ನದಿ ತಿರುಗಿಸಿ ಆಜೀಯಸನ ಕೊಟ್ಟಿಗೆ ತೊಳೆದ ಹೆರಾಕ್ಲೀಸ್ :  ಗ್ರೀಕ್ ಪುರಾಣ ಕಥೆಗಳು ~ 27

ಹೆರಾಕ್ಲೀಸ್ ಹೀರಾ ದೇವಿಯ ಪಿತೂರಿಯಿಂದ 12 ಸಾಹಸ ಕಾರ್ಯಗಳನ್ನು ಮಾಡಬೇಕಾಗಿ ಬಂದ ಪ್ರಕರಣವನ್ನು ಇಲ್ಲಿ (https://aralimara.com/2018/05/14/greek16/   ಮತ್ತು  https://aralimara.com/2018/05/15/greek17/ ಕೊಂಡಿಯನ್ನು ಕ್ಲಿಕ್ ಮಾಡಿ) ಓದಿದ್ದೀರಿ. ಈ ಹನ್ನೆರಡು ಸಾಹಸಗಳಲ್ಲಿ – ಹೆರಾಕ್ಲೀಸನು ಅಲ್ಫೀಯಸ್ ಮತ್ತು ಪೆನೀಯಸ್ ನದಿಗಳನ್ನು ಹರಿಸಿ ಆಜೀಯಸನ ಕೊಟ್ಟಿಗೆ ತೊಳೆದದ್ದು ಐದನೇ ಸಾಹಸವಾಗಿತ್ತು. ಅವನ ಈ ಸಾಹಸ Cleaning the Augean stables ಎಂಬ ನುಡಿಗಟ್ಟು ಚಾಲ್ತಿಗೆ ಬರಲು ಕಾರಣವಾಯಿತು.

ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ

ಹೆರಾಕ್ಲೀಸ್ ವಾಸವಿದ್ದ ಮೈಕಿನೀ ನಗರದಿಂದ ಬಹಳ ದೂರ, ಪಶ್ಚಿಮದಲ್ಲಿ ಈಲಿಸ್ ಎಂಬ ನಗರವಿತ್ತು. ಸೂರ್ಯ ದೇವನ ಮಗ ಆಜೀಯಸ್ ಎಂಬುವವನು ಅದನ್ನು ಆಳುತ್ತಿದ್ದ. ಅವನ ಬಳಿ ಸಾವಿರಾರು ದನಕರುಗಳು ಮತ್ತು ಕುರಿಗಳು ಇದ್ದವು. ಅವೆಲ್ಲಕ್ಕೂ ವಿಶಾಲವಾದ ಕೊಟ್ಟಿಗೆಗಳನ್ನು ಮಾಡಿಸಿದ್ದ ಆಜೀಯಸ್, ಅವುಗಳನ್ನು ಶುಚಿಗೊಳಿಸಲು ಮಾತ್ರ ಯಾರನ್ನೂ ನೇಮಿಸಿರಲಿಲ್ಲ. ಹೀಗಾಗಿ ವರ್ಷಗಟ್ಟಲೆಯ ಗೊಬ್ಬರ ರಾಶಿ ಬಿದ್ದು ಚಿಬ್ಬಗಳೇ ನಿರ್ಮಾಣವಾಗಿಬಿಟ್ಟಿದ್ದವು. ಇದರಿಂದ ಸುತ್ತಮುತ್ತಲ ರಾಜ್ಯಗಳಿಗೂ ದುರ್ಗಂಧ ಹಬ್ಬಿತ್ತು. ಆದರೆ ದೈವಾನುಗ್ರಹವಿದ್ದ ಅವನ ಕೊಟ್ಟಿಗೆಗಳ ಜಾನುವಾರುಗಳು ಈ ಕೊಳಕಿನ ನಡುವೆಯೂ ದಷ್ಟಪುಷ್ಟವಾಗಿ. ಆರೋಗ್ಯದಿಂದಿದ್ದವು. ಆಜೀಯಸ್ ಶುಚಿತ್ವದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇರಲು ಇದೂ ಒಂದು ಕಾರಣವಾಗಿತ್ತು.

ಯೂರಿಸ್ತ್ಯೂಸ್ ಈ ರಾಜ್ಯದ ಬಗ್ಗೆ ಕೇಳಿಪಟ್ಟಿದ್ದ. ಅಲ್ಲಿಯ ಗೊಬ್ಬರದ ರಾಶಿ ಮತ್ತು ದುರ್ಗಂಧದ ಬಗ್ಗೆ ಕೇಳಿದ ಕೂಡಲೇ ಅವನಿಗೆ ನೆನಪಾಗಿದ್ದು ಹೆರಾಕ್ಲೀಸ್! ಹೀರಾ ದೇವಿಯ ಸೂಚನೆಯಂತೆ ಆತ ಈವರೆಗೆ ಹೆರಾಕ್ಲೀಸನಿಗೆ 4 ಕೆಲಸಗಳನ್ನು ಕೊಟ್ಟಿದ್ದು, ಆತ ಎಲ್ಲದರಲ್ಲೂ ವಿಜಯಿಯಾಗಿದ್ದ. ಈಗ ಐದನೆಯ ಕೆಲಸವಾಗಿ ಯೂರಿಸ್ತ್ಯೂಸ್, ಆಜೀಯಸನ ಕೊಟ್ಟಿಗೆ ಶುಚಿಗೊಳಿಸುವ ಕೆಲಸವನ್ನು ವಹಿಸಿದ. ಇದರಲ್ಲಿ ಆತ ಸೋಲುವುದು ಖಚಿತ ಎಂದೇ ಭಾವಿಸಿದ. (ಅಲ್ಲಿಗೆ. ಆಜೀಯಸನ ಕೊಟ್ಟಿಗೆ ಅದ್ಯಾವ ಕುಖ್ಯಾತಿ ಪಡೆದಿತ್ತು ಊಹಿಸಿ!)

ಅದರಂತೆ ಹೆರಾಕ್ಲೀಸನು ಈಲಿಸ್’ಗೆ ಬಂದ. ದೊರೆ ಆಜೀಯಸ್’ನನ್ನು ಕಂಡು, “ನಿನ್ನ ರಾಜ್ಯದಲ್ಲಿ ಶೇಖರವಾಗಿರುವ ಗೊಬ್ಬರದಿಂದ ನೆರೆಯ ರಾಜ್ಯಗಳಿಗೂ ದುರ್ಗಂಧ ಹರಡುತ್ತಿದೆ. ನಿನ್ನ ಜನರನ್ನು ಬಿಟ್ಟು ಅದನ್ನು ಶುಚಿಗೊಳಿಸಬಾರದೆ?” ಎಂದು ಕೇಳಿದ. ಆಜೀಯಸ್, “ಅದು ನನ್ನಿಷ್ಟ. ನಿನಗೆ ಸಹಿಸಲಾಗದೆ ಹೋದರೆ ನೀನೇ ಶುಚಿ ಮಾಡಿಸು” ಅಂದ. “ಆಗಲಿ, ನಾನು ಇಂದು ಸಂಜೆಯೊಳಗೆ ನಿನ್ನ ಕೊಟ್ಟಿಗೆಯನ್ನು ಶುಚಿ ಮಾಡಿಸುತ್ತೇನೆ. ನನಗೇನು ಕೊಡುತ್ತೀಯ?” ಎಂದು ಕೇಳಿದ ಹೆರಾಕ್ಲೀಸ್. ಆಜೀಯಸ್ ನಗುತ್ತಾ, “ಅಸಾಧ್ಯವಾದ ಸವಾಲನ್ನು ಹಾಕುತ್ತಿದ್ದೀಯ. ಇರಲಿ, ನಿನಗೆ ನನ್ನ ಗೋಸಂಪತ್ತಿನ ಹತ್ತನೇ ಒಂದು ಪಾಲನ್ನು ಕೊಡುತ್ತೇನೆ” ಎಂದು ಹೇಳಿದ. ಸಾವಿರಾರು ಸಂಖ್ಯೆಯಲ್ಲಿದ್ದ ಗೋವುಗಳ ಪೈಕೆ ಹತ್ತನೇ ಒಂದು ಭಾಗವೆಂದರೂ ಸಾಕಷ್ಟಾಯಿತು! ಹೆರಾಕ್ಲೀಸ್ ಅದಕ್ಕೊಪ್ಪಿದ. ಅಜೀಯಸ್’ಗೆ ಯೂರಿಸ್ತ್ಯೂಸ್ ಕೂಡಾ ಇದೇ ಕೆಲಸ ವಹಿಸಿದ್ದಾನೆಂಬ ಅರಿವಿಲ್ಲದೆ, ತನ್ನ ಮಾತನ್ನು ಅಧಿಕೃತಗೊಳಿಸಿ ಆದೇಶ ಹೊರಡಿಸಿದ.

ಹೆರಾಕ್ಲೀಸ್ ಕೊಟ್ಟಿಗೆಯ ಬಳಿ ಬಂದ. ಪುಟ್ಟ ಬೆಟ್ಟದಷ್ಟು ಎತ್ತರಕ್ಕೆ ಗೊಬ್ಬರದ ರಾಶಿಗಳಿದ್ದವು. ಉಸಿರಾಡಲು ಉಬ್ಬಸಪಡುವಷ್ಟು ಕೆಟ್ಟ ವಾಸನೆ ಬೇರೆ. ಸಾವಿರ ಕೆಲಸಗಾರರನ್ನು ನೇಮಿಸಿ ಒಂದು ವರ್ಷ ಕೆಲಸ ಮಾಡಿದರೂ ಅದನ್ನು ಶುಚಿಗೊಳಿಸುವುದು ಕಷ್ಟವಿತ್ತು. ಅವನೊಂದು ಉಪಾಯ ಹೂಡಿದ. ಮೊದಲಿಗೆ ಕೊಟ್ಟಿಗೆಯ ಗೋಡೆಗಳನನು ಒಡೆಸಿದ. ಈಲಿಸ್ ಬಳಿ ಹರಿಯುತ್ತಿದ್ದ ಅಲ್ಫೀಯಸ್ ಮತ್ತು ಪೆನೀಯಸ್ ನದಿಗಳ ಪ್ರವಾಹವನ್ನು ಊರ ಕಡೆಗೆ ತಿರುಗಿಸಿದ. ಎರಡೂ ನದಿಗಳ ನೀರು ಇಕ್ಕೆಲಗಳಿಂದ ನುಗ್ಗಿ ಬಂದು ಕೊಟ್ಟಿಗೆಯ ಕೊಳಕನ್ನೆಲ್ಲ ಕೊಚ್ಚಿಕೊಂಡು ಹರಿದವು. ಅವುಗಳ ರಭಸಕ್ಕೆ ಗೊಬ್ಬರದ ದಿಬ್ಬಗಳು ಹೇಳಹೆಸರಿಲ್ಲವಾದವು. ಕೆಲವೇ ನಿಮಿಷಗಳಲ್ಲಿ ಆಜೀಯಸನ ಕೊಟ್ಟಿಗೆ ತೊಳೆದಿಟ್ಟಂತೆ ಶುಚಿಯಾಯಿತು. ಯಾವ ಕೆಲಸವನ್ನು ಸಾಧ್ಯವೇ ಇಲ್ಲವೆಂದು ಭಾವಿಸಲಾಗಿತ್ತೋ ಆ ಕೆಲಸವನ್ನು ಹೆರಾಕ್ಲೀಸ್ ಸಾಧಿಸಿದ್ದ. (ಹೀಗೆ ಅಸಾಧ್ಯವಾದ ಕೆಲಸವನ್ನು ಸಾಧಿಸುವುದಕ್ಕೆ Cleaning the Augein stables ಎಂಬ ನುಡಿಗಟ್ಟು ಚಾಲ್ತಿಗೆ ಬಂದಿದ್ದು ಹೀಗೆ)  

ಆದರೆ ಅಜೀಯಸ್, ನದಿಗಳ ಸಹಾಯ ಪಡೆದ ಕಾರಣವೊಡ್ಡಿ ದನಗಳನ್ನು ಕೊಡಲು ನಿರಾಕರಿಸಿದ. ಅತ್ತ ಯೂರಿಸ್ತ್ಯೂಸನೂ ಸವಾಲಿನ ವಿಷಯ ತಿಳಿದು, “ಹೆರಾಕ್ಲೀಸನು ಮಾಡಿರುವುದು ನನ್ನ ಕೆಲಸ, ಅದಕ್ಕೆ ಯಾವ ಕೊಡುಗೆಯನ್ನೂ ಕೊಡಬೇಕಾದ್ದಿಲ್ಲ” ಎಂದು ದೂತನ ಮೂಲಕ ಹೇಳಿ ಕಳುಹಿಸಿದ್ದ. ಒಟ್ಟಾರೆ, ವಹಿಸಲಾಗಿದ್ದ ಕೆಲಸವನ್ನು ಜಾಣ್ಮೆಯಿಂದ ಮಾಡಿಯೂ ಹೆರಾಕ್ಲೀಸನಿಗೆ ಫಲ ದೊರೆಯದೆ ಹೋಯಿತು. ಇದನ್ನು ಮನಸಿನಲ್ಲಿಟ್ಟುಕೊಂಡ ಹೆರಾಕ್ಲೀಸ್, ಮುಂದಿನ ದಿನಗಳಲ್ಲಿ ಸರಿಯಾಗಿಯೇ ಪ್ರತೀಕಾರ ತೀರಿಸಿಕೊಂಡ.

Advertisements

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.