ಒಂದು ಝೆನ್ ಸಂಭಾಷಣೆ

ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ

tao

ಝೆನ್ ಶಿಕ್ಷಕರು ತಮ್ಮ ಪುಟ್ಟ ಶಿಷ್ಯರಿಗೆ ಲೋಕದ ಎದುರು ತಮ್ಮನ್ನು ತಾವು ಹೇಗೆ ಪ್ರಸ್ತುತಪಡಿಸಬೇಕೆಂಬುದನ್ನ ಭಾರಿ ಶಿಸ್ತಿನಿಂದ ಹೇಳಿಕೊಡುತ್ತಾರೆ.

ಒಂದು ಝೆನ್ ಆಶ್ರಮದ ಹುಡುಗ ತರಕಾರಿ ತರಲು ಮಾರ್ಕೇಟಿಗೆ ಹೋಗುತ್ತಿದ್ದಾಗ, ದಾರಿಯಲ್ಲಿ ಇನ್ನೊಂದು ಝೆನ್ ಆಶ್ರಮದ ಹುಡುಗನ್ನು ಕಂಡು “ಎಲ್ಲಿಗೆ ಹೋಗುತ್ತಿದ್ದಿ ?” ಎಂದು ಕೇಳಿದ.

“ಕಾಲು ಕರೆದುಕೊಂಡು ಹೋದಲ್ಲಿಗೆ” ಇನ್ನೊಬ್ಬ ಹುಡುಗ ಉತ್ತರಿಸಿದ.

ಈ ಉತ್ತರ ಕೇಳಿ ಮೊದಲ ಹುಡುಗನಿಗೆ ಆಶ್ಚರ್ಯವಾಯಿತು. ಅವ ತನ್ನ ಶಿಕ್ಷಕನ ಬಳಿ ಹೋಗಿ ನಡೆದಿದ್ದನ್ನೆಲ್ಲ ಹೇಳಿದ.

“ಹೌದಾ? ಹಾಗಾದರೆ, ನಾಳೆ ಆ ಹುಡುಗ ದಾರಿಯಲ್ಲಿ ಸಿಕ್ಕಾಗ, ಮತ್ತೆ ಅದೇ ಪ್ರಶ್ನೆ ಕೇಳು, ಆ ಹುಡುಗ ಅದೇ ಉತ್ತರ ಹೇಳುತ್ತಾನೆ. ಆಗ ನೀನು “ಕಾಲು ಇಲ್ಲದಿದ್ದರೆ ಏನು ಮಾಡುತ್ತಿದ್ದೆ?” ಎನ್ನು. ಸಿಕ್ಕಿಹಾಕಿಕೊಳ್ಳುತ್ತಾನೆ. ಶಿಕ್ಷಕ ಹೇಳಿಕೊಟ್ಟ.

ಮರುದಿನ ಹುಡುಗರು ದಾರಿಯಲ್ಲಿ ಮತ್ತೆ ಭೇಟಿಯಾದರು,

“ಎಲ್ಲಿ ಹೋಗುತ್ತಿದ್ದೀಯ?” ಈ ಹುಡುಗ ಕೇಳಿದ. “ಗಾಳಿ ಬೀಸಿದ ದಿಕ್ಕಿಗೆ” ಆ ಹುಡುಗ ಉತ್ತರಿಸಿದ.

ಈ ಹುಡುಗನಿಗೆ ಮತ್ತೆ ಅಪಮಾನವಾಯಿತು. ಆತ ಮತ್ತೆ ತನ್ನ ಶಿಕ್ಷಕನ ಎದುರು ತನ್ನ ಗೋಳು ತೋಡಿಕೊಂಡ.

“ಗಾಳಿ ಬೀಸದೇ ಇದ್ದರೆ, ಎತ್ತ ಹೋಗುತ್ತಿದ್ದೆ? ಅಂತ ನಾಳೆ ಕೇಳು” ಶಿಕ್ಷಕ ಕಲಿಸಿಕೊಟ್ಟ.

ಮರುದಿನ ಹುಡುಗರು ಮೂರನೇ ಬಾರಿ ದಾರಿಯಲ್ಲಿ ಭೇಟಿಯಾದರು.

“ಗಾಳಿ ಬೀಸದೇ ಇದ್ದರೆ, ಎತ್ತ ಹೋಗುತ್ತಿದ್ದೆ?” ಈ ಹುಡುಗ ಕೇಳಿದ.

“ತರಕಾರಿ ತರಲು ಮಾರ್ಕೇಟಿಗೆ ಹೋಗುತ್ತಿದ್ದೆ”
ಆ ಹುಡುಗ ಉತ್ತರಿಸಿದ.

Leave a Reply