ಇದು ಅರಮನೆಯಾ? ಛತ್ರವಾ? : ಝೆನ್ ಕಥೆ

ಒಂದು ಸಂಜೆ ಝೆನ್ ಮಾಸ್ಟರ್ ರಾಜನ ಅರಮನೆಗೆ ಬಂದ. ಅವನ ಪ್ರಖರ ತೇಜಸ್ಸಿಗೆ ಬೆರಗಾದ ಅರಮನೆಯ ಕಾವಲುಗಾರರು, ಮಾಸ್ಟರ್ ನ ತಡೆಯುವ ಸಾಹಸ ಮಾಡಲಿಲ್ಲ.

ಮಾಸ್ಟರ್ ಸೀದಾ ರಾಜನ ಆಸ್ಥಾನದ ಒಳಗೆ ನುಗ್ಗಿ , ರಾಜನ ಎದುರು ಬಂದು ನಿಂತ. ಮಂತ್ರಾಲೋಚನೆಯಲ್ಲಿ ಮಗ್ನನಾಗಿದ್ದ ರಾಜ, ಮಾಸ್ಟರ್ ನನ್ನು ಗುರುತಿಸಿ, ಅರಮನೆಗೆ ಸ್ವಾಗತಿಸಿದ.

“ಸ್ವಾಗತ ಮಾಸ್ಟರ್, ನನ್ನಿಂದೇನಾಗಬೇಕು? ಅಪ್ಪಣೆಯಾಗಲಿ”

“ಮಹಾರಾಜ ಈ ರಾತ್ರಿಯನ್ನು ನಾನು ನಿನ್ನ ಈ ಛತ್ರದಲ್ಲಿ ಕಳೆಯಬಹುದೆ ?”

ಮಾಸ್ಟರ್ ನ ಮಾತು ಕೇಳಿ ರಾಜನಿಗೆ ಆಶ್ಚರ್ಯವಾಯಿತು, ಜೊತೆಗೆ ಇದು ಅಪಮಾನ ಕೊಡ ಅನಿಸಿತು.

“ಮಾಸ್ಟರ್, ಇದು ಛತ್ರವಲ್ಲ, ನನ್ನ ಅರಮನೆ”

ರಾಜ ಸಿಟ್ಟಿನಿಂದ ಉತ್ತರಿಸಿದ.

ಮಾಸ್ಟರ್ ಸೌಜನ್ಯದಿಂದ ರಾಜನಿಗೆ ಉತ್ತರಿಸಿದ.

“ ಮಹಾರಾಜ, ಒಂದು ಪ್ರಶ್ನೆ ಕೇಳಲಾ?
ನಿನಗಿಂತ ಮೊದಲು ಈ ಅರಮನೆ ಯಾರ ಸ್ವತ್ತಾಗಿತ್ತು?”

“ಯಾಕೆ? ನನ್ನ ಅಪ್ಪನದು. ಆದರೆ ಈಗ ಅವನು ಸತ್ತು ಹೋಗಿದ್ದಾನೆ”

“ಹೌದಾ, ಹಾಗಾದರೆ ನಿನ್ನ ಅಪ್ಪನಿಗಿಂತಲೂ ಮೊದಲು?”

ಮಾಸ್ಟರ್ ಮತ್ತೆ ಪ್ರಶ್ನೆ ಕೇಳಿದ.

“ಸಹಜವಾಗಿ ನನ್ನ ಅಜ್ಜನದು. ಆದರೆ ಅವನೂ ತೀರಿ ಹೋಗಿದ್ದಾನೆ” ಎಂದ ರಾಜ.

“ಯಾವ ಕಟ್ಟಡದಲ್ಲಿ ಜನ ಕೆಲವು ದಿನ ಮಾತ್ರ ಉಳಿದುಕೊಳ್ಳುತ್ತಾರೋ, ಆ ಕಟ್ಟಡವನ್ನ ಯಾವ ಹೆಸರಿನಿಂದ ಕರೆಯುತ್ತೀ? ಅರಮನೆಯಾ? ಛತ್ರನಾ ?”

ಮಾಸ್ಟರ್ ಪ್ರಶ್ನೆಗೆ ರಾಜನ ಬಳಿ ಉತ್ತರವಿರಲಿಲ್ಲ.

(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)

Leave a Reply