ಝೆನ್ ಪರಂಪರೆ : ಒಂದು ಕಿರು ಪರಿಚಯ

ಝೆನ್, ಸೂಫಿ, ಅವಧೂತ ಹಾಗೂ ಬೌದ್ಧ ಪರಂಪರೆಗಳ ಕುರಿತು ಪರಿಚಯ ಲೇಖನಗಳನ್ನು ಬರೆಯುವಂತೆ ನಮ್ಮ ಓದುಗರು  ಕೇಳಿದ್ದಾರೆ. ಕಾಲಕ್ರಮದಲ್ಲಿ ಈ ಎಲ್ಲವುಗಳ ಕುರಿತು ಲೇಖನಗಳನ್ನು ಪ್ರಕಟಿಸುವ ಪ್ರಯತ್ನ ಮಾಡುತ್ತೇವೆ. ಮೊದಲನೆಯದಾಗಿ ಝೆನ್ ಪರಂಪರೆ ಕುರಿತ ಲೇಖನ ಇಲ್ಲಿದೆ. ಇದು ಝೆನ್ ತಿಳಿವಿಗೆ ಪ್ರವೇಶಿಕೆಯಷ್ಟೇ. ಮುಂದಿನ ದಿನಗಳಲ್ಲಿ ಇತರ ಆಯಾಮಗಳನ್ನು ಪ್ರಕಟಿಸುವ ಪ್ರಯತ್ನ ಮಾಡಲಾಗುವುದು ~ ಅರಳಿ ಬಳಗ

stop.png

ಝೆನ್ ಅಂದರೆ ಅರಿವು. ಇದು ಕೊಡು – ಕೊಳ್ಳುವ ಸಂಗತಿಯಲ್ಲ. ಝೆನ್ ಪರಿಮಳದಂತೆ ಸ್ವಯಂವೇದ್ಯವಾದುದು….

ಝೆನ್ – ಇದು ಇಂದು ಅತ್ಯಂತ ಸುಪರಿಚಿತ ಪದ. ಇದೀಗ ತನ್ನ ಮೂಲ ಅರ್ಥವ್ಯಾಖ್ಯಾನವನ್ನೂ ಮೀರಿ ಬೆಳೆದು ನಿಂತಿದೆ. ಬಹುತೇಕ ಎಲ್ಲ ಕ್ಷೇತ್ರದಲ್ಲೂ ಝೆನ್ ಪದ ಬಳಕೆಯಾಗುತ್ತಿದೆ. ಝೆನ್ ಇಂದು ಆಧ್ಯಾತ್ಮಿಕ ಪಂಥಕ್ಕಿಂತ ಜೀವನಶೈಲಿಯಾಗಿಯೇ ಹೆಚ್ಚು ಪರಿಚಿತ. 

ಝೆನ್ ಪದದ ಹುಟ್ಟು ಜಪಾನ್ ದೇಶದಲ್ಲಾಯಿತು. ಸಂಸ್ಕೃತದ `ಧ್ಯಾನ’ ಚೀನಾದಲ್ಲಿ ‘ಚಾನ್’ ಆಗಿ ಪರಿಚಿತಗೊಂಡಿತು. ಕೊರಿಯಾದಲ್ಲಿ ‘ಸಿಯೋನ್’ ಆಗಿದ್ದು, ಮುಂದೆ ಜಪಾನಿನಲ್ಲಿ ‘ಝೆನ್’ ಎಂದು ಪ್ರಚುರಗೊಂಡಿತು. ಈ ಪರಂಪರೆಯ ಮೂಲಪುರುಷ ದಕ್ಷಿಣ ಭಾರತದ ಬೋಧಿಧರ್ಮ. ಈತ ಚೀನಾದಲ್ಲಿ ಮೊದಲ ಬಾರಿಗೆ ಇದನ್ನು ಪರಿಚಯಿಸಿದ. ಮುಂದೆ ಝೆನ್ ಜಪಾನಿನಲ್ಲಿ ತಳವೂರಿ, ಅಲ್ಲಿಂದಲೇ ಜಗತ್ತಿಗೆ ತೆರೆದುಕೊಂಡಿತು.
ವಾಸ್ತವದಲ್ಲಿ ಝೆನ್ ಅಂದರೆ, ಅದೊಂದು ಪಂಥವಲ್ಲ. ಅದೊಂದು ಧರ್ಮವೂ ಅಲ್ಲ, ಆಚರಣೆಯೂ ಅಲ್ಲ. ಝೆನ್ ಅಂದರೆ ಧ್ಯಾನ. ಯಾವುದು ಏನೂ ಅಲ್ಲವೋ ಅದೇ ಧ್ಯಾನ ಎಂದಾದರೆ, ಏನೂ ಅಲ್ಲದಿರುವುದನ್ನೇ `ಝೆನ್’ ಎನ್ನಬಹುದು. ನಿರ್ವಚನೆಗೆ ಒಳಪಡಿಸಲೇಬೇಕು ಎಂದಾದರೆ, ಝೆನ್ ಅನ್ನು `ಅರಿವು’ ಎನ್ನಬಹುದು. ಮತ್ತು ಇಲ್ಲಿ ಅರಿವು ಕೊಡುವ – ಕೊಳ್ಳುವ ಸಂಗತಿಯಲ್ಲ. ಅದು ಪರಿಮಳದಂತೆ ತನ್ನಿಂತಾನೆ ಹೊಮ್ಮುವಂಥದು. ಪರಿಮಳವನ್ನು ಹರಡಲು ಗಾಳಿಯೊಂದು ಮಾಧ್ಯಮ. ಹಾಗೆಯೇ ಝೆನ್ ಅರಿವನ್ನು ಹರಡಲು ಕಥೆ, ಒಗಟು, ಹಾಯ್ಕು ಮೊದಲಾದವುಗಳು ಮಾಧ್ಯಮವಾಗಿ ಬಳಕೆಯಾಗಿವೆ.

ಝೆನ್ ಪರಂಪರೆಯಲ್ಲಿ ಗುರು – ಶಿಷ್ಯರ ಸಂಬಂಧ ಮಹತ್ವದ್ದು. ಆದರೆ ಇಲ್ಲಿ ಗುರು ಹೇಳಿದ್ದನ್ನೆಲ್ಲ ಕುರುಡಾಗಿ ನಂಬಿ ತಲೆಯಾಡಿಸುವ ಪದ್ಧತಿ ಇಲ್ಲ. ಗುರು ಏನು ಹೇಳುತ್ತಾನೋ ಅದು ಶಿಷ್ಯನಿಗೆ ವೇದ್ಯವಾಗಬೇಕು. ಇಲ್ಲಿ ಗುರು ಶಿಷ್ಯನನ್ನು ಅನುಮಾನಿಸುವ ಹಾಗೆ, ಪ್ರಶ್ನಿಸಿ, ಒರೆ ಹಚ್ಚಿ ನೋಡುವ ಹಾಗೆಯೇ, ಶಿಷ್ಯನೂ ಗುರುವನ್ನು ಪರೀಕ್ಷಿಸುತ್ತಾನೆ. ಈತ ಯೋಗ್ಯನೇ ಎಂದು ಖಾತ್ರಿಪಡಿಸಿಕೊಳ್ಳುತ್ತಾನೆ.
ಗುರು – ಶಿಷ್ಯರ ನಡುವಿನ ಈ ಪರೀಕ್ಷೆಗಳೆಲ್ಲವೂ ಸಂಭಾಷಣೆಯ ರೂಪದಲ್ಲಿ ಇರುತ್ತವೆ, ಅಥವಾ ಆಂಗಿಕ ಅಭಿನಯಗಳ ರೂಪದಲ್ಲಿ. ಕೆಲವೊಮ್ಮೆ ಇವೇನೂ ಇಲ್ಲದೆ ಕ್ಷಣಿಕ ಪ್ರತಿಕ್ರಿಯೆಯ ಮೂಲಕವೂ ಈ ಇಬ್ಬರ ನಡುವೆ ಸಂವಹನ ನಡೆಯುತ್ತದೆ. ಹಾಗೆ ನಡೆದ ಸಂವಹನಗಳೇ ಝೆನ್ ಕತೆಗಳಾಗಿ ಮುಂದಿನ ಝೆನ್ ಪರಂಪರೆಯ ಅನುಯಾಯಿಗಳಿಗೆ ಪಠ್ಯರೂಪದಲ್ಲಿ ಒದಗಿ ಬಂದಿವೆ.

ಕವಲುಗಳು
ಕನ್ನಡದಲ್ಲಿ ತಾವೊ ಅಥವಾ ದಾವ್ ಎಂದು ಕರೆಯಲಾಗುವ ಝೆನ್ ಕವಲು `ತ್ಸಾ ಒ-ತುಂಗ್’ ಜಪಾನ್‍ನಲ್ಲಿ `ಸೊಟೊ’ ಎಂಬ ಹೆಸರನ್ನು ಪಡೆಯಿತು. 12ನೇ ಶತಮಾನದ ಆದಿಯಲ್ಲಿ ಜಪಾನಿನಲ್ಲಿ `ರಿನ್‍ಝಾಯ್’ ಪಂಥವು ಎನ್‍ಸಾಯಿ ಎಂಬ ಗುರುವಿನ ಮೂಲಕ ಪ್ರಚಾರಕ್ಕೆ ಬಂದಿತು. ಇನ್‍ಜೆನ್ ಎಂದು ಜಪಾನ್ ಪ್ರಾಂತ್ಯದಲ್ಲಿ ಪ್ರಸಿದ್ಧನಾಗಿರುವ ಚೀನೀ ಸಂತ ಇನ್-ವುವಾನ್ 17ನೇ ಶತಮಾನದಲ್ಲಿ ಒಬುಕು ಎಂಬ ಝೆನ್ ಪಂಥವನ್ನು ಸ್ಥಾಪಿಸಿದ. ಇದನ್ನು ಚೀನೀ ಭಾಷೆಯಲ್ಲಿ ಹುವಾಂಗ್-ಪೊ ಎನ್ನುತ್ತಾರೆ. ಈ ಎಲ್ಲ ಝೆನ್ ಕವಲುಗಳ ಮೂಲ ಕರ್ತಾರರು ಚೀನೀಯರೆ ಆಗಿದ್ದರೂ ಇವು ಹೆಚ್ಚು ವ್ಯಾಪಕಗೊಂಡಿದ್ದು ಜಪಾನಿನಲ್ಲಿ. ಇಂದು ಈ ಪುಟ್ಟ ದೇಶದಲ್ಲಿ ವಿವಿಧ ಪಂಥಗಳಿಗೆ ಸೇರಿದ ಒಂದು ಕೋಟಿಗೂ ಹೆಚ್ಚು ಝೆನ್ ಅನುಯಾಯಿಗಳಿದ್ದಾರೆ. ಈ ಪಂಥಗಳು ಮೂಲ ಆಶಯದಲ್ಲಿ ಒಂದೇ ಆಗಿದ್ದರೂ ಆಚರಣೆಯಲ್ಲಿ ವಿಭಿನ್ನತೆ ಹೊಂದಿವೆ.

ಕನ್ನಡದಲ್ಲಿ ಝೆನ್
ಜಪಾನಿನ ಡಿ.ಟಿ.ಸುಜುಕಿ ಎನ್ನುವ ವಿದ್ವಾಂಸ ಇಪ್ಪತ್ತನೇ ಶತಮಾನದ ಮೊದಲ ಭಾಗದಲ್ಲಿ ಝೆನ್ ಪರಂಪರೆ ಮತ್ತು ಕಥನಗಳ ತಳಮೂಲ ಅಧ್ಯಯನ ನಡೆಸಿದ. ತಾನು ಕಂಡುಕೊಂಡದ್ದನ್ನು ಲೋಕಕ್ಕೆ ಹಂಚತೊಡಗಿದ. ಅಲ್ಲಿಯವರೆಗೆ ಝೆನ್ ಅನುಯಾಯಿಗಳು ಅಧಿಕೃತವಾಗಿ ಗುರುತಿಸಲ್ಪಡುತ್ತಿರಲಿಲ್ಲ. ಝೆನ್ ಕತೆಗಳೂ ವಿಶ್ವವ್ಯಾಪಿಯಾಗಿರಲಿಲ್ಲ. ಆದರೀಗ ಜಗತ್ತಿನಾದ್ಯಂತ ಝೆನ್ ಆಸಕ್ತರ ದೊಡ್ಡ ಸಮುದಾಯವೇ ಇದೆ. ಕನ್ನಡದಲ್ಲಿ ಮೊದಲಬಾರಿಗೆ ಝೆನ್ ಕುತೂಹಲವನ್ನು ಪರಿಚಯಿಸಿದವರು ನೀನಾಸಂನ ಕೆ.ವಿ. ಸುಬ್ಬಣ್ಣ. ಎಂಭತ್ತರ ದಶಕದಲ್ಲಿ `ಝೆನ್ ಪುಸ್ತಿಕೆ’ಯ ಮೂಲಕ ಆ ಪರಂಪರೆಯನ್ನೂ ಹಲವು ಕಥೆಗಳನ್ನೂ ಕನ್ನಡಕ್ಕೆ ತಂದರು ಸುಬ್ಬಣ್ಣ. ಇಂದು ಝೆನ್ ಕಥೆಗಳ ಬಗ್ಗೆ ಒಲವುಳ್ಳ ಹಲವಾರು ಲೇಖಕರು ನಮ್ಮ ನಡುವೆ ಇದ್ದಾರೆ. ಬಿಡಿ ಬರಹಗಳಲ್ಲಿ, ಪುಸ್ತಕಗಳಲ್ಲಿ ಝೆನ್ ಅನುಭಾವಗಳನ್ನು ಮತ್ತೆ ಮತ್ತೆ ಕನ್ನಡದಲ್ಲಿ ಕಟ್ಟಿಕೊಡುತ್ತ ಇದ್ದಾರೆ.

ಎರಡು ಉದಾಹರಣೆಗಳು
ಝೆನ್ ಬೋಧನೆಯ ತಳಹದಿಯಾಗಿರುವ ಝೆನ್ ಕತೆಗಳು ಅದೆಷ್ಟು ಸರಳ ಹಾಗೂ ಆಸಕ್ತಿಕರವಾಗಿರುತ್ತವೆ ಎನ್ನುವುದಕ್ಕೆ ಇಲ್ಲಿವೆ ಎರಡು ತುಣುಕುಗಳು…

ನಿನಗೆ ಹೇಗೆ ಗೊತ್ತು!?
ಒಂದು ದಿನ ಚಾಂಗ್ ತ್ಸು ಮತ್ತು ಅವನ ಗೆಳೆಯ ನದಿಯ ಪಕ್ಕದಲ್ಲಿ ನಡೆಯುತ್ತಿದ್ದರು. `ಈಜುತ್ತಿರುವ ಮೀನು ನೋಡು, ಎಷ್ಟು ಖುಷಿಯಾಗಿವೆ’ ಅಂದ ಚಾಂಗ್ ತ್ಸು.
`ನೀನು ಮೀನಲ್ಲ. ಆದ್ದರಿಂದ ಅವು ಖುಷಿಯಾಗಿವೆಯೋ ಇಲ್ಲವೋ ನಿನಗೆ ಗೊತ್ತಾಗುವುದು ಸಾಧ್ಯವಿಲ್ಲ’ ಅಂದ ಗೆಳೆಯ. `ನೀನು ನಾನಲ್ಲ, ಮೀನು ಖುಷಿಯಾಗಿವೆ ಅನ್ನುವುದು ನನಗೆ ಗೊತ್ತಿಲ್ಲ ಅಂತ ನಿನಗೆ ಹೇಗೆ ಗೊತ್ತಾಯಿತು?’ ಅಂದ ಚಾಂಗ್ ತ್ಸು.
ಜ್ಞಾನೋದಯ
ಶಿಷ್ಯನೊಬ್ಬ ಗುರುವನ್ನು ಕೇಳಿದ: `ಗುರುವೇ, ಜ್ಞಾನೋದಯ ಎಂದರೆ ಏನು?’
ಗುರು ಹೇಳಿದ: `ಹಸಿವಾದಾಗ ಉಣ್ಣುವುದು, ಬಾಯಾರಿದಾಗ ನೀರು ಕುಡಿಯುವುದು, ನಿದ್ರೆ ಬಂದಾಗ ಮಲಗುವುದು. ಅಷ್ಟೇ…’

 

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.