ವಂಚಿಸಿ ಗೆಲ್ಲುವವರು ಬೇಕೇ? ಗೌರವಾನ್ವಿತರನ್ನು ಗೆಲ್ಲಿಸೋಣವೇ?

ಯಾವತ್ತೂ ಪ್ರಾಮಾಣಿಕತೆಗೆ ಗೆಲುವಾಗುವುದು ಅದನ್ನು ಹೊಂದಿರುವ ವ್ಯಕ್ತಿಯ ಕಾರಣದಿಂದ ಅಲ್ಲ. ಅದನ್ನು ಗುರುತಿಸಿ ಮನ್ನಣೆ ನೀಡುವ ಜನರಿಂದಾಗಿ. ಆದ್ದರಿಂದ ಪ್ರಾಮಾಣಿಕರ ಗೆಲುವು ನಮ್ಮ ಗೆಲುವು ಮತ್ತು ಅವರ ಸೋಲು ನಮ್ಮದೇ ಸೋಲು. ವಂಚಕರ ವಿಷಯ ಹಾಗಲ್ಲ. ಅವರ ಗೆಲುವು ನಮ್ಮ ಸೋಲು ಮತ್ತು ಅವರ ಸೋಲು ನಮ್ಮ ಗೆಲುವು….

sophocles
ಶಿರೋನಾಮೆಗೂ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ನಾವಿಲ್ಲಿ ಬದುಕಿನ ಸ್ಪರ್ಧೆಯಲ್ಲಿ ವಂಚಿಸಿ ಗೆಲ್ಲುವುದರ ಹಾಗೂ ಪ್ರಾಮಾಣಿಕವಾಗಿದ್ದು, ಗೌರವಯುತವಾಗಿ ಸೋಲುವುದರ ನಡುವಿನ ಆಯ್ಕೆಯ ಬಗ್ಗೆ ಮಾತನಾಡಲು ಹೊರಟಿದ್ದೇವೆ. ಬೇಕಿದ್ದರೆ, ಚುನಾವಣಾ ಪ್ರಚಾರ ತಾರಕಕ್ಕೆ ಏರಿರುವ ಈ ದಿನಗಳಲ್ಲಿ ಈ ಮಾತನ್ನು ಅದಕ್ಕೆ ಬೆಸೆಯಬಹುದು. ಹೇಗೆಂದರೆ; ಚುನಾವಣಾ ಕಣದಲ್ಲಿ ಹಣ, ತೋಳ್ಬಲ, ಸುಳ್ಳುಗಳ ಸಹಾಯದಿಂದ ಜನರನ್ನು ವಂಚಿಸುವವರೂ ಇದ್ದಾರೆ, ಅದ್ಯಾವುದನ್ನೂ ಮಾಡದೆ ತಮ್ಮ ಪ್ರಾಮಾಣಿಕತೆಯನ್ನೆ ಮುಂದಿಟ್ಟುಕೊಂಡು ಮತ ಕೇಳುವವರೂ ಇದ್ದಾರೆ. ಈ ಇಬ್ಬರ ನಡುವೆ ನಿಮ್ಮ ಆಯ್ಕೆ ಯಾವುದಾಗಿರುತ್ತದೆ?

ನಮ್ಮ ನೈತಿಕ ಪ್ರಜ್ಞೆಯೇನೋ ತತ್ ಕ್ಷಣಕ್ಕೆ ನಮ್ಮಿಂದ ಸಹಜವಾಗಿ “ಗೌರವಾನ್ವಿತ ವ್ಯಕ್ತಿಯೇ ನಮ್ಮ ಆಯ್ಕೆ” ಎನ್ನುವ ಉತ್ತರ ಹೆಳಿಸಿಬಿಡುತ್ತದೆ. ಆದರೆ ನಾವು ನಿಜವಾಗಿಯೂ ನಮ್ಮ ಆಯ್ಕೆಯು ಪ್ರಾಮಾಣಿಕತೆಯ ಮಾನದಂಡವನ್ನು ಅವಲಂಬಿಸಿರುತ್ತದೆಯೇ? ಜನಪ್ರತಿನಿಧಿಗಳನ್ನು ನಾವು ಯಾವೆಲ್ಲ ಮಾನದಂಡಗಳ ಆಧಾರದ ಮೇಲೆ ಆರಿಸುತ್ತೇವೆ ಅನ್ನುವುದು ನಮಗೆ ಗೊತ್ತಿಲ್ಲವೆ!?
ತತ್ತ್ವಜ್ಞಾನಿ ಸಾಫೋಕ್ಲೀಸ್, “ನಾನು ವಂಚಿಸಿ ಗೆಲ್ಲುವುದಕ್ಕಿಂತ ಗೌರವಯುತವಾಗಿ ಸೋಲುವುದನ್ನು ಆಯ್ಕೆ ಮಾಡಿಕೊಳ್ಳುತ್ತೇನೆ” ಅನ್ನುತ್ತಾನೆ. ಇದು ನಿಜವಾದ ನಾಯಕನ ಲಕ್ಷಣ.

ಇಲ್ಲಿ ಆತ ತಾನು ಸೋಲಲು ಬಯಸುತ್ತೇನೆ ಎಂದು ಹೇಳುತ್ತಿಲ್ಲ, ಸೋಲುವುದೇ ಆದರೆ, ಗೌರವಯುತವಾಗಿಯೇ ಸೋಲುತ್ತೇನೆ. ಗೆಲುವಿಗಾಗಿ ನಾನು ವಂಚನೆ ಮಾಡುವುದಿಲ್ಲ ಅನ್ನುತ್ತಿದ್ದಾನೆ. ಏಕೆಂದರೆ, ವಂಚನೆ ನಡೆಸಿ ಗಳಿಸುವ ಗೆಲುವು ಗೆಲುವಾಗಿರುವುದಿಲ್ಲ. ಅದು ಪದಕ ಅಥವಾ ಹುದ್ದೆಯ ವ್ಯಾಪಾರ ಅಥವಾ ಕಳ್ಳತನವಾಗಿರುತ್ತದೆ ಅಷ್ಟೇ. ಅಂತಹ ವ್ಯಕ್ತಿಯ ಅಸಲು ಬಂಡವಾಳ ಜನರಿಗೆ ಬಹಳ ಬೇಗ ತಿಳಿದುಹೋಗುತ್ತದೆ. ನಂತರದಲ್ಲಿ ಅವರು ವಂಚಿಸಿ ಗೆದ್ದ ವ್ಯಕ್ತಿಗೆ ಗೌರವ ಕೊಡುವುದನ್ನು ನಿಲ್ಲಿಸುತ್ತಾರೆ. ಆತನ ಕೈಲಿ ಅಧಿಕಾರವಿದೆ ಎಂದು ಜನರು ಹೆಚ್ಚೆಂದರೆ ಹೆದರಬಹುದೇ ಹೊರತು, ಗೌರವ ಭಾವನೆ ಹೊಂದುವುದಂತೂ ಸಾಧ್ಯವಿಲ್ಲ. ಆದ್ದರಿಂದಲೇ ಸಾಫೋಕ್ಲಿಸ್ ತಾನು ಗೌರವದಿಂದ ಸೋಲಲು ಇಷ್ಟಪಡುತ್ತೇನೆ ಅಂದಿರುವುದು.

ಮತ್ತೆ ಚುನಾವಣೆಗೆ ಬರುವುದಾದರೆ, ವಂಚನೆ ನಡೆಸುವವರು ಸ್ಪರ್ಧೆಯಲ್ಲಿ ಗೆಲ್ಲುವುದು ಸುಲಭ. ಹಾಗೆಂದು ನಾವು ಪ್ರಾಮಾಣಿಕರನ್ನು ಗೌರವಯುತವಾಗಿ ಸೋಲಲು ಬಿಟ್ಟುಬಿಡಬೇಕೆ? ಯಾವತ್ತೂ ಪ್ರಾಮಾಣಿಕತೆಗೆ ಗೆಲುವಾಗುವುದು ಅದನ್ನು ಹೊಂದಿರುವ ವ್ಯಕ್ತಿಯ ಕಾರಣದಿಂದ ಅಲ್ಲ. ಅದನ್ನು ಗುರುತಿಸಿ ಮನ್ನಣೆ ನೀಡುವ ಜನರಿಂದಾಗಿ. ಆದ್ದರಿಂದ ಪ್ರಾಮಾಣಿಕರ ಗೆಲುವು ನಮ್ಮ ಗೆಲುವು ಮತ್ತು ಅವರ ಸೋಲು ನಮ್ಮದೇ ಸೋಲು. ವಂಚಕರ ವಿಷಯ ಹಾಗಲ್ಲ. ಅವರ ಗೆಲುವು ನಮ್ಮ ಸೋಲು ಮತ್ತು ಅವರ ಸೋಲು ನಮ್ಮ ಗೆಲುವು.

ಆದ್ದರಿಂದ, ನಿಮ್ಮ ಆಯ್ಕೆ ನಿಜವಾಗಿಯೂ ಏನಾಗಿರಬೇಕೆಂದು ಯೋಚಿಸಿ, ನಿರ್ಧಾರ ಕೈಗೊಳ್ಳಿ!

Leave a Reply