ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ
ಬದುಕನ್ನು ಹುಡುಕುವುದು
ಸಾವನ್ನು ಮಾತಾಡಿಸಿದಂತೆ.
ನಮ್ಮ ದೇಹದ ಒಂಭತ್ತು ರಾಜರು
ನಾಲ್ವರು ಗುಲಾಮರು
ಬದುಕನ್ನು ಹುಡುಕುವುದಿಲ್ಲ,
ಸಾವನ್ನು ಆಮಂತ್ರಿಸುತ್ತಾರೆ.
ಈ ಯಾರ ಮಾತೂ ಕೇಳದೇ
ನಿಮ್ಮ ಬದುಕನ್ನ
ನೀವೇ ಹುಡುಕಲು ಹೊರಟಾಗ
ದಾರಿಯಲ್ಲಿ ಗೂಳಿ ಬರಲಿ,
ಹುಲಿ ಬರಲಿ,
ನಿಮಗೆ ಭಯವಾಗುವುದಿಲ್ಲ.
ಯುದ್ಧದಲ್ಲಿ ನಿಮಗೆ ಆಯುಧಗಳ ಹೆದರಿಕೆ
ಹೊರಟು ಹೋಗುತ್ತದೆ.
ಗೂಳಿ ಬಂದರೆ ಎಲ್ಲಿ ತಿವಿಯುತ್ತದೆ?
ಹುಲಿ ಏನನ್ನು ಕಚ್ಚಬಲ್ಲದು?
ಖಡ್ಗ ಕತ್ತರಿಸಬೇಕಾದರೆ
ಅಲ್ಲಿ ಏನಾದರೂ ಇರಬೇಕಲ್ಲ?
ಯಾಕೆ ಹೀಗೆ?
ನಿನ್ನ ರಾಜರು, ಗುಲಾಮರು
ಎಲ್ಲ ಮನೆಯಲ್ಲಿದ್ದಾರಲ್ಲ ಅದಕ್ಕೇ.
ಇಲ್ಲಿ ನೀನೊಬ್ಬನೇ, ನಿರಾಯುಧ;
ಯಾವುದೂ ನಿನ್ನ ತಾಕುವುದಿಲ್ಲ,
ಯಾವುದೂ ನಿನ್ನ ಕೊಲ್ಲುವುದಿಲ್ಲ.
ಹೀಗೆ ಹುಡುಕುವುದು
ಎಷ್ಟು ಸುಲಭ? ಎಷ್ಟು ಕಠಿಣ?