ಬಹುತೇಕ ಎಲ್ಲ ಧರ್ಮಗಳೂ ಆಕಾಶವನ್ನು ದೇವರ ನೆಲೆಯೆಂದು ನಂಬುತ್ತವೆ. ಆದ್ದರಿಂದಲೇ ಆಕಾಶದ ಬಗ್ಗೆ ಕುತೂಹಲದಷ್ಟೆ ಭಯ, ಗೌರವಗಳು ಆಸ್ತಿಕರಲ್ಲಿ ಮನೆ ಮಾಡಿರುವುದು ~ ಆನಂದಪೂರ್ಣ
ಮನುಷ್ಯನ ಅರಿವು ಪ್ರಕೃತಿಯ ಬೆರಗಿಗೆ ತೆರೆದುಕೊಳ್ಳುತ್ತ ಹೋದಂತೆಲ್ಲ ಅದರೊಂದಿಗೆ ಭಾವನಾತ್ಮಕ ಸಂಬಂಧ ಬೆಸೆದುಕೊಳ್ಳತೊಡಗಿದ. ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು, ನೀರು, ಗಾಳಿ, ಬೆಂಕಿ, ಆಕಾಶಗಳು ತನ್ನ ಜೀವನಕ್ಕೆ ಪೂರಕವಾಗಿವೆ ಎಂದು ಅರಿಯುತ್ತಲೇ ಅವುಗಳೆಡೆಗೆ ಕೃತಜ್ಞತಾ ಭಾವವನ್ನು ಬೆಳೆಸಿಕೊಂಡ. ಅವುಗಳ ಸಹಾಯವಿಲ್ಲದೆ ತಾನು ಬದುಕಲಾರೆ ಎಂಬ ಸತ್ಯ ಅವನಲ್ಲಿ ಪ್ರಕೃತಿಯ ಬಗ್ಗೆ ಭಯ ಭಕ್ತಿಗಳನ್ನು ಹುಟ್ಟಿಸಿತು. ಹಾಗೆಂದೇ ಅದನ್ನು ದೇವರೆಂದು ಕರೆದ ಆತ ಆರಾಧನೆಗೆ ಶುರುವಿಟ್ಟು. ಪ್ರಕೃತಿ ಪೂಜೆ ಆರಂಭವಾಗಿದ್ದು ಹೀಗೆ.
ಅನಂತರದ ದಿನಗಳಲ್ಲಿ ಜೀವದ ಉಳಿವು ಮತ್ತು ಅಭಿವೃದ್ಧಿಗೆ ಅಗತ್ಯವಾದ ಈ ಐದು ಪ್ರಾಕೃತಿಕ ಅಂಶಗಳನ್ನು ಮುಂದಿಟ್ಟುಕೊಂಡು ತಾತ್ತ್ವಿಕ ಜಿಜ್ಞಾಸೆಗೂ ಶುರುವಿಟ್ಟ ನಮ್ಮ ಪೂರ್ವಜರು ಈ ತಾತ್ತ್ವಿಕ ಜಿಜ್ಞಾಸೆಯನ್ನು ಬಹಳ ಗಂಭೀರವಾಗಿ ನಡೆಸಿದರು. ಪಂಚಭೂತಗಳ ಪರಿಕಲ್ಪನೆಯನ್ನೂ ಸ್ಥೂಲ ಹಾಗೂ ಸೂಕ್ಷ್ಮ ಸ್ತರಗಳಲ್ಲಿ ಅವುಗಳ ಕೊಡುಗೆ ಹಾಗೂ ಮಹತ್ವಗಳನ್ನೂ ಅವರು ಮಥಿಸಿದರು. ಅದರಂತೆ; ಶರೀರವು ಪಂಚಭೂತಾತ್ಮಕವಾಗಿದ್ದು ಪಂಚತತ್ವದಿಂದ ಉದಿಸಿ ಪಂಚತ್ವದಲ್ಲಿಯೇ ಲೀನವಾಗುತ್ತದೆ ಎಂಬುದನ್ನು ಕಂಡುಕೊಂಡರು. ಇದರ ಸಾರಾಂಶವನ್ನೇ ವೇದೋಪನಿಷತ್ತುಗಳಲ್ಲಿ `ಪೃಥ್ವೀ, ಅಪ್, ತೇಜ, ವಾಯು, ಆಕಾಶಗಳೆಂಬ ಪಂಚ ಭೂತಗಳಿಂದ ರಚನೆಯಾದ ಶರೀರವು ಅಂತ್ಯ ಕಂಡ ನಂತರ `ಪೃಥ್ವೀ’ ತತ್ವ ಪ್ರತೀಕವಾದ ಭೌತಿಕ ಶರೀರವು ಭೂಮಿಯಲ್ಲೂ, `ಅಪ್’ ತತ್ವ ಪ್ರತೀಕವಾದ ರಕ್ತರೂಪೀ ದ್ರವವು ಆವಿಯಾಗಿ ನೀರಿನಲ್ಲೂ, ಉಸಿರಾಡುತ್ತಿದ್ದ `ವಾಯು’ ತತ್ವವು ವಾಯುವಿನಲ್ಲೂ, ಜಠರಾಗ್ನಿ ರೂಪದಲ್ಲಿದ್ದ ಅಗ್ನಿ ರೂಪದ `ತೇಜತತ್ವ’ವು ಅಗ್ನಿಯಲ್ಲೂ, ಜೀವಾತ್ಮವಾಗಿದ್ದ `ಆಕಾಶ’ ತತ್ವವು ಆಕಾಶದಲ್ಲೂ ಲೀನವಾಗುತ್ತದೆ.’ ಎಂಬುದಾಗ ವಿವರಿಸಿರುವುದು.
ವೇದ ಕಾಲೀನ ಸಂಸ್ಕೃತಿಯು ವರುಣ ದೇವತೆಗೆ ಹೆಚ್ಚಿನ ಮಹತ್ವ ನೀಡಿತ್ತು ಎಂಬುದಕ್ಕೆ ವರುಣ ಸೂಕ್ತದ ಋಚೆಗಳೇ ಸಾಕ್ಷಿ. ಸೂರ್ಯ ದೇವತೆ `ಪೂಷನ್’ ಸೃಷ್ಟಿಯ ಮೂಲಾಧಾರವೆಂದು ಪೂಜೆಗೊಳ್ಳುತ್ತಿದ್ದ. ಚಂದ್ರ ಮನಸ್ಸಿನ ಒಡೆಯನೂ ಔಷಧಗಳ (ಸಸ್ಯ ಸಂಕುಲದ) ಪೋಷಕನೂ ಆಗಿ ಮನ್ನಣೆ ಪಡೆದ. ವಾಸ್ತವದಲ್ಲಿ ಈ ಪ್ರಾಮುಖ್ಯತೆಗಳು ವೈಜ್ಞಾನಿಕ ಆಧಾರವನ್ನು ಹೊಂದಿದ್ದವು. ನಕ್ಷತ್ರಗಳ ಮೂಲಕ ದಿಕ್ಕನ್ನೂ ಕಾಲವನ್ನೂ ಮಾಪನ ಮಾಡುವ ಉಪಾಯ ಕಂಡುಕೊಂಡಾಗಿನಿಂದ ಅವು ಕೂಡ ಮಾನವನ ಸಮೀಪದ ಒಡನಾಡಿಗಳಾದವು. ಹೀಗೆ ಮನುಷ್ಯನ ಆಪ್ತತೆಯನ್ನು ಗಳಿಸಿದ ಸೂರ್ಯ, ಚಂದ್ರ, ನಕ್ಷತ್ರ, ಮಳೆಗಳೆಲ್ಲವೂ ಆಕಾಶದಲ್ಲಿ ಇರುವುದರಿಂದ ಆಕಾಶ ಆತನಿಗೆ ಮತ್ತಷ್ಟು ಮಹತ್ವದ ಹಾಗೂ ಅಷ್ಟೇ ಪೂಜನೀಯ ಸಂಗತಿಯಾಗಿ ಗೋಚರಿಸಿತು.
ದ್ಯಾವಾ ಪೃಥಿವೀ
ಆಕಾಶವನ್ನು ಆತ್ಮ ಸ್ವರೂಪಿಯೆಂದು ಬಗೆಯಲಾಗುತ್ತದೆ. ಅದು ನಿರ್ಗುಣ ನಿರಾಕಾರವಾಗಿರುತ್ತಲೇ ಸಗುಣ ಸಾಕಾರವೂ ಹೌದು. ಆಕಾಶವು ಅನಾದಿ ಅನಂತವಾಗಿ ತೋರುತ್ತದೆ. ಭೌತಿಕವಾಗಿ ಆಕಾಶ ಏನೇ ಆಗಿದ್ದರೂ ಆಸ್ತಿಕರ ಪ್ರಕಾರ ಅದು ಭೂಮಿಯ ಮೇಲಿನ ಲೋಕ. ದೇವತೆಗಳು ವಾಸಿಸುವ ಸ್ಥಳ. ಪುಣ್ಯವಂತರು, ಪಿತೃಗಳು ನೆಲೆಸಿರುವ ಸ್ವರ್ಗಲೋಕ. ಬ್ರಹ್ಮಲೋಕ, ಕೈಲಾಸ, ವೈಕುಂಠಗಳು ಇರುವುದು ಇಲ್ಲಿಯೇ. ಬಹುತೇಕ ಎಲ್ಲ ಧರ್ಮಗಳೂ ಆಕಾಶವನ್ನು ದೇವರ ನೆಲೆಯೆಂದು ನಂಬುತ್ತವೆ. ಆದ್ದರಿಂದಲೇ ಆಕಾಶದ ಬಗ್ಗೆ ಕುತೂಹಲದಷ್ಟೆ ಭಯ, ಗೌರವಗಳು ಆಸ್ತಿಕರಲ್ಲಿ ಮನೆ ಮಾಡಿರುವುದು.
ಭೂಮಿಯನ್ನು ತಾಯಿ ಎಂದು ಕರೆದಿರುವ ನಮ್ಮ ಸಂಸ್ಕೃತಿಯು ಆಕಾಶವನ್ನು ತಂದೆ ಎಂದು ಕರೆದಿದೆ. `ದ್ಯಾವಾಪೃಥಿವೀ’ ವೇದಗಳ ಅಚ್ಚುಮೆಚ್ಚಿನ ಜೋಡಿ. ಭೂಮಿಯು ತಾಯ್ತನದ ಸಂಕೇತ. ಉತ್ಪತ್ತಿಯ ಸಂಕೇತ, ಗರ್ಭದ ಸಂಕೇತ. ಉತ್ಪತ್ತಿಗೆ ಕಾರಣವಾಗುವ ಮಳೆ ಆಕಾಶದಿಂದಲೇ ಸುರಿಯುತ್ತದೆ. ಇಲ್ಲಿ ಮಳೆಯು ಪುರುಷ ವೀರ್ಯದ ಸಂಕೇತವಾಗಿಯೂ ಆಕಾಶವು ಪುರುಷನಾಗಿಯೂ ತಮ್ಮ ಪಾತ್ರ ನಿಭಾಯಿಸುತ್ತವೆ.
ಆಕಾಶ ನಮ್ಮ ಕಣ್ಣೋಟಕ್ಕೆ ನಿಲುಕುವ, ಆದರೆ ಕೈಗೆಟುಕದ ಒಂದು ಸಂಗತಿ. ಅದು ಭೌತಿಕ ವಸ್ತುವಿಗಿಂತಲೂ ಹೆಚ್ಚಾಗಿ ಒಂದು ತತ್ತ್ವ. ಆಕಾಶ ಆಧ್ಯಾತ್ಮಿಕ ಅಂತಃಕರಣದ ಪ್ರತಿಫಲವಾಗಿದೆ. ಆದ್ದರಿಂದಲೇ ಭೂಮಿಯಲ್ಲಿ ನಿಂತವರು ಸಾಮಾನ್ಯರಿಗೆ ನಿಲುಕದ ಚಿಂತನೆಗಳನ್ನು ಉಳ್ಳವರಾಗಿದ್ದರೆ, ಅಂಥವರು `ಮುಗಿಲಿಗೆ ಸೇರಿದ’ ಸಾಧಕರು ಎನ್ನಿಸಿಕೊಳ್ಳುತ್ತಾರೆ. ಇಂಥವರು ಅನ್ನದ ನೆಲ, ಅರಿವಿನ ಮುಗಿಲುಗಳ ನಡುವಿನ ಸೇತುವೆಯಾಗಿ ನಿಲ್ಲುತ್ತಾರೆ.