ಅಪೋಲೋಗೆ ಕೊರೊನಿಸಾಳ ಅನ್ಯಮನಸ್ಕತೆ ಅನುಮಾನ ತರಿಸಿತ್ತು. ಅವನು ತನ್ನ ನೆಚ್ಚಿನ ಪಕ್ಷಿಯಾದ ಕಾಗೆಯನ್ನು ಅವಳ ಮೇಲೆ ಕಣ್ಣಿಡಲು ನೇಮಿಸಿದ್ದ…
ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ
ಥೆಲಿಸಿ ರಾಜ್ಯವನ್ನು ಆಳುತ್ತಿದ್ದ ಫ್ಲೆಜಿಯಸ್ ಎಂಬ ರಾಜನ ಮಗಳು ಕೊರೋನಿಸಾ. ಇವಳು ಸುಂದರಿಯೂ ಕಲಾವಿದೆಯೂ ಆಗಿದ್ದಳು. ಕೊರೋನಿಸಾಳ ಸೌಂದರ್ಯಕ್ಕೆ ಕಾವ್ಯ ಹಾಗೂ ಸಂಗೀತಾಭಿಮಾನಿ ದೇವತೆಯಾದ ಅಪೋಲೋ ಕೂಡಾ ಮರುಳಾಗಿದ್ದನು. ಅವಳಲ್ಲಿ ಮೋಹಗೊಂಡು, ಮನವೊಲಿಸಿ ತನ್ನ ಪ್ರೇಯಸಿಯನ್ನಾಗಿ ಮಾಡಿಕೊಂಡನು.
ಕೊರೊನಿಸಾಳಿಗೆ ಅಪೋಲೋನ ಸಹವಾಸ ಹೆಮ್ಮೆಯ ವಿಷಯವಾಗಿತ್ತು. ಸ್ವರ್ಗಲೋಕದ ದೇವಸಭೆಯ ಪ್ರತಿಷ್ಠಿತ ಸದಸ್ಯನೂ, ದೇವತೆಗಳಲ್ಲೇ ಅತ್ಯಂತ ಸುಂದರನೂ ಆಗಿದ್ದ ಅಪೋಲೋ ತಾನಾಗಿಯೇ ಕೊರೊನಿಸಾಳಿಗೆ ಒಲಿದು ಬಂದಿದ್ದು ಅನೇಕರ ಅಸೂಯೆಗೂ ಕಾರಣವಾಗಿತ್ತು.
ಬಹುಶಃ ಕೊರೊನಿಸಾ, ದೇವತೆ ಎನ್ನುವ ಕಾರಣಕ್ಕೆ ಅಪೋಲೋನ ಪ್ರಣಯಾಹ್ವಾನವನ್ನು ಒಪ್ಪಿಕೊಂಡಿದ್ದಳೇನೋ. ಅವಳಿಗೆ ಅವನ ಮೇಲೆ ನೈಜ ಪ್ರೇಮ ಉಂಟಾಗಲೇ ಇಲ್ಲ. ಬದಲಿಗೆ ಅವಳು ಇಸ್ಕಿಸ್ ಎಂಬ ರಾಜಕುಮಾರನನ್ನು ಪ್ರೀತಿಸತೊಡಗಿದಳು. ಮತ್ತು ಈ ವಿಷಯ ಅಪೋಲೋ ದೇವತೆಗೆ ತಿಳಿಯದಂತೆ ಎಚ್ಚರವಹಿಸಿದಳು.
ಆದರೆ ಅಪೋಲೋಗೆ ಕೊರೊನಿಸಾಳ ಅನ್ಯಮನಸ್ಕತೆ ಅನುಮಾನ ತರಿಸಿತ್ತು. ಅವನು ತನ್ನ ನೆಚ್ಚಿನ ಪಕ್ಷಿಯಾದ ಕಾಗೆಯನ್ನು ಅವಳ ಮೇಲೆ ಕಣ್ಣಿಡಲು ನೇಮಿಸಿದ. ಕೊರೊನಿಸಾಳ ಚಲನವಲನವನ್ನು ಗಮನಿಸುತ್ತಿದ್ದ ಕಾಗೆಯು ಇಸ್ಕಿಸ್ ಜೊತೆಗೆ ಅವಳು ಪ್ರೇಮದಿಂದ ಒಡನಾಡುವುದನ್ನು ನೋಡಿತು. ಕೂಡಲೇ ಸ್ವರ್ಗಲೋಕಕ್ಕೆ ಹಾರಿ, ಅಪೋಲೋನನ್ನು ಕಂಡು ವಿಷಯ ತಿಳಿಸಿತು. ಕಾಗೆ ತಂದ ಸುದ್ದಿ ಕೇಳಿ ಅಪೋಲೋನ ಅಹಂಕಾರ ಕೆರಳಿತು. ಸ್ವರ್ಗದ ದೇವತೆಯಾದ ತನಗಿಂತ ಭೂಮಿಯ ಯಕಶ್ಚಿತ್ ರಾಜಕುಮಾರ ಅವಳಿಗೆ ಪ್ರಿಯವಾದನೇ ಎಂದು ಅವಡುಗಚ್ಚಿದನು. “ಅವಳ ಈ ಪ್ರೇಮ ವ್ಯವಹಾರವನ್ನು ನೋಡಿಯೂ ನೀನು ಶಿಕ್ಷಿಸದೆ ಸುಮ್ಮನೆ ಬಂದೆಯಾ?” ಎಂದು ಕಾಗೆಯ ಮೇಲೆ ಹರಿಹಾಯ್ದನು. ಕಾಗೆ ಸುಮ್ಮನೆ ಕುಳಿತಿತು. ಮತ್ತೋ ಕೋಪಗೊಂಡ ಅಪೋಲೋ, “ಆ ಇಸ್ಕಿಸನ ಕಣ್ಣುಗುಡ್ಡೆಗಳನ್ನು ಕುಕ್ಕಿ ಸಾಯಿಸದೆ ಹಾಗೆಯೇ ಬಂದ ನೀನು ಕೂಡಾ ದ್ರೋಹಿಯೇ ಆಗಿದ್ದೀಯ. ನಿನ್ನ ರೆಕ್ಕೆಗಳು ಕಡುಗಪ್ಪಾಗಲಿ. ನಿನ್ನನ್ನು ನೋಡಿದಾಗೆಲ್ಲ ಜನರಿಗೆ ನಿನ್ನ ದ್ರೋಹ ನೆನಪಾಗಲಿ” ಎಂದು ಶಪಿಸಿದನು. ಕೂಡಲೇ ಹಾಲಿನಂತೆ ಬೆಳ್ಳಗಿದ್ದ ಕಾಗೆಯು ಕಪ್ಪಾಗಿಹೋಯಿತು.
ಆಮೇಲೆ ಅಪೋಲೋ ಕೊರೊನಿಸಾಳನ್ನು ಶಿಕ್ಷಿಸಲು ಧಾವಿಸಿದನು. ಅವಳನ್ನು ನಿಂದಿಸಿ ಅವಳ ಎದೆಗೆ ಗುರಿ ಇಟ್ಟು ಬಾಣ ಬಿಟ್ಟನು. ಅವಳು ಕುಸಿದು ಬಿದ್ದು ಸತ್ತುಹೋದಳು. ಸಾಯುವ ಮೊದಲು ಕೊರೊನಿಸಾ, ತನ್ನ ಗರ್ಭದಲ್ಲಿ ಅಪೋಲೋನ ಮಗು ಬೆಳೆಯುತ್ತಿದೆ ಎಂದು ಹೇಳಿದಳು. ಅಪೋಲೋ ಅದನ್ನು ಕೇಳಿ ಆಕೆಯನ್ನು ಬದುಕಿಸಲು ಮುಂದಾದರೂ ಪ್ರಯೋಜನವೇನಾಗಲಿಲ್ಲ. ಅದೇ ವೇಳೆಗೆ ಅಪೋಲೋನ ತಂಗಿ ಆರ್ಟೆಮಿಸ್, ಇಸ್ಕಿಸ್’ನನ್ನು ಎಳೆದುತಂದು, ಕೊರೊನಿಸಾಳ ಚಿತೆಯ ಮೇಲೆ ಅವನನ್ನೂ ಕಟ್ಟಿ ಬೆಂಕಿ ಇಟ್ಟಳು.
ಕೊನೆ ಕ್ಷಣದಲ್ಲಿ ಅಪೋಲೋಗೆ ತನ್ನ ಮಗುವನ್ನು ಉಳಿಸಿಕೊಳ್ಳಬೇಕು ಅನ್ನಿಸಿತು. ತನ್ನ ಮಗ ಹರ್ಮೀಸನನ್ನು ಕರೆದು ಭ್ರೂಣವನ್ನು ಹೊರತೆಗೆಯುವಂತೆ ಸೂಚಿಸಿದನು. ಅದರಂತೆ ಹರ್ಮಿಸ್ ಚಿತೆಗೆ ಹಾರಿ, ಕೊರೊನಿಸಾಳ ಗರ್ಭದಿಂದ ಮಗುವನ್ನು ಸೆಳೆದು ತೆಗೆದನು. (ಹರ್ಮಿಸ್ ಇದೇ ರೀತಿ ಭ್ರೂಣವನ್ನು ತೆಗೆದು ರಕ್ಷಿಸಿದ ಮತ್ತೊಂದು ಕಥೆಯನ್ನು ಇಲ್ಲಿ ಓದಿ : https://aralimara.com/2018/04/28/greek10/ ) ಮುಂದೆ ಆ ಮಗುವು ಅಪೋಲೋನ ಸಹೋದರಿಯ ಸುಪರ್ದಿಯಲ್ಲಿ ಕುರಿಗಾಹಿಗಳ ಬಳಿ ಬೆಳೆಯಿತು. ಆ ಮಗುವೇ ಮುಂದೆ ಅಸ್’ಕ್ಲೀಪಿಯಸ್ ಎಂದು ಹೆಸರು ಪಡೆದು ದೇವವೈದ್ಯನಾಗಿ ಖ್ಯಾತಿ ಪಡೆದಿದ್ದು.