ತನ್ನದೇ ಬಿಂಬವನ್ನು ಬೇರೊಬ್ಬನಾಗಿ ಭಾವಿಸಿ ಮೋಹಗೊಂಡ ನಾರ್ಸಿಸಸ್, ಆ ಕಡುಮೋಹದಲ್ಲೇ ಕೊನೆಯಾಗಿ ಹೋದ. ಈತನ ಕಥನದ ಹಿನ್ನೆಲೆಯಲ್ಲಿ ಆಧುನಿಕ ಮನಶ್ಶಾಸ್ತ್ರ ಮತ್ತು ಸಾಹಿತ್ಯಗಳು ಸ್ವಮೋಹಿಯನ್ನು ನಾರ್ಸಿಸಿಸ್ಟ್ ಎಂದೂ ಸ್ವಮೋಹವನ್ನು ನಾರ್ಸಿಸಿಸಮ್ ಎಂದೂ ಕರೆಯುತ್ತವೆ.
ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ
ನಾರ್ಸಿಸಸ್ ನದಿ ದೇವತೆ ಸಿಫಿಸಸ್ ಮತ್ತು ಲಿರಿಯೋಪೆಯರ ಮಗ, ಅತ್ಯಂತ ಸುಂದರ ರೂಪವನ್ನು ಹೊಂದಿದ್ದ ನಾರ್ಸಿಸಸ್, ದೇವತೆಗಳ ಲೋಕದಲ್ಲಿ ಯುವತಿಯರ ಕಣ್ಮಣಿಯಾಗಿದ್ದ. ಆದರೆ ಆತ ಯಾವತ್ತೂ ತನ್ನ ಮುಖವನ್ನೇ ನೋಡಿಕೊಂಡಿರಲಿಲ್ಲ.
ದೇವಲೋಕದ ಕುವರಿಯರು, ಅಪ್ಸರೆಯರು ನಾರ್ಸಿಸಸ್ ಬಳಿ ಪ್ರೇಮ ಯಾಚನೆ ಹೊತ್ತು ಬರುತ್ತಿದ್ದರು. ನಾರ್ಸಿಸಸ್, ಎಲ್ಲರೂ ತನ್ನನ್ನು ಪ್ರೀತಿಸುವುದನ್ನು ತನ್ನ ಹೆಚ್ಚುಗಾರಿಕೆ ಎಂದು ಭಾವಿಸಿದ್ದ. ಅದು ಅವನಲ್ಲಿ ಅಹಂಕಾರ ಹುಟ್ಟುಹಾಕಿತ್ತು. ಹೀಗಾಗಿ ಪ್ರೇಮ ನಿವೇದನೆ ಮಾಡಿದವರನ್ನೆಲ್ಲ ಅವಮಾನಿಸಿ ಕಳಿಸಿಬಿಡುತ್ತಿದ್ದ.
ನಾರ್ಸಿಸಸ್’ನ ಈ ಅಹಂಕಾರವನ್ನು ನೆಮೆಸಿಸ್ ಗಮನಿಸಿದಳು. ನೆಮೆಸಿಸ್, ಅನರ್ಹರಿಗೆ ಅದೃಷ್ಟವನ್ನು ನಿರಾಕರಿಸುವ ದೇವತೆ. ಆತನಿಗೆ ತಾನಾಗಿಯೇ ಒಲಿದು ಬರುತ್ತಿರುವ ಪ್ರೇಮವನ್ನು ಹೊಂದುವ ಅರ್ಹತೆ ಇಲ್ಲ ಎಂದು ನೆಮೆಸಿಸ್ ತೀರ್ಮಾನಿಸಿದಳು. ಮತ್ತು ಅವನ ಅಹಂಕಾರಕ್ಕೆ ಸರಿಯಾದ ಶಿಕ್ಷೆ ನೀಡಬೇಕೆಂದು ತೀರ್ಮಾನಿಸಿದಳು.
ಒಮ್ಮೆ ನಾರ್ಸಿಸಸ್ ಉದ್ಯಾನವನದಲ್ಲಿ ಇಂತಿದ್ದ. ನೆಮೆಸಿಸ್ ಆತನ ಬಳಿ ಗಾಳಿಯಾಗಿ ಸುಳಿದು ಸಮೀಪದ ಕೊಳದತ್ತ ಆಕರ್ಷಿಸಿದಳು. ನಾರ್ಸಿಸಸ್, ಮಾಯಾಪಾಶದಿಂದ ಎಳೆಯಲ್ಪಟ್ಟವನಂತೆ ಕೊಳದ ಬಳಿ ಹೋಗಿ ಕುಳಿತ. ಅದೇ ವೇಳೆಗೆ ನಾರ್ಸಿಸಸ್’ನನ್ನು ಪ್ರೇಮಿಸುತ್ತಿದ್ದ ಎಕೋ ಅಲ್ಲಿಗೆ ಬಂದಳು. ಅವಳು ಅವನಲ್ಲಿ ತನ್ನ ಪ್ರೇಮನಿವೇದನೆ ಮಾಡಿಕೊಳ್ಳಲು ಬಯಸಿದ್ದಳು. ಆದರೆ ಹೀರಾ ದೇವಿಯಿಂದ ಶಪಿತಳಾಗಿದ್ದ ಆಕೆ ಮಾತನಾಡುವ ಕೌಶಲ್ಯವನ್ನೆ ಕಳೆದುಕೊಂಡಿದ್ದಳು. ಯಾರಾದರೂ ಮಾತಾಡಿದರೆ ಆ ಮಾತಿನ ಕೊನೆಯ ಕೆಲವು (ಎಕೋ ಪ್ರತಿಧ್ವನಿಯಾಗಿ ಉಳಿದಿದ್ದು ಹೇಗೆ – ಎಂಬ ಕಥೆಯನ್ನು ನಾಳೆ ನಿರೀಕ್ಷಿಸಿ) ಪದಗಳನ್ನಷ್ಟೆ ಆಕೆ ಪುನರುಚ್ಚರಿಸಲು ಸಾಧ್ಯವಾಗುವಂತೆ ಹೀರಾ ದೇವಿಯು ಶಾಪ ನೀಡಿದ್ದಳು.
ಕೊಳದ ಬಳಿ ಕುಳಿತ ನಾರ್ಸಿಸಸ್, ಒಳಗೇನಿದೆ ಎಂದು ಹಣಕಿದ. ಅಲ್ಲಿ ಒಬ್ಬ ಸದೃಢ – ಸುಂದರ ಯುವಕನೊಬ್ಬ ಕುಳಿತಿರುವುದು ಆತನಿಗೆ ಕಂಡಿತು. ಆ ಯುವಕ ನಾರ್ಸಿಸಸ್’ನನ್ನೇ ನೋಡುತ್ತಿದ್ದ, ನಾರ್ಸಿಸಸ್ ಆ ಯುವಕನನ್ನು ಹೇಗೆ ನೋಡುತ್ತಿದ್ದನೋ ಹಾಗೇ! ಆಶ್ಚರ್ಯವೆಂದರೆ, ಆ ಯುವಕನೂ ನಾರ್ಸಿಸಸ್’ನತೆಯೇ ಬಟ್ಟೆಬರೆಗಳನ್ನು ತೊಟ್ಟಿದ್ದ. ವಾಸ್ತವದಲ್ಲಿ ಅದು ಆತನ ಪ್ರತಿಬಿಂಬವೇ ಆಗಿತ್ತು. ನಾರ್ಸಿಸಸ್’ಗೆ ಅದು ಗೊತ್ತಿರಲಿಲ್ಲ. ಅವನು ಆ ಬಿಂಬದ ಮೇಲೆ ಮೋಹಗೊಂಡು ಮಾತನಾಡಿಸಿದ. ಅಲ್ಲಿಯೇ ಇದ್ದ ಎಕೋ ಅವನ ಮಾತಿನ ಕೊನೆಯ ಪದಗಳನ್ನು ಉಚ್ಚರಿಸಿದಳು. ಮೋಹಮತ್ತನಾಗಿದ್ದ ನಾರ್ಸಿಸಸ್’ಗೆ ದನಿ ಎಲ್ಲಿಂದ ಬಂದಿತೆಂದು ತಿಳಿಯಲಿಲ್ಲ. ಅವನು ಕೊಳದೊಳಗಿನ ಯುವಕನೇ ಮಾತಾಡುತ್ತಿದ್ದಾನೆ ಅಂದುಕೊಂಡ.
ತನ್ನದೇ ಪ್ರತಿಬಿಂಬದ ರೂಪದ ಮೇಲೆ ನಾರ್ಸಿಸ್ ಮೋಹಗೊಂಡ ನಾರ್ಸಿಸಸ್, ಬಿಂಬದಿಂದ ತನ್ನ ದೃಷ್ಟಿಯನ್ನು ಕದಲಿಸಲೇ ಇಲ್ಲ. ಗಂಟೆಗಟ್ಟಲೆ, ದಿನಗಟ್ಟಲೆ, ವಾರಗಟ್ಟಲೆ ತನ್ನ ಬಿಂಬವನ್ನೆ ನೋಡುತ್ತಾ ಮಾತಾಡುತ್ತಾ ಕುಳಿತ. ಎಕೋ ಅವನ ಪ್ರತಿ ಮಾತಿನ ಕೊನೆಯನ್ನು ಧ್ವನಿಸುತ್ತಾ ಹೋದಳು. ನಾರ್ಸಿಸಸ್ ಅದನ್ನು ಆ ಯುವಕನ ಪ್ರತಿಕ್ರಿಯೆ ಅಂದುಕೊಂಡ. ತನ್ನ ಮನಸ್ಸನ್ನು ತೋಡಿಕೊಂಡ. ಕೊಳದಿಂದ ಈಚೆ ಬರುವಂತೆ ಅಂಗಲಾಚಿದ. ಅವನ ಯಾಚನೆಯ ಕೊನೆಯ ಮಾತುಗಳು ಎಕೋಳಿಂದ ಪ್ರತಿಧ್ವನಿಸಿದವು. ನಾರ್ಸಿಸಸ್ ಅದನ್ನು ಆ ಕೊಳದ ಯುವಕನ ಆಹ್ವಾನ ಅಂದುಕೊಂಡ.
ಮೋಹಾತಿರೇಕದಲ್ಲಿ ಚಿತ್ತಭ್ರಮೆಗೆ ಒಳಗಾಗಿದ್ದ ನಾರ್ಸಿಸಸ್, “ನೀನು ಬರದಿದ್ದರೆ ಏನಾಯಿತು, ನಾನೇ ಬರುವೆ” ಅನ್ನುತ್ತಾ ತನ್ನ ತೋಳುಗಳನ್ನು ಚಾಚಿದ. ಬಿಂಬವನ್ನು ಅಪ್ಪಿಕೊಳ್ಳಲು ಕೊಳದೊಳಕ್ಕೆ ಧುಮಿಕಿದ ನಾರ್ಸಿಸಸ್ ಅದರಲ್ಲೇ ಮುಳುಗಿಹೋದ.
ತನ್ನದೇ ಮೇಲೆ ಮೋಹಗೊಂಡು ಕೊನೆಯಾದ ನಾರ್ಸಿಸಸ್ ಎಷ್ಟೆಂದರೂ ದೇವತೆಯ ಮಗ. ಹಾಗೆಂದೇ ದೇವತೆಗಳು ಅವನ ಜೀವಸತ್ವವನ್ನು ಸುಂದರ ಹೂವಾಗಿಸಿದರು. ಅದೇ ನಾರ್ಸಿಸಸ್ ಹೂವು. ಇದನ್ನು ಡ್ಯಾಫೊಡಿಲ್ ಎಂದೂ ಕರೆಯುತ್ತಾರೆ.
2 Comments