ಪ್ರತಿಧ್ವನಿಯಾಗಿ ಉಳಿದ ಅಪ್ಸರೆ ಎಕೋ :  ಗ್ರೀಕ್ ಪುರಾಣ ಕಥೆಗಳು  ~ 19

ಹೀರಾ ದೇವಿಯಿಂದ ಶಪಿತಳಾದ ಅಪ್ಸರೆ ಎಕೋ, ನಾರ್ಸಿಸಸ್ ಮೇಲೆ ಮೋಹಗೊಂಡಳು. ನಾರ್ಸಿಸಸ್, ತನ್ನದೇ ಬಿಂಬದ ಮೇಲೆ ಮೋಹಗೊಂಡು ಉದ್ವೇಗದಿಂದ ಜೀವ ತೊರೆದ. ಅವನ ವಿರಹದಲ್ಲೇ ದೇಹ ಕರಗಿ, ಎಕೋ ಕೇವಲ ಪ್ರತಿಧ್ವನಿಯಾಗಿ ಉಳಿದಳು! 

ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ

eco narc

ನೆನ್ನೆ ಇಲ್ಲಿ (ಸ್ವಯಂ ವ್ಯಾಮೋಹಿ ನಾರ್ಸಿಸಸ್) ನಾರ್ಸಿಸಸ್’ನ ಕತೆಯನ್ನು ಓದಿದಿರಿ. ತನ್ನನ್ನೇ ಮೋಹಿಸಿಕೊಂಡ ನಾರ್ಸಿಸಸ್ ಕೊನೆಯಾಗುವಲ್ಲಿ ಎಕೋಳ ಪಾತ್ರ ಮಹತ್ವದ್ದಾಗಿತ್ತು. ದುರಂತವೆಂದರೆ, ಯಾರ ಕುರಿತು ಎಕೋ ಕಡುವ್ಯಾಮೋಹಿಯಾಗಿದ್ದಳೋ, ಯಾರನ್ನು ತೀವ್ರವಾಗಿ ಪ್ರೇಮಿಸತೊಡಗಿದ್ದಳೋ ಆ ಪ್ರಿಯತಮನ ಸಾವಿಗೆ ತಾನೇ ಕಾರಣವಾಗಿದ್ದು. ಹೀರಾ ದೇವಿ ನೀಡಿದ ಶಾಪವೇ ಈ ಎಲ್ಲಕ್ಕೂ ಮೂಲವಾಯ್ತು.

ಮಹಾ ದೇವ ಸ್ಯೂಸ್, ತನ್ನ ಹೆಂಡತಿ ಹಿರಾ ದೇವಿಯನ್ನು ಎಷ್ಟು ಪ್ರೀತಿಸುತ್ತಿದ್ದರೂ ರಸಿಕತನದಲ್ಲಿ ಮಹಾ ಉತ್ಸಾಹಿ. ಅವನ ಪ್ರಣಯ ಲೀಲೆಗಳಿಗೆ ಕೊನೆಯೇ ಇರಲಿಲ್ಲ. ಅದರಲ್ಲೂ ಅವನು ಸ್ವರ್ಗಕ್ಕಿಂತ ಕೆಳಗಿರುವ ಅಪ್ಸರೆಯರ ಜೊತೆಗೂ ಪ್ರಣಯ ಸಂಬಂಧ ಹೊಂದಿದ್ದ. ಇದು ದೇವತೆಗಳ ರಾಣಿ ಹೀರಾ ದೇವಿಗೆ ಸಿಟ್ಟು ತರಿಸಿತ್ತು. ಸ್ಯೂಸ್’ನನ್ನು ತಾನೇ ಹಿಡಿದು ತರಾಟೆಗೆ ತೆಗೆದುಕೊಳ್ಳಬೇಕೆಂದು ಅವಳು ಕಾದಿದ್ದಳು. ತನ್ನ ಗಂಡ ಯಾವುದಾದರೂ ಅಪ್ಸರೆಯ ಜೊತೆಗಿದ್ದಾನೆ ಎಂದು ಗುಪ್ತಚರರು ಸುದ್ದಿ ಮುಟ್ಟಿಸಿದಾಗೆಲ್ಲ ಅವಳು ಕೆಳಗಿನ ಲೋಕಕ್ಕೆ ಧಾವಿಸುತ್ತಿದ್ದಳು. ಆದರೆ ಪ್ರತಿ ಬಾರಿಯೂ ಆಕೆ ಅಲ್ಲಿಗೆ ತಲುಪದಂತೆ ಮಾಡುತ್ತಿದ್ದುದು ಎಕೋ.

ಎಕೋ ಕೂಡಾ ಅಪ್ಸರೆ. ಸ್ಯೂಸ್ ದೇವನ ಖಾಸಾ ಸೇವಕಿ. ಹೀರಾ ತನ್ನನ್ನು ಹುಡುಕಿ ಹೊರಟಾಗೆಲ್ಲ ಅವಳನ್ನು ತಡೆದು, ತನ್ನನ್ನು ತಲುಪದಂತೆ ಮಾಡಬೇಕೆಂದು ಎಕೋಳಿಗೆ ಸ್ಯೂಸ್ ತಾಕೀತು ಮಾಡಿದ್ದ. ಅದನ್ನು ಶಿರಸಾವಹಿಸಿದ್ದ ಎಕೋ, ಹೀರಾಳನ್ನು ದಾರಿಯಲ್ಲಿ ತಡೆದು ಮಾತಿಗೆ ಎಳೆಯುತ್ತಿದ್ದಳು. ಬೇಕಿದ್ದು, ಬೇಡದ್ದು ಎಲ್ಲವನ್ನೂ ಹರಟುತ್ತಿದ್ದಳು. ಸಮ್ಮೋಹಗೊಳಿಸುವಂತೆ ಮಾತನಾಡುವುದು ಎಕೋಳಿಗಿದ್ದ ವಿಶೇಷ ಅರ್ಹತೆ. ಅದನ್ನು ಬಳಸಿ ಆಕೆ ಹೀರಾಳನ್ನು ಮಾತಿನಲ್ಲೇ ಕಟ್ಟಿಹಾಕುತ್ತಿದ್ದಳು.

ಬಹಳ ಬಾರಿ ಹೀಗಾದ ಮೇಲೆ ಒಮ್ಮೆ ಹೀರಾಳಿಗೆ ಅನುಮಾನ ಬಂದಿತು. ತಾನು ಅಪ್ಸರೆಯರ ಲೋಕೆಕ್ಕೆ, ತನ್ನ ಗಂಡನ ಗುಟ್ಟು ರಟ್ಟು ಮಾಡಲು ಹೊರಟಾಗಲೇ ಈಕೆ ಅಡ್ಡ ಬರುವುದೇಕೆ ಎಂದು ಯೋಚಿಸಿದಳು. ಅವಳಿಗೆ ಎಕೋಳ ಸಂಚು ತಿಳಿದುಹೋಯ್ತು. “ಸಮ್ಮೋಹಗೊಳಿಸುವಂತೆ ಮಾತನಾಡುವ ನಿನ್ನ ಶಕ್ತಿ ನಾಶವಾಗಲಿ. ಇನ್ನು ಮುಂದೆ ಸ್ವತಂತ್ರವಾಗಿ ಮಾತನಾಡುವ ಶಕ್ತಿಯೇ ನಿನಗಿಲ್ಲವಾಗಲಿ! ನಿನ್ನ ಎದುರು ನಿಂತು ಯಾರು ಏನು ಹೇಳುತ್ತಾರೋ ಅವರ ಮಾತಿನ ಕೊನೆಯ ಪದಗಳನ್ನಷ್ಟೆ ನೀನು ಪುನರುಚ್ಚರಿಸುವಂತಾಗಲಿ!!” ಎಂದು ಅವಳು ಶಾಪ ಕೊಟ್ಟಳು.

ಹೀರಾ ದೇವಿಯಿಂದ ಶಪಿತಳಾದ ಎಕೋ ಕಾಡಿನಲ್ಲಿ ಅಲೆಯುತ್ತಿರುವಾಗ, ಬೇಟೆಗೆ ಬಂದಿದ್ದ ನಾರ್ಸಿಸಸ್’ನ ಮೇಲೆ ಮೋಹಗೊಂಡಳು. ಅವನು ತನ್ನ ಗುಂಪಿನಿಂದ ಬೇರ್ಪಟ್ಟು, ಗೆಳೆಯರನ್ನು ಹುಡುಕಾಡುತ್ತಿದ್ದ. ಎಕೋ, ತನ್ನ ಪ್ರೇಮ ನಿವೇದನೆ ಮಾಡಿಕೊಳ್ಳಲು ಅವನನ್ನು ಹಿಂಬಾಲಿಸುತ್ತಿದ್ದಳು. ಅವನು “ಗೆಳೆಯರೇ ಎಲ್ಲಿದ್ದೀರಿ? ಯಾರೂ ಕಾಣುತ್ತಿಲ್ಲ ಇಲ್ಲಿ” ಅಂದಾಗ ಎಕೋ ಅವನ ಮಾತಿನ ಕೊನೆಯನ್ನೆ ಪುನರುಚ್ಚರಿಸುತ್ತಾ “ಇಲ್ಲಿ… ಇಲ್ಲಿ…” ಎಂದಳು. ನಾರ್ಸಿಸಸ್’ಗೆ ಅವಳು ಎಲ್ಲಿದ್ದಾಳೆಂದು ತಿಳಿಯಲಿಲ್ಲ. ಅವನು ಕೊಳದ ಬಳಿ ಕುಳಿತು ತನ್ನ ಬಿಂಬವನ್ನು ಕಂಡು, ಅದೇ ಮಾತಾಡುತ್ತಿದೆ ಎಂದು ಭಾವಿಸಿದ. ಅವನ ಪ್ರಣಯ ಯಾಚನೆಯ ಪ್ರತಿ ಮಾತಿನ ಕೊನೆಯನ್ನು ಎಕೋ ಪುನರುಚ್ಚರಿಸುತ್ತಿದ್ದಳು. ಅವನು ಉನ್ಮತ್ತನಾಗಿ ಕೊಳಕ್ಕೆ ಧುಮುಕಿ ಪ್ರಾಣ ಕಳೆದುಕೊಳ್ಳುವಾಗಲೂ ಅವಳಿಂದ ಅವನನ್ನು ರಕ್ಷಿಸಿಕೊಳ್ಳಲು ಆಗಲಿಲ್ಲ. ಅವನು ಜೀವ ತೊರೆ ಕ್ಷಣವೇ ಅವನ ದೇಹದತ್ತ ಧಾವಿಸಿ, ಕೊಳದಿಂದ ಮೇಲಕ್ಕೆತ್ತಿ ಮೈಮೇಲಿರಿಸಿಕೊಂಡು ದುಃಖಿಸತೊಡಗಿದಳು.

ಎಕೋ ನಾರ್ಸಿಸಸ್ ಬಗ್ಗೆ ಅದೆಷ್ಟು ಮೋಹಗೊಂಡಿದ್ದಳೆಂದರೆ, ಅವನ ಮೃತ ದೇಹವನ್ನು ಬಿಟ್ಟುಕೊಡಲು ಅವಳು ಸಿದ್ಧಳಿರಲಿಲ್ಲ. ಅದನ್ನು ತೊಡೆಯ ಮೇಲೆ ಇರಿಸಿಕೊಂಡು, ತನ್ನ ಭಾವನೆಗಳನ್ನು ಹೇಳಿಕೊಳ್ಳಲಾಗದೆ ಒದ್ದಾಡಿದಳು. ತನ್ನ ರೂಪದ ಬಗ್ಗೆ ಜಿಗುಪ್ಸೆಗೊಂಡು ಸೌಂದರ್ಯವನ್ನು ಕಳಚಿಕೊಂಡಳು. ಗಾಳಿ – ಬಿಸಿಲಿಗೆ ಮೈಯೊಡ್ಡಿ ಬಡಕಲಾದಳು. ಕ್ರಮೇಣ ಅವಳ ದೇಹವೇ ವಿರಹದಲ್ಲಿ ಕರಗಿಹೋಯಿತು. ಕೊನೆಗೂ ಉಳಿದದ್ದು ಎಕೋಳ ಧ್ವನಿ ಮಾತ್ರ. ಧ್ವನಿಯೂ ಅಲ್ಲ, ಪ್ರತಿಧ್ವನಿ ಮಾತ್ರ!

ಪ್ರತಿಧ್ವನಿಯನ್ನು ಇಂಗ್ಲೀಷಿನಲ್ಲಿ ‘ಎಕೋ’ ಎಂದು ಕರೆಯುವುದರ ಹಿನ್ನೆಲೆ ಇದು.

Leave a Reply