ಮೀನುಗಳನ್ನು ಸಮುದ್ರಕ್ಕೆಸೆಯುತ್ತಿದ್ದ ಹುಡುಗಿ ಮತ್ತು ಮುದುಕ : ಝೆನ್ ಕಥೆ

ಬ್ಬ ವಯಸ್ಸಾದ ಮನುಷ್ಯ ಸಮುದ್ರದ ದಂಡೆಯ ಮೇಲೆ ಓಡಾಡುತ್ತಿದ್ದಾಗ ಸಾವಿರಾರು ಸಂಖ್ಯೆಯಲ್ಲಿ ನಕ್ಷತ್ರ ಮೀನುಗಳು ತೀರದಲ್ಲಿ ಚಡಪಡಿಸುವುದನ್ನ ಕಂಡ.
ದೂರದಲ್ಲಿ ಒಬ್ಬ ಹುಡುಗಿ ಒಂದೊಂದಾಗಿ ಮೀನುಗಳನ್ನು ಎತ್ತಿ ವಾಪಸ್ ಸಮುದ್ರಕ್ಕೆ ಎಸೆಯುತ್ತಿದ್ದಳು. ಈ ದೃಶ್ಯವನ್ನು ನೋಡಿ ಆಶ್ಚರ್ಯಚಕಿತನಾದ ಮನುಷ್ಯ ಹತ್ತಿರ ಹೋಗಿ ಆ ಹುಡುಗಿಯನ್ನು ಮಾತಾಡಿಸಿದ.

“ಹುಡುಗಿ, ಏನು ಮಾಡುತ್ತಿದಿ? “
“ಈ ಮೀನುಗಳನ್ನು ಕಾಪಾಡುತ್ತಿದ್ದೇನೆ “ ಉತ್ತರಿಸಿದಳು ಹುಡುಗಿ. “ನಾನು ಈ ಮೀನುಗಳನ್ನ ವಾಪಸ್ ಸಮುದ್ರಕ್ಕೆ ಬಿಡದಿದ್ದರೆ, ಅವು ಸತ್ತು ಹೋಗುತ್ತವೆ “
ಹುಚ್ಚು ಹುಡುಗಿ, ಆ ಮನುಷ್ಯ ಒಳಗೊಳಗೆ ನಕ್ಕ.
“ಇರುವುದು ನೀನೊಬ್ಬಳೇ, ಮೀನುಗಳೋ ಸಾವಿರ ಸಾವಿರ. ಹೇಳು ಹೇಗೆ ಸಾಧ್ಯ ಈ ಕೆಲಸ ನಿನ್ನಿಂದ?”

ಹುಡುಗಿ ಬಾಗಿ ಒಂದು ಮೀನನ್ನು ಕೈಗೆತ್ತಿಕೊಂಡು ಆ ಮೀನನ್ನು ಒಮ್ಮೆ, ಆ ಮನುಷ್ಯನನ್ನು ಒಮ್ಮೆ ನೋಡಿದಳು.
“ನೋಡು ಹೀಗೆ” ಎನ್ನುತ್ತಾ ಮೀನನ್ನು ಬೀಸಿ ಸಮುದ್ರದಲ್ಲಿ ಎಸೆದಳು.

(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)

Leave a Reply