಂತಿ” ಎಂಬ ಮಾತು ಇರುವುದು. ‘ಮನುಷ್ಯನಂತೆ ಚಲಿಸುತ್ತಿದ್ದರೂ ಒಳಗಿರುವುದು ಮೃಗತ್ವವೇ” ಎಂಬುದು ಇದರ ಅರ್ಥ.

ಆದ್ದರಿಂದ, ಆಧ್ಯಾತ್ಮಿಕ ಜೀವನದಲ್ಲಿ ಅತೃಪ್ತಿಯನ್ನಿಟ್ಟುಕೊಂಡು, ಪರಿಪೂರ್ಣತೆಯನ್ನು ಸಾಧಿಸುವ ನಿಟ್ಟಿನಲ್ಲಿ ಚಲನೆಯನ್ನು ಕಾಯ್ದಿಟ್ಟುಕೊಳ್ಳಬೇಕು. ಆಗ ಮಾತ್ರವೇ ವಿಕಾಸ ಪಥದಲ್ಲಿ ಸಾಗುವುದು ಸಾಧ್ಯವಾಗುವುದು. ಇಲ್ಲವಾದರೆ, ನಿಂತಲ್ಲೇ ನಾರುವುದು ನಿಶ್ಚಿತ.

(ಆಕರ : ಉಪನಿಷತ್ತುಗಳ ಸಂದೇಶ ~ ಸ್ವಾಮಿ ರಂಗನಾಥಾನಂದ)

1 Comment

Leave a Reply