ಒಂದು ಝೆನ್ ಆಶ್ರಮದಲ್ಲಿ, ಶಿಷ್ಯರಿಗೆಲ್ಲ ಅಲ್ಲಿದ್ದ ಒಬ್ಬ ವೃದ್ಧ ಸನ್ಯಾಸಿಯ ಬಗ್ಗೆ ಅಪಾರ ಕುತೂಹಲ. ಆ ವೃದ್ಧ, ಯಾವುದಕ್ಕೂ ಪ್ರತಿಕ್ರಿಯಿಸುತ್ತಿರಲಿಲ್ಲ, ಯಾವುದರ ಬಗ್ಗೆಯೂ ಚಿಂತೆ ಮಾಡುತ್ತಿರಲಿಲ್ಲ.
ಶಿಷ್ಯರಿಗೆ ಸನ್ಯಾಸಿಯ ಈ ವರ್ತನೆ, ಅಸಹಜ ಅನಿಸಿತ್ತು, ಅವನನ್ನು ಕಂಡು ಅವರಿಗೆ ಒಮ್ಮೊಮ್ಮೆ ಹೆದರಿಕೆಯಾಗುತ್ತಿತ್ತು.
ಒಂದು ದಿನ ಎಲ್ಲ ಶಿಷ್ಯರು ಸೇರಿ ಆ ಸನ್ಯಾಸಿಯನ್ನು ಪರೀಕ್ಷೆ ಮಾಡಬೇಕೆಂದು ನಿರ್ಧರಿಸಿದರು. ಒಂದು ಕತ್ತಲ ದಾರಿಯ ತಿರುವಿನಲ್ಲಿ ಅಡಗಿಕೊಂಡು ಆ ಸನ್ಯಾಸಿ ಬರುವುದನ್ನೇ ಕಾಯತೊಡಗಿದರು.
ಸನ್ಯಾಸಿ ಬಿಸಿ ಚಹಾದ ಬಟ್ಟಲು ಹಿಡಿದುಕೊಂಡು ಅದೇ ದಾರಿಯಲ್ಲಿ ಬಂದ. ಅವ ಹತ್ತಿರ ಬರುತ್ತಿದ್ದಂತೆಯೇ ಶಿಷ್ಯರೆಲ್ಲ ದೊಡ್ಡ ಶಬ್ದ ಮಾಡಿ ಸನ್ಯಾಸಿಯನ್ನು ಹೆದರಿಸಲು ಪ್ರಯತ್ನಿಸಿದರು.
ಅಚಾನಕ್ ಆಗಿ ಆದ ಈ ಗದ್ದಲಕ್ಕೆ ಸನ್ಯಾಸಿ ಪ್ರತಿಕ್ರಿಯಿಸಲೇ ಇಲ್ಲ. ಸುಮ್ಮನೇ ಎರಡು ಫರ್ಲಾಂಗ್ ಮುಂದೆ ನಡೆದು ಹೋಗಿ ಅಲ್ಲಿದ್ದ ಟೇಬಲ್ ಮೇಲೆ ಚಹಾದ ಕಪ್ ಇಟ್ಟು, ಗೋಡೆಗೆ ಬೆನ್ನು ಹಚ್ಚಿ ಜೋರಾಗಿ ಹೋ ಎಂದು ಕಿರಚಿಕೊಂಡ. ಅವನ ಮುಖದಲ್ಲಿ ಹೆದರಿಕೆ ಎದ್ದು ಕಾಣುತ್ತಿತ್ತು. ಶಿಷ್ಯರು, ಸನ್ಯಾಸಿಯ ಈ ವರ್ತನೆ ಕಂಡು ಬೆಕ್ಕಸ ಬೆರಗಾದರು.
(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)