ಮಾಡುವ ಕೆಲಸವನ್ನೇ ತಿಳಿದು ಮಾಡುವುದು ಒಳ್ಳೆಯದು : ಧ್ಯಾನಗೈಯುವರಾರು? #ಭಾಗ2

photoಸರಿಯಾದ ಜ್ಞಾನ, ಸರಿಯಾದ ತಿಳುವಳಿಕೆಯಿಂದ ಬಹಳ ದೊಡ್ಡ ವ್ಯತ್ಯಾಸವೇ ಉಂಟಾಗುತ್ತದೆ. ಭರವಸೆ ಹೆಚ್ಚುತ್ತದೆ, ಸಾಧ್ಯತೆಗಳು ಹೆಚ್ಚುತ್ತವೆ, ಅನುಭವ ಅರಳಿಕೊಳ್ಳುತ್ತದೆ ~ Whosoever Ji

ಪ್ರತಿ ವ್ಯಕ್ತಿಯ ನಡೆ ವೈಯಕ್ತಿಕವಾದದ್ದು. ಅದು ತಮ್ಮೊಳಗೇ ಇರುವಂಥದ್ದು. ಆದರೂ ನಾವು ಯಾವ ಹಾದಿಯಲ್ಲಿ ಸಾಗಬೇಕು, ಯಾವುದು ನಮಗೆ ಒಗ್ಗುವುದಿಲ್ಲ ಎನ್ನುವ ಮಾರ್ಗದರ್ಶನ ಮಾಡಲು ಗುರುವೊಬ್ಬರ ಅವಶ್ಯಕತೆ ಇರುತ್ತದೆ.

ಗುರುವಾದವನು ಪ್ರತಿಯೊಬ್ಬರಿಗೂ ಅವರವರಿಗೆ ಹೊಂದುವಂತಹ ಮಾರ್ಗವನ್ನು ತೋರಿಸಿಕೊಡುತ್ತಾನೆ. ನಮ್ಮೊಳಗಿನ ಮಾರ್ಗ ಅಮೂರ್ತವೂ ಅವ್ಯಕ್ತವೂ ಆಗಿರುತ್ತದೆ. ಅದು ಅಗೋಚರವಾಗಿದ್ದು, ಬರಿಗಣ್ಣಿಗೆ ಕಾಣಿಸದು. ನೀವು ಬಹಳ ಚೆನ್ನಾಗಿ, ಏಕಾಗ್ರ ಚಿತ್ತರಾಗಿ ಧ್ಯಾನ ಮಾಡುತ್ತೀರಿ, ಆದರೆ ನಿಮಗೆ ಧ್ಯಾನ ಎಂದರೆ ಏನೆಂಬುದೇ ತಿಳಿದಿಲ್ಲ. ನೀವು ನಡೆಯುತ್ತಿರುವ ಹಾದಿ ಸರಿ ಇದೆಯೇ ಇಲ್ಲವೇ ಎನ್ನುವುದು ತಿಳಿದಿಲ್ಲ. ಇದರಿಂದ ಏನುಪಯೋಗವಾದಂತಾಯ್ತು!?

ಇದನ್ನು ಹೀಗೆ ತಿಳಿಯಿರಿ. ನೀವು ವನವಿಹಾರಕ್ಕೆ ಹೋಗಿರ್ತೀರಿ, ನಿಮ್ಮ ದಾರಿ ತಪ್ಪಿಬಿಡುತ್ತದೆ. ನಿಮಗೋ ಹಸಿವು, ನೀರಡಿಕೆ. ನಿಮ್ಮ ಸಾಮಾನು ಸರಂಜಾಮುಗಳೆಲ್ಲ ಹಿಂದೆಯೇ ಉಳಿದಿದೆ. ಯಾವ ವಸ್ತುವೂ ಕೈಗೆ ಸಿಗುವಂತಿಲ್ಲ. ಕಾಡಿನಲ್ಲಿ ಯಾರೂ ಹೋಟೆಲು ಕಟ್ಟಿಕೊಂಡು ನಿಮಗಾಗಿ ಕಾಯ್ತಿರುವುದೂ ಇಲ್ಲ. ಆಗೇನು ಮಾಡ್ತೀರಿ? ನಿಮಗೆ ಹಸಿವು ತಡೆಯಲಾಗ್ತಿಲ್ಲ.. ಹಣ್ಣು ಗಿಣ್ಣು ಸಿಗಬಹುದೋ ಎಂದು ಅಲ್ಲಿ ಇಲ್ಲಿ ಹುಡುಕ್ತೀರಿ. ಸಿಕ್ಕರೂ ಅದು ಕಾಡು ಆದ್ದರಿಂದ ಎಂಥದೋ ಒಂದು ಕಾಡು ಹಣ್ಣು ಸಿಗಬಹುದು. ವಿಧಿ ಇಲ್ಲದೆ ಅದನ್ನೆ ತಿನ್ನತೊಡಗ್ತೀರಿ ತಾನೆ!?
ನೀವು ಹಸಿದು ಕಾಡುಹಣ್ಣು ತಿನ್ತಿದ್ದೀರಿ. ಅದು ವಿಷಪೂರಿತವೋ ಏನೋ ನಿಮಗೊಂದೂ ತಿಳಿದಿಲ್ಲ. ಸರಿ. ಯಾವುದು ಸಿಕ್ಕಿತೋ ಅದನ್ನು ತಿಂದಿದ್ದೀರಿ. ನಿಮಗೆ ಏನೂ ಅಡ್ಡ ಪರಿಣಾಮವಾಗಿಲ್ಲ ಅಂದರೆ ಹಣ್ಣು ವಿಷಪೂರಿತವಲ್ಲ ಅಂತ ಸಾಬೀತಾಯ್ತು. ಅದು ನಿಮಗೆ ತಿಂದಮೇಲಷ್ಟೆ ತಿಳಿಯಿತು. ಮೊದಲೇ ಗೊತ್ತಿದ್ದರೆ ಮತ್ತಷ್ಟು ಒಳ್ಳೆಯದಿತ್ತು ಅಲ್ಲವೆ?

ಒಮ್ಮೆ ನನ್ನ ಗೆಳೆಯನೊಬ್ಬ ನನಗೊಂದು ಉಂಗುರ ಉಡುಗೊರೆ ಕೊಟ್ಟ. ನೋಡಲು ಬಹಳ ಚೆಂದವಿತ್ತು. ನನಗೆ ಸಹಜವಾಗಿಯೆ ಖುಷಿಯಾಯ್ತು. ಆದರೆ ಆ ಉಂಗುರು ಯಾವುದರದ್ದೆಂದು ತಿಳಿಯಲಿಲ್ಲ. ಸಂಕೋಚದಿಂದ ಗೆಳೆಯನನ್ನು ಕೇಳಲೂ ಇಲ್ಲ. ಹಾಗೇ ದಿನಗಳು ಕಳೆದವು. ಒಮ್ಮೆ ನನಗೆ ಹಣದ ಅವಶ್ಯಕತೆ ವಿಪರೀತವಾಗಿ ಒದಗಿಬಂತು. ಅದನ್ನು ಹೊಂದಿಸಲು ಯಾವ ವ್ಯವಸ್ಥೆಯೂ ಆಗಲಿಲ್ಲ. ಯಾರೋ ನನಗೆ ಉಂಗುರವನ್ನು ಮಾರುವಂತೆ ಸಲಹೆ ಕೊಟ್ಟರು. ಅದರಂತೆ ನಾನು ಉಂಗುರವನ್ನು ಅಕ್ಕಸಾಲಿಯ ಬಳಿ ತೆಗೆದುಕೊಂಡು ಹೋದೆ. ಇದು ಯಾವುದರಿಂದ ಮಾಡಲ್ಪಟ್ಟಿದೆಯೆಂದು ಕೇಳಿದೆ. ಆತ ಅದು ಶುದ್ಧ ಚಿನ್ನದ್ದೆಂದು ಹೇಳಿದ. ಅಷ್ಟೇ ಅಲ್ಲ, ಅದಕ್ಕೆ ಕೂರಿಸಿರುವುದು ಅತ್ಯಮೂಲ್ಯವಾದ ವಜ್ರವೆಂದೂ ತಿಳಿಸಿದ. ಅದರ ಮೌಲ್ಯ ಎಷ್ಟಾಗಬಹುದೆಂದು ಕೇಳಿದೆ, ಆತ ಎರಡು ಲಕ್ಷ ರೂಪಾಯಿಗಳು ಎಂದ! ನನಗೆ ಆಗ ಗೊತ್ತಾಯ್ತು, ನನ್ನ ಬಳಿ ಎರಡು ಲಕ್ಷ ರೂಪಾಯಿ ಮೌಲ್ಯದ ವಜ್ರ ಹಾಗೂ ಏನಿಲ್ಲವೆಂದರೂ ಐವತ್ತು ಸಾವಿರ ರೂಪಾಯಿಯಷ್ಟು ಮೌಲ್ಯದ ಚಿನ್ನವಿತ್ತೆಂದು! ಅದನ್ನು ತಿಳಿದ ಮೇಲೆ ನನಗೆ ಅದೆಷ್ಟು ಹೆಚ್ಚಿನ ಖುಷಿಯಾಗಿರಬಹುದು ಯೋಚಿಸಿ!

ಸರಿಯಾದ ಜ್ಞಾನ, ಸರಿಯಾದ ತಿಳುವಳಿಕೆಯಿಂದ ಬಹಳ ದೊಡ್ಡ ವ್ಯತ್ಯಾಸವೇ ಉಂಟಾಗುತ್ತದೆ. ಭರವಸೆ ಹೆಚ್ಚುತ್ತದೆ, ಸಾಧ್ಯತೆಗಳು ಹೆಚ್ಚುತ್ತವೆ, ಅನುಭವ ಅರಳಿಕೊಳ್ಳುತ್ತದೆ. ಧ್ಯಾನದ ಸೂಕ್ತ ಅಭ್ಯಾಸದ ಜೊತೆಜೊತೆಗೆ ಸೂಕ್ತ ಜ್ಞಾನ, ಸೂಕ್ತ ತಿಳುವಳಿಕೆಯೂ ಉಂಟಾದರೆ ಮತ್ತೂ ಒಳ್ಳೆಯದೇ ಆಗುತ್ತದೆ.

Leave a Reply