ಝೆನ್ ಗುರು ಶಿಚಿರಿ ಮತ್ತು ಶಿಷ್ಯನಾದ ಕಳ್ಳ

ಒಂದು ಸಂಜೆ ಝೆನ್ ಗುರು ಶಿಚಿರಿ ಕೋಷುನ್‌ ಶ್ಲೋಕಗಳನ್ನು ಪಠಿಸುತ್ತ ಕುಳಿತಿದ್ದ. ಅದೇ ಸಮಯಕ್ಕೆ ಕಳ್ಳನೊಬ್ಬ ಒಳಹೊಕ್ಕ. ಶಿಚಿರಿಯ ಕುತ್ತಿಗೆಯ ಬಳಿ ತನ್ನ ಹರಿತವಾದ ಚಾಕುವನ್ನಿಟ್ಟು, “ಪ್ರಾಣ ಕೊಡುತ್ತೀಯೋ ಹಣ ಕೊಡುತ್ತೀಯೋ ಬೇಗನೆ ನಿರ್ಧರಿಸು” ಎಂದು ಬೆದರಿಸಿದ. 

ಶಿಚಿರಿ ಪಠಣ ನಿಲ್ಲಿಸಿ, “ಸುಮ್ಮನೆ ನನಗೆ ತೊಂದರೆ ಕೊಡಬೇಡ. ಆ ಪೆಠಾರಿಯ ಒಳಗೆ ಹಣವಿದೆ, ತೆಗೆದುಕೊಂಡು ಹೋಗು” ಅಂದ.  

ಕಳ್ಳ ಪೆಠಾರಿಯನ್ನು ತೆಗೆದು ಹಣ ತೆಗೆದುಕೊಂಡ. ಶಿಚಿರಿ ಮತ್ತೆ ಪಠಣ ನಿಲ್ಲಿಸಿ, “ಕೇಳಿಲ್ಲ! ನಾಳೆ ನಾಳೆ ಕಂದಾಯ ಕಟ್ಟಲು ನನಗೆ ಸ್ವಲ್ಪ ಹಣ ಬೇಕಾಗುತ್ತದೆ. ಸ್ವಲ್ಪ ಹಾಗೇ ಉಳಿಸು” ಅಂದ. 

ಕಳಳ ಸ್ವಲ್ಪ ಹಣವನ್ನು ಹಾಗೇ ಇಟ್ಟು, ಮಿಕ್ಕಿದ್ದನ್ನು ತೆಗೆದುಕೊಂಡು ಹೊರಟ. ಮತ್ತೆ ಪಠಣ ನಿಲ್ಲಿಸಿದ ಶಿಚಿರಿ, “ಒಂದು ಕೊಡುಗೆಯನ್ನು ಪಡೆದಾಗ ಅದನ್ನು ಕೊಟ್ಟವರಿಗೆ ಧನ್ಯವಾದಗಳನ್ನು ಅರ್ಪಿಸುವುದು ಶಿಷ್ಟಾಚಾರ” ಎಂದು ಹೇಳಿದ. ಕಳ್ಳ ನಗುತ್ತಾ ಶಿಚಿರಿ ಕಡೆ ತಿರುಗಿ “ಧನ್ಯವಾದ” ಎಂದು ಹೊರಟುಹೋದ.  

ಕೆಲವು ದಿನಗಳ ನಂತರ ಆ ಕಳ್ಳ ಬೇರೊಂದು ಕಡೆ ಸಿಕ್ಕಿಬಿದ್ದ. ತನ್ನ ಇತರ ಅಪರಾಧಗಳ ಜೊತೆ ಝೆನ್ ಗುರು ಶಿಚಿರಿಯ ಮನೆಯಲ್ಲಿ ಕಳ್ಳತನ ಮಾಡಿದ್ದನ್ನೂ ಹೇಳಿದ. ಸಾಕ್ಷಿ ಹೇಳಲು ಶಿಚಿರಿಯನ್ನು ಕರೆಸಿದಾಗ ಆತ, “ಬಾಕಿಯಂತೆ ನನಗೆ ಗೊತ್ತಿಲ್ಲ. ನನ್ನ ಮನೆಯಲ್ಲಂತೂ ಅವನು ತೆಗೆದುಕೊಂಡ ಹಣಕ್ಕೆ ಆತ ಧನ್ಯವಾದ ಹೇಳಿದ್ದಾನೆ. ಹೀಗಾಗಿ ಅದು ಕಳ್ಳತನವಲ್ಲ” ಎಂದು ಹೇಳಿಕೆ ನೀಡಿದ. 

ಇದರಿಂದ ಕಳ್ಳನಿಗೆ ಶಿಕ್ಷೆಯ ಪ್ರಮಾಣ ಕಡಿಮೆಯಾಯಿತು. ಕೆಲವು ತಿಂಗಳ ಕಾಲ ಸೆರೆಮನೆವಾಸ ಅನುಭವಿಸಿದ ಕಳ್ಳ, ಮರಳಿ ಬಂದವನೇ ಝೆನ್ ಗುರು ಶಿಚಿರಿಯ ಬಳಿ ಶಿಷ್ಯನಾಗಿ ಸೇರಿಕೊಂಡ. 

 

Leave a Reply