ಸತ್ಯವಂತರ ಹಾದಿ, ಸ್ವಯಂ ಮೋಕ್ಷದ ಹಾದಿ….

ಸತ್ಯವು ಒಂದೇ ಆದರೂ ಋಗ್ವೇದದ ಮಾತಿನಂತೆ, ಅದನ್ನು ನಡೆಯುವ ದಾರಿಗಳು ಹಲವು. ಕೊಟ್ಟ ಮಾತಿಗೆ ಬದ್ಧನಾಗಿರುವುದು ಹರಿಶ್ಚಂದ್ರನಿಗೆ ಸತ್ಯ ಮಾರ್ಗವಾಯಿತು. ಪ್ರಜಾರಂಜಕನಾಗಿ ಉಳಿಯುವುದು ಶ್ರೀ ರಾಮನಿಗೆ ಸತ್ಯವಾಯಿತು. ದಾನಮಾಡುವುದೇ ಕರ್ಣನಿಗೆ ಸತ್ಯದೆಡೆಗೆ ಹಾದಿಯಾಯಿತು; ಸೀತೆಯಂಥ ಸತಿಯರಿಗೆ ಪಾತಿವ್ರತ್ಯವೇ ಸತ್ಯದ ಸಾಧನೆಯಾಯಿತು. ಹೀಗೆ ಮಹಾ ವ್ಯಕ್ತಿಗಳ ಒಬ್ಬೊಬ್ಬರ ಜೀವನವೂ ಪರಮಸತ್ಯದ ವ್ಯಾಖ್ಯಾನದಂತಿದೆ ~ ಸಾ.ಹಿರಣ್ಮಯೀ

ತ್ಯವಂತರ ಹಾದಿ ಸ್ವಯಂ ಮೋಕ್ಷದ ಹಾದಿ. ಸವಾಲುಗಳ ಹಾದಿ. ಸತ್ಯ ಸಾಧಕರ ಯಾತ್ರೆ ಮೊದಲಾಗುವುದು ತ್ಯಾಗದಿಂದ. ಈ ಹೆಬ್ಬಾಗಿಲಿನ ಮೂಲಕವೇ ಅವರು ಸತ್ಯದ ಗುರಿ ತಲುಪುತ್ತಾರೆ. ಹಿಂದೂ ಧರ್ಮದ ಪ್ರಪ್ರಾಚೀನ ಜ್ಞಾನ ಕಣಜ ಋಗ್ವೇದವು `ಏಕಮ್ ಸತ್ ವಿಪ್ರಾಃ ಬಹುಧಾ ವದನ್ತಿ’ ಎಂದು ಹೇಳುತ್ತದೆ. `ಸತ್ಯ ಒಂದೇ; ತಿಳಿದವರು ಅದನ್ನು ಬಗೆಬಗೆಯಾಗಿ ಬಣ್ಣಿಸುತ್ತಾರೆ’ ಎನ್ನುವುದು ಈ ಹೇಳಿಕೆಯಅರ್ಥ.

‘ಸತ್’ ಎಂದರೆ ಯಾವುದು ಇರುವುದೋ ಅದು; ಯಾವುದು ಎಲ್ಲವೂ ಆಗಿದೆಯೋ ಅದು. ಸ್ಥೂಲವಾಗಿ ಹೇಳುವುದಾದರೆ ಯಾವುದು ನಮ್ಮ ದೃಷ್ಟಿಗೆ ಹಾಗೂ ಮುಷ್ಟಿಗೆ ಸಿಕ್ಕುತ್ತದೆಯೋ ಅದೇ ಸತ್. ಏಕೆಂದರೆ ಅನ್ಯ ಪ್ರಮಾಣವನ್ನಪೇಕ್ಷಿಸದ ಸಾಮಾನ್ಯ ಬುದ್ಧಿಗೆ ಇಂದ್ರಿಯಾನುಭವವೇ ಪ್ರಥಮ ಪ್ರಮಾಣ. ಆದುದರಿಂದ ಸತ್ ಎಂದರೆ ಯಾವುದು ಇಂದ್ರಿಯ ಗೋಚರವಾಗುತ್ತಿದೆಯೋ, ಆ ಜಗತ್ತು ಮತ್ತು ಅದರ ವ್ಯಾಪಾರಗಳು. ಇದು ಮೊದಲ ಹೆಜ್ಜೆ. ಆದರೆ ನಾವು ಯಾವುದನ್ನು ಕಾಣುತ್ತಿದ್ದೇವೋ, ಯಾವುದನ್ನು ಸ್ಪರ್ಶಿಸುತ್ತಿದ್ದೇವೋ, ಆ ವಸ್ತುಗಳು ಸತ್ಯವಲ್ಲ ಎಂಬುದು ಎಲ್ಲರಿಗೂ ದಿನದಿನವೂ ಅನುಭವಕ್ಕೆ ಬರುತ್ತದೆ. ಏಕೆಂದರೆ ಅವು ಇಂದು
ಇರುವಂತೆ ಕಂಡರೂ, ಕ್ರಮೇಣ ನಶಿಸಿ ಇಲ್ಲವಾಗುವುದನ್ನು ನಾವು ಕಣ್ಣಾರೆ ಕಾಣುತ್ತೇವೆ. ಆದುದರಿಂದ ಇಂದು ಕಂಡು ಕ್ಷಣಮಾತ್ರದಲ್ಲಿ ಕಣ್ಮರೆಯಾಗುವ, ಇಂದು ಇದ್ದು ನಾಳೆ ನಶಿಸಿ ಹೋಗುವ ವಸ್ತುಗಳನ್ನು ‘ಸತ್ಯ’ವೆಂದು ಕರೆಯಲು ಬಾರದು. ಹೀಗಾಗಿ ಇವುಗಳನ್ನು ಮಿಥ್ಯೆ ಎನ್ನುತ್ತೇವೆ.

ಮಿಥ್ಯೆ ಎಂದರೆ ಕೇವಲ ತೋರಿಕೆ, ಕ್ಷಣಿಕ ಎಂದು ಅರ್ಥ. ಆದರೆ, ಈ ಮಿಥ್ಯೆಯನ್ನು ಕಣ್ಣ ಮುಂದೆ ತಂದು ಬೆರಗುಗೊಳಿಸುವ ಒಂದು ಶಾಶ್ವತದ ಹಿನ್ನೆಲೆ ಇರಬೇಕಲ್ಲ? ಈ ಎಲ್ಲ ಪರಿವರ್ತನೆಗಳ ಮೂಲದಲ್ಲಿ ತಾನು ಇದ್ದು, ಮೇಲಿನ ಎಲ್ಲ ವ್ಯಾಪಾರಗಳ, ನಶ್ವರವಾದರೂ ಮನೋಹರವಾದ ಈ ಲೀಲೆಯನ್ನು ಸೃಜಿಸಿ, ಒಳಗೆ ಇರುವ ಮಹಾಶಕ್ತಿಯನ್ನೇ ನಮ್ಮವರು ಸತ್ಯ ಎಂದು ಕರೆದರು. ‘ಈ ಸತ್ಯದ ಮುಖ ಬಂಗಾರದ ಹೊದಿಕೆಯಿಂದ ಆವೃತವಾಗಿದೆ; ಸತ್ಯ ಧರ್ಮ ದರ್ಶನಾಕಾಂಕ್ಷಿಯಾದ ನನಗಾಗಿ ಆ ಹೊದಿಕೆಯನ್ನು ತೆರೆ’- ಎಂದು ಋಷಿಗಳು ಪ್ರಾರ್ಥಿಸಿದರು. ಆ ಸತ್ಯವನ್ನೇ ‘ಶಾಶ್ವತಂ, ಶಿವಂ, ಅಚ್ಯುತಂ’ ಎಂದು ಕರೆದರು.
ನಮ್ಮ ಸಾಧಕ – ಸಂತ ಪರಂಪರೆ ನಾನಾ ಮಾರ್ಗಗಳಲ್ಲಿ ಸಾಧನೆ ಮಾಡಿ ಸಾಕ್ಷಾತ್ಕರಿಸಿ ಕೊಂಡಿದ್ದು ಇದನ್ನೇ. ಅವರವರ ಭಾವಕ್ಕೆ, ಅವರವರ ದೃಷ್ಟಿಗೆ ಅನುಸಾರವಾಗಿ ಆ ಸತ್ಯ ಅವರಿಗೆ ಕಾಣಿಸಿಕೊಂಡಿತು. ಅಂತೆಯೇ ಅವರು ಅದನ್ನು ಬೋಧಿಸಿದರು ಕೂಡಾ.

ಸತ್ಯವು ಒಂದೇ ಆದರೂ ಋಗ್ವೇದದ ಮಾತಿನಂತೆ, ಅದನ್ನು ನಡೆಯುವ ದಾರಿಗಳು ಹಲವು. ಕೊಟ್ಟ ಮಾತಿಗೆ ಬದ್ಧನಾಗಿರುವುದು ಹರಿಶ್ಚಂದ್ರನಿಗೆ ಸತ್ಯ ಮಾರ್ಗವಾಯಿತು. ಪ್ರಜಾರಂಜಕನಾಗಿ ಉಳಿಯುವುದು ಶ್ರೀ ರಾಮನಿಗೆ ಸತ್ಯವಾಯಿತು. ದಾನಮಾಡುವುದೇ ಕರ್ಣನಿಗೆ ಸತ್ಯದೆಡೆಗೆ ಹಾದಿಯಾಯಿತು; ಸೀತೆಯಂಥ ಸತಿಯರಿಗೆ ಪಾತಿವ್ರತ್ಯವೇ ಸತ್ಯದ ಸಾಧನೆಯಾಯಿತು. ಹೀಗೆ ಮಹಾ ವ್ಯಕ್ತಿಗಳ ಒಬ್ಬೊಬ್ಬರ ಜೀವನವೂ ಪರಮಸತ್ಯದ ವ್ಯಾಖ್ಯಾನದಂತಿದೆ.

ಯಾವ ನಿಜವಾದ ಸಾಧಕರ ಜೀವನವನ್ನು ಅಲೋಕಿಸಿದರೂ ಕಾಣುವುದಿಷ್ಟು: ಅವರು ಹುಟ್ಟುತ್ತಲೇ ಪರಿಪೂರ್ಣರಲ್ಲ. ಬೆಳೆಯುತ್ತ ಪರಿಪೂರ್ಣತೆಗಾಗಿ ಶ್ರಮಿಸುತ್ತಾ ಮುನ್ನಡೆಯುವ ವೀರರು. ಅವರ ಬದುಕು ಹೂವಿನ ಹಾಸಿಗೆಯಲ್ಲ; ಶರಶಯನ. ಅವರು ಭೋಗ ವೈಭವಗಳ ನಡುವೆ ಬಾಳಿದರೂ, ಅವರ ದೃಷ್ಟಿ ಅದರಾಚೆಗಿರುವ ಭೂಮದೆಡೆಗೆ. ಅವರ ಹಾದಿಯ ತುಂಬ ಧರ್ಮಸಂಕಟಗಳ ಕೂರಲಗಿನ ಕೊಳ್ಳಗಳು; ಅಗ್ನಿಪರೀಕ್ಷೆಯ ಕುಂಡಗಳು; ಕಂಬನಿಯ ಕಡಲುಗಳು. ಆದರೂ ಈ ಎಲ್ಲ ಸಂಕಟಗಳ ಮಾಲೆಯ ಮೇಲೆ
ನಗುಮುಖದಿಂದ, ದಿವ್ಯ ಶ್ರದ್ಧೆಯಿಂದ, ಉಳಿದವರೆಡೆಗೆ ಪರಮ ಅನುಕಂಪದಿಂದ, ಅವರ ಯಾತ್ರೆ ಸಾಗುತ್ತದೆ. ಈ ಎಲ್ಲ ನಿಶಿತಧಾರೆಯ ಮೇಲೆ ನಡೆದು ಮಾನವ ಕಲ್ಯಾಣಕ್ಕೆ ತಮ್ಮ ಸಮಸ್ತವನ್ನೂ ಧಾರೆ ಎರೆದು ಶಿವದ ಬೆಳಕಿನಲ್ಲಿ ನಿಂತ ಧೀರರಿವರು!

ಸತ್ಯ ಸಾಧಕರ ಯಾತ್ರೆ ಮೊದಲಾಗುವುದು ತ್ಯಾಗದಿಂದ. ತ್ಯಾಗ ಎಂದರೆ ಬಲವಂತದಿಂದ ಕೊಡುವುದಲ್ಲ; ಮಾತಿಗೆ ಸಿಕ್ಕಿದೆನಲ್ಲಾ ಎಂಬ ತಳಮಳದಿಂದ ಕೊಡುವುದೂ ಅಲ್ಲ; ಪ್ರತಿಫಲ ನಿರೀಕ್ಷೆಯಿಂದ ಮಾಡುವುದಲ್ಲ; ಅಥವಾ ಬೆಪ್ಪುತನದಿಂದ ಕೊಡುವುದಲ್ಲ; ಇಲ್ಲವೇ ತಾನು ತ್ಯಾಗಿ ಎನ್ನಿಸಿಕೊಳ್ಳಬೇಕೆಂಬ ಗೂಢೋದ್ದೇಶದಿಂದ ಕೈಕೊಳ್ಳುವುದೂ ಅಲ್ಲ.
‘ತ್ಯಾಗೇನೈಕೇನ ಅಮೃತತ್ವ ಮಾನುಷುಃ’ ಎಂಬ ಮಾತಿನಲ್ಲಿ ಸತ್ಯವಂತರ ವಿಶ್ವಾಸವಿರುತ್ತದೆ. ಹಾಗೆಂದು ತಾವು ಅಮರರಾಗಬೇಕೆಂದೇನೂ ಅವರು ಅದನ್ನು ನಡೆಸುವುದಲ್ಲ. ಸತ್ಯವಂತರ ಹಾದಿ ಸ್ವಯಂ ಮೋಕ್ಷದ ಹಾದಿ. ಸವಾಲುಗಳ ಹಾದಿ. ಈ ಸವಾಲುಗಳನ್ನು ಗೆಲ್ಲಲು ಅವರು ಲೌಕಿಕದ ಒಂದೊಂದೇ ವಸ್ತು ವಿಷಯಗಳನ್ನು ತ್ಯಜಿಸುತ್ತಾ ಸಾಗುತ್ತಾರೆ. ಈ ತ್ಯಾಗವು ಅವರ ಖಾತೆಗೆ ಅಲೌಕಿಕ ಫಲವನ್ನು ತುಂಬುತ್ತಾ ಹೋಗುತ್ತದೆ, ಸಹಜವಾಗಿ ಮೋಕ್ಷ ಅವರ ಪಾಲಿಗೆ ಸಂದಾಯವಾಗುತ್ತದೆ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.